ಕಾರ್ಕಳ : ದನ ಕಳವು ಮಾಡಿ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮಾ. 1ರಂದು ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡುವಿನಲ್ಲಿ ನಡೆದಿದೆ.
ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸರು ನೀರೆ ಬೈಲೂರು ಪರಿಸರದಲ್ಲಿ ರೌಂಡ್ಸ್ ಕಾರ್ಯ ಮುಗಿಸಿ ರಾತ್ರಿ 10 ಗಂಟೆಗೆ ಕಾರ್ಕಳ ಕಡೆಗೆ ಬರುತ್ತಿದ್ದಾಗ ಕುಕ್ಕಂದೂರು ಗ್ರಾಮದ ಹಾರ್ಜೆಡ್ಡು ಶ್ರೀ ದೇವಿ ಕೃಪಾ ಹಾಲ್‌ನ ಮುಂಭಾಗ ರಸ್ತೆ ಬದಿಯಲ್ಲಿ ಟಾಟಾ ಇಂಟ್ರ ಕಂಪೆನಿಯ ಗೂಡ್ಸ್ ವಾಹನವೊಂದು ಕಾರ್ಕಳ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದು, ವಾಹನದ ಹಿಂದುಗಡೆಯಿಂದ ನೀರು ಇಳಿಯುತ್ತಿತ್ತು. ಅಲ್ಲದೇ ಅದರ ಚಾಲಕ ತರ್ಪಾಲನ್ನು ಸರಿ ಮಾಡುತ್ತಿದ್ದುದನ್ನು ಕಂಡು ಅನುಮಾನಗೊಂಡ ಪೊಲೀಸರು ವಾಹನದ ಬಳಿ ಹೋಗಿ ತರ್ಪಾಲನ್ನು ಸರಿಸಿ ನೋಡಿದಾಗ ಅದರೊಳಗೆ 2 ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡು ಬಂದಿರುತ್ತದೆ.
ಆರೋಪಿತರು ಆ ದನಗಳನ್ನು ಕಳವು ಮಾಡಿ ಕಸಾಯಿಖಾನೆಗೆ ವಧೆ ಮಾಡುವುದಕ್ಕಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ.

