ಬಹಳಷ್ಟು ಜನ ನಾವು ಸಮಾಜಕ್ಕೋಸ್ಕರ ಬದುಕುವವರು. ಸಮಾಜದಲ್ಲಿ ಒಳ್ಳೆಯವನಾದರೆ ಏನೋ ಒಂದು ಪ್ರತಿಷ್ಠೆ. ನಮ್ಮನ್ನು ಸಮಾಜ ಒಳ್ಳೆಯವ ಎಂದು ಹೇಳಿದರೆ ನಮ್ಮ ಬದುಕು ಸಾರ್ಥಕ ಎಂಬ ಅಹಂ ಭಾವ. ಮನೆಯ ನಾಲ್ಕು ಕೊಡೆಗಳ ಮಧ್ಯೆ ಏನೇ ನಡೆಯಲಿ ಆದರೆ ಆತ ಸಮಾಜದ ಮಧ್ಯ ಬಂದಾಗ ಪ್ರತಿಷ್ಠಿತ ವ್ಯಕ್ತಿ.
ಒಂದು ಸಲ ಯೋಚನೆ ಮಾಡಿ ನಾವು ನಮಗೋಸ್ಕರ ಬದುಕುವರು ಅಥವಾ ಸಮಾಜಕ್ಕೋಸ್ಕರ ? ಸಮಾಜದಲ್ಲಿ ಹೇಳುವವರು ದೇವರನ್ನೇ ಬಿಟ್ಟಿಲ್ಲ ಇನ್ನು ನಮ್ಮನ್ನು ಹೇಳುವುದನ್ನು ಬಿಡುತ್ತಾರಾ ? ನಾವು ಎಷ್ಟೇ ಅನ್ಯಾಯ ಮಾಡಲಿ ಎಷ್ಟೇ ದುಡ್ಡು ಸಂಪಾದನೆ ಮಾಡಲಿ ನಮ್ಮ ಅಂತರಾತ್ಮ ಮಾತ್ರ ನಮ್ಮನ್ನು ಚುಚ್ಚುತ್ತಾ ಇರುತ್ತದೆ .
ಒಂದು ಸಲ ನಮ್ಮ ಜೀವನದಲ್ಲಿ ಮಾಡಿದ್ದನ್ನ ಅಂತರಾತ್ಮದ ಮೂಲಕ ಮೆಲುಕನ್ನು ಹಾಕಿದರೆ ನಾವು ಜೀವನದಲ್ಲಿ ಮಾಡಿದ ಸರಿ ತಪ್ಪುಗಳು ನಮ್ಮ ಕಣ್ಣ ಮುಂದೆ ಬಂದುಬಿಡುತ್ತವೆ. ಸಮಾಜದಲ್ಲಿ ಪ್ರತಿಷ್ಠೆ ಗಳಿಸುತ್ತಾ ಗಳಿಸುತ್ತಾ ನಾವು ಕಳೆದುಕೊಳ್ಳುವುದು ನಮ್ಮ ನೆಮ್ಮದಿ. ಮನಸ್ಸಿನ ನೆಮ್ಮದಿ ಒಂದು ಸಲ ಕದಡಿ ಹೋದರೆ ಅದಕ್ಕೆ ಯಾವುದೇ ಮದ್ದಿಲ್ಲ. ಮುಗ್ಧತೆಯೊಂದಿಗೆ ಜನನ. ಮುಗ್ಧತೆಯೊಂದಿಗೆ ಮರಣ. ದ್ವಂದ್ವದೊಂದಿಗೆ ಜೀವನ.
ಇದೇ ಅಲ್ವೇ ಜೀವನದಲ್ಲಿ ನಾವು ಕಂಡುಕೊಳ್ಳುವುದು. ಜೀವನ ಯಶಸ್ಸು ,ಹಣ , ಪ್ರತಿಷ್ಠೆ ಇವುಗಳ ಹಿಂದೆ ನಮ್ಮ ನಾಗಾಲೋಟ. ಇದರ ಮಧ್ಯೆ ನಾವು ಕಳೆದುಕೊಳ್ಳುವುದು ಮಾನಸಿಕ ನೆಮ್ಮದಿ ಮತ್ತು ಸಂಸ್ಕಾರ. ಸಮಾಜ ಮುಖ್ಯನೋ ನಮ್ಮತನ ಮುಖ್ಯವೋ ಒಂದು ಮೆಲುಕನ್ನ ನಾವು ನಮ್ಮಲ್ಲಿ ಹಾಕಿದರೆ ಉತ್ತರ ಸಿಗಬಹುದೇನೋ.
ನಮ್ಮ ಪ್ರತಿಯೊಂದು ಮನೆಯಲ್ಲಿ ಅರ್ಜುನನು ಹತಾಶನಾಗಿ ಕುರುಕ್ಷೇತ್ರದಲ್ಲಿತನ್ನ ಅಸ್ತ್ರಗಳನ್ನು ಕೆಳಗೆ ಇಟ್ಟಾಗ ಶ್ರೀ ಕೃಷ್ಣನು ಆತನಿಗೆ ಭಗವದ್ಗೀತೆಯನ್ನು ಬೋಧಿಸುವ ಚಿತ್ರವನ್ನು ಹಾಕಬೇಕಿದೆ. ಇದರಿಂದ ನಮ್ಮ ಯುವ ಜನಾಂಗಕ್ಕೆ ಭಗವದ್ಗೀತೆಯ ಉದ್ದೇಶ ಮತ್ತು ಭಗವದ್ಗೀತೆ ಯಾಕಾಗಿ ಬಂತು ಎಂಬ ವಾಸ್ತವಿಕ ಘಟನೆ ಎಲ್ಲರಿಗೂ ಅರಿವಾಗುತ್ತದೆ. ಪ್ರತಿಯೊಂದು ಸಂಸ್ಕಾರವು ಶುರುವಾಗುವುದು ತನ್ನ ಮನೆಯಿಂದಲೇ. ಸಂಸ್ಕಾರ ಎಲ್ಲರ ಜೀವನದಲ್ಲಿ ಬೆರೆತಾಗಮಾತ್ರ ಜೀವನಕ್ಕೆ ಒಂದು ಬೆಲೆ , ಜೀವನಕ್ಕೆ ಒಂದು ಸಾರ್ಥಕತೆಯ ಭಾವ.
ಪ್ರದೀಪ್ ಕುಮಾರ್,ಕೋಮುಂಜೆ

