Home » ಬಿಸಿ ಕೆಮಿಕಲ್ ಎರಚಿ ಕೊಲೆಗೆ ಯತ್ನ : ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ
 

ಬಿಸಿ ಕೆಮಿಕಲ್ ಎರಚಿ ಕೊಲೆಗೆ ಯತ್ನ : ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ

by Kundapur Xpress
Spread the love

ಕಾರ್ಕಳ: ರಬ್ಬರ್ ಟ್ಯಾಪಿಂಗ್ ಕೆಲಸದ ವಿಚಾರದಲ್ಲಿ ನಡೆದ ಗಲಾಟೆ ಬಳಿಕ ಸಹೋದ್ಯೋಗಿಯ ಮೇಲೆ ಬಿಸಿ ಕೆಮಿಕಲ್ ಎರಚಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಕೇರಳದ ತ್ರಿಶೂರ ಜಿಲ್ಲೆಯ ಸುಧಿರ್ ಪಿ.ಎ ಅವರು ತಮ್ಮ ಕೆಲಸಗಾರ ರತೀಶ್ ಕೆ.ಟಿ ಜೊತೆ 2022ರ ಫೆಬ್ರವರಿ 28ರಂದು ಹೆಬ್ರಿ ತಾಲೂಕಿನ ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿರುವ ಅಜಿತ್ ಅಗಸ್ಟಿನ್ ಅವರ ತೋಟದಲ್ಲಿ ನಡೆದ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬಂದಿದ್ದರು. ಇದೇ ವೇಳೆ ಮದ್ಯಪಾನ ಮಾಡಿದ ಇಬ್ಬರ ನಡುವೆ ರಬ್ಬರ್ ಟ್ಯಾಪಿಂಗ್ ಕೆಲಸದ ವಿಚಾರವಾಗಿ ವಾಗ್ವಾದ ಉಂಟಾಗಿ ಜಗಳವಾಗಿತ್ತು.

ಈ ಘಟನೆಗೆ ದ್ವೇಷಗೊಂಡಿದ್ದ ರತೀಶ್ ಕೆ.ಟಿ ಅವರು 2022ರ ಮಾರ್ಚ್ 2ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮಲಗಿದ್ದ ಸುಧಿರ್ ಅವರ ದೇಹ, ಮುಖ ಹಾಗೂ ಎದೆ ಭಾಗದ ಮೇಲೆ ಬಿಸಿ ಕೆಮಿಕಲ್ ಎರಚಿ ಕೊಲೆಗೆ ಯತ್ನಿಸಿದ್ದಾಗಿ ಆರೋಪಿಸಲಾಗಿತ್ತು.

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2022ರಡಿ ಐಪಿಸಿ ಕಲಂ 326(A), 307, 504 ಹಾಗೂ 506ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಅಂದಿನ ಹೆಬ್ರಿ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಶ್ ಟಿ.ಎಂ ಹಾಗೂ ನಂತರ ಪಿಎಸ್‌ಐ ಸುದರ್ಶನ ದೊಡಮನಿ ನಡೆಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಸಂಚಾರಿ ಪೀಠ ಕಾರ್ಕಳ) ಎಸ್.ಸಿ. ನಂ.13/22ರಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಆರೋಪಿ ರತೀಶ್ ಕೆ.ಟಿ (42) ಅವರಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ಆರೋಪಿ ಪ್ರಸ್ತುತ ಹಿರಿಯಡ್ಕ ಕಾರಾಗೃಹದಲ್ಲಿದ್ದಾರೆ.

 

Related Articles

error: Content is protected !!