ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರು ಒಂದೆಡೆ ಹೇಳುತ್ತಾರೆ: ಬದುಕಿನಲ್ಲಿ ಸಂಪತ್ತು ಸ್ನೇಹಿತರು, ಆಸ್ತಿಪಾಸ್ತಿ ಇತ್ಯಾದಿ ಅಮೂಲ್ಯವಾದ ಯಾವುದನ್ನು ಕಳೆದು ಕೊಂಡರೂ ಮತ್ತೆ ಪಡೆಯಬಹುದು; ಆದರೆ ನಮ್ಮ ದೇಹವನ್ನು ನಾವು ಒಮ್ಮೆ ಕಳೆದುಕೊಂಡೆವೆಂದರೆ ಮತ್ತೆ ನಮ್ಮ ಅಸ್ತಿತ್ವವನ್ನು ನಾವು ಪಡೆಯಲಾರೆವು. ದೇಹವು ಅವಸಾನಗೊಂಡ ಬಳಿಕ ಅದು ಅತ್ಯಲ್ಪ ಅವಧಿಯಲ್ಲಿ ಕೊಳೆತು ನಾರಬಲ್ಲ ಮಾಂಸದ ಮುದ್ದೆಯೇ ವಿನಾ ಬೇರೇನೂ ಅಲ್ಲ. ಹಾಗೆಂದು ದೇಹವು ಜೀವ ಶಕ್ತಿಯನ್ನು ಹೊಂದಿರುವಷ್ಟು ಕಾಲವೂ ಅಪ್ರತಿಮ ಕ್ರಿಯಾಶೀಲತೆಯನ್ನು ಹೊಂದಿರುವ ಅಸಾಮಾನ್ಯ ಚಮತ್ಕಾರದ ಯಂತ್ರವೇ ಆಗಿದೆ. ದೇಹವು ಜೀವಶಕ್ತಿಯನ್ನು ಹೊಂದಿರುವಾಗ ಅದಕ್ಕಿರುವ ಮಹತ್ವವನ್ನು ನಾವು ಚೆನ್ನಾಗಿ ತಿಳಿದಿರುವುದು ಅಗತ್ಯ ಎಂದೇ ಶ್ರೀ ಸತ್ಯಸಾಯಿ ಬಾಬಾ ಅವರು ನಮ್ಮನ್ನು ಎಚ್ಚರಿಸುತ್ತಾರೆ. ಯಾವುದೇ ಒಂದು ವಸ್ತುವಿನ ಮಹತ್ವವನ್ನು ಅರಿಯುವುದೆಂದರೆ ಅದರ ಬಾಹ್ಯ ಸೌಂದರ್ಯವನ್ನು ಉಪಾಸಿಸುವುದು ಎಂದು ಅರ್ಥವಲ್ಲ. ನಮ್ಮ ದೇಹದ ಬಗೆಗೂ ಇದೇ ಮಾತನ್ನು ನಾವು ಅನ್ವಯಿಸಬೇಕು. ದೇಹದ ಮಹತ್ವವನ್ನು ಅರಿಯುವುದೆಂದರೆ ಲೋಕ ಕಲ್ಯಾಣ ಸಾಧನೆಯ ನಿಟ್ಟಿನಲ್ಲಿ ದೇಹವೆಂಬ ಉಪಕರಣದ ಸಾಧ್ಯತೆಗಳು ಏನು ಎಂಬುದನ್ನು ತಿಳಿಯುವುದೇ ಆಗಿದೆ. ಆದರೆ ನಾವು ಬದುಕಿನುದ್ದಕ್ಕೂ ದೇಹವನ್ನು ಸ್ವಾರ್ಥಪರತೆಯಿಂದಲೇ ಪೋಷಿಸುತ್ತೇವೆ. ಇಂದ್ರಿಯ ಸುಖಗಳನ್ನು ಕೊಡಬಲ್ಲ ದೇಹವನ್ನು ಆ ಕಾರಣಕ್ಕಾಗಿಯೇ ಮೋಹಿಸುತ್ತೇವೆ. ದೇಹವು ಅನುಭವಿಸಬಲ್ಲ ಇಂದಿಯ ಸುಖಗಳೇ ನಿಜವಾದ ಸುಖವೆಂಬ ಭ್ರಮೆಯಲ್ಲಿ ದೇಹದ ಬಾಹ್ಯ ಸೌಂದರ್ಯಕ್ಕೆ ಪ್ರಾಧಾನ್ಯವನ್ನು ಕೊಡುತ್ತೇವೆ. ನಮ್ಮ ಬದುಕಿನ ಬಹುತೇಕ ದುಃಖಗಳು ನಾವು ನಿಜವೆಂದು ಸಂಭ್ರಮಿಸುವ ಇಂದ್ರಿಯ ಸುಖಾನುಭವದ ಅಡ್ಡ ಪರಿಣಾಮಗಳು !