Home » ಕುಂದಾಪುರದ ನದಿ ತಟದಲ್ಲಿ ನೆಲೆಸಿರುವ ಅಭಯದಾತೆ – ಶಕ್ತಿ ಸ್ವರೂಪಿ ಮಾತೆ
 

ಕುಂದಾಪುರದ ನದಿ ತಟದಲ್ಲಿ ನೆಲೆಸಿರುವ ಅಭಯದಾತೆ – ಶಕ್ತಿ ಸ್ವರೂಪಿ ಮಾತೆ

by Kundapur Xpress
Spread the love

ಕರಾವಳಿಯ ಜನರ ಬದುಕಿನಲ್ಲಿ ದೇವಿ ಆರಾಧನೆ ಕೇವಲ ಭಕ್ತಿಯಲ್ಲ, ಅದು ನಂಬಿಕೆ, ಆಶ್ರಯ ಮತ್ತು ಆತ್ಮಸಾಂತ್ವನದ ದಾರಿಯಾಗಿದೆ.ದೇವಿಯನ್ನು ಜನರು ಅತಿಯಾದ ಪ್ರೀತಿಯಿಂದ ಆರಾಧಿಸುತ್ತಾರೆ, ಗುರುವಿನಂತೆ ಪೂಜಿಸುತ್ತಾರೆ.ಏಕೆಂದರೆ ಹೇಳದೇ ನಮ್ಮ ನೋವು, ಕಷ್ಟ, ಮನದಾಳದ ಗೋಳುಗಳನ್ನು ಅರ್ಥಮಾಡಿಕೊಳ್ಳುವವಳು ಕರುಣಾಮಯಿ ತಾಯಿ ಮಾತ್ರ ಆಗಿರಲು ಸಾಧ್ಯ ಎಂಬ ನಂಬಿಕೆ. ಅಂಥ ಅಚಲ ಭಕ್ತಿ ಮತ್ತು ವಿಶ್ವಾಸದ ಪ್ರತೀಕವಾಗಿರುವ ಕರಾವಳಿಯ ಶಕ್ತಿತಾಯಿಯಾದ ಶ್ರೀ ರಕ್ತೇಶ್ವರಿ ದೇವಿ ಭಕ್ತರ ಹೃದಯಗಳಲ್ಲಿ ಅಳಿಯದ ಸ್ಥಾನ ಪಡೆದಿದ್ದಾಳೆ.

ಕರ್ನಾಟಕದ ಕರಾವಳಿ ಭಾಗದ ಪ್ರಮುಖ ಪಟ್ಟಣ ಕುಂದಾಪುರದಲ್ಲಿ ನೆಲೆ ನಿಂತಿರುವ ” ಶ್ರೀ ರಕ್ತೇಶ್ವರಿ ದೇವಸ್ಥಾನ” ಶಕ್ತಿಯ ಆರಾಧನೆಯ ಈ ದೇವಾಲಯವು ಸುಮಾರು 300–500 ವರ್ಷಗಳ ಇತಿಹಾಸ ಹೊಂದಿದೆ ಎಂದು ಸ್ಥಳೀಯರು ನಂಬುತ್ತಾರೆ ಮತ್ತು ಈ ಪ್ರದೇಶವು ಹಿಂದೆ ದಟ್ಟ ಕಾಡಿನಿಂದ ಆವೃತವಾಗಿದ್ದ ಕಾಲದಲ್ಲಿ ದೇವಿಯ ಪ್ರತ್ಯಕ್ಷತೆ ಸಂಭವಿಸಿದೆ ಎಂದು ಕೆಲವು ಕಥೆಗಳು ಹೇಳುತ್ತದೆ.

ಇತಿಹಾಸದ ಪ್ರಕಾರ, ಈ ಪ್ರದೇಶದಲ್ಲಿ ಅಸುರ ಶಕ್ತಿಗಳು ಮತ್ತು ದುಷ್ಟಪ್ರಭಾವಗಳು ಹೆಚ್ಚಾಗಿ ಜನರನ್ನು ಕಾಡುತ್ತಿದ್ದಾಗ, ಭಕ್ತರ ಪ್ರಾರ್ಥನೆಗೆ ಸ್ಪಂದಿಸಿದ ಆದಿ ಪರಾಶಕ್ತಿ ದುರ್ಗೆಯು ಉಗ್ರ ರೂಪದಲ್ಲಿ ಅವತರಿಸಿ ರಕ್ತಾಸುರನನ್ನು ಸಂಹರಿಸಿದಳು ಮತ್ತು ಆ ಯುದ್ಧದಲ್ಲಿ ಹರಿದ ರಕ್ತದಿಂದ ಭೂಮಿ ಕೆಂಪಾದ ಕಾರಣದಿಂದ ದೇವಿಗೆ “ರಕ್ತೇಶ್ವರಿ” ಎಂಬ ಹೆಸರು ಬಂದಿತು ಎಂದು ನಂಬಲಾಗುತ್ತದೆ, ನಂತರ ದೇವಿಯು ತನ್ನ ಉಗ್ರ ರೂಪವನ್ನು ಬಿಟ್ಟು ಕರುಣಾಮಯ ತಾಯಿಯಾಗಿ ಭಕ್ತರನ್ನು ಕಾಪಾಡಲು ಇಲ್ಲಿ ನೆಲೆಸಿದಳು ಎಂದು ಸ್ಥಳೀಯರು ಹೇಳುತ್ತಾರೆ.

ಈ ದೇವಿಯ ಪತ್ತೆಯ ಬಗ್ಗೆ ಇರುವ ಕಥೆಯ ಪ್ರಕಾರ, ಒಂದು ಗೋಪಾಲಕ ತನ್ನ ಹಸುಗಳನ್ನು ಮೇಯಿಸುತ್ತಿದ್ದಾಗ ಒಂದು ಹಸು ಪ್ರತಿದಿನವೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಸ್ವಯಂವಾಗಿ ಹಾಲು ಸುರಿಸುತ್ತಿದ್ದುದನ್ನು ಗಮನಿಸಿದನು, ಇದು ದೈವ ಸೂಚನೆ ಎಂದು ಭಾವಿಸಿದ ಗ್ರಾಮಸ್ಥರು ಆ ಸ್ಥಳವನ್ನು ತೋಡಿದಾಗ ದೇವಿಯ ಪ್ರತಿಮೆ ಕಂಡುಬಂದಿತು ಮತ್ತು ಅದನ್ನು ಪವಿತ್ರವೆಂದು ಪರಿಗಣಿಸಿ ಅಲ್ಲಿ ದೇವಾಲಯವನ್ನು ನಿರ್ಮಿಸಿ ಪೂಜೆ ಪ್ರಾರಂಭಿಸಿದರು, ಇದನ್ನೇ ದೇವಿಯ “ಸ್ವಯಂಭೂ ಪ್ರತ್ಯಕ್ಷತೆ” ಎಂದು ಭಕ್ತರು ನಂಬುತ್ತಾರೆ.

ಈ ದೇವಸ್ಥಾನದ ಬಗ್ಗೆ ಭಕ್ತರಲ್ಲಿ ಗಾಢವಾದ ನಂಬಿಕೆಗಳಿದ್ದು, ಇಲ್ಲಿ ಮನಸಾರೆ ಪ್ರಾರ್ಥನೆ ಮಾಡಿದರೆ ಜೀವನದ ಅನೇಕ ಕಷ್ಟಗಳು ದೂರವಾಗುತ್ತದೆ. ವಿಶೇಷವಾಗಿ ಆರೋಗ್ಯ ಸಮಸ್ಯೆಗಳು, ಕುಟುಂಬದ ಕಲಹಗಳು, ಆರ್ಥಿಕ ಅಡಚಣೆಗಳು ಮತ್ತು ಮನಸ್ಸಿನ ಅಶಾಂತಿ ಕಡಿಮೆಯಾಗುತ್ತದೆ ಎಂದು ಭಕ್ತರು ಹೇಳುತ್ತಾರೆ, ಹಲವರು “ಇಲ್ಲಿ ಹರಕೆ ಕಟ್ಟಿದರೆ ಅಡಚಣೆಗಳು ಸರಿಯಾಗಿ ಹೋಗುತ್ತದೆ ಮತ್ತು ಕೆಲಸಗಳು ಸುಗಮವಾಗುತ್ತದೆ” ಎಂಬ ವಿಶ್ವಾಸದಿಂದ ಬರುತ್ತಾರೆ ಮತ್ತು ತಮ್ಮ ಮನೋಭಿಲಾಷೆಗಳು ನೆರವೇರಿದ ನಂತರ ಮತ್ತೆ ಬಂದು ದೇವಿಗೆ ಸೇವೆ ಸಲ್ಲಿಸುತ್ತಾರೆ.
ತುಪ್ಪದ ದೀಪ ಹಚ್ಚುವುದು ಇಲ್ಲಿ ಅತ್ಯಂತ ಶಕ್ತಿಶಾಲಿ ಆಚರಣೆಯಾಗಿ ಪರಿಗಣಿಸಲಾಗುತ್ತದೆ ಮತ್ತು ದೇವಿಯ ಮುಂದೆ ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ, ಮನಸ್ಸಿಗೆ ಶಾಂತಿ ಮತ್ತು ಬೆಳಕು ಬರುತ್ತದೆ ಮತ್ತು ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಕಾಣಿಸುತ್ತದೆ ಎಂದು ನಂಬುತ್ತಾರೆ. ಕೆಲವು ಭಕ್ತರು ನಿರಂತರವಾಗಿ 5 ಅಥವಾ 9 ಶುಕ್ರವಾರಗಳು ತುಪ್ಪದ ದೀಪ ಹಚ್ಚುವ ಹರಕೆ ಇಟ್ಟುಕೊಂಡು ತಮ್ಮ ಇಷ್ಟಾರ್ಥಗಳನ್ನು ಸಾಧಿಸುತ್ತಾರೆ.
ಶುಕ್ರವಾರ ಈ ದೇವಸ್ಥಾನದಲ್ಲಿ ವಿಶೇಷ ಮಹತ್ವ ಹೊಂದಿದ್ದು, ಆ ದಿನ ದೇವಿಯನ್ನು ಶಕ್ತಿಯ ರೂಪದಲ್ಲಿ ಪೂಜಿಸಲಾಗುತ್ತದೆ ಮತ್ತು ಹೆಚ್ಚಿನ ಭಕ್ತರು ಆಗಮಿಸಿ ಕುಂಕುಮ ಅರ್ಚನೆ, ಹೂವಿನ ಪೂಜೆ ಮತ್ತು ವಿಶೇಷ ಸೇವೆಗಳನ್ನು ಸಲ್ಲಿಸುತ್ತಾರೆ, ಮಹಿಳೆಯರು ವಿಶೇಷವಾಗಿ ಶುಕ್ರವಾರ ದೇವಿಯ ಪೂಜೆ ಮಾಡಿದರೆ ಕುಟುಂಬದ ಸುಖ, ಶಾಂತಿ ಮತ್ತು ವೈವಾಹಿಕ ಜೀವನದಲ್ಲಿ ಒಳಿತಾಗುವುದು ಎಂದು ಭಕ್ತರು ನಂಬುತ್ತಾರೆ.

ಇದರಿಂದಾಗಿ ಕುಂದಾಪುರದ ಶ್ರೀ ರಕ್ತೇಶ್ವರಿ ದೇವಸ್ಥಾನವು ಕೇವಲ ಒಂದು ದೇವಾಲಯವಲ್ಲ, ಅದು ದೇವಿಯ ಪ್ರತ್ಯಕ್ಷತೆ, ಶಕ್ತಿಯ ಆರಾಧನೆ, ಭಕ್ತರ ನಂಬಿಕೆ ಮತ್ತು ಆಧ್ಯಾತ್ಮಿಕ ಅನುಭವಗಳ ಜೀವಂತ ಕೇಂದ್ರವಾಗಿದ್ದು, ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತನೂ “ಕಷ್ಟಗಳು ಕಡಿಮೆಯಾಗುತ್ತದೆ, ಜೀವನದಲ್ಲಿ ಬೆಳಕು ಮೂಡುತ್ತದೆ” ಎಂಬ ವಿಶ್ವಾಸವನಿಟ್ಟು ಈ ತಾಯಿ ಸನ್ನಿಧಾನಕ್ಕೆ ಬರುತ್ತಾರೆ.

ಕುಂದಾಪುರ ತನ್ನದೇ ಆದ ಆಚರಣೆ ಮತ್ತು ಸಂಸ್ಕೃತಿಯಲ್ಲಿ ವಿಶಿಷ್ಟತೆ ಪಡೆದುಕೊಂಡಿದ್ದು, ಕರಾವಳಿಯ ಜನರಲ್ಲಿ ದೇವರ ಬಗ್ಗೆ ಭಯಭಕ್ತಿಯೊಂದಿಗೆ ಕೂಡಿದ ಗಾಢ ನಂಬಿಕೆ ಕಾಣಸಿಗುತ್ತದೆ, ಅವರು ಮಾಡುವ ತಪ್ಪಿಗೆ ದೇವರು ಶಿಕ್ಷೆ ನೀಡುತ್ತಾನೆ ಎಂಬ ಭಯದಿಂದ ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತಾರೆ, ಇಂತಹ ಶಕ್ತಿಕ್ಷೇತ್ರಗಳಲ್ಲಿ ದೇವಿಯನ್ನು ಕೇವಲ ದೇವರಾಗಿ ಅಲ್ಲ, ತಾಯಿಯಾಗಿ, ಗುರುವಾಗಿ , ಹಿತೈಷಿಯಾಗಿ ಕಾಣುವ ಭಾವನೆ ಅವರ ಬದುಕಿನ ಭಾಗವಾಗಿದ್ದು, ಶ್ರೀ ರಕ್ತೇಶ್ವರಿ ದೇವಿಯಂತಹ ಶಕ್ತಿತಾಯಿಗಳು ಭಕ್ತರಿಗೆ ರಕ್ಷಣೆ, ಧೈರ್ಯ ಮತ್ತು ಆಶ್ರಯ ನೀಡುವ ದೈವಿಕ ಶಕ್ತಿಗಳಾಗಿ ಪೂಜಿಸುತ್ತಾರೆ.

ಅರ್ಚನಾ ರಾಮಕೃಷ್ಣ

 

Related Articles

error: Content is protected !!