Home » ಅರಣ್ಯ ಇಲಾಖೆ ಸಿಬ್ಬಂದಿಗೆ ಜೀವ ಬೆದರಿಕೆ : ₹25 ಸಾವಿರಕ್ಕೆ ಬ್ಲ್ಯಾಕ್‌ಮೇಲ್ ಆರೋಪ
 

ಅರಣ್ಯ ಇಲಾಖೆ ಸಿಬ್ಬಂದಿಗೆ ಜೀವ ಬೆದರಿಕೆ : ₹25 ಸಾವಿರಕ್ಕೆ ಬ್ಲ್ಯಾಕ್‌ಮೇಲ್ ಆರೋಪ

by Kundapur Xpress
Spread the love

ಕುಂದಾಪುರ: ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಸ್ತು ಅರಣ್ಯ ಪಾಲಕರೊಬ್ಬರಿಗೆ ಪರಿಚಿತ ವ್ಯಕ್ತಿಯೊಬ್ಬರಿಂದ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಘಟನೆ ಕುಂದಾಪುರ ಸಂಗಂ ಜಂಕ್ಷನ್‌ ಬಳಿ ನಡೆದಿರುವ ಬಗ್ಗೆ ದೂರು ದಾಖಲಾಗುವ ಹಂತದಲ್ಲಿದೆ.

ಬಸ್ರೂರಿನಿಂದ ಗಂಗೊಳ್ಳಿಗೆ ಪ್ರತಿದಿನ ಕರ್ತವ್ಯಕ್ಕೆ ತೆರಳುತ್ತಿದ್ದ ಅರಣ್ಯ ಸಿಬ್ಬಂದಿ, ಮೇ 1ರಂದು ಕುಂದಾಪುರದ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ, ಕಚೇರಿ ಗೇಟ್‌ ಬಳಿ ಸದಾಶಿವ ಕೋಟೆಕಾರ್ ಎಂಬಾತ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಾನೆ ಎನ್ನಲಾಗಿದೆ.

“ನೀನು ಇಲಾಖೆಯಲ್ಲಿ ದೊಡ್ಡ ಮಟ್ಟದ ವ್ಯವಹಾರ ಮಾಡುತ್ತಿದ್ದೀಯ. ನಿನ್ನ ಎಲ್ಲಾ ಮಾಹಿತಿ ನನ್ನ ಬಳಿ ಇದೆ. ₹25 ಸಾವಿರ ನೀಡದಿದ್ದರೆ ನಿನ್ನ ವಿಚಾರಗಳನ್ನು ಬಹಿರಂಗಪಡಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಇದೇ ವ್ಯಕ್ತಿ ಮೇ 6ರಂದು ಮತ್ತೆ ಅದೇ ಸ್ಥಳದಲ್ಲಿ ಅರಣ್ಯ ಸಿಬ್ಬಂದಿಯನ್ನು ತಡೆದು ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಲ್ಲದೆ, “ಈಗಲೇ ₹25 ಸಾವಿರ ಕೊಡಬೇಕು. ಇಲ್ಲವಾದರೆ ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಪಡೆದು ನಿನ್ನ ವಿರುದ್ಧ ಬಹಿರಂಗಪಡಿಸುತ್ತೇನೆ. ಜೀವಕ್ಕೂ ಅಪಾಯ ಉಂಟು ಮಾಡುತ್ತೇನೆ” ಎಂದು ನೇರ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ವೇಳೆ ಅರಣ್ಯ ಸಿಬ್ಬಂದಿ ಜೋರಾಗಿ ಕೂಗಿದ ಹಿನ್ನೆಲೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯಂತೆ, ಆರೋಪಿ ಸದಾಶಿವ ಕೋಟೆಕಾರ್ ಈ ಹಿಂದೆ ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ಜೀಪ್ ಚಾಲಕರಾಗಿ ಕೆಲಸ ಮಾಡಿದ್ದನು. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಣಕ್ಕೆ ಬೇಡಿಕೆ ಇಡುವುದು ಹಾಗೂ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪಗಳ ಹಿನ್ನೆಲೆ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೀಡಿತ ಸಿಬ್ಬಂದಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಪ್ರಕರಣದ ಕುರಿತು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Related Articles

error: Content is protected !!