ಉಡುಪಿ: ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಜೋಸೆಫ್ ವಿಜಯ್ ಅವರು ಜೂನ್ 12, 2026 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ದೇವಸ್ಥಾನದ ಸುತ್ತಮುತ್ತ ಹಾಗೂ ಮುಖ್ಯಮಂತ್ರಿಗಳು ಸಂಚರಿಸುವ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಪೊಲೀಸ್ ಇಲಾಖೆಯು ಪ್ರಮುಖ ಸೂಚನೆಗಳನ್ನು ನೀಡಿದೆ. ವಿ.ವಿ.ಐ.ಪಿ ಕಾವಲು ವಾಹನಗಳ (ಕಾನ್ವಾಯ್) ಸಂಚಾರದ ಹಾದಿ, ಪ್ರವೇಶ ದ್ವಾರಗಳು ಅಥವಾ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರು ಗುಂಪು ಸೇರುವುದನ್ನು ಹಾಗೂ ಜನಸಂದಣಿ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ, ಮುಖ್ಯಮಂತ್ರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದಿರುಗುವವರೆಗೂ ಯಾವುದೇ ಸಾರ್ವಜನಿಕ ಭೇಟಿ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮುಖ್ಯಮಂತ್ರಿಗಳ ಭೇಟಿಯ ಬಂದೋಬಸ್ತ್ ಇರುವುದರಿಂದ ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಭಕ್ತಾದಿಗಳಿಗೆ ದರ್ಶನದಲ್ಲಿ ಅನಾನುಕೂಲವಾಗುವ ಸಂಭವವಿದ್ದು, ಈ ಸಮಯದಲ್ಲಿ ಭಕ್ತಾದಿಗಳು ದೇವಸ್ಥಾನದ ದರ್ಶನವನ್ನು ತಪ್ಪಿಸುವುದು ಸೂಕ್ತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಭಕ್ತಾದಿಗಳಿಗೆ ಯಾವುದೇ ಸಮಯದಲ್ಲಿ ದೇವಸ್ಥಾನದ ಪ್ರವೇಶಕ್ಕೆ ನಿಷೇಧವಿರುವುದಿಲ್ಲ, ಆದರೆ ಭೇಟಿಯ ಹಿನ್ನೆಲೆಯಲ್ಲಿ ದರ್ಶನ ವಿಳಂಬವಾಗಬಹುದು. ಸಾರ್ವಜನಿಕರು ಯಾವುದೇ ರೀತಿಯ ಅನಾನುಕೂಲತೆಯನ್ನು ತಪ್ಪಿಸಲು ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳ ಸೂಚನೆಗಳಿಗೆ ಸಂಪೂರ್ಣವಾಗಿ ಸಹಕರಿಸಬೇಕಾಗಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವಿನಂತಿಸಿದೆ.

