Home ಕರಾವಳಿ ಸುದ್ದಿ‘ದೇಶದ ಒಳಿತಿಗಾಗಿ ಮೋದಿ ರಾಜಕಾರಣ’ : ಸಂಸದ ಕೋಟ ಶ್ರೀನಿವಾಸ ಪೂಜಾರಿ “Modi’s Politics is for the Good of the Nation” – MP Kota Srinivas Poojary

‘ದೇಶದ ಒಳಿತಿಗಾಗಿ ಮೋದಿ ರಾಜಕಾರಣ’ : ಸಂಸದ ಕೋಟ ಶ್ರೀನಿವಾಸ ಪೂಜಾರಿ “Modi’s Politics is for the Good of the Nation” – MP Kota Srinivas Poojary

ಪ್ರಧಾನಿ ನರೇಂದ್ರ ಮೋದಿ 25 ವರ್ಷಗಳ ಜನ ಸೇವೆ : ಜಿಲ್ಲಾ ಬಿಜೆಪಿಯಿಂದ 'ವಿಕಸಿತ ಭಾರತ ಸಂಕಲ್ಪ ಸಭೆ' - 'ಸೇವಾ ಜ್ಯೋತಿ ಯಾತ್ರೆ

by Kundapur Xpress

ಪ್ರಧಾನಿ ನರೇಂದ್ರ ಮೋದಿ ಜಗತ್ತು ಮೆಚ್ಚುವ ನಾಯಕರಾಗಿದ್ದಾರೆ. ದೇಶದ ಒಳಿತಿಗಾಗಿ ರಾಜಕಾರಣ ಮಾಡುತ್ತಿದ್ದಾರೆ. ಸ್ವಾತಂತ್ರದ 100 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ವಿಕಸಿತ ಭಾರತ-2047 ಪರಿಕಲ್ಪನೆಯೊಂದಿಗೆ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ದೇಶದಲ್ಲಿ 18,000 ಹಳ್ಳಿಗಳಲ್ಲಿ ವಿದ್ಯುತ್​ ಸಂಪರ್ಕ, 12 ಕೋಟಿ ಶೌಚಾಲಯ ನಿರ್ಮಾಣ ಸಣ್ಣ ಸಾಧನೆಯಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ 25 ವರ್ಷಗಳ ಜನಕಲ್ಯಾಣದ ಆಡಳಿತದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ಪುರಭವನದಲ್ಲಿ ಬುಧವಾರ ನಡೆದ ‘ವಿಕಸಿತ ಭಾರತ ಸಂಕಲ್ಪ ಸಭೆ’ ಹಾಗೂ ‘ಸೇವಾ ಜ್ಯೋತಿ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದರು.

ಭಾರತದಲ್ಲಿರುವ ಚಿನ್ನವನ್ನು ಸಾಲಕ್ಕಾಗಿ ಅಡವಿಡುವ ಸಂದರ್ಭವಿತ್ತು. ಪ್ರಸಕ್ತ ಭಾರತವು 68 ದೇಶಗಳಿಗೆ ಸಾಲ ನೀಡುವ ಮಟ್ಟಕ್ಕೆ ಬೆಳೆದಿದೆ. ಅದಕ್ಕೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅವರ ಕೊಡುಗೆಗಳನ್ನು ಜನರಿಗೆ ಜನರಿಗೆ ತಲುಪಿಸುವ ಸಲುವಾಗಿ ‘ಸೇವಾ ಜ್ಯೋತಿ ಯಾತ್ರೆ’ ನಡೆಸಲಾಗುತ್ತಿದೆ ಎಂದರು.

ಭಾರತೀಯರಿಗೆ ಕಾಂಗ್ರೆಸ್​ ಅವಮಾನ:

ದೇಶವನ್ನು ಒಗ್ಗೂಡಿಸಿದ ‘ವಂದೇ ಮಾತರಂ’ ಹಾಡಿಗೆ ವಿರೋಧ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಮುಖ್ಯ ಚುನಾವಣಾಧಿಕಾರಿಯವರ ಮುಂದೆ ಹೋಗಿ ಬೆದರಿಕೆ ಮುಂತಾದ ಕೆಲಸಗಳಿಂದ ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆಯುವ ಭರದಲ್ಲಿ ಕಾಂಗ್ರೆಸ್ ದೇಶದ ಜನರನ್ನು ಅಪಮಾನಿಸುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಾದ್ಯoತ ಸೇವಾ ಸಂಕಲ್ಪ ಅಭಿಯಾನದಡಿ ವಿವಿಧ ಸೇವಾ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ಥಕ ಜನ ಸೇವೆಗೆ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಸಭೆ ಮತ್ತು ಸೇವಾ ಜ್ಯೋತಿ ಯಾತ್ರೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಭಾರತ ಮಾತೆ, ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರವನ್ನು ವೀಕ್ಷಿಸಿ, ವಿಕಸಿತ ಭಾರತ ಸಂಕಲ್ಪದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ವಿ.ಸುನೀಲ್​ ಕುಮಾರ್​, ಯಶ್​ಪಾಲ್​ ಎ. ಸುವರ್ಣ, ಗುರ್ಮೆ ಸುರೇಶ್​ ಶೆಟ್ಟಿ, ಕಿರಣ್​ ಕುಮಾರ್​ ಕೊಡ್ಗಿ, ಗುರುರಾಜ್​ ಗಂಟಿಹೊಳೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ, ಎಸ್ಐಆರ್​ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯ ಕುಮಾರ್​ ಶೆಟ್ಟಿ ಕಿದಿಯೂರು, ಎಸ್​ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಸೇವಾ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕ ದಿನಕರ ಶೆಟ್ಟಿ ಹೆರ್ಗ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ ನಾಯಕ್​ ಅಲೆವೂರು, ಸೇವಾ ಜ್ಯೋತಿ ಯಾತ್ರೆಯ ಜಿಲ್ಲಾ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಸಹಿತ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವಿಕಸಿತ ಭಾರತ ಸಂಕಲ್ಪ ಸಭೆ ಮತ್ತು ಸೇವಾ ಜ್ಯೋತಿ ಯಾತ್ರೆಯ ಪೂರ್ವಭಾವಿಯಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿ ಮೂರು ದಿಕ್ಕುಗಳಿಂದ ಆಗಮಿಸಿದ ಬೈಕ್ ರ್ಯಾಲಿ ಉಡುಪಿ ಪುರ ಭವನದಲ್ಲಿ ಸಮಾಪನಗೊಂಡಿತು.

ಕಾರ್ಯಕ್ರಮದ ಕೊನೆಯಲ್ಲಿ ಉಡುಪಿ ಪುರ ಭವನದಿಂದ ಜೋಡುಕಟ್ಟೆಯ ವರೆಗೆ ಸೇವಾ ಜ್ಯೋತಿ ಪಾದಯಾತ್ರೆ ನಡೆಯಿತು.

Related Articles

Leave a Comment

This site uses Akismet to reduce spam. Learn how your comment data is processed.