ಭಾರತದ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಆಚರಣೆಗಳಲ್ಲ — ಅವು ಜೀವನದ ತತ್ತ್ವಗಳ ಪಾಠಗಳು. ಅದರಲ್ಲಿ ದೀಪಾವಳಿ, ಅತಿ ಪ್ರಾಚೀನ ಮತ್ತು ಪವಿತ್ರ ಹಬ್ಬಗಳಲ್ಲಿ ಒಂದು. “ತಮಸೋಮಾ ಜ್ಯೋತಿರ್ಗಮಯ” ಎಂಬ ಉಪನಿಷದ್ವಾಕ್ಯವನ್ನು ಬದುಕಿನಲ್ಲಿ ನೆನಪಿಸುವ ಹಬ್ಬವೇ ದೀಪಾವಳಿ.
ದೀಪಾವಳಿ ಎಂದರೆ ಕೇವಲ ಪಟಾಕಿ ಸಿಡಿಸುವುದು ಅಥವಾ ಹೊಸ ಬಟ್ಟೆ ಧರಿಸುವುದಲ್ಲ. ಇದು ಅಂಧಕಾರದಿಂದ ಬೆಳಕಿಗೆ, ಅಜ್ಞಾನದಿಂದ ಜ್ಞಾನಕ್ಕೆ, ನಿರಾಸೆಯಿಂದ ಆಶೆಗೆ, ಅಸತ್ಯದಿಂದ ಸತ್ಯಕ್ಕೆ ಸಾಗುವ ಒಂದು ಆಧ್ಯಾತ್ಮಿಕ ಯಾತ್ರೆ.
ಅಧ್ಯಾತ್ಮದ ಹೊನಲನ್ನೇ ಹರಿಸುವ ಭಾರತೀಯ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಬೆಳದಿಂಗಳ ಹಬ್ಬ, ಕೌಮುದಿ ಉತ್ಸವ ಎಂದೇ ಪ್ರಸಿದ್ಧವಾಗಿರುವ ದೀಪಾವಳಿ ಹಬ್ಬವು ಕೇವಲ ಮನೋರಂಜನೆಗೆ ಸೀಮಿತವಾಗದೆ, ಜ್ಞಾನದ ಬೆಳಕಾಗಿ, ಧಾರ್ಮಿಕತೆ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಹಬ್ಬವಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ.
ಅಸತ್ತಿನಿಂದ ಸುಜ್ಞಾನದೆಡೆಗೆ ಅಂಧಕಾರದಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಅಮೃತತ್ವದೆಡೆಗೆ ಕೊಂಡೊಯ್ಯುವುದೇ ದೀಪಾವಳಿಯ ಸಂಕೇತವಾಗಿದೆ.
“ತಮಸೋ ಮಾ ಜ್ಯೋತಿರ್ಗಮಯ”ದ ಚಿಂತನೆ ಮಾಡಿದರೆ, ಪ್ರಕಾಶಮಾನವಾಗಿ ಉರಿಯುತ್ತಿರುವ ಜ್ಯೋತಿಗೆ ಚಿಂತೆಯ ಅವಶ್ಯಕತೆ ಇದೆಯೇ….!? ಸೂರ್ಯನಿಗೆ ಕತ್ತಲಿನ ಅರಿವಿದೆಯೇ…!? ಖಂಡಿತ ಇಲ್ಲ. ಆದರೆ ತಮಸ್ ಅಂದರೆ ಕತ್ತಲೆಗೆ, ಜ್ಯೋತಿಃ ಅಂದರೆ ಬೆಳಕಿನೆಡೆಗೆ ಹೇಗೆ ಸಾಗುವುದು ಎಂಬ ಸದಾ ಚಿಂತೆ. ಕಾರ್ಯರೂಪಕ್ಕೆ ಬಂದರೆ ಅದೇ ಜೀವನದ ಸಾರ್ಥಕ್ಯ. ಈ ಪದಗುಚ್ಛದ ಸಾಂಕೇತಿಕ ಹಾಗೂ ಆಳವಾದ ಅರ್ಥಗಳು ಸ್ವಯಂ ಅರಿವು ಮತ್ತು ಜ್ಞಾನೋದಯದ ಸ್ಥಿತಿಯ ಬಗ್ಗೆ ಆಗಿವೆ. ನಮ್ಮ ಅಂತರಂಗದ ಬೆಳಕು ಹಾಗೂ ಸರ್ವವ್ಯಾಪಿ, ಸರ್ವಜ್ಞ ಮತ್ತು ಸರ್ವಶಕ್ತ ಶಕ್ತಿಯ ಬಗ್ಗೆ ಅರಿವನ್ನು ಪ್ರತಿಬಿಂಬಿಸುತ್ತದೆ.
ಬುದ್ಧನ “ವಿಪಶ್ಯನ(ವಿಪಾಸನ) ಧ್ಯಾನ” ಅನುಭವಗಳ ನೈಜ ಸ್ವರೂಪವನ್ನು ನೋಡುವ ಸ್ಪಷ್ಟವಾದ ನೋಟ ಅಥವಾ ಒಳನೋಟವಾಗಿದೆ. ಈ ನಿಟ್ಟಿನಲ್ಲಿ ಪುರಾಣಗಳಲ್ಲಿ ಬರುವ ಹಲವಾರು ಮಹರ್ಷಿಗಳು, ಆಚಾರ್ಯತ್ರಯರು, ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳು ಹೀಗೆ ಹಲವಾರು ಜ್ಞಾನಿಗಳು ಅಧ್ಯಾತ್ಮದ ಆಳಕ್ಕೆ ಇಳಿದು ಕತ್ತಲನ್ನು ಭೇದಿಸಿ “ನಾನು ಅಂದರೆ ಯಾರು” ಎಂಬ ನಿಗೂಢ ಪ್ರಶ್ನೆಯನ್ನು ಯಥಾರ್ಥವಾಗಿ ಅರ್ಥ ಮಾಡಿಕೊಂಡು ಬೆಳಕಿನ ಪಥದಲ್ಲಿ ಸಾಗಿದ ಸುಜ್ಞಾನಿಗಳು. ಸದ್ಗುರುಗಳ ಮುಖಾಂತರ ತಾನಾರು ಎಂದು ಅರಿತರೆ ಮುಮುಕ್ಷುತ್ವದ ಹಾದಿ ಸುಗಮವಾಗುವುದರಲ್ಲಿ ಸಂದೇಹವಿಲ್ಲ. ನಾನೂ ಕೂಡ ಆತ್ಮನಲ್ಲಿ ಬೆರೆತು ಹೋಗಿರುವೆನು ಎಂಬ ಸುಜ್ಞಾನಮಯ ಅರಿವು ಅರಿತ ಋಷಿವರ್ಯರು ಹೇಳಿದ್ದೇ “ಅಹಂ ಬ್ರಹ್ಮಾಸ್ಮಿ”.
ಆತ್ಮನ ಬೆಳಕನ್ನೇ ತಿಳಿಯಲು ಶ್ರೀ ಕೃಷ್ಣನು ಅರ್ಜುನನಿಗೆ 18 ಅಧ್ಯಾಯಗಳ ಭಗವದ್ಗೀತೆಯನ್ನು ಬೋಧಿಸಿ, ಆ ಬೆಳಕಿನಲ್ಲಿಯ ವಿರಾಟ ರೂಪವನ್ನೇ ತೋರಿಸಿದನು. ಅದೇ ತಮಸೋಮಾ ಜ್ಯೋತಿರ್ಗಮಯ.
ಬೆಳಕಿನ ಅನುಪಸ್ಥಿತಿಯಾದ ಕತ್ತಲೆಯ ಲಕ್ಷಣಗಳು ಅಂದರೆ ತಾಮಸ ಗುಣಗಳಾದ ಆಲಸ್ಯ, ಮೂರ್ಖತನ, ದುಃಖ, ರೋಗ, ವೈಫಲ್ಯಗಳು , ನಿರಾಶೆ, ದುಷ್ಟತನ, , ಅಹಂಕಾರ ಇತ್ಯಾದಿ ಅನಪೇಕ್ಷಿತ ಲಕ್ಷಣಗಳನ್ನು ಹೋಗಲಾಡಿಸಲು ಬೇಕಾಗಿರುವುದೇ ಬೆಳಕಿನ ಉಪಸ್ಥಿತಿ. ಅದೇ ದೀಪಾವಳಿಯ ಸಾರ.
ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ್ವಂತರೀ ಜಯಂತಿ ಮತ್ತು ಚತುರ್ದಶಿಯಂದು ನರಕ ಚತುರ್ದಶಿ ಆಚರಿಸಲಾಗುತ್ತದೆ.
ವರಾಹರೂಪಿ ಮಹಾವಿಷ್ಣು ಮತ್ತು ಭೂದೇವಿ ಲಕ್ಷ್ಮಿಗೆ ಜನಿಸಿದ ತಾಮಸೀ ಪುತ್ರ ಭೌಮಾಸುರನ (ನರಕಾಸುರನ)ವಧೆಯ ದಿನವೇ ನರಕಚತುರ್ದಶಿ. ನರಕಾಸುರನ ವಧೆಯು ತಾಮಸಗುಣ ಪ್ರವೃತ್ತಿಯ ನಾಶದ ದ್ಯೋತಕ. ನರಕಾಸುರನ ಬಂಧನದಲ್ಲಿದ್ದ 16100 ರಾಜಕುಮಾರಿಯರ ಮಾನ ರಕ್ಷಣೆಯನ್ನು ಮಾಡಿ ವಿವಾಹವಾದ ಶ್ರೀಕೃಷ್ಣ. ಕನ್ಯೆಯರು ಸಮಾಜದಲ್ಲಿ ಅಪವಾದಗ್ರಸ್ತರಾಗದೆ, ಗೌರವಯುತವಾಗಿ ಬಾಳಲು ಅವರ ಇಚ್ಛೆಯಂತೆ, ಶ್ರೀಕೃಷ್ಣನೊಂದಿಗೆ ನಡೆದ ಈ ಮದುವೆ ಒಂದು ಅನಿವಾರ್ಯ ಘಟನೆಯಾಯಿತು. ಈ ರಾಜಕುಮಾರಿಯರು ಸದ್ಗುಣಗಳ ಸಂಕೇತವಾಗಿ ನಮಗೆ ಬೆಳಕಿನ ಪಥದಲ್ಲಿ ಸಾಗುವ ದಿಕ್ಸೂಚಿಯಾಗಿದ್ದಾರೆ.
ಯುದ್ಧದಿಂದ ರಕ್ತ, ಬೆವರು ಮತ್ತು ಕೊಳೆ ಅಂಟಿದ, ಕೃಷ್ಣ- ಸತ್ಯಭಾಮೆಯರ ಗಂಧ , ಸುಗಂಧ ದ್ರವ್ಯದ ಸ್ನಾನವನ್ನು ದೀಪಾವಳಿಯ ಸಮಯದಲ್ಲಿ ಅಭ್ಯಂಗ ಸ್ನಾನವಾಗಿ ಆಚರಿಸಲಾಗುತ್ತಿದೆ. ಸಮೃದ್ಧಿಯ ಸಂಕೇತವಾದ ಲಕ್ಷ್ಮೀಪೂಜೆ, ದೀರ್ಘಕಾಲದ ಅಂಧಕಾರದಲ್ಲಿ ಮುಳುಗಿದ್ದ ಅಯೋಧ್ಯೆಗೆ, ರಾಮ ರಾವಣನ ಮೇಲೆ ವಿಜಯಶಾಲಿಯಾಗಿ ಮರಳಿದ ಬೆಳಕಿನ ದಿನವೇ ಈ ಅಮಾವಾಸ್ಯೆ ದಿನ. ಮರುದಿನ ಬಲಿಪಾಡ್ಯಮಿ. ಆ ದಿನ ಭೂಲೋಕದ ಕಾಮಧೇನು ಎಂದೆನಿಸಿದ ಗೋಮಾತೆಯ ಪೂಜೆ ; ಮೂರು ಹೆಜ್ಜೆಗಳ ಜಾಗವನ್ನು ದಾನವಾಗಿ ಕೇಳಿದ ವಾಮನ ರೂಪಿ ಮಹಾವಿಷ್ಣುವಿಗೆ ಸಂಪೂರ್ಣ ಶರಣಾಗತನಾದ ವಿಷ್ಣುವಿನ ಭಕ್ತ, ಮಹಾದಾನಿ, ದೈತ್ಯರಾಜ ಬಲಿ ಚಕ್ರವರ್ತಿಯ ಸ್ಮರಣೆಯ ದಿನ, ಇಂದ್ರನ ಅಹಂಕಾರ ನಾಶದ ದ್ಯೋತಕ ; ಪರಿಸರದ ಆರಾಧನೆ ಅಭಿವ್ಯಕ್ತವಾದ ಗೋವರ್ಧನ ಗಿರಿಯ ಪೂಜೆ. ಬಲಿಪಾಡ್ಯಮಿಯ ಮರುದಿನ ಭಾಯೀ ದೂಜ್ ಅಥವಾ ಯಮದ್ವಿತೀಯ ಸಹೋದರಿ- ಸಹೋದರರ ನಡುವಿನ ಶಾಶ್ವತ ಪ್ರೀತಿಯನ್ನು, ಸಂಬಂಧವನ್ನು ಬಲಪಡಿಸಲು ಆಚರಿಸುವ ಹೃದಯಸ್ಪರ್ಶೀ ಹಬ್ಬವಾಗಿದೆ. ದೀಪಾವಳಿಯ ಸಂಭ್ರಮದ ಆಚರಣೆಯಲ್ಲಿ ಆತ್ಮನಿರ್ಭರತೆಗೆ ಹೆಚ್ಚಿನ ಒತ್ತುಕೊಟ್ಟು, ಸ್ವದೇಶೀ ವಸ್ತುಗಳನ್ನು ಬಳಸಿ ರಾಷ್ಟ್ರಪ್ರೇಮವನ್ನು ಮೆರೆಯೋಣ.
ಸತ್ತ್ವಾತ್ ಸಂಜಾಯತೇ ಜ್ಞಾನಂ
ಎಂಬ ಶ್ರೀಮದ್ಭಗವದ್ಗೀತೆಯ ವಾಕ್ಯವು “ಸತ್ತ್ವಗುಣದಿಂದ ಜ್ಞಾನವು ಉಂಟಾಗುತ್ತದೆ” ಎಂಬ ಸಂದೇಶ ನೀಡುತ್ತದೆ. ಅರ್ಥಾತ್ ತಮೋಗುಣ ನಿವೃತ್ತಿಯಾದಾಗ ಸತ್ತ್ವಗುಣ ಪ್ರಕಟವಾಗುತ್ತದೆ. ಸತ್ತ್ವಗುಣವನ್ನು ಬೆಳೆಸಿಕೊಳ್ಳುವ ಮೂಲಕ ಆಲೋಚನೆಗಳಲ್ಲಿ ಸ್ಪಷ್ಟತೆ, ದೈಹಿಕ ಚೈತನ್ಯ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಸಾಧಿಸಬಹುದು. ಆಸುರೀ ಶಕ್ತಿಯ ಪ್ರಭಾವ ಬಹುಬೇಗ ಆಕರ್ಷಿತವಾಗಿ, ದಿವ್ಯಜ್ಞಾನದ ಬೆಳಕು ಬೆಳಗದಂತೆ ತಡೆ ಒಡ್ಡುತ್ತದೆ. ಆದರೆ ಅಂತರ್ಮುಖಿಯಾಗಿ ಪಯಣ ಬೆಳೆಸಿ, ಸಂಪೂರ್ಣ ಶರಣಾಗತರಾಗಿ ಹೃದಯದ ಬಾಗಿಲನ್ನು ತೆರೆದು ಷಟ್ ವೈರಿಗಳಿಂದ ಬಿಡುಗಡೆಯಾದರೆ, ಜ್ಞಾನದ ಪ್ರಕಾಶ ಸರ್ವತ್ರ ಬೆಳಗುತ್ತಲೇ ಇರುತ್ತದೆ. ಇದು ಸಮಾನತೆಯ ಸಂಕೇತವೂ ಹೌದು. ನಿಜವಾದ ಜ್ಞಾನ ಅಂದರೆ ನನ್ನ ಆತ್ಮ ದರ್ಶನ; ಅದೇ ಜ್ಯೋತಿ; ಅದೇ ಅನುಭಾವ. ಜ್ಞಾನದ ಈ ಅನ್ವೇಷಣೆಯ ಮರ್ಮವನ್ನು ಅರಿತು, ಲೌಕಿಕ- ಪಾರಮಾರ್ಥಿಕ ಎರಡರಲ್ಲೂ ಕವಿದಿರುವ ಅಂಧಕಾರವನ್ನು ಹೋಗಲಾಡಿಸಿ, ಬದುಕಿಗೆ ದಿವ್ಯಜ್ಞಾನ ನೀಡುವ ತಮಸೋ ಮಾ ಜ್ಯೋತಿರ್ಗಮಯ ಪ್ರತೀಕವಾದ ದೀಪಾವಳಿ ಹಬ್ಬವನ್ನು ಅರಿವಿನ ಪ್ರಜ್ಞೆಯಿಂದ ಆಚರಿಸಿ, ಅದರ ತತ್ತ್ವ ಮತ್ತು ಸತ್ತ್ವವನ್ನು ಮುಂದಿನ ಪೀಳಿಗೆಗೆ ಪಸರಿಸೋಣ ಎಂಬ ಸಂದೇಶದೊಂದಿಗೆ .
ಈ ದೀಪಾವಳಿಯಲ್ಲಿ ನಾವೆಲ್ಲರೂ ನಮ್ಮ ಮನದ ಕತ್ತಲೆಯನ್ನು ತೊಳೆದು, ಹೃದಯದಲ್ಲಿ ದೀಪ ಬೆಳಗಿಸೋಣ.
ದ್ವೇಷ, ಅಸೂಯೆ, ಬೇಸರ, ಹತಾಶೆ — ಇವೆಲ್ಲ ಅಂಧಕಾರದ ಬಣ್ಣಗಳು.
ಆದರೆ ಪ್ರೀತಿ, ಕ್ಷಮೆ, ಕೃತಜ್ಞತೆ, ಸೇವೆ — ಇವು ಬೆಳಕಿನ ಬಣ್ಣಗಳು.
ನಾವು ಯಾವ ಬಣ್ಣವನ್ನು ಆರಿಸುತ್ತೇವೆ ಎಂಬುದೇ ನಮ್ಮ ಜೀವನದ ದೀಪಾವಳಿ ನಿರ್ಧರಿಸುತ್ತದೆ.
ಈ ದೀಪಾವಳಿ ನಿಮಗೂ ನಿಮ್ಮ ಕುಟುಂಬಕ್ಕೂ ಶಾಂತಿ, ಸಂತೋಷ, ಆರೋಗ್ಯ ಮತ್ತು ಆಂತರಿಕ ಬೆಳಕು ತರಲಿ!
ಸ್ವರ್ಣ ಕುಂದಾಪುರ

