Home » ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ : ಬಿಹಾರ ಮೂಲದ ಇಬ್ಬರು ಆರೋಪಿಗಳ ಬಂಧನ
 

ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ : ಬಿಹಾರ ಮೂಲದ ಇಬ್ಬರು ಆರೋಪಿಗಳ ಬಂಧನ

by Kundapur Xpress
Spread the love

ಮಂಗಳೂರು : ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯ ಎಂಎಸ್‌ಇಜೆಡ್ (MSEZ) ತೋಡಿನಲ್ಲಿ ಜೂನ್ 10ರಂದು ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಪಣಂಬೂರು ಪೊಲೀಸರು ಕೇವಲ 72 ಗಂಟೆಗಳಲ್ಲಿ ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವೈಯಕ್ತಿಕ ದ್ವೇಷ ಹಾಗೂ ಅಪಪ್ರಚಾರವೇ ಈ ಕೊಲೆಗೆ ಮುಖ್ಯ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಬಿಹಾರ ರಾಜ್ಯದ ದರ್ಬಾಂಗಾ ಮೂಲದ, ಸದ್ಯ ಜೋಕಟ್ಟೆಯ ವಿಜಯ ವಿಠಲ ಭಜನಾ ಮಂದಿರದ ಬಳಿ ವಾಸವಿದ್ದ ಪ್ರಶಾಂತ್ ಕುಮಾರ್ (36) ಮತ್ತು ಆತನಿಗೆ ಸಹಕರಿಸಿದ ವೈಶಾಲಿ ಜಿಲ್ಲೆಯ ಪಿಂಕೂ ಮಹ್ತೋ (33) ಎಂದು ಗುರುತಿಸಲಾಗಿದೆ.

ಇನ್ನು ಕೊಲೆಯಾದ ವ್ಯಕ್ತಿ ಬಿಹಾರದ ಪೂರ್ನಿಯಾ ಜಿಲ್ಲೆಯ ಚಂದನ್ ಚೌಹಾನ್ (39) ಎಂದು ತನಿಖೆ ವೇಳೆ ದೃಢಪಟ್ಟಿದೆ.

ಮೊದಲ ಆರೋಪಿ ಪ್ರಶಾಂತ್ ಕುಮಾರ್ ಎಂಆರ್‌ಪಿಎಲ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಸದ್ಯ ಅಪಘಾತಕ್ಕೀಡಾಗಿ ಮನೆಯಲ್ಲಿದ್ದ. ಈತನ ಪತ್ನಿಯು ಕಳೆದ ಏಪ್ರಿಲ್ ತಿಂಗಳಿನಲ್ಲಿ ಮತ್ತೊಬ್ಬ ಯುವಕನ ಜೊತೆ ಮನೆ ಬಿಟ್ಟು ಓಡಿಹೋಗಿದ್ದಳು. ಆಕೆ ಮನೆ ಬಿಟ್ಟು ಹೋಗಲು ಮೃತ ಚಂದನ್ ಚೌಹಾನ್ ಸಹಾಯ ಮಾಡಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೆ, “ಪ್ರಶಾಂತ್‌ಗೆ ಅಪಘಾತವಾಗಿ ಮನೆಯಲ್ಲೇ ಇರುವುದರಿಂದಲೇ ಆತನ ಪತ್ನಿ ಸಣ್ಣ ಹುಡುಗನ ಜೊತೆ ಓಡಿಹೋಗಿದ್ದಾಳೆ” ಎಂದು ಚಂದನ್ ಎಲ್ಲೆಂದರಲ್ಲಿ ಅಪಪ್ರಚಾರ ಮಾಡಿದ್ದ. ಇದರಿಂದ ತೀವ್ರವಾಗಿ ಸಿಟ್ಟಿಗೆದ್ದಿದ್ದ ಪ್ರಶಾಂತ್, ಚಂದನ್‌ನನ್ನು ಮುಗಿಸಲು ಸಂಚು ರೂಪಿಸಿದ್ದ.

ಜೂನ್ 9ರಂದು ಸಂಜೆ 6 ಗಂಟೆಯ ಸುಮಾರಿಗೆ ಪ್ರಶಾಂತ್ ತನ್ನ ಸ್ನೇಹಿತ ಪಿಂಕೂ ಮಹ್ತೋ ಜೊತೆ ಸೇರಿ ಚಂದನ್ ಚೌಹಾನ್‌ನನ್ನು ತಡೆದು ತಲೆ ಹಾಗೂ ಮುಖಕ್ಕೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ. ಬಳಿಕ ಚಾಕುವಿನಿಂದ ಕುತ್ತಿಗೆಯನ್ನು ಸೀಳಿ ಭೀಕರವಾಗಿ ಕೊಲೆ ಮಾಡಿ, ಮೃತದೇಹವನ್ನು ಜೋಕಟ್ಟೆಯ ಬಾಡಿಗೆ ಮನೆಯ ಪಕ್ಕದಲ್ಲಿದ್ದ ಎಂಎಸ್‌ಇಜೆಡ್ ತೋಡಿನಲ್ಲಿ ಬಿಸಾಡಿ ಪರಾರಿಯಾಗಿದ್ದರು. ಜೂನ್ 10ರಂದು ಬೆಳಿಗ್ಗೆ ಕಿಶೋರ್ ಎಂಬುವವರು ಮೃತದೇಹ ನೋಡಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ, ಜೂನ್ 13ರ ತಡರಾತ್ರಿ ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್‌ನನ್ನು ಜಾಲ ಬೀಸಿ ಹಿಡಿದಿದ್ದಾರೆ. ಮತ್ತೊಬ್ಬ ಆರೋಪಿ ಪಿಂಕೂ ಮಹ್ತೋನನ್ನು ಜೋಕಟ್ಟೆಯಲ್ಲೇ ಬಂಧಿಸಲಾಗಿದೆ. ಅತಿ ಶೀಘ್ರದಲ್ಲಿ ಕೊಲೆ ರಹಸ್ಯ ಭೇದಿಸಿದ ಪಣಂಬೂರು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

 

Related Articles

error: Content is protected !!