ಕುಂದಾಪುರ : ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಪ್ರೌಢ ಶಾಲೆ ಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡುವ ಬಗ್ಗೆ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆ ಮುಖ್ಯ ಶಿಕ್ಷಕರ ಜೊತೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಸಮಾಲೋಚನೆ ನಡೆಸಿದರು. ಬಳಿಕ ಮಾತನಾಡಿದ ಶಾಸಕರು ಯಕ್ಷಗಾನ ಕಲಾ ರಂಗ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಕ್ಷೇತ್ರದ ಆಸಕ್ತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡುವ ಮೂಲಕ ನಾಡಿನ ಸಂಸ್ಕೃತಿಯ ಪರಿಚಯದೊಂದಿಗೆ ಮಕ್ಕಳಲ್ಲಿ ಭಾಷಾ ಪ್ರೌಢಿಮೆ ವರ್ಧನೆ ಜೊತೆಗೆ ಕಲಿಕಾ ಸಾಮರ್ಥ್ಯವನ್ನು ಹೆಚ್ಚಳಗೊಳ್ಳಲು ತನ್ನ ಅನುಪಮ ಸೇವೆ ನೀಡಿದೆ .ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರ ಕಾಳಜಿ, ವಿದ್ಯಾರ್ಥಿಗಳ ಆಸಕ್ತಿ ಮತ್ತು ಪೋಷಕರು ಹಾಗೂ ಊರಿನವರು ಬೆಂಬಲದಿಂದಾಗಿ ಸಂಸ್ಥೆಯು ಬಹಳ ವ್ಯವಸ್ಥಿತವಾಗಿ ಕಾರ್ಯಕ್ರಮ ಜೋಡಣೆ ಮಾಡುವುದರ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಗೆ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಕ ಶಕ್ತಿಯಾಗಿದೆ ಎಂದರು.
ಈ ಬಾರಿ ಕ್ಷೇತ್ರದ 19 ಶಾಲೆಗಳಲ್ಲಿ ಯಕ್ಷ ಶಿಕ್ಷಣಕ್ಕೆ ಒತ್ತು:
ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಬಾರಿ 17ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ಒದಗಿಸಿದ್ದರೆ, ಈ ಬಾರಿ 19 ಶಾಲೆಗಳು ಆಸಕ್ತಿ ತೋರಿಸಿವೆ* *ಎಂಬುದಾಗಿ ಶಾಸಕರು ತಿಳಿಸಿದರು
ವಿದ್ಯಾಪೋಷಕ್ ಪ್ರಯೋಜನವನ್ನು ಬೈಂದೂರು ಕ್ಷೇತ್ರಕ್ಕೆ ನೀಡಲು ಮನವಿ :
ಯಕ್ಷಗಾನ ಕಲಾ ರಂಗದ ಕಾರ್ಯಕ್ರಮಗಳಲ್ಲಿ ಒಂದಾದ ಸಮರ್ಪಕ ಸೂರಿಲ್ಲದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕುಟುಂಬಕ್ಕೆ ಮನೆ ಒದಗಿಸುವ ಕಾರ್ಯಕ್ರಮದಿಂದ ಅದೆಷ್ಟೋ ವಿದ್ಯಾರ್ಥಿಗಳ ಜೀವನ ಗುಣಮಟ್ಟ ಸುಧಾರಿಸಿದೆ ಹಾಗೂ ಪೋಷಕರಿಗೂ ಆಧಾರವಾಗಿದೆ.ಬೈಂದೂರು ಕ್ಷೇತ್ರದಾದ್ಯಂತ ಸಮರ್ಪಕ ಮನೆ ಇಲ್ಲದ ನೂರಾರು ಕಷ್ಟದಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದು ಅವರ ಕುಟುಂಬಕ್ಕೆ ವಿದ್ಯಾ ಪೋಷಕ್ ಯೋಜನೆಯ ಪ್ರಯೋಜನೆ ಒದಗಿಸಲು ಶಾಸಕರು ಮನವಿ ಮಾಡಿದರು.
ಸಭೆಯಲ್ಲಿ ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಾಗೇಶ್ ನಾಯ್ಕ್, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮತಿ ಶೋಭಾ ಶೆಟ್ಟಿ. ಯಕ್ಷಗಾನ ಕಲಾ ರಂಗದ ಮುರಳಿ ಕಡೆಕಾರ್ ಹಾಗೂ ಬೈಂದೂರು ಕ್ಷೇತ್ರದ ಎಲ್ಲಾ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.

