ಲೇಖಕಿ : ಇಂದಿರಾಜಾನಕಿ ಎಸ್.ಶರ್ಮರ ಇತ್ತೀಚೆಗೆ ಬಿಡುಗಡೆಯಾದ ಕೃತಿ ‘ ಕಿರಿಯರ ಸಚಿತ್ರ ರಾಮಾಯಣ.’ ಕೆಂಚನಹಳ್ಳಿಯ ಅವ್ವ ಪುಸ್ತಕಾಲಯದವರು ಇದನ್ನು ಪ್ರಕಟಿಸಿದ್ದಾರೆ. ಹೆಸರೇ ಹೇಳುವಂತೆ ಇದು ಎಳೆಯ ಮಕ್ಕಳಿಗೆ ರಾಮಾಯಣದ ಕಥೆಯನ್ನು ಪರಿಚಯಿಸುವುದಕ್ಕೋಸ್ಕರ ಬರೆಯಲಾದ ಗದ್ಯ ಕೃತಿ. ಎರಡು ವರ್ಷಗಳ ಹಿಂದೆ ಇಂದಿರಾಜಾನಕಿಯವರು ಸಾಂಗತ್ಯ ಎಂಬ ದೇಸಿ ಛಂದಸ್ಸಿನಲ್ಲಿ ರಾಮಾಯಣವನ್ನು ಕಾವ್ಯರೂಪದಲ್ಲಿ ‘ಸಾಂಗತ್ಯ ರಾಮಾಯಣ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದರು. ಅಲ್ಲಿಯೂ ಅವರು ಮೂಲ ರಾಮಾಯಣದ ಕಥೆಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ‘ಕಿರಿಯರ ರಾಮಾಯಣ’ ದಲ್ಲೂ ಮಾಡಿಲ್ಲ.
ಪೀಠಿಕಾ ಪ್ರಕರಣದಿಂದ ಆರಂಭವಾಗಿ ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ, ಯುದ್ಧ ಕಾಂಡಗಳ ಜತೆಗೆ ಉತ್ತರ ಕಾಂಡವೂ ಇಲ್ಲಿದೆ. ಯಾವ ಪ್ರಮುಖ ಘಟನೆಯನ್ನೂ ಬಿಡದೆ ರಾಮಾಯಣದ ಇಡೀ ಕಥೆಯನ್ನು ಸುಲಲಿತವಾದ ಶೈಲಿಯಲ್ಲಿ ಅತ್ಯಂತ ಸರಳವಾಗಿ ಕಥೆಯನ್ನು ನಿರೂಪಿಸಿದ್ದಾರೆ. ತಾಟಕಾವಧೆ, ಸುಬಾಹು ವಧೆ, ಅಹಲ್ಯಾ ಮೋಕ್ಷ, ಜನಕರಾಜನ ಹಿನ್ನೆಲೆ, ಸೀತೆಯ ಹುಟ್ಟು, ಸೀತಾ ಸ್ವಯಂವರ, ಶ್ರೀರಾಮ ಪಟ್ಟಾಭಿಷೇಕದ ಸಿದ್ಧತೆ,, ಮಂಥರೆಯ ಕುತಂತ್ರ, ಸೀತಾ-ಲಕ್ಷ್ಮಣ ಸಮೇತ . ರಾಮನ ವನವಾಸ, ಶೃಂಗಬೇರಪುರದಲ್ಲಿ ಗುಹನ ಅತಿಥ್ಯ, ಚಿತ್ರಕೂಟದಲ್ಲಿ ನೆಲೆಸುವುದು, ಮುಂದೆ ಪಂಚವಟಿಗೆ ಹೋಗುವುದು, ಶೂರ್ಪನಖಿಯ ದುರ್ವರ್ತನೆ, ಅವಳಿಗಾದ ಅವಮಾನ, ಅಣ್ಣನಾದ ರಾವಣನಲ್ಲಿ ದೂರು, ಸೀತಾಪಹರಣ, ಸೀತೆಗಾಗಿ ಹುಡುಕಾಟ, ಜಟಾಯು ಮರಣ, ಶಬರಿಯ ಆತಿಥ್ಯ, ಕಬಂಧ ಬಾಹುಚ್ಛೇದನ ಮತ್ತು ಅವನು ಸುಗ್ರೀವನ ಬಳಿಗೆ ಹೋಗಲು ಮಾರ್ಗದರ್ಶನ ಮಾಡುವುದು, ವಾಲಿಯ ವಧೆ, ಸುಗ್ರೀವನ ಬೆಂಬಲ, ಲಂಕೆಗೆ ಸೇತುವೆಯ ನಿರ್ಮಾಣ, ರಾಮ-ರಾವಣ ಯುದ್ಧ, ( ಸೇತುವೆ ನಿರ್ಮಾಣ, ಲಂಕಾದಹನ, ರಾಮ-ರಾವಣ ಯುದ್ಧಗಳ ವಿಶದವಾದ ವಿವರಗಳೇ ಇವೆ.). ಸೀತೆಯ ಅಗ್ನಿಪರೀಕ್ಷೆ-ಎಲ್ಲವೂ ಇಲ್ಲಿವೆ. ಉತ್ತರಕಾಂಡದಲ್ಲಿ ಸೀತಾ ಪರಿತ್ಯಾಗ, ಲವಕುಶರ ಜನನ, ಅವರ ಬೆಳವಣಿಗೆ, ವಾಲ್ಮಿಕಿಮುನಿಗಳು ತಾವು ರಚಿಸಿದ ರಾಮಾಯಣದ ಪದ್ಯಗಳನ್ನು ಹಾಡಲು ಅವರಿಗೆ ಹೇಳಿಕೊಡುವುದು, ರಾಜಸೂಯ ಯಾಗದ ಸಂದರ್ಭದಲ್ಲಿ ಮಕ್ಕಳು ಆ ಹಾಡನ್ನು ತಂದೆಯ ಮುಂದೆ ಹಾಡುವುದು, ತಂದೆ ಮಕ್ಕಳ ಮಿಲನ, ಸೀತೆಯು ತನ್ನ ಕರ್ತವ್ಯ ಮುಗಿಯಿತೆಂದು ಹೊರನಡೆದು ಭೂಮಿಯಲ್ಲಿ ತೆರೆದ ಬಿರುಕಿನೊಳಗೆ ಪ್ರವೇಶಿಸುವುದು, ಲಕ್ಷ್ಮಣನಿಗೆ ಅನಿವಾರ್ಯವಾಗಿ ಮರಣ ದಂಡನೆ, ಶ್ರೀರಾಮ ಮತ್ತು ಉಳಿದ ಸೋದರರು ಸರಯೂ ನದಿಯೊಳಗೆ ಹೋಗಿ ಲೀನವಾಗುವುದರೊಂದಿಗೆ ಲೇಖಕಿ ವಿರಮಿಸುತ್ತಾರೆ. ಅತಿ ಉದ್ವೇಗದ ಸಂದರ್ಭದಲ್ಲೂ ನಿರೂಪಣೆಯಲ್ಲಿ ಅದ್ಭುತ ಸಂಯಮ ಸಾಧಿಸುವುದು ಲೇಖಕಿಯ ಹೆಗ್ಗಳಿಕೆ.
ಅಲ್ಲಲ್ಲಿ ಕೆಲವು ಕ್ಲಿಷ್ಟ ಪದಗಳ ಬಳಕೆ ಇದೆ. ಶಬ್ದಕೋಶದ ಅಥವಾ ಹಿರಿಯರ ಸಹಾಯವಿಲ್ಲದೆ ಮಕ್ಕಳು ಈ ಶಬ್ದಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆರ್ಜಿಸಿಕೊಂಡರು, ನ್ಯಾಸವಾಗಿ, ತಳ್ಕೈಸಿಕೊಂಡರು, ಔರ್ಧ್ವದೈಹಿಕ, ಲಾಂಗೂಲ, ಕತಮಾಲ, ಪಾವಕ, ಅನಲ, ದೌಷ್ಟ್ಯ, ಸಪ್ತಾರ್ಚಿ, ಐಕ್ಷ್ವಾಕು, ಪ್ರಾಣೋತ್ಕ್ರಮಣ,ಪ್ರಾಭಂಜನಿ ಇತ್ಯಾದಿ ಪದಗಳನ್ನು ಮಕ್ಕಳು ತಕ್ಷಣ ಅರ್ಥಮಾಡಿಕೊಳ್ಳುವುದು ಕಷ್ಟ. ಪೌರಾಣಿಕ ಕಥೆಗಳಲ್ಲಿ ಸಾಮಾನ್ಯವಾಗಿರುವ ಇಂಥ ಪದಗಳನ್ನು ಮಕ್ಕಳು ಪರಿಚಯ ಮಾಡಿಕೊಳ್ಳುವುದು ಒಳ್ಳೆಯದು.
ಸಾಂದರ್ಭಿಕವಾಗಿ ಅಲ್ಲಲ್ಲಿ ಕೊಟ್ಟ ಸುಂದರ ವರ್ಣಚಿತ್ರಗಳು ಪುಸ್ತಕದ ಆಕರ್ಷಣೆಯನ್ನು ಹೆಚ್ಚಿಸಿವೆ. ಮಕ್ಕಳು ಯಾವ ಸಂದರ್ಭದ ಚಿತ್ರಗಳನ್ನು ಹೆಚ್ಚು ಆಸಕ್ತಿಯಿಂದ ಇಷ್ಟಪಡಬಹುದು ಅನ್ನುವುದನ್ನು ಚೆನ್ನಾಗಿ ಆಲೋಚಿಸಿಯೇ ಚಿತ್ರಗಳನ್ನು ಕೊಡಲಾಗಿದೆ. ತಾಟಕಿಯ ವಧೆ, ಮಂಥರೆ, ಮರಣಶಯ್ಯೆಯಲ್ಲಿರುವ ದಶರಥ, ಮಾಯಾಜಿಂಕೆ, ಲಕ್ಷ್ಮಣರೇಖೆ, ವಾಲಿ-ಸುಗ್ರೀವ ಯುದ್ಧ, ಲಂಕಾದಹನ, ಹನುಮಂತನು ಸಂಜೀವಿನಿ ಪರ್ವತವನ್ನು ಎತ್ತಿಕೊಂಡು ಬರುವುದು, ಕುಸನಿಗೆ ಪಟ್ಟಾಭಿಷೇಕ, ಶ್ರೀರಾಮ-ಭರತ- ಶತ್ರುಘ್ನರು ಸರಯೂ ನದಿಯ ಬಳಿಗೆ ಕೈಕೈ ಹಿಡಿದುಕಿಂಡು ಹೋಗುವುದು- ಹೀಗೆ. ಎಲ್ಲವೂ ಮಕ್ಕಳ ಗಮನವನ್ನು ಹಿಡಿದಿಡುವಂಥ ಚಿತ್ರಗಳು.
ಶರವೇಗದಿಂದ ಬೆಳೆಯುತ್ತಿರುವ ವಿಜ್ಞಾನ-ತಂತ್ರಜ್ಞಾನಗಳ ಈ ಕಾಲದಲ್ಲಿ ಮೊಬೈಲ್-ಇಂಟರ್ ನೆಟ್ ಗಳು ಬಣ್ಣ ಬಣ್ಣದ ಲೋಕಗಳನ್ನು ತೊರಿಸಿ ಮರುಳು ಮಾಡುತ್ತಿರುವ ಕಾರಣದಿಂದ ನಿಜವಾದ ಜೀವನ ಮೌಲ್ಯಗಳ ಬಗ್ಗೆ ತಿಳಿಯ ಹೇಳುವ ನಮ್ಮ ಸಂಸ್ಕೃತಿ-ಪರಂಪರೆಗಳ ಬಗ್ಗೆ ಉದಾಸೀನರಾಗಿರುವ ನಮ್ಮ ಮಕ್ಕಳಿಗೆ ಯಾವುದಾದರೂ ರೀತಿಯಲ್ಲಿ ನಮ್ಮ ಪೌರಾಣಿಕ ಕಥೆಗಳಲ್ಲಿ ಆಸಕ್ತಿ ಮೂಡುವಂತೆ ಮಾಡಬೇಕಾಗಿದೆ. ಆ ಕೆಲಸವನ್ನು ಇಂಥ ಪುಸ್ತಕಗಳ ಮೂಲಕ ಖಂಡಿತಾ ಮಾಡಿಸಬಹಿದಾಗಿದೆ.

