Home » ಗ್ರಂಥಾಲೋಕ : ಪಾದೇಕಲ್ಲು ವಿಷ್ಣು ಭಟ್ಟ
 

ಗ್ರಂಥಾಲೋಕ : ಪಾದೇಕಲ್ಲು ವಿಷ್ಣು ಭಟ್ಟ

ವಿಮರ್ಶೆ : ಪಾರ್ವತಿ. ಜಿ ಐತಾಳ್

by Kundapur Xpress
Spread the love

ಕೃತಿಯ ಹೆಸರು : ಗ್ರಂಥಾಲೋಕ
ಲೇಖಕರು :  ಪಾದೇಕಲ್ಲು ವಿಷ್ಣು ಭಟ್ಟ
ಪ್ರ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ
ಪ್ರ.ವರ್ಷ :  ೨೦೨೫  

‘ಗ್ರಂಥಾಲೋಕ’ ಹಿರಿಯ ವಿದ್ವಾಂಸರಾದ ಪ್ರೊ.ಪಾದೇಕಲ್ಲು ವಿಷ್ಣು ಭಟ್ಟರು ಬರೆದ ಗ್ರಂಥ ಪರಿಚಯ ಲೇಖನಗಳ ಸಂಕಲನ.  ಇದು ಕಥೆ-ಕಾದಂಬರಿ-ಕಾವ್ಯ-ನಾಟಕ ಕೃತಿಗಳ ಅವಲೋಕನವಲ್ಲ..   ಇದರಲ್ಲಿರುವುದು ಭಾರತೀಯ ಪ್ರಾಚೀನ ಸಾಹಿತ್ಯದ ಮೇಲೆ ಕನ್ನಡದಲ್ಲಿ ಬಂದ ಹಲವು ಕೃತಿಗಳ  ಪರಿಚಯ ಲೇಖನಗಳು. ಕೆಲವು ಸ್ಥೂಲ ನೋಟಗಳಾದರೆ ಇನ್ನು ಕೆಲವು  ಸಮಗ್ರ ಚಿತ್ರಣವನ್ನು ನೀಡುವ ದೀರ್ಘ ಬರೆಹಗಳು.  
   ಇದರಲ್ಲಿ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಮಹತ್ವವೆನ್ನಿಸುವ ೫೩ ಕೃತಿಗಳನ್ನು ವಿಷ್ಣು ಭಟ್ಟರು ಪರಿಚಯಿಸಿದ್ದಾರೆ. ಸಾಂಸ್ಕೃತಿಕ ಪದಕೋಶ,  ಸಂಶೋಧನ ಸಂಪುಟ,  ಕನ್ನಡ ವ್ಯಾಕರಣ, ಪೌರಾಣಿಕ ಪದಕೋಶ, ಅನುವಾದಿತ ಗ್ರಂಥಗಳು,  ರಾಮಾಯಣ-ಮಹಾಭಾರತಗಳನ್ನು ಆಧರಿಸಿ   ೨೦ನೆಯ ಶತಮಾನದಲ್ಲಿ ಬೇರೆ ಬೇರೆ ಕವಿಗಳಿಂದ       ಬರೆಯಲ್ಪಟ್ಟ ಕಾವ್ಯ ಕೃತಿಗಳು, ವಚನ ಸಾಹಿತ್ಯ ಮತ್ತು ಹೊಸ ಆಲೋಚನೆಗಳ ಮೇಲೆ ಮಾಡಿದ ಪ್ರಯೋಗಗಳು- ಹೀಗೆ  ಅತ್ಯಂತ    ಗಂಭೀರ ಮತ್ತು ಆಸಕ್ತಿಕರ  ಕೃತಿಗಳನ್ನು ಅವರು ಚರ್ಚಿಸಿದ್ದಾರೆ.

   ಇಲ್ಲಿ ಚರ್ಚಿಸಲಾದ ಕೆಲವು ಕೃತಿಗಳು    –  ಕೆ.ಅನಂತರಾಮು ಅವರು ದಕ್ಷಿಣ ಕನ್ನಡದ ಬಗ್ಗೆ ಬರೆದ   ‘ದಕ್ಷಿಣದ ಸಿರಿನಾಡು'(೧೮೦೦ ಪುಟಗಳ ಬೃಹತ್ ಕೃತಿ),  ಶತಾವಧಾನಿ ಗಣೇಶ್ ಬರೆದ  ‘ಕನ್ನಡದಲ್ಲಿ ಅವಧಾನ ವಿಶ್ವಕೋಶ’. ಡಾ.ಸಂಗಮೇಶ ಸವದತ್ತಿಯವರ ‘ಸಾಂಸ್ಕೃತಿಕ ಪದಕೋಶ’,  ‘ಗೋವಿಂದಪೈ ಸಂಶೋಧನ ಸಂಪುಟ, ಡಾ.ವಿಲಿಯಂ ಕೇರಿಯ ‘ಕನ್ನಡ ವ್ಯಾಕರಣ’,  ಮುಳಿಯ ತಿಮ್ಮಪ್ಪಯ್ಯನವರ ‘ ನಾಡೋಜ ಪಂಪ’ ಮತ್ತು ‘ ಕವಿರಾಜಮಾರ್ಗ ವಿವೇಕ’,  ‘ಪುರಾಣನಾಮ ಚೂಡಾಮಣಿ, ಪುರಾಣಭಾರತ ಪದಕೋಶ ಮತ್ತು ಮಹಾಭಾರತ ಪದಕೋಶ’ಎಂಬ ಮೂರು ಪೌರಾಣಿಕ ಕೋಶಗಳು, ದೇರಾಜೆ ಸೀತಾರಾಮಯ್ಯ ನವರ ‘ ಶ್ರೀಮನ್ಮಹಾಭಾರತಕಥಾಮೃತಮ್’  ಮತ್ತು  ‘ರಾಮರಾಜ್ಯದ ರೂವಾರಿ’    ನಾರಾಯಣ ಶಾನುಭಾಗರ ‘ ಧರ್ಮ ಕುತೂಹಲ’  ಮುದ್ದಣಕವಿಯ ‘ಶ್ರೀರಾಮಾಶ್ವಮೇಧಮ್’     ಎಂ.ಎಂ.   ಕಲಬುರ್ಗಿ ಯವರ ಪ್ರಧಾನ ಸಂಪಾದಕತ್ವದಲ್ಲಿ ಕರ್ನಾಟಕ ಸರಕಾರವು ಪ್ರಕಟಿಸಿದ ‘ವಿಷಯವಚನ ಸಂಪುಟಗಳು’   ಗಳು  ಇತ್ಯಾದಿ-   ಎಲ್ಲವೂ ಬೃಹತ್ ಕೃತಿಗಳು. ಗಂಭೀರ ಕೃತಿಗಳು. ಅವುಗಳನ್ನು ಪೂರ್ತಿಯಾಗಿ ಓದಿ ಮನನ ಮಾಡಿಕೊಳ್ಳಲು ತುಂಬಾ ಸಮಯಬೇಕು ಮತ್ತು  ಆ ಬಗ್ಗೆ ಚಿಂತನ ಮತ್ತು ಮನನ ಮಾಡುವ  ಸಾಮರ್ಥ್ಯ ಬೇಕು. ಪ್ರತಿಯೊಂದು ಕೃತಿಯ ಹಿನ್ನೆಲೆ ಮತ್ತು ಇತಿಹಾಸಗಳು ತಿಳಿದಿರಬೇಕು.   ಸಾಹಿ ತ್ಯ ಪರಂಪರೆಯ ಬಗ್ಗೆ ಅಪಾರ ಜ್ಞಾನ ಸಂಪತ್ತನ್ನು ಹೊಂದಿದವರಿಂದ ಮಾತ್ರವೇ ಇದು ಸಾಧ್ಯ.

  ದೇರಾಜೆಯವರ ‘ ಶ್ರೀಮನ್ಮಹಾಭಾರತಕಥಾಮೃತಮ್’  ಕೃತಿಯ ವೈಶಿಷ್ಟ್ಯಗಳನ್ನು ಕುರಿತು ವಿಷ್ಣು ಭಟ್ಟರು ಹೇಳುವ ಮಾತುಗಳೇ ಅವರ ಅವಲೋಕನ ವಿಧಾನಕ್ಕೆ ಹಿಡಿಯ ಬಹುದಾದ ಕನ್ನಡಿ   ‘ ದೇರಾಜೆಯವರಿಗೆ  ನಮ್ಮ ಪೌರಾಣಿಕ ವಿಷಯಗಳ ಬಗೆಗೆ  ತುಂಬಾ ಕುತೂಹಲ ಮತ್ತು ಆಸಕ್ತಿಯಿತ್ತು. ಮಹಾಭಾರತಕ್ಕೆ ಸಂಬಂಧಿಸಿದ ವಿಷಯಗಳನ್ನು ಪೌರಾಣಿಕವೆಂದು ಹೇಳಬಹುದೋ ಬಾರದೋ ಎಂಬುದಾಗಿ ಬೇರೆಯೇ ಚರ್ಚೆಯಿದೆ. ಯಾಕೆಂದರೆ ಮಹಾಭಾರತ ಮತ್ತು ರಾಮಾಯಣ ಇವೆರಡೂ  ನಮ್ಮ ಪುರಾಣಗಳಲ್ಲಿ ಸೇರಿರುವಂತಹವಲ್ಲ. ಆದರೆ ಪುರಾಣಗಳೆಂಬುದಾಗಿ ಸ್ಪಷ್ಟವಾಗಿ ಕರೆಯಲ್ಪಡುವ ಅಷ್ಟಾದಶ ಪುರಾಣಗಳೊಳಗೆ  ರಾಮಾಯಣ-ಮಹಾಭಾರತ ಕಥೆಗಳು ಸೇರಿವೆ. ರಾಮಾಯಣ- ಮಹಾಭಾರತಗಳನ್ನು ನಾವು ಸಾಮಾನ್ಯವಾಗಿ ಯಕ್ಷಗಾನೀಯ ವಲಯದಲ್ಲಿ ‘ಪೌರಾಣಿಕ’ ಎಂಬುದಾಗಿ ಹೇಳುತ್ತೇವೆ. ಇತರ ಸಂದರ್ಭಗಳಲ್ಲಿ ಕೂಡಾ  ಅವುಗಳಲ್ಲಿರುವ ಕಥೆಗಳನ್ನು  ಪೌರಾಣಿಕ-ಪುರಾಣ ಕಥೆಗಳು ಎಂಬುದಾಗಿ ಹೇಳುತ್ತೇವೆ. ಆದರೆ ನಿಜವಾಗಿ  ಇವು ಪುರಾಣ ಪ್ರಪಂಚಕ್ಕೆ ಸೇರಿದವುಗಳಲ್ಲ. ‘ಹಿಂದಿನವು’ ಎಂಬ ಅರ್ಥದಲ್ಲಿ ಪುರಾಣ ಪ್ರಪಂಚಕ್ಕೆ ಸೇರಿದವು ಹೌದು. ಆದರೆ ‘ಅಷ್ಟಾದಶ ಪುರಾಣಗಳು’ ಎಂದು  ಗುರುತಿಸಲಾದ ಪುರಾಣಗಳೊಳಗೆ  ಸೇರಿದಂತಹವಲ್ಲ. ಆದರೆ ಮಹಾಭಾರತಕ್ಕೊಂದು ವೈಶಿಷ್ಟ್ಯವಿದೆ. ಅಷ್ಟಾದಶ ಪುರಾಣಗಳನ್ನು ಬರೆದವರು ವ್ಯಾಸರು  ಎಂದು ನಮ್ಮ ಪರಂಪರೆ ಹೇಳುತ್ತದೆ. ಮಹಾಭಾರತದ  ರಚಕರು ಕೂಡಾ ವ್ಯಾಸರೆ. ಆದ್ದರಿಂದ ಇವೆಲ್ಲವೂ ಒಬ್ಬರೇ ಲೇಖಕರಿಂದ ಬರೆಯಲ್ಪಟ್ಟದ್ದು….'( ಪು.೯೦)
   ಇಂಥ ಒಂದು ವಿದ್ವತ್ಪೂರ್ಣ ಪೀಠಿಕೆಯನ್ನು ಭಟ್ಟರು ಇಲ್ಲಿನ ಅನೇಕ ಮಹತ್ವದ ಕೃತಿಗಳ ಕುರಿತಾದ ಲೇಖನಗಳಿಗೆ ಕೊಡುತ್ತ ಹೋಗುತ್ತಾರೆ.

   ಇಂಥ ವಿಮರ್ಶಾ ಗ್ರಂಥಗಳು ಇವತ್ತು ಬರುವುದು ತುಂಬಾ ಅಪರೂಪ.‌   ಪುಸ್ತಕಗಳಲ್ಲಿ  ತಪ್ಪಿಲ್ಲದ    ಶುದ್ಧ ಭಾಷಾ ಪ್ರಯೋಗವು ದುರ್ಬೀನು ಹಾಕಿ ಹುಡುಕಿದರೂ ಕಷ್ಟಲಭ್ಯವಾದ    ಈ ದಿನಗಳಲ್ಲಿ  ಈ ಕೃತಿಯ ಓದು ಸವಿ ಜೇನು ಚಪ್ಪರಿಸಿದ ಅನುಭವ ಕೊಡುತ್ತದೆ.  ಸಾಹಿತ್ಯ ಕ್ಷೇತ್ರದೊಳಗೆ ದುಡಿಯುತ್ತಿರುವ ಇಂದಿನ ಯುವ ಪೀಳಿಗೆಯವರು ತಮ್ಮ  ನಾಡು-ನುಡಿ- ಸಂಸ್ಕೃತಿ-ಪರಂಪರೆಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಈ ಕೃತಿಯನ್ನು ಅವಶ್ಯವಾಗಿ ಓದಲೇ ಬೇಕು.

ಪಾರ್ವತಿ ಜಿ.ಐತಾಳ್, ಲೇಖಕರು ಹಾಗೂ ಸಾಹಿತಿಗಳು

 

Related Articles

error: Content is protected !!