ಹೊಸದಿಲ್ಲಿ : ಬರೋಬ್ಬರಿ 27 ವರ್ಷಗಳ ಬಳಿಕ ದಿಲ್ಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿ, ಇಂದು ಸೋಮವಾರ ತನ್ನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ.
ಫೆ.8 ಕ್ಕೇ ಫಲಿತಾಂಶ ಪ್ರಕಟವಾಗಿದ್ದರೂ, ಪ್ರಧಾನಿನರೇಂದ್ರಮೋದಿ ಅವರ ವಿದೇಶಿ ಪ್ರವಾಸ ಸೇರಿದಂತೆ ಇತರ ಕಾರಣಗಳಿಂದಾಗಿ ಸಿಎಂ ಆಯ್ಕೆ ತಡವಾಗಿತ್ತು. ಸೋಮವಾರ ನೂತನ ಶಾಸಕರ ಶಾಸಕಾಂಗ ಸಭೆ ನಡೆಯಲಿದ್ದು, ಇದರಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಘೋಷಣೆಯಾಗಲಿದೆ.
ಸದ್ಯ ಈ ಉನ್ನತ ಹುದ್ದೆಗೆ ಹಲವಾರು ಹೆಸರುಗಳು ಕೇಳಿಬರುತ್ತಿವೆ. ಆದಾಗ್ಯೂ, ಪರ್ವೇಶ್ ವರ್ಮಾ, ವಿಜೇಂದರ್ ಗುಪ್ತಾ, ಆಶಿಶ್ ಸೂದ್ ಮತ್ತು ರೇಖಾ ಗುಪ್ತಾ ಸೇರಿದಂತೆ ಹಲವಾರು ಹೆಸರುಗಳು ಓಡುತ್ತಿವೆ. ಆದರೆ, ಈ ಬಗ್ಗೆ ಬಿಜೆಪಿ ವರಿಷ್ಠರು ಯಾವುದೇ ಸುಳಿವು ನೀಡಿಲ್ಲ. ಈ ಬಾರಿ ಮಹಿಳಾ ಸಿಎಂ ಆಗಬಹುದು ಎಂಬ ಮಾತುಗಳೂ ಇವೆ.
ಮಾಜಿ ಸಿಎಂ ಮತ್ತು ಆಪ್ ಮುಖ್ಯಸ್ಥ ಅರವಿಂದ್ ಕೇಜಿವಾಲ್‌ರನ್ನು ಸೋಲಿಸಿರುವ ಪರ್ವೇಶ್ ವರ್ಮಾ ಹೆಸರು ಮುನ್ನೆಲೆಯಲ್ಲಿದೆ. ಜತೆಗೆ ದಿಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್ ಬಿಜೆಪಿ ಕೇಂದ್ರ ನಾಯಕರೊಂದಿಗೆ ನಿಕಟ ಸಂಬಂಧ ಇರಿಸಿಕೊಂಡಿದ್ದಾರೆ. ಇನ್ನು ರೇಖಾ ಗುಪ್ತಾ ಅವರು ಬಿಜೆಪಿಯಲ್ಲಿನ ಪ್ರಮುಖ ಮಹಿಳಾ ಮುಖವಾಗಿದೆ. ಉಳಿದಂತೆ ಬಿಜೆಪಿ ಹಿರಿಯ ನಾಯಕ ಮತ್ತು ದಿಲ್ಲಿ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಸತೀಶ್ ಉಪಾಧ್ಯಾಯ, ಜಿತೇಂದ್ರ ಮಹಾಜನ್ ಕೂಡ ಸ್ಪರ್ಧೆ ನೀಡುತ್ತಿದ್ದಾರೆ.
ಆದರೆ, ರಾಷ್ಟ್ರೀಯ ನಾಯಕರು ಮಹಿಳೆಯೊಬ್ಬರನ್ನು ಸಿಎಂ ಗಾದಿಗೆ ಹೆಸರಿಸುವ ಅಥವಾ ಸಂಪೂರ್ಣ ಹೊಸ ಮುಖವನ್ನು ಆಯ್ಕೆ ಮಾಡುವ ಬಗ್ಗೆ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

