ಮುಂಬೈ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ವಸ್ತುಗಳ ಮೇಲೆ ದಿನಕ್ಕೊಂದರಂತೆ ತೆರಿಗೆ ಹೆಚ್ಚಳ ಘೋಷಿಸತ್ತಿರುವ ಪರಿಣಾಮ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಶುಕ್ರವಾರ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ.
ಸೆನ್ಸೆಕ್ಸ್ 1414 ಅಂಕ ಕುಸಿತ ಕಂಡರೆ, ನಿಫ್ಟಿ 420 ಅಂಕ ಇಳಿದಿದೆ. ಇದರಿಂದ ಹೂಡಿಕೆ ದಾರರಿಗೆ ಒಂದೇ ದಿನ ಬರೋಬ್ಬರಿ 9 ಲಕ್ಷ ಕೋಟಿ ರು. ನಷ್ಟ ಸಂಭವಿಸಿದೆ. ಷೇರುಪೇಟೆಯಲ್ಲಿ ಸೆನ್ಸೆಕ್ಸ್ ದಿನದಂತ್ಯಕ್ಕೆ 1,414 ಅಂಕ ಕುಸಿದು 73,198ರಲ್ಲಿ ಮುಕ್ತಾಯಗೊಂ ಡಿದ್ದರೆ, ನಿಫ್ಟಿ 420 ಅಂಕ ಕುಸಿತ ಕಂಡು 22,124ರಲ್ಲಿ ಅಂತ್ಯಗೊಂಡಿದೆ.
ಟ್ರಂಫ್ ಅವರು ಕೆನಡಾ ಹಾಗೂ ಮೆಕ್ಸಿಕೋ ವಸ್ತುಗಳ ಮೇಲೆ ಶೇ.25ರಷ್ಟು ತೆರಿಗೆ ಹಾಕುವುದಾಗಿ ಹಾಗೂ ಚೀನಾ ವಸ್ತುಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ತೆರಿಗೆ ಹಾಕುವುದಾಗಿ ಗುರುವಾರ ರಾತ್ರಿ ಘೋಷಿಸಿದ್ದರು. ಇದು ಪೇಟೆ ಮೇಲೆ ಮಂಕು ಮೂಡಿಸಿದೆ. ಜತೆಗೆ ದೇಶಿ ನಿಧಿಯ ಹೊರ ಹರಿವು ಕೂಡ ಕುಸಿತಕ್ಕೆ ಕಾರಣವಾಗಿದೆ

