ಫ್ಲೋರಿಡಾ : ವಿಶ್ವದ ಅನೇಕ ದೇಶಗಳ ವಸ್ತುಗಳ ಆಮದಿಗೆ ಭಾರಿ ಸುಂಕ ಘೋಷಿಸಿ ವಿಶ್ವಾದ್ಯಂತ ಆರ್ಥಿಕ ವಿಪ್ಲವಕ್ಕೆ ಕಾರಣವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಂಕ ಘೋಷಣೆಯಿಂದ ಹಿಂದೆ ಸರಿಯುವ ಸಾಧ್ಯತೆಗಳನ್ನು ಸೋಮ ವಾರ ನಿರಾಕರಿಸಿದ್ದಾರೆ. ಕೆಲವೊಮ್ಮೆ ಏನನ್ನಾದರೂ ಸರಿಪಡಿಸಲು ನೀವು ಔಷಧಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಖಡಕ್ಕಾಗಿ ಹೇಳಿದ್ದಾರೆ. ಇದೇ ವೇಳೆ ತಮ್ಮ ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಚ್ಚಾತೈಲ ಬೆಲೆಗಳು ಕಡಿಮೆಯಾಗಿವೆ, ಬಡ್ಡಿದರಗಳು ಕಡಿಮೆಯಾಗಿವೆ. ಆಹಾರ ಬೆಲೆಗಳು ಕಡಿಮೆಯಾಗಿವೆ, ಹಣದುಬ್ಬರವಿಲ್ಲ.ಅಮೆರಿಕವನ್ನು ದುರುಪಯೋಗಪಡಿಸಿಕೊಂಡು ಭಾರಿ ಸುಂಕ ಪೀಕಿದ್ದ ದೇಶಗಳಿಂದ ಶತಕೋಟಿ ಡಾಲರ್‌ನಷ್ಟು ಹಣ ಮರಳಿ ತರುತ್ತಿದ್ದೇನೆ’ ಎಂದಿದ್ದಾರೆ. ಈ ಮೂಲಕ ತಮ್ಮ ತೆರಿಗೆ ಹೇರಿಕೆ ಕ್ರಮ ಸಮರ್ಥಿಸಿದ್ದಾರೆ.
ಇದಕ್ಕೂ ಮುನ್ನ ಫ್ಲೋರಿಡಾ ಪ್ರವಾಸದಲ್ಲಿದ್ದ ಅವರು ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಕುಸಿತಕ್ಕೆ ಪ್ರತಿಕ್ರಿಯಿಸಿ, ‘ಮಾರುಕಟ್ಟೆಗಳಿಗೆ ಏನಾಗಲಿದೆ ಎಂದು ನಾನು ನಿಮಗೆ ಹೇಳಲಾರೆ. ಜಾಗತಿಕ ಮಾರುಕಟ್ಟೆಗಳು ಕುಸಿತ ಕಾಣುವುದು ನನಗೆ ಇಷ್ಟವಿಲ್ಲ. ಆದರೆ ಹಾಗಂತ ಕೆಲವು ವಿಪ್ಲವಗಳು ಸಂಭವಿಸಿದರೂ ಅದರಿಂದ ನನಗೆ ಚಿಂತೆಯಿಲ್ಲ. ಆದರೆ ನಮ್ಮ ದೇಶವು ಹೆಚ್ಚು ಬಲಿಷ್ಠವಾಗಿದೆ’ ಎಂದರು

