181
ಮಂಗಳೂರು : ವಿವಾಹ ಆಗುವುದಾಗಿ ನಂಬಿಸಿ ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಮೀರ್ (43 ವರ್ಷ) ಎಂಬಾತನಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು 55 ಸಾವಿರ ರು. ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ
ಮೂಲ್ಕಿ ಕಾರ್ನಾಡಿನ ಬಿಜಾಪುರ ಕಾಲನಿ ನಿವಾಸಿ ಸಮೀರ್ ಎಂಬಾತ ಅಪ್ರಾಪ್ತ ಬಾಲಕಿಯ ತಾಯಿ ನಡೆಸುತ್ತಿದ್ದ ಹೊಟೇಲ್‌ಗೆ ಕೋಳಿ ಮಾಂಸದ ಲೈನ್ ಸೇಲ್ ಮಾಡುತ್ತಿದ್ದ. ತನಗೆ ಮದುವೆಯಾಗಿದ್ದರೂ, ಮದುವೆಯಾಗಿಲ್ಲ ಎಂದು ಹೇಳಿ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ.
2024ರ ಜೂ.24ರಂದು ಬಾಲಕಿಯನ್ನು ಕಾರಿನಲ್ಲಿ ಶಿವಮೊಗ್ಗ ಜಿಲ್ಲೆ ಸಾಗರದ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಸುರತ್ಕಲ್ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಆಗಿನ ಠಾಣೆ ಇನ್ಸ್‌ಪೆಕ್ಟರ್ ರಘು ನಾಯ್ಕ ಮತ್ತು ಸಬ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

