ವಾರಾಣಸಿ : ಶಬ್ದ ಮಾಲಿನ್ಯ ನಿಯಂತ್ರಣ ಯತ್ನವಾಗಿ, ಆರಾಧನಾ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಸುವವರ ವಿರುದ್ಧ ಶಾಶ್ವತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಹೋಳಿ ಸಂಭ್ರಮಾಚರಣೆ ಸಂದರ್ಭ ಕರ್ಕಶ ಶಬ್ದಗಳ ಡಿಜೆ ಬಳಕೆಯನ್ನು ಕಡ್ಡಾಯ ನಿಷೇಧಿಸುವಂತೆಯೂ ಸೂಚಿಸಿದ್ದಾರೆ
ಸರ್ಕ್ಯೂಟ್ ಹೌಸ್‌ನಲ್ಲಿ ಅಭಿವೃದ್ಧಿ ಯೋಜನೆಗಳ ಪ್ರಗತಿ ಮತ್ತು ಕಾನೂನು ಸುವ್ಯವಸ್ಥೆಗಳ ಪರಾಮರ್ಶೆ ಸಂದರ್ಭ ಸಿಎಂ ಯೋಗಿ ಈ ತೆರ ಖಡಕ್ ಆದೇಶ ಹೊರಡಿಸಿದರು. ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ವಾಣಿಜ್ಯ ಮಳಿಗೆ ಸಹಿತ ಪ್ರಮುಖ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶವಿತ್ತರು. ಜಾನುವಾರುಗಳ ಕಳ್ಳಸಾಗಣೆಯತ್ತ ತೀವ್ರ ನಿಗಾ ವಹಿಸಬೇಕು, ಕಳ್ಳಸಾಗಣೆದಾರರು ಹಾಗೂ ವಾಹನ ಮಾಲಕರ ವಿರುದ್ದ ಕಠಿಣ ಕ್ರಮ ಮತ್ತು ಇವರ ಜತೆ ಕೈಜೋಡಿಸುವ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಜಾನುವಾರುಗಳ ಕಳ್ಳಸಾಗಣೆಯ ಸಂಪೂರ್ಣ ನಿಷೇಧದ ಪರಿಣಾಮಕಾರಿ ಜಾರಿ ಬಗ್ಗೆ ಜಿಲ್ಲಾವಾರು ಪರಾಮರ್ಶೆ ನಡೆಸುವಂತೆ ವಲಯ ಎಡಿಜಿ ಪಿಯುಷ್ ಮೋರ್ಡಿಯಾರಿಗೆ ನಿರ್ದೇಶವಿತ್ತರು ಸಿಎಂ ಯೋಗಿ. ಅನುಷ್ಟಾನ ಹಂತದಲ್ಲಿರುವ ಅಭಿವೃದ್ಧಿ ಯೋಜನೆಗಳ ವಿಳಂಬದ ವಿರುದ್ಧ ಎಚ್ಚರಿಸಿದ ಯೋಗಿ, ನಿರ್ಮಾಣ ಹಂತದಲ್ಲಿರುವ ಯೋಜನೆಗಳನ್ನು ವಾರಕ್ಕೊಮ್ಮೆ ಪರಾಮರ್ಶಿಸಲು ನೋಡಲ್ ಅಧಿಕಾರಿಗಳ ನಿಯುಕ್ತಿಗೊಳಿಸುವಂತೆ ಸೂಚಿಸಿದರು.

