Home » ಬೈಂದೂರು : ಮಹಿಳೆಯೊಬ್ಬರ ಚಿನ್ನದ ಬಳೆ ಸುಲಿಗೆ : ಮೂವರು ಆರೋಪಿಗಳ ಬಂಧನ
 

ಬೈಂದೂರು : ಮಹಿಳೆಯೊಬ್ಬರ ಚಿನ್ನದ ಬಳೆ ಸುಲಿಗೆ : ಮೂವರು ಆರೋಪಿಗಳ ಬಂಧನ

by Kundapur Xpress
Spread the love

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕಚೇರಿ ಮುಂಭಾಗದ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಚಿನ್ನದ ಬಳೆ ಸುಲಿಗೆ ಮಾಡಿದ ಪ್ರಕರಣವನ್ನು ಬೈಂದೂರು ಪೊಲೀಸರು ಭೇದಿಸಿ, ಮಹಾರಾಷ್ಟ್ರ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಏಪ್ರಿಲ್ 27ರಂದು ಮಧ್ಯಾಹ್ನ ಸುಮಾರು 2.45 ಗಂಟೆಗೆ ಸಹನಾ ಪೈ ಅವರು ಧಾರವಾಡ ಕಡೆಗೆ ತೆರಳುವ ಬಸ್ ಏರಲು ಬಸ್ ನಿಲ್ದಾಣದತ್ತ ತೆರಳುತ್ತಿದ್ದ ವೇಳೆ, ಇಬ್ಬರು ಮಹಿಳೆಯರು ಅವರ ಗಮನ ಬೇರೆಡೆ ಸೆಳೆದಿದ್ದಾರೆ. ಇದೇ ಸಂದರ್ಭ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಅವರ ಕೈಯಲ್ಲಿದ್ದ ಚಿನ್ನದ ಬಳೆಯನ್ನು ಕಟ್ಟರ್‌ನಿಂದ ಕತ್ತರಿಸಿ, ಸಹನಾ ಪೈ ಅವರನ್ನು ತಳ್ಳಿಹಾಕಿ ಬಳೆಯನ್ನು ಸುಲಿಗೆ ಮಾಡಿಕೊಂಡು ಮಹಿಳೆಯರೊಂದಿಗೆ ಪರಾರಿಯಾಗಿದ್ದನು.

ಈ ಕುರಿತು ಸಹನಾ ಪೈ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 43/2026, ಕಲಂ 309(4) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಕುಂದಾಪುರ ವೃತ್ತ ನಿರೀಕ್ಷಕ ಹಾಗೂ ಬೈಂದೂರು ವೃತ್ತದ ಪ್ರಭಾರದಲ್ಲಿದ್ದ ಸಂತೋಷ್ ಕಾಯ್ಕಿಣಿ ನೇತೃತ್ವದ ಪೊಲೀಸ್ ತಂಡ, ಮುಂಬೈ ಮೂಲದ ಅವಿನಾಶ್ ಸುನಿಲ್ ಗಾಯಕ್ವಾಡ್ (27), ಸಂತೋಷಿ ವಿಶಾಲ್ ಜಾದವ್ (31) ಹಾಗೂ ಅರ್ಚನಾ ಸುಶೀಲ್ ಜಾದವ್ (40) ಅವರನ್ನು ಬಂಧಿಸಿದೆಬಂಧಿತರಿಂದ ಸುಮಾರು 17.27 ಗ್ರಾಂ ತೂಕದ, ಅಂದಾಜು ರೂ.2.5 ಲಕ್ಷ ಮೌಲ್ಯದ ಚಿನ್ನದ ಬಳೆ, ಕೃತ್ಯಕ್ಕೆ ಬಳಸಿದ ಕಟ್ಟರ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಸುನಿಲ್ ಕುಮಾರ್ ಬಿ.ವೈ., ನವೀನ್ ಬೋರ್ಕರ್ ಹಾಗೂ ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿ ಭಾಗವಹಿಸಿದ್ದರು.

 

Related Articles

error: Content is protected !!