Home » ಕುಂದಾಪುರ ಎಜ್ಯುಕೇಶನ್ ಸೊಸೈಟಿಗೆ ಸುವರ್ಣ ಸಂಭ್ರಮ
 

ಕುಂದಾಪುರ ಎಜ್ಯುಕೇಶನ್ ಸೊಸೈಟಿಗೆ ಸುವರ್ಣ ಸಂಭ್ರಮ

ಕನ್ನಡ ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ- ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.)

by Kundapur Xpress
Spread the love

ಕುಂದಾಪುರ : ಪರಿಸರದಲ್ಲಿ ಉತ್ತಮ ಗುಣಮಟ್ಟದ ಮೌಲ್ಯಪೂರ್ಣ ಶೈಕ್ಷಣಿಕ ಅವಕಾಶಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ಒದಗಿಸಬೇಕು ಎನ್ನುವ ಸದಾಶಯದೊಂದಿಗೆ 1975ರ ವೇಳೆಗೆ ಹುಟ್ಟಿಕೊಂಡ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ.
ಇಸವಿ 1975, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಕನಸಿಗೆ ಕಸುವು ತುಂಬಿದವರು ಶ್ರೀ ಜಿ.ಕೆ. ಮೇಲಿನಮನೆ ಮತ್ತು ಶ್ರೀಮತಿ ಕುಸುಮ ಮೇಲಿನಮನೆ ದಂಪತಿಗಳು.
ಕುಂದಾಪುರ ಹೃದಯ ಭಾಗದಲ್ಲಿ ತನ್ನ ನೆಲೆಯನ್ನು ಕಂಡುಕೊಂಡ ಈ ಸೊಸೈಟಿ ಆರಂಭಗೊಂಡದ್ದು ನರ್ಸರಿ ತರಗತಿಯ ಮೂಲಕ. ಆದರೆ ಇಂದು ತನ್ನ ಶೈಕ್ಷಣಿಕ ಉತ್ಕೃಷ್ಟತೆಯೊಂದಿಗೆ ಸಂಸ್ಥೆ ನರ್ಸರಿ ಯಿಂದ ಪದವಿಯವರೆಗೆ ಹೆಮ್ಮರವಾಗಿ ಬೆಳೆದು ನಿಂತಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಸುವ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ಈ ಸಂಸ್ಥೆಯ ಶೈಕ್ಷಣಿಕ ಕಾಳಜಿಯ ಸಾರ್ಥಕ್ಯಕ್ಕೆ ಈಗ ಸುವರ್ಣ ಸಂಭ್ರಮ.
ಕಳೆದ ಐದು ದಶಕಗಳ ಅವಧಿಯಲ್ಲಿ ಸಾಮಾಜಿಕ ಬದ್ಧತೆಯೊಂದಿಗೆ ನಾಲ್ಕು ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಈ ಸಂಸ್ಥೆ ರೂಪಿಸಿದೆ. ಪ್ರಸ್ತುತ ಈ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ಸರಿ ಸುಮಾರು ಐದು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣದೊಂದಿಗೆ ಕಲಿಕೆ, ಸಾಹಿತ್ಯ, ಕಲೆ, ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ವಿಫುಲ ಅವಕಾಶಗಳಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಈ ಶಿಕ್ಷಣ ಸಂಸ್ಥೆಗಳು ಗುರುತಿಸಿಕೊಂಡು ಎಲ್ಲರ ಗಮನ ಸೆಳೆದಿದೆ.
ಸ್ಥಾಪಕ ಅಧ್ಯಕ್ಷರಾದ ಹಾಜಿ ಎ.ಎನ್. ಅಹಮದ್ ಕುಟ್ಟಿ ನಂತರದ ಅಧ್ಯಕ್ಷರುಗಳಾದ ಎನ್.ಎಸ್ ಪರಮೇಶ್ವರಯ್ಯ, ಬಿ. ಅರುಣ್ ಕುಮಾರ್ ಶೆಟ್ಟಿ, ಕೆ. ಸರ್ವೋತ್ತಮ ಶೆಟ್ಟಿ ಮತ್ತು ಅತ್ಯಂತ ಧೀರ್ಘ ಅವಧಿಯ ಅಧ್ಯಕ್ಷರಾದ ಕೆ. ಶಿವರಾಮ ಶೆಟ್ಟಿ ನಂತರ ಸೋಲೊಮನ್ ಸೋನ್ಸ್ ಮತ್ತು ಹಾಲಿ ಅಧ್ಯಕ್ಷರಾದ ಬಿ.ಎಂ. ಸುಕುಮಾರ ಶೆಟ್ಟಿಯವರ ದಕ್ಷ ಹಾಗೂ ಯಶಸ್ಸಿ ಆಡಳಿತದೊಂದಿಗೆ ಸಂಸ್ಥೆ ಯಶಸ್ವಿಯಾಗಿ ಮುನ್ನೆಡೆಯುತ್ತಿದೆ.

ಯಶಸ್ಸಿನ ರೂವಾರಿ – ಪ್ರೇರಕ ಶಕ್ತಿ – ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿ

ಕುಂದಾಪುರ ಪರಿಸರದ ಶೈಕ್ಷಣಿಕ, ಧಾರ್ಮಿಕ, ಔಧ್ಯಮಿಕ, ರಾಜಕೀಯ ಮತ್ತು ಸಾಮಾಜಿಕ ವಲಯದ ಮಹತ್ವಪೂರ್ಣ ಹೆಸರು ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿ. ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂಬ ಧ್ಯೇಯವನ್ನು ಇಟ್ಟುಕೊಂಡು ಹಗಲಿರುಳು ಶಿಕ್ಷಣ ಸಂಸ್ಥೆಗಳ ಏಳಿಗೆಗಾಗಿ ಇವರು ಶ್ರಮಿಸುತ್ತಿದ್ದಾರೆ.
ಶಿಕ್ಷಣದ ಬಗ್ಗೆ ಅಪಾರ ಕಾಳಜಿ, ಕಳಕಳಿ ಹೊಂದಿರುವ ಶ್ರೀಯುತರು ತಮ್ಮ ಯೋಚನೆ, ಯೋಜನೆಗಳನ್ನು ಕಾರ್ಯರೂಪಗೊಳಿಸಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸಿದ ಈ ಸಂಸ್ಥೆಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರ ಜೊತೆಗೆ ಇಂದಿನ ಶೈಕ್ಷಣಿಕ ಅವಸರಗಳಿಗೆ ಎಲ್ಲಾ ನೆಲೆಯಲ್ಲಿಯೂ ಸ್ಪಂದಿಸುತ್ತಿರುವುದು ಶ್ರೀಯುತರ ದಕ್ಷ ಆಡಳಿತಕ್ಕೆ ಹಿಡಿದ ಕೈ ಗನ್ನಡಿ. ಈ ಎಲ್ಲಾ ವಿದ್ಯಾ ಸಂಸ್ಥೆಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾದರಿ ಸಂಸ್ಥೆಗಳನ್ನಾಗಿ ರೂಪಿಸಬೇಕೆಂಬ ಉತ್ಕಟ ಹಂಬಲವನ್ನು ಹೊಂದಿರುವವರು ಶಿಕ್ಷಣ ಪ್ರೇಮಿ ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿ.

ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ – ಉಡುಪಿ ಜಿಲ್ಲೆಯ ಮೊದಲ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ

ಕುಂದಾಪುರದ ಗಾಂಧಿ ಮೈದಾನದ ಸಮೀಪದಲ್ಲಿ 1975 ರಲ್ಲಿ ಸ್ಥಾಪನೆಗೊಂಡ ಈ ಶಾಲೆಯ ಪ್ರಾರಂಭದ ಹೆಸರು ಮಾಡರ್ನ್ ಸ್ಕೂಲ್. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಅದು ಈಗಿನ ಸರ್ಕಾರಿ ಆಸ್ಪತ್ರೆಯ ಸಮೀಪದ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಈ ಸಂದರ್ಭದಲ್ಲಿ ಮೇಲಿನ ಮನೆ ದಂಪತಿಗಳಿಗೆ ಸಹಕಾರ ನೀಡಿದವರು ಕೋಟ ಜಗನ್ನಾಥ ಶಾನುಭೋಗ್ ಮತ್ತು ಕುಂದಾಪುರದ ಲಕ್ಷ್ಮೀನಾರಾಯಣ ರಾವ್ ಏಳೆಂಟು ವರ್ಷ ಅಲ್ಲಿಯೇ ನಡೆಸಲ್ಪಟ್ಟ ಈ ಶಾಲೆ 1983 ರಲ್ಲಿ ಕುಂದೇಶ್ವರ ದೇವಸ್ಥಾನದ ಮುಖಮಂಟಪದ ಸಮೀಪವಿರುವ ಛತ್ರದಲ್ಲಿ ನೆಲೆ ಕಂಡುಕೊಂಡಿತು.
ಹಲ್ಸನಾಡು ಮನೆತನದ ಡಾ| ವೆಂಕಟರಮಣಯ್ಯನವರು ತಮ್ಮ ತಂದೆ ಹೆಸರಿನಲ್ಲಿದ್ದ ಆ ಛತ್ರವನ್ನು ಶಾಲೆಗಾಗಿ ಬಿಟ್ಟುಕೊಟ್ಟು, ಮಾಡರ್ನ್ ಸ್ಕೂಲ್ ಆಗಿದ್ದ ಶಾಲೆ ಅಲ್ಲಿಂದ ಮುಂದೆ ಹಲ್ಸನಾಡು ಮಾದಪ್ಪಯ್ಯ ಮೆಮೋರಿಯಲ್ ಶಾಲೆ ಎಚ್.ಎಮ್.ಎಮ್. ಶಾಲೆಯಾಗಿ ಮರುನಾಮಕರಣಗೊಂಡಿತು.
ಕುಂದಾಪುರ ಪರಿಸರದಲ್ಲಿ ಶಿಕ್ಷಣದ ಜೊತೆ ಸಂಸ್ಕಾರ, ಸಮುದಾಯದ ಸಹಭಾಗಿತ್ವ, ಹೊಸ ಸಾಧ್ಯತೆಗಳೊಂದಿಗೆ ಅಕ್ಷರ ಪ್ರೀತಿಯನ್ನು ಅಕ್ಕರೆಯಿಂದ ಪ್ರಚುರ ಪಡಿಸುವ ಉದ್ದೇಶ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.)ಯದ್ದು. ಹಲ್ಸನಾಡು ಮಾದಪ್ಪಯ್ಯ ಮೆಮೋರಿಯಲ್ ಇಂಗ್ಲೀಷ್ ಮೀಡಿಯಂ ಪ್ರೈಮರಿ ಸ್ಕೂಲ್ ಹೆಸರಿನಲ್ಲಿ ರೂಪು ತಳೆದ ಈ ಶಾಲೆ ಉಡುಪಿ ಜಿಲ್ಲೆಯ ಮೊದಲ ಆಂಗ್ಲ ಮಾಧ್ಯಮ ಶಾಲೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಆಂಗ್ಲಮಾಧ್ಯಮ ಶಿಕ್ಷಣ ಸಾಮಾನ್ಯವರ್ಗಕ್ಕೆ ಕನಸಾಗಿದ್ದ 1975ರ ಹೊತ್ತಿಗೆ ಯೋಚನೆ, ಯೋಜನೆಯಾಗಿ ಧೈರ್ಯ, ಆಸ್ಥೆಯಿಂದ ಹುಟ್ಟಿಕೊಂಡ ಈ ಎಚ್.ಎಮ್.ಎಮ್. ಸಂಸ್ಥೆಗೆ ಈಗ 50ರ ಸಂಭ್ರಮ.
ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಶಾಲೆಯೆಂದರೆ ಸಂತಸದ ತಾಣವಾಗಿರಬೇಕು. ಈ ನೆಲೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ವಿಭಿನ್ನವಾಗಿ ಆಯೋಜಿಸಿ ಮಕ್ಕಳಿಗೆ ಕಲಿಕೆಯೊಂದನ್ನು ಸಂಭ್ರಮವಾಗಿಸುವಲ್ಲಿ ಕಾಳಜಿ ವಹಿಸುತ್ತಿದೆ. ಕಲಿಕೆಯನ್ನು ಸಾಮಾಜಿಕ ವ್ಯವಸ್ಥೆಯೊಂದಿಗೆ ಹೊಂದಾಣಿಸುವುದು, ಜ್ಞಾನ, ಕೌಶಲ, ಸ್ವತಂತ್ರ ಚಿಂತನೆಗಳಿಗೆ ಒತ್ತುಕೊಟ್ಟು, ದೈನಂದಿನ ಜೀವನ ಶೈಲಿಯೊಂದಿಗೆ ಸಮ್ಮಿಲನಗೊಳಿಸುವುದು ಹಾಗೂ ಪ್ರತೀ ಮಗುವಿನಲ್ಲಿ ಬಿಂಬಿತವಾಗುತ್ತಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರದರ್ಶಿಸುವಂತೆ ಮಾಡುವ ಪೂರಕ ವಾತಾವರಣದ ನಿರ್ಮಾಣ ಸಂಸ್ಥೆಯ ಬೋಧಕ ವರ್ಗದ ಮೊದಲ ಆದ್ಯತೆ.
ಮಕ್ಕಳನ್ನು ಭಾವನಾತ್ಮಕವಾಗಿ ಅರಿತು ಅವರ ಗೊಂದಲ-ತಳಮಳಗಳನ್ನು ಹೋಗಲಾಡಿಸಿ ಅವರು ದೃಢವಾದ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸುವ ಶಾಲೆಯ ವಿಭಿನ್ನ ಪ್ರಯತ್ನವೇ ಮೆಂಟರಿಂಗ್. ಈ ವ್ಯವಸ್ಥೆಯಲ್ಲಿ ಪ್ರತೀ ಶಿಕ್ಷಕನು ಮಗುವಿನ ಮನಸ್ಸನ್ನು ಒಳಹೊಕ್ಕು, ಅರ್ಥೈಸಿಕೊಂಡು ಅವರಲ್ಲಿ ಧೈರ್ಯ, ಭರವಸೆ, ಆತ್ಮವಿಶ್ವಾಸವನ್ನು ಮೂಡಿಸುವ ಮೂಲಕ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಿಸುವ ಮಾರ್ಗದರ್ಶಿಯಾಗಿರುತ್ತಾನೆ.

ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ – ಕುಂದಾಪುರದ ಪ್ರಥಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆ

ಎಚ್.ಎಮ್.ಎಮ್. ಪ್ರಾಥಮಿಕ ಶಾಲೆಯ ಉನ್ನತೀಕರಣದ ಗುರಿಯಿದ್ದ ಜಿ.ಕೆ. ಮೇಲಿನ ಮನೆಯವರ ಕನಸು ಆಗಿನ ಮುಂಬೈನ ನಿವಾಸಿ ಡಾ. ಎ. ಆರ್. ಆಚಾರ್ಯರನ್ನು ತಲುಪಿದಾಗ, ಅವರು ತಮ್ಮ ತಂದೆ ದಿ. ರಾಮಚಂದ್ರ ಆಚಾರ್ಯರ ಹೆಸರಿನಲ್ಲಿ ದೇಣಿಗೆ ನೀಡುವುದರೊಂದಿಗೆ ನನಸಾಯಿತು. ಹೀಗೆ 1982ರಲ್ಲಿ ವ್ಯಾಸ ಕುಂಜಿಬೆಟ್ಟು ರಾಮಚಂದ್ರ ಆಚಾರ್ಯ ಮೆಮೋರಿಯಲ್ ಹೈಸ್ಕೂಲ್ ವಿ.ಕೆ.ಆರ್. ಆಚಾರ್ಯ ಮೆಮೋರಿಯಲ್ ಹೈಸ್ಕೂಲ್ ಆಗಿ ಸ್ಥಾಪನೆಯಾಯಿತು.
ವಿ.ಕೆ.ಆರ್. ಸಂಸ್ಥೆ ಕುಂದಾಪುರದ ಪ್ರಥಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಾಗಿದ್ದು, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಹೆಮ್ಮೆಯ ವಿದ್ಯಾಸಂಸ್ಥೆಯಾಗಿದೆ. ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದ ಈ ಸಂಸ್ಥೆ ಸಮಾಜದ ಎಲ್ಲಾ ಸ್ಥರದ ಮಕ್ಕಳೂ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಬೇಕು ಎನ್ನುವ ಧ್ಯೇಯ ವಾಕ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಪಠ್ಯ ಮಾತ್ರವಲ್ಲದೆ ಪತ್ಯೇತರ ಚಟುವಟಿಕೆಗಳಲ್ಲಿಯೂ ಅಗ್ರಮಾನ್ಯವೆನಿಸಿದ ಈ ಸಂಸ್ಥೆಯು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

ಎಚ್.ಎಮ್.ಎಮ್. & ವಿ.ಕೆ.ಆರ್. ಶಾಲೆಗಳ ಅನನ್ಯತೆಗಳು

Love Care Quality ಪ್ರೀತಿ, ಕಾಳಜಿ ಹಾಗೂ ಗುಣಮಟ್ಟ ಎನ್ನುವ ಸಂಸ್ಥೆಯ ಧ್ಯೇಯದ ಸಾಕಾರಕ್ಕಾಗಿ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರಗಳು, ಪೇರೆಂಟಿಂಗ್ ಕುರಿತ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಸ್ಪೂರ್ತಿಗಾಗಿ ನೂರಾರು ಸಾಧಕ ವ್ಯಕ್ತಿಗಳ ಪರಿಚಯ ಕಾರ್ಯಕ್ರಮಗಳು, ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಕಾರ್ಯಕ್ರಮ ಇತ್ಯಾದಿಗಳನ್ನು ಶಾಲೆಯಲ್ಲಿ ನಡೆಸುವುದರ ಮೂಲಕ ಇಲಾಖೆಯ ಮಟ್ಟದಲ್ಲಿಯೂಎಚ್.ಎಮ್.ಎಮ್. & ವಿ.ಕೆ.ಆರ್ .ಶಾಲೆಗಳು ಅನನ್ಯತೆಗಳಿಗೆ ಗುರುತಿಸಿಕೊಂಡಿದೆ.

ಕುಂದೇಶ್ವರ ದೇವಸ್ಥಾನದ ಸಮೀಪದ ಕಟ್ಟಡದಿಂದ ಸುಸಜ್ಜಿತವಾದ ವಿಶಾಲವಾದ ಬಸ್ರೂರ್ ಮೂರುಕೈ ಸಮೀಪ ಕಟ್ಟಲ್ಪಟ್ಟ ಹೊಸ ಕಟ್ಟಡಕ್ಕೆ ಈ ಎರಡು ಸಂಸ್ಥೆಗಳು 2017ರಲ್ಲಿ ಸ್ಥಳಾಂತರಗೊಂಡಿತು.
ಎಚ್.ಎಮ್.ಎಮ್. ಮತ್ತು ವಿ.ಕೆ.ಆರ್. ನಲ್ಲಿ ಶಿಕ್ಷಣ ಪಡೆದ ದೊಡ್ಡ, ವಿದ್ಯಾರ್ಥಿ ಸಂದೋಹ ಇಂದು ಜಗದಗಲ ವಿಸ್ತಾರಗೊಂಡು ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವುದು ಕುಂದಾಪುರ ಎಜ್ಯುಕೇಷನ್ ಸೊಸೈಟಿ ನಿಜಕ್ಕೂ, ಹೆಮ್ಮೆ ಹಾಗೂ ಘನತೆ. ಪ್ರತಿಷ್ಠಿತ MNCಗಳ ಅಧಿಕಾರಿಗಳು, ಪ್ರಖ್ಯಾತ ವೈದ್ಯರುಗಳು, ಪ್ರಸಿದ್ಧ ರಾಜಕಾರಣಿಗಳು ಸಮಾಜಸೇವಕರುಗಳು ಈ ಎಲ್ಲಾ ಯಾದಿಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಆಡಿ, ಓಡಿ, ಓದಿ ಬೆಳೆದ ವಿದ್ಯಾರ್ಥಿಗಳಿದ್ದಾರೆ ಎನ್ನುವುದು ನಮಗೆ ಹೆಮ್ಮೆ ಮತ್ತು ಖುಷಿಯ ಸಂಗತಿ ಅಲ್ಲದೆ ಪ್ರಧಾನ ಮಂತ್ರಿಗಳಿಂದ ಸನ್ಮಾನಗೊಂಡ ವಿದ್ಯಾರ್ಥಿ, ಎಸ್.ಎಸ್.ಎಲ್.ಸಿ. ಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, Rankಗಳ ಗುಚ್ಛಗಳನ್ನು ಕೊಟ್ಟ ವಿದ್ಯಾರ್ಥಿಗಳು, ಎಚ್.ಎಮ್.ಎಮ್. ಮತ್ತು ವಿ.ಕೆ.ಆರ್. ಶಾಲೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ.ಕುಂದಾಪುರದ ಮುಖ್ಯಭಾಗದಲ್ಲಿರುವ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಾಲಾವಾಹನದ ವ್ಯವಸ್ಥೆ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ನೀಡಿದೆ. ಶಿಸ್ತಿಗೆ ಮೊದಲ ಪ್ರಾಶಸ್ತ್ಯವಿರುವ ಈ ಸಂಸ್ಥೆಯಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾವ್ಯವಸ್ಥೆ ಇದ್ದು, ವಿದ್ಯಾರ್ಥಿಗಳು ಚೆಸ್, ಕರಾಟೆ ಹಾಗೂ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಜೇತರಾಗಿ ಮಿಂಚುವ ಮೂಲಕ ಶಾಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ. ಅಂತರ್ಜಾಲ ಸೌಲಭ್ಯವನ್ನು ಒಳಗೊಂಡ ಅತ್ಯುತ್ತಮ ಕಂಪ್ಯೂಟರ್ ಲ್ಯಾಬ್, ಉತ್ತಮ ಪುಸ್ತಕಗಳನ್ನೊಳಗೊಂಡ ವಾಚನಾಲಯ ಹಾಗೂ ಪ್ರಯೋಗಾಲಯದ ವ್ಯವಸ್ಥೆ ಇದೆ. ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ ಹಾಗೂ ಟಿನೋವೇಟರ್ಸ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ವಿಜೇತರಾಗಿದ್ದಾರೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸಹಕಾರಿಯಾಗುವ ಎನ್.ಸಿ.ಸಿ. ಸ್ಕೌಟ್ ಹಾಗೂ ಗೈಡ್ ತರಬೇತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ. ಅವರೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬಲ್ಲ ಯೋಗ, ಪ್ರಾಣಾಯಾಮ, ಕರಾಟೆ, ಚಿತ್ರಕಲೆ, ಕರಕುಶಲ ಕಲೆಗಳಿಗೆ ಹೆಚ್ಚಿನ ಆದ್ಯತೆ ಇದೆ. ನಿರಂತರ ಕಾರ್ಯದಕ್ಷತೆಯಿಂದ ಈ ಸಂಸ್ಥೆಯು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತನ್ನ ಗುಣಮಟ್ಟವನ್ನು ಕಾಯ್ದುಕೊಂಡಿದೆ.
ಕಳೆದ ಒಂದುವರೆ ದಶಕಗಳಿಂದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಚಿಂತನ ರಾಜೇಶ್ ಮಾರ್ಗದರ್ಶನದಲ್ಲಿ ಈ ಶಾಲೆ 25 ರಿಂದ 30 ವರ್ಷಗಳ ಬೋಧನಾ ಅನುಭವ ಹೊಂದಿರುವ ಹಿರಿಯ ಶಿಕ್ಷಕರ ಜೊತೆಗೆ ಕ್ರಿಯಾಶೀಲ ಯುವ ಶಿಕ್ಷಕರ ಸಮ್ಮಿಳಿತ ತಂಡವನ್ನು ಹೊಂದಿದೆ. ಆ ತಂಡ ಶಾಲೆಯ ದೊಡ್ಡ ಶಕ್ತಿ. ಜೊತೆಗೆ ಪ್ರಾಥಮಿಕ – ಪ್ರೌಢ ಹಂತದಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿ ಆರೈಕೆಯಿಂದ ಕಾಣುವ ಆಯಾಗಳು, ಬಸ್ ಡ್ರೈವರ್‌ಗಳು, ಅಡುಗೆ ಹಾಗೂ ಆಫೀಸ್ ಸಿಬ್ಬಂದಿಯವರ ಕಾರ್ಯವೈಖರಿ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.
HMM ಹಾಗೂ VKR ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಚಿಣ್ಣರು, ಮಕ್ಕಳು ಹಾಗೂ ಹದಿಹರೆಯದ ವಿದ್ಯಾರ್ಥಿಗಳ ಬಹು ಪ್ರೀತಿಯ ತಾಣವಾಗಿ ಗುರುತಿಸಿಕೊಂಡಿದೆ.

ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜು

ಕುಂದಾಪುರ ನಗರದಲ್ಲಿ ಕೇವಲ ಎರಡೇ ಎರಡು ಪಿಯು ಕಾಲೇಜುಗಳು ಮಾತ್ರ ಇದ್ದ 2002ರ ಕಾಲಘಟ್ಟದಲ್ಲಿ ತಮ್ಮದೇ VKR ಹೈಸ್ಕೂಲಿನಲ್ಲಿ ಬಹು ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿದ್ದ ಕುಂದಾಪುರ ಎಜ್ಯುಕೇಶನ್ ಸೊಸೈಟಿ ತಾವೇ ತಮ್ಮದೇ ಸ್ವಂತ ಪಿಯು ಕಾಲೇಜನ್ನು ಹೊಂದಬೇಕೆನ್ನುವ ಆಲೋಚನೆಯ ಮೂರ್ತರೂಪವೇ ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜು.
ಪ್ರೌಢಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ಪದವಿಪೂರ್ವ ಶಿಕ್ಷಣ, ವೃತ್ತಿಪರ ಪ್ರವೇಶ ಪರೀಕ್ಷಾ ತರಬೇತಿಗಳು ಒಂದೇ ಸೂರಿನಲ್ಲಿ ದೊರೆಯುವಂತಾಗಬೇಕು, ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಾನವೀಯ ನೆಲೆಯಲ್ಲಿ ಸಜ್ಜುಗೊಳಿಸಬೇಕು ಎಂಬ ನಿಟ್ಟಿನಲ್ಲಿ 2003ರಲ್ಲಿ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ಎನ್ನುವ ಅದ್ಭುತ ಕನಸುಗಾರನ ದೂರದೃಷ್ಟಿತ್ವದಲ್ಲಿ ಕುಂದಾಪುರದಲ್ಲಿ ಗುಣಮಟ್ಟದ ಪಿಯು ಶಿಕ್ಷಣ ಒದಗಿಸುವ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು ಸ್ಥಾಪನೆಯಾಯಿತು. ಕೇವಲ 56 ವಿದ್ಯಾರ್ಥಿಗಳಿಂದ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿರುವ ಈ ಸಂಸ್ಥೆ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ. ಚಾರಿತ್ರ‍್ಯ ನಿರ್ಮಾಣಕ್ಕೆ ಒತ್ತು ನೀಡುವತ್ತ ಹೆಚ್ಚು ಗಮನ ಹರಿಸುತ್ತಿದೆ.
ಇಸವಿ 2008ರಲ್ಲಿ RNS Composite PU College ಎನ್ನುವ ನೂತನ ಶೀರ್ಷಿಕೆಯೊಂದಿಗೆ, ಪ್ರಸಿದ್ಧ ಉದ್ಯಮಿ ಶ್ರೀ ಆರ್.ಎನ್. ಶೆಟ್ಟಿಯವರ ಹರಕೆ-ಹಾರೈಕೆಗಳೊಂದಿಗೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯತ್ತ ಹೆಚ್ಚು ಗಮನ ಹರಿಸುತ್ತಾ ಸಾಧನಾ ಪಥದತ್ತ ಮುನ್ನಡೆಯುತ್ತ ಬಂದ ಸಂಸ್ಥೆ ಇದಾಗಿದೆ.
2011ರಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ತನ್ನ ಸಮರ್ಥ ಉಪನ್ಯಾಸಕರ ತಂಡದೊಂದಿಗೆ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದರೊಂದಿಗೆ ಮಹತ್ತರ ಪಾತ್ರ ವಹಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಬಹು ಬಗೆಯ ವಿಸ್ತರಣಾ ಚಟುವಟಿಕೆಗಳು ಹಾಗೂ ಕಾರ್ಯಾಗಾರಗಳು, KCET, NEET, JEE ಕೋರ್ಸುಗಳಿಗೆ ತರಬೇತಿ, ಮಾಹಿತಿ ಕಾರ್ಯಾಗಾರಗಳು ಕಾಲೇಜಿನ ಆನನ್ಯತೆಗಳಾಗಿವೆ. ಪಠ್ಯದ ಜೊತೆಗೆ ವೃತ್ತಿಪರ ಪ್ರವೇಶ ಪರೀಕ್ಷಾ ತರಬೇತಿ ನೀಡಲಾಗುತ್ತಿದ್ದು ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ.ಬಿ, ಪಿ.ಸಿ.ಎಂ.ಸಿ, ಪಿ.ಸಿ.ಎಂ.ಎಸ್, ಪಿ.ಸಿ.ಎಂ.ಇ ಎಂಬ ನಾಲ್ಕು ಸಂಯೋಜನೆಗಳಿದ್ದು ಜೊತೆಗೆ ಸಿಇಟಿ, ನೀಟ್, ಜೆಇಇ ಮೈನ್ ಪರೀಕ್ಷೆಗೆ ತರಬೇತಿ ನೀಡುವ ವ್ಯವಸ್ಥೆ ಇದೆ.
ವಾಣಿಜ್ಯ ವಿಭಾಗದಲ್ಲಿ ಎಸ್.ಇ.ಬಿ.ಎ, ಸಿ.ಇ.ಬಿ.ಎ, ಬಿ.ಇ.ಬಿ.ಎ ಎಂಬ ಮೂರು ಸಂಯೋಜನೆಗಳಿದ್ದು, ಸಿಪಿಟಿ, ಬ್ಯಾಂಕಿಂಗ್‌ನಂತಹ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಮಾಹಿತಿಯನ್ನು ನೀಡಲಾಗುತ್ತಿದೆ. ಕಂಪ್ಯೂಟರ್‌ನಲ್ಲಿ ಪಿಜಿಡಿಸಿಎ, ಡಿಪ್ಲೋಮಾ ಕೋರ್ಸ್‌ಗೂ ಅವಕಾಶವಿದ್ದು, ಕರಾಟೆ ಶಿಕ್ಷಣ ತರಬೇತಿ ಸಹ ನೀಡಲಾಗುತ್ತಿದೆ.

ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು- ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಕೇಂದ್ರ

ಪದವಿ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಈ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿಯ 4ನೇ ಶಿಕ್ಷಣ ಸಂಸ್ಥೆ ಇದಾಗಿದೆ.
ಕುಂದಾಪುರ ಮತ್ತು ಸುತ್ತ ಮುತ್ತಲಿನ ತಾಲೂಕುಗಳ ಕೆಳ ಮದ್ಯಮ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಆಸರೆಯಾಗಲು ಶಿಕ್ಷಣ ಪ್ರೇಮಿ ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿ ಯವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜನ್ನು 2010ರಲ್ಲಿ ಪ್ರಾರಂಭಿಸಿದರು.
ಡಾ. ಬಸ್ರೂರು ಭುಜಂಗ ಹೆಗ್ಡೆಯವರ ಧರ್ಮಪತ್ನಿ ಸೌಕೂರು ಶೇರ್ವೇಗಾರ್ ಮನೆತನದ ಶ್ರೀಮತಿ ವಿಶಾಲಾಕ್ಷಿ ಬಿ. ಹೆಗ್ಡೆಯವರ ಮಹಾಪೋಷಕತ್ವದ ಫಲವಾಗಿ ಇಂದು 2.5 ಎಕರೆ ಜಾಗದಲ್ಲಿ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ತಲೆ ಎತ್ತಿ ನಿಂತಿದೆ. ಪ್ರಾರಂಭದಲ್ಲಿ ಶ್ರೀಮತಿ ಸೀಮಾ ಪಿ. ಶೆಟ್ಟಿ ಸ್ಥಾಪಕ ಪ್ರಾಂಶುಪಾಲರಾಗಿ ಶಿಸ್ತುಬದ್ಧ ಶೈಕ್ಷಣಿಕ ವಾತಾವರಣವನ್ನು ಕಲ್ಪಿಸಿದರು. 2016ರಿಂದ ಪ್ರಾಂಶುಪಾಲರಾಗಿ ಪ್ರೊ. ದೋಮ ಚಂದ್ರಶೇಖರ್ ಆಡಳಿತ ನಿರ್ವಹಿಸಿದರು .
2019ರಲ್ಲಿ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿಯವರು ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಸಾಂಪ್ರದಾಯಿಕ ಕೋರ್ಸ್‌ಗಳ ಜೊತೆಗೆ ಪಂಚಮುಖಿ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿ ಇಂದಿನ ಕಾಲಮಾನಕ್ಕೆ ಬೇಕಾಗುವ ಹೊಸ ಕೋರ್ಸ್‌ಗಳನ್ನು ಆರಂಭಿಸಲಾಯಿತು.ವಾಣಿಜ್ಯ (ಬಿ.ಕಾಂ.), ವ್ಯವಹಾರ ಆಡಳಿತ (ಬಿಬಿಎ) ಮತ್ತು ಗಣಕ ವಿಜ್ಞಾನ (ಬಿಸಿಎ) ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಕೇಂದ್ರವಾಗಿದೆ. 130 ವಿದ್ಯಾರ್ಥಿಗಳೊಂದಿಗೆ 2010ರಲ್ಲಿ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿಯವರ ಮುಂದಾಳತ್ವದಲ್ಲಿ ಆರಂಭಗೊoಡ ಈ ಸಂಸ್ಥೆ 2022ರಲ್ಲಿ NAACನಿಂದ ಪ್ರಥಮ ಆವರ್ತದಲ್ಲಿ B++ ಮಾನ್ಯತೆಯನ್ನು ಪಡೆದಿರುವ ಅತ್ಯಂತ ಕಿರಿಯ ಪ್ರಾಯದ ಸಂಸ್ಥೆಯಾಗಿದ್ದು, UGCಯಿಂದ 2(f) ಮಾನ್ಯತೆ ಪಡೆದಿದ್ದು, ಕರ್ನಾಟಕ ಸರಕಾರದಿಂದ ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಗಳಿಗೆ ಶಾಶ್ವತ ಸಂಯೋಜನೆಗೊಳಪಟ್ಟಿರುವುದು ಕೂಡ ವಿಶೇಷವಾಗಿರುತ್ತದೆ.
ಅತ್ಯುತ್ತಮ ಆಡಳಿತ ಮಂಡಳಿ, ದಕ್ಷ ಪ್ರಾಂಶುಪಾಲರು, ಯುವ-ಅನುಭವೀ ಪ್ರಾಧ್ಯಾಪಕ ವೃಂದ, ಪ್ರಕೃತಿದತ್ತವಾದ ಮತ್ತು ಶಿಸ್ತುಬದ್ಧವಾದ ಕಾಲೇಜ್ ಕ್ಯಾಂಪಸ್, ಸಮೃದ್ಧ ಲೈಬ್ರರಿ, ಕಂಪ್ಯೂಟರ್ ಲ್ಯಾಬ್‌ಗಳು, ಕ್ರೀಡಾಂಗಣಗಳು, ಶುಚಿ-ರುಚಿಯಾದ ಕ್ಯಾಂಟೀನ್ ವ್ಯವಸ್ಥೆ, 1500 ಜನರು ಕುಳಿತುಕೊಳ್ಳಬಹುದಾದ ವಿಶಾಲವಾದ ಸಭಾಂಗಣ, ವಿದ್ಯಾರ್ಥಿಗಳಿಗೆ ವಿಶ್ರಾಂತಿ ಕೊಠಡಿಗಳು, ಕಾಲೇಜ್ ಬಸ್ಸಿನ ವ್ಯವಸ್ಥೆ, ಸಂಪೂರ್ಣವಾಗಿ ಸಿಸಿ ಕ್ಯಾಮರಾದ ಕಣ್ಗಾವಲಿರುವ ಕ್ಯಾಂಪಸ್ ಹೀಗೆ ಹಲವಾರು ವ್ಯವಸ್ಥೆಗಳನ್ನು ಹೊಂದಿರುವ ಈ ಕಾಲಘಟ್ಟಕ್ಕೆ ಬೇಕಾಗುವ ವಿದ್ಯಾಸಂಸ್ಥೆಯಾಗಿದೆ.
ಈ ವಿದ್ಯಾಸಂಸ್ಥೆ ಕಳೆದ 15 ವರ್ಷಗಳಿಂದ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳಿಗೆ ಸಮಾನವಾಗಿ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದು, ಶೈಕ್ಷಣಿಕ-ಸಾಂಸ್ಕೃತಿಕ-ಸಾಹಿತ್ಯಿಕ-ಕ್ರೀಡೆ-ಕ್ಯಾಂಪಸ್ ಪ್ಲೇಸ್‌ಮೆಂಟ್ ಮತ್ತು Start up ಕಾರ್ಯಕ್ರಮಗಳನ್ನು ಮುಖ್ಯವಾಗಿ ಕೇಂದ್ರೀಕರಿಸಿಕೊಡು, ಕಡಿಮೆ ದರದಲ್ಲಿ ಅತ್ಯುತ್ತಮವಾದ ಶಿಕ್ಷಣವನ್ನು ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡುತ್ತಾ ಬರುತ್ತಿದೆ. ಶುಲ್ಕ ರಿಯಾಯಿತಿ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಹೀಗೆ ಹಲವಾರು ವಿದ್ಯಾರ್ಥಿ-ಸ್ನೇಹಿ ಕಾರ್ಯಕ್ರಮಗಳ ಮೂಲಕ ಅದೆಷ್ಟೋ ವಿದ್ಯಾರ್ಥಿಗಳ ಜೀವನಕ್ಕೆ ಬೆನ್ನೆಲುಬಾಗಿ ಸದಾ ಸಹಕರಿಸುತ್ತಿರುವ ವಿದ್ಯಾಸಂಸ್ಥೆಯಾಗಿದೆ.
ಬದಲಾದ ಕಾಲಘಟ್ಟಕ್ಕೆ ಸರಿಯಾಗಿ B.Com. ನೊಂದಿಗೆ CA, CS, CMA, KAS, IAS ಮತ್ತು ಇನ್ನಿತರ UPSC ಪರೀಕ್ಷೆಗಳಿಗೆ ನುರಿತ ಪ್ರಾಧ್ಯಾಪಕರಿಂದ ನಿರಂತರ ತರಬೇತಿ ನೀಡುವುದರೊಂದಿಗೆ B.Com. ವಿದ್ಯಾರ್ಥಿಗಳಿಗೆ Data Science, Tally Prime, Staff Selection Commission ವಿಷಯವನ್ನು ಕೂಡ ಬೋಧಿಸಲಾಗುತ್ತಿದೆ. BBA ನೊಂದಿಗೆ Logistics and Supply Chain Management, PGCET, CAT, MAT ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಾಗುತ್ತಿದೆ. BCA ನೊಂದಿಗೆ Artificial Intelligence ಹಾಗೂ Cyber Security, Machine Learning ವಿಷಯವನ್ನು ಕೂಡಾ ಬೋಧಿಸುತ್ತಿರುವುದು ಸಂಸ್ಥೆಯ ಹೆಮ್ಮೆಯಾಗಿದೆ.
IITಗಳು ನಡೆಸುವ NPTEL–SWAYAM ಪರೀಕ್ಷೆಯಲ್ಲಿ ಪ್ರಥಮ ವರ್ಷದಲ್ಲೇ 326 ವಿದ್ಯಾರ್ಥಿಗಳು ತೇರ್ಗಡೆ. ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳು ಹಾಗೂ ಬೋಧಕ–ಬೋಧಕೇತರರು.
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ NSS, NCC, Rovers-Rangers, Youth Red Cross, Rotaract Clubನಂತಹ 16 ವೇದಿಕೆಗಳು ಕರ್ತವ್ಯ ನಿರ್ವಹಿಸುತ್ತಿವೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಕಾಗಲಾರದು ಎಂಬ ನಿಟ್ಟಿನಲ್ಲಿ ಬೇರೆ ಬೇರೆ ಬಗೆಯ Certificate Courseಗಳಿಗೆ ಕೂಡಾ ತರಬೇತಿಯನ್ನು ನೀಡಲಾಗುತ್ತಿದೆ.
ಮಂಗಳೂರು ವಿ.ವಿ. ನಡೆಸುತ್ತಿರುವ ಬಿ.ಕಾಂ., ಬಿಬಿಎ ಮತ್ತು ಬಿಸಿಎ ಪದವಿ ಪರೀಕ್ಷೆಗಳಲ್ಲಿ ಹಲವಾರು ರ‍್ಯಾಂಕ್‌ಗಳು ಮತ್ತು ಚಿನ್ನದ ಪದಕಗಳನ್ನು ಗಳಿಸುವುದರೊಂದಿಗೆ ದಾಖಲೆಯ ಫಲಿತಾಂಶ ನಿರಂತರವಾಗಿ ಬರುತ್ತಿರುವುದು ಕೂಡ ವಿಶೇಷವಾಗಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಿ.ವಿ. ಮತ್ತು ಇತರ ಸಂಸ್ಥೆಗಳು ನಡೆಸುತ್ತಿರುವ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ನಿರಂತರವಾಗಿ ಬಹುಮಾನಗಳನ್ನು ಗಿಟ್ಟಿಸಿಕೊಳ್ಳುತ್ತಿರುವುದು ಕೂಡಾ ಅತ್ಯಂತ ಸಂತಸದ ವಿಷಯವಾಗಿರುತ್ತದೆ.
ಮಂಗಳೂರು ವಿ.ವಿ. ನಡೆಸುವ ಅಂತರ್-ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ನಿರಂತರವಾಗಿ 4 ವರ್ಷಗಳ ಕಾಲ ಪ್ರಥಮ ಬಹುಮಾನವನ್ನು ಪಡೆದಿರುವುದು ಒಂದು ದಾಖಲೆಯಾಗಿ ಉಳಿದಿದೆ. ವಿ.ವಿ. ನಡೆಸುವ ಕ್ರೀಡಾ ರ‍್ಯಾಂಕಿಂಗ್ನಲ್ಲಿ 7ನೇ ಸ್ಥಾನ, ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಕೂಡ ಉಲ್ಲೇಖಾರ್ಹವಾಗಿದೆ. ಅಲ್ಲದೇ, ಜಿಲ್ಲೆಯಾದ್ಯಂತ ಬೇರೆ ಬೇರೆ ವಿಶೇಷ ಸಂದರ್ಭಗಳಲ್ಲಿ ಸುಮಾರು 2 ಗಂಟೆಗಳ ಕಾಲ ಪ್ರೇಕ್ಷಕರು ನಿಬ್ಬೆರಗಾಗುವಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಬಲಿಷ್ಠವಾದ ತಂಡ ಈ ವಿದ್ಯಾಸಂಸ್ಥೆಯಲ್ಲಿರುವುದು ಗಮನಾರ್ಹ.
ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಮೌಲ್ಯ ಶಿಕ್ಷಣ, Commerce Laboratory, Business Day, Management Fest, IT Fest ಇಂತಹ ಹತ್ತು-ಹಲವಾರು ಕೌಶಲ್ಯ ವರ್ಧಿತ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವುದು ಈ ವಿದ್ಯಾಸಂಸ್ಥೆಯ ವಿಶೇಷತೆಯಾಗಿರುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಬಾಹ್ಯ ಪ್ರಪಂಚವನ್ನು ಅರ್ಥೈಸಿಕೊಳ್ಳುವ ದೃಷ್ಟಿಯಿಂದ Industrial Visits, Extension Activities, Out-reach programmeಗಳನ್ನು ಕೂಡಾ ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳು ಬಹಳಷ್ಟು ಸಂತೋಷದಿoದ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜಮುಖಿ ಚಿಂತನೆಗಳನ್ನು ತಮ್ಮ ವಿದ್ಯಾಭ್ಯಾಸದೊಂದಿಗೆ ಅಳವಡಿಸಿಕೊಳ್ಳುತ್ತಿರುವುದು ಕೂಡಾ ಸ್ತುತ್ಯಾರ್ಹವಾಗಿದೆ.

ಕುಂದಾಪುರ ಎಜುಕೇಶನ್ ಸೊಸೈಟಿಯ ಸುವರ್ಣ ಪಥ – ಐತಿಹಾಸಿಕ ನಡೆ

ಶ್ರೀಬಿ.ಎಂ ಸುಕುಮಾರ ಶೆಟ್ಟಿಯವರ ದಕ್ಷ ನಾಯಕತ್ವದಲ್ಲಿ, ಕ್ರಿಯಾಶೀಲ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ್ ನಕ್ಕತ್ತಾಯರವರು ಹಾಗೂ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದೊಂದಿಗೆ CESನ ಐತಿಹಾಸಿಕ ನಡೆಗೆ ಈಗ 50ರ ಹುರುಪು. ನಡೆದ ಬೀಸುಹಾದಿಯನ್ನೇ ಸ್ಪೂರ್ತಿಯನ್ನಾಗಿಸಿಕೊಂಡು ಮೌಲ್ಯಯುತ ಶಿಕ್ಷಣಕ್ಕೆ ಕಟಿಬದ್ಧವಾಗಿ ಶಿಕ್ಷಣದ ಹೊಂಬೆಳಕನ್ನು ಈ ಹೊನ್ನ ಹಾದಿಯಲ್ಲಿ ಚೆಲ್ಲುತ್ತಿರುವ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅತ್ಯಂತ ಪ್ರೀತಿ ಗೌರವ ಹಾಗೂ ವಿನೀತ ಭಾವದಿಂದ ಈ ಶೈಕ್ಷಣಿಕ ಮೈಲುಗಲ್ಲಿನಲ್ಲಿ ತುಸು ವಿರಮಿಸಿ ಅದೇ ಭರವಸೆ ಮತ್ತು ಕೃತಜ್ಞತಾ ಭಾವದಿಂದ ತನ್ನ ಸೇವೆಯನ್ನು ಸದಾ ಮುಂದುವರಿಸುತ್ತಿರುತ್ತದೆ. ನಿಮ್ಮ ಸಹಕಾರ ಪ್ರೋತ್ಸಾಹ ಅಭಿಮಾನ ಹೀಗೆ ಜೊತೆಗಿರಲಿ.

 

Related Articles

error: Content is protected !!