ಡಾ.ಪಾರ್ವತಿ ಜಿ.ಐತಾಳರ “ಅಂತರಂಗದ ಸ್ವಗತ” ಆತ್ಮಕಥನ ಅಂಕಿತ ಪ್ರಕಾಶನದಿಂದ ಇದೇ ವರ್ಷ ಪ್ರಕಟವಾದ ನೂರ ಅರವತ್ತು ಪುಟಗಳ ಕೃತಿ. ತಮ್ಮ ಆತ್ಮಕತೆಯ ಪ್ರಾರಂಭದ ಪುಟಗಳಲ್ಲೇ ತಮ್ಮ ಪ್ರೊಫೆಸರ್ ಒಬ್ಬರು ಪಾಠ ಮಾಡುವಾಗ ಹೇಳಿದ್ದ ಮಾತುಗಳು ತಮ್ಮ ಮನದಲ್ಲಿ ಅಚ್ಚೊತ್ತಿದ್ದುದರ ಕುರಿತು ಲೇಖಕಿ ಹೇಳಿದ್ದಾರೆ. “ಏನನ್ನೂ ಅಡಗಿಸದೆ ತೆರೆದ ಮನಸ್ಸಿನಿಂದ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳನ್ನು ಕುರಿತು ಸಮಾಜಕ್ಕೆ ಪ್ರಯೋಜನಕರವಾಗುವ ರೀತಿಯಲ್ಲಿ ಪ್ರಾಮಾಣಿಕವಾಗಿ ಬರೆಯುವುದೇ ಆತ್ಮಕಥೆ. ವಸ್ತುನಿಷ್ಠವಾದ ಆತ್ಮಾವಲೋಕನ ಇಲ್ಲಿ ಬಹಳ ಮುಖ್ಯ” ಎಂದಿದ್ದ ತಮ್ಮ ಗುರುಗಳ ಆ ಮಾತುಗಳ ಬೆಳಕಿನಲ್ಲೇ ತಮ್ಮ ಆತ್ಮಕಥೆ ರೂಪಿಸಿದ್ದಾರೆ ಪಾರ್ವತಿಯವರು. ಇಲ್ಲಿ ತೆರೆದ ಮನ, ವಸ್ತುನಿಷ್ಠತೆ, ಆತ್ಮಾವಲೋಕನ, ಕಾಳು ಜೊಳ್ಳುಗಳನ್ನು ಜರಡಿ ಹಿಡಿದು ಸಮಾಜಕ್ಕೆ ಉಪಯುಕ್ತವಾದ ಗಟ್ಟಿ ಕಾಳುಗಳನ್ನಷ್ಟೇ ಹೆಕ್ಕಿ ಮುಂದಿಟ್ಟಿರುವ ಕಥನ ಕುಶಲತೆ ಪರಿಪಕ್ವವಾಗಿ ಹರಳುಗಟ್ಟಿದೆ. ಸತ್ಯಕ್ಕೆ ಯಾವುದೇ ಸೋಗು ಬೇಕಿಲ್ಲ. ಸ್ವಯಂ ಪ್ರಕಾಶಿತವಾದ ಸತ್ಯ ಸಂಗತಿಗಳನ್ನು ಯಾವುದೇ ಬಣ್ಣ ಬೆಡಗು ಮೆರುಗು ಸೋಗು ಇಲ್ಲದೆ ಮುಕ್ತವಾಗಿ ಮುಂದಿಡುವ ಪಾರ್ವತಿಯವರ ಜೀವನದ ಸಾಗಿ ಬಂದ ಹಾದಿಯ ಏರು ಇಳಿವುಗಳು ಬದುಕಿನಲ್ಲಿ ಹತಾಶೆ ನಿರಾಸೆ ಸೋಲು ಅನುಭವಿಸಿದವರಿಗೆ ಸ್ಫೂರ್ತಿ ತುಂಬಬಲ್ಲಷ್ಟು ತೇಜೋಪೂರ್ಣವಾಗಿವೆ.
ಬಾಳಿಕೆ ಎಂಬ ಕುಗ್ರಾಮದ ಮನೆಯಲ್ಲಿ ಕೊನೆಯ ಮಗುವಾಗಿ ಜನಿಸಿದವರು ಪಾರ್ವತಿ. ಇವರ ಅಜ್ಜಿ ಮತ್ತು ತಾಯಿ ಮನೆಯಲ್ಲಿ ಎಡೆಬಿಡದ ದುಡಿಮೆಗೆ ತಮ್ಮನ್ನೇ ತೆತ್ತುಕೊಂಡಿದ್ದವರು. ಹೆಂಡತಿ ಮಕ್ಕಳ ಮನಸ್ಸು ಭಾವನೆಗಳಿಗೆ ತಲೆ ಕೆಡಿಸಿಕೊಳ್ಳದೇ ದರ್ಪ ಕೋಪಗಳ ಪ್ರತಿಮೂರ್ತಿಯಾಗಿರುವುದೇ ಪುರುಷ ಲಕ್ಷಣ ಎಂಬಂತಿದ್ದ ತಂದೆ. ಎಲ್ಲರಿಂದ ತಂಗೂ ಎಂಬ ಪ್ರೀತಿಯ ಅಡ್ಡ ಹೆಸರಿನಿಂದ ಕರೆಯಲ್ಪಡುತ್ತಿದ್ದ ಪಾರ್ವತಿಯವರ ಶಾಲಾ ಶಿಕ್ಷಣ ಪ್ರಾರಂಭವಾಗುವುದು ಧರ್ಮತ್ತಡ್ಕದ ಶಾಲೆಯಲ್ಲಿ. ಗ್ರಾಮೀಣ ಪ್ರದೇಶದ ಅರವತ್ತರ ದಶಕದ ಶಾಲಾ ಶಿಕ್ಷಣ, ಸೌಲಭ್ಯಗಳ ಕೊರತೆಯಲ್ಲೂ ಮಕ್ಕಳಿಗೆ ಶ್ರದ್ಧೆಯಿಂದ ಕಲಿಸುತ್ತಿದ್ದ ಶಿಕ್ಷಕರ ಚಿತ್ರಣವಿದೆ. ಪಾಠ ಪ್ರವಚನಗಳು, ಹಾಡು ನೃತ್ಯ ನಾಟಕಗಳಲ್ಲಿ ಅಂತರ್ಗತ ಪ್ರತಿಭೆಯ ತಾವು ಸದಾ ಮುಂದಿರುತ್ತಿದ್ದುದನ್ನು ಸ್ಮರಿಸುತ್ತಾರೆ. ತಮಗೆ ಬಡತನ ಎಂದೇನಿರದಾಗಲೂ ಶಾಲಾ ಶುಲ್ಕದಂತಹ ಅಗತ್ಯಗಳಿಗೂ ಕೈ ಹಿಡಿತ ಮಾಡುತ್ತಿದ್ದ ತಂದೆಯ ಸ್ವಭಾವ, ಗುಣಮಟ್ಟದ ಬಟ್ಟೆಗಳಿಗಾಗಿ ಹಂಬಲಿಸಿ ತಾವು ನಿರಾಶರಾಗುತ್ತಿದ್ದುದು, ತಮ್ಮ ಅನಾಕರ್ಷಕ ರೂಪ ಇವೆಲ್ಲದರಿಂದಾಗಿ ಇವರು ಕೆಲವೊಮ್ಮೆ ಸ್ನೇಹ ವಂಚಿತರಾಗಿ ಅಂತರ್ಮುಖಿಯಾಗಿ ಕೊರಗುತ್ತಾ ತಮ್ಮ ತಪ್ಪೇನೆಂದು ಚಿಂತಿಸುತ್ತಿದ್ದ ಪರಿಸ್ಥಿತಿ. ಮುಂದೆ ಇಂತಹ ತಾರತಮ್ಯಗಳೆಡೆ ಮುಗುಳ್ನಕ್ಕು, ಅವನ್ನು ತೋರುತ್ತಿರುವವರಿಗೇ ಅನುಕಂಪ ತೋರಬಲ್ಲ ಪ್ರಬುದ್ಧತೆ ಮೈಗೂಡುತ್ತದೆ. ಶಾಲಾ ಜೀವನದಲ್ಲೂ, ಬಾಲ್ಯದ ಮುಗ್ಧ ಜೀವನದಲ್ಲೂ ಶ್ರೀಮಂತಿಕೆ ಬಡತನ ಸೌಂದರ್ಯ ಕುರೂಪ ವರ್ಣಭೇದ ಇವುಗಳ ಕಾಣದ ಕೈಯೊಂದು ಕೆಲಸ ಮಾಡಿತ್ತೆಂಬುದು ಇವರಿಗೆ ನಂತರದಲ್ಲಿ ಅರಿವಾಗಿದೆ. ಬಂಧುಬಳಗದವರು ತಮ್ಮ ಸಾಧಾರಣ ರೂಪವನ್ನೇ ಎತ್ತಿ ಹೇಳುತ್ತಿದ್ದಾಗ “ಓದಿನಲ್ಲೇ ಮುಂದೆ ಹೋಗಿ ಏನಾದರೂ ಸಾಧಿಸುತ್ತೇನೆ ಎನ್ನುವ ಛಲ ನನ್ನಲ್ಲಿ ಹುಟ್ಟಲು ಅದೇ ಕಾರಣವಾಗಿತ್ತು” ಎಂದು ಪ್ರಾಂಜಲ ಮನದಿಂದ ನಿವೇದಿಸುತ್ತಾರೆ ಪಾರ್ವತಿಯವರು
ಇವರ ನೆರೆಕೆರೆಯವರೆಲ್ಲ ತಮ್ಮ ಮಕ್ಕಳನ್ನು ಕಾಲೇಜಿಗೆ ಮಂಗಳೂರು ಪುತ್ತೂರುಗಳಿಗೆ ಸೇರಿಸುವಾಗ ಇವರ ತಂದೆ ತಮ್ಮ ಕೋರ್ಟಿನ ವ್ಯವಹಾರಗಳಿಗೆ ಕಾಸರಗೋಡಿಗೆ ಹೋಗಿಬರುತ್ತಿರಬೇಕಾದುದರಿಂದ ಇವರನ್ನೂ ಕಾಸರಗೋಡಿನ ಸರ್ಕಾರಿ ಕಾಲೇಜಿಗೆ ಸೇರಿಸುತ್ತಾರೆ. ಮುಕ್ಕಾಲು ಭಾಗ ಕನ್ನಡ ವಿದ್ಯಾರ್ಥಿಗಳಿದ್ದರೂ ಮಲೆಯಾಳಿಮಯ ವಾತಾವರಣ. ರ‌್ಯಾಗಿಂಗ್, ವಿನಾಕಾರಣ ಮುಷ್ಕರಗಳು ಇವೆಲ್ಲದರಿಂದ ಮುಕ್ಕಾಲುವಾಸಿ ಪಾಠಗಳನ್ನು ವಿದ್ಯಾರ್ಥಿಗಳು ತಾವೇ ಓದಿಕೊಳ್ಳಬೇಕಾಗಿರುತ್ತದೆ.
ಇವರ ಗೆಳತಿ ಗಿರಿಜಾಳ ಪ್ರೇಮ ಪ್ರಕರಣ, ಅದಕ್ಕೆ ಸಂಬಂಧಿಯಾಗಿ ಇವರು ಕೂಡ ತಮ್ಮ ಸಹಪಾಠಿ ಯುವಕನೆಡೆ ಅಲ್ಪಕಾಲವೇ ಆದರೂ ಆಕರ್ಷಿತರಾದದ್ದು, ನಂತರದಲ್ಲಿ ಆಕರ್ಷಣೆಯ ಬಣ್ಣದ ಗುಳ್ಳೆ ಒಡೆದು ಹೋಗಿ ತಾವು ನಿರಾಳರಾದದ್ದರ ಕುರಿತು ಮುಕ್ತವಾಗಿ ಹೇಳಿಕೊಂಡಿದ್ದಾರೆ. ದುಃಖಾಂತ್ಯದ ಪ್ರೇಮ ಪ್ರಕರಣದಿಂದಾಗಿ ಬಾಡಿ ಬಸವಳಿದು ಹೋಗಿದ್ದ ಗಿರಿಜಾಳಿಗೆ ಪಾರ್ವತಿಯವರ ಮಾರ್ಗದರ್ಶನ ತನ್ನ ನೋವನ್ನು ಅರಗಿಸಿಕೊಂಡು ಜೀವನ್ಮುಖಿಯಾಗಲು ಸಾಧ್ಯವಾಗುವ ಪ್ರಸಂಗ ಇಂದಿನ ಯುವ ಪೀಳಿಗೆಯವರಿಗೆ ಒಂದು ಪಾಠದಂತಿದೆ.
ಮುಂದೆ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಎಂ.ಎ. ಮಾಡಿ ಉಪನ್ಯಾಸಕಿಯಾದಾಗ ಇವರ ಮದುವೆಯ ಪ್ರಯತ್ನಗಳು ಪ್ರಾರಂಭವಾಗುತ್ತವೆ. ಹಲವು ಪ್ರಸಂಗಗಳಲ್ಲಿ ಇವರು ಅನುಭವಿಸಿದ ವೇದನೆ ಅಪಾರ. ‘ಮದುವೆ ವಿಷಯದಲ್ಲಿ ಗಂಡಿನ ಕಡೆಯವರಿಗೆ ಹೆಣ್ಣಿನ ಕಡೆಯವರ ಬಗ್ಗೆ ತಾವು ಸಮಾನರೆಂಬ ಭಾವನೆ ಇರದೇ, ಎಲ್ಲಾ ವಿಷಯಗಳಲ್ಲಿ ಏರಿ ನಿಂತು ಮೇಲಿರುವುದೇ ಪುರುಷ ಲಕ್ಷಣ ಎಂಬಂತಹ ಪರಿಸ್ಥಿತಿ’ ಇದ್ದು , ಯಾವುದೂ ಕೈಗೂಡದ ಸಂದರ್ಭದಲ್ಲಿ ಇವರು ಎರಡನೇ ಮದುವೆಗೂ, ತೊದಲು ಮಾತಿನ ವರನೊಂದಿಗಿನ ಮದುವೆಗೂ ಮುಂದಾದ ಸಂದರ್ಭಗಳು ಓದುಗರ ಕರುಳು ಮಿಡಿಯುತ್ತವೆ. ಅಂತಿಮವಾಗಿ ಬೋಧನಾ ಶ್ರದ್ಧೆಯ ಪ್ರತಿಭಾವಂತ ಅಧ್ಯಾಪಕರಾಗಿದ್ದ ಗಂಗಾಧರ ಐತಾಳರೊಂದಿಗೆ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಾರೆ.
ಜಾತಿ ಪದ್ಧತಿಯ ಬಗ್ಗೆ, ಪುರುಷ ಪ್ರಾಧಾನ್ಯತೆಯ ಬಗ್ಗೆ, ಸ್ತ್ರೀ ಪುರುಷರ ನಡುವಿನ ಅಸಮಾನತೆಯ ನೆಲೆಯ ಬಗ್ಗೆ ತಮ್ಮದೇ ಚಿಂತನ ಮಂಥನ ಹಾಗೂ ಅನುಭವದ ಮೂಸೆಯಿಂದ ಮಥಿಸಿ ಬಂದ ಅಭಿಪ್ರಾಯಗಳನ್ನು ಲೇಖಕಿ ದಾಖಲಿಸಿದ್ದಾರೆ. ಪಂಚ ಭಾಷಾ ಪ್ರಾವೀಣ್ಯತೆಯ ಪಾರ್ವತಿಯವರು ಅನುವಾದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಸಲ್ಲಿಸಬಲ್ಲರೆಂಬ ಸಹೋದ್ಯೋಗಿ ಸಾಹಿತಿ ಮಿತ್ರರ ಸಲಹೆಯಂತೆ ಇವರು ಅನುವಾದಿಸಿದ ಒಂದು ಕತೆ ಮಯೂರದಲ್ಲಿ ಪ್ರಕಟವಾಗುತ್ತದೆ. ಮಲೆಯಾಳಂನ ಒಂದು ಚಿಕ್ಕ ಕಾದಂಬರಿಯನ್ನೂ “ಬದುಕಲು ಮರೆತ ಸ್ತ್ರೀ” ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸುತ್ತಾರೆ. ಮತ್ತೆ ಇವರು ಹಿಂತಿರುಗಿ ನೋಡುವುದಿಲ್ಲ. ತಾವು ಮೂವತ್ತಕ್ಕೂ ಹೆಚ್ಚು ಸ್ವತಂತ್ರ ಕೃತಿಗಳನ್ನು ಬರೆದಿದ್ದರೂ, ಜನರು ತಮ್ಮನ್ನು ಅನುವಾದಕಿ ಎಂದೇ ಗುರುತಿಸಿದ್ದರ ಕುರಿತು ಹೇಳುತ್ತಾ ಅನುವಾದ ಹಾಗೂ ಅನುವಾದ ಸಾಹಿತ್ಯವನ್ನು ವಿಶ್ಲೇಷಿಸುತ್ತಾ, ಅನುವಾದ ಕೂಡ ಸೃಜನಶೀಲತೆ ಬೇಡುವ ಸಾಹಿತ್ಯಿಕ ಪ್ರಕ್ರಿಯೆ ಎಂಬುದನ್ನು ಸಮರ್ಥವಾಗಿ ಪ್ರತಿಪಾದಿಸಿದ್ದಾರೆ. ಪಾರ್ವತಿಯವರು ಹಲವಾರು ಪ್ರತಿಷ್ಠಿತ ಸಾಹಿತ್ಯಿಕ ಪ್ರಶಸ್ತಿಗಳಿಗೂ ಭಾಜನರಾಗಿರುವವರು. ಆತ್ಮಕತೆಯನ್ನು ಒಂದು ವಿಧದ ಸಾಕ್ಷೀ ಪ್ರಜ್ಞೆಯಿಂದ ಆತ್ಮರತಿಗೆಡೆಗೊಡದೆ ನಿರೂಪಿಸುವ ಚೌಕಟ್ಟಿಗೊಳಪಟ್ಟುದರಿಂದಾಗಿರಬಹುದು, ಆ ಪ್ರಶಸ್ತಿಗಳೆ ಲ್ಲವನ್ನೂ ಅವರಿಲ್ಲಿ ದಾಖಲಿಸಿಲ್ಲ. ಪ್ರಾಸಂಗಿಕವಾಗಿ ಮಾತ್ರ ಅವುಗಳ ಪ್ರಸ್ತಾಪ ಬಂದಿರುವುದು ಅವರ ಪ್ರಬುದ್ಧತೆಯ ದ್ಯೋತಕ.
ದಾಂಪತ್ಯ ಜೀವನದ ಮೂವತ್ನಾಲ್ಕು ವರ್ಷಗಳ ನಂತರ ಪತಿಗೆ ಕ್ಯಾನ್ಸರ್ ಆದಾಗಲೂ ದಂಪತಿ ಗುಣವಾಗುತ್ತದೆಂಬ ಆಶಾ ಭಾವನೆಯಿಂದ ಭವಿಷ್ಯದ ಸುದಿನಗಳ ನಿರೀಕ್ಷೆಯಲ್ಲೇ ಇದ್ದರು. ಆದರೆ ವಿಧಿಯೆಣಿಕೆ ಬೇರೆಯೇ ಇತ್ತು. ಇವರನ್ನು “ತಿರಿವಂತೆ ಮಾಡಿ, ಒರೆದು ನೋಡಿ, ಅರೆದು ನೋಡಿ, ಅರಿದು ನೋಡಿದ್ದ” ವಿಧಿ ಇವರಿಗೆ “ಬೆದರದೆ ಬೆಚ್ಚದೆ” ಇರಲಾದೀತೇ ಎಂದು ಪರೀಕ್ಷಿಸಿದಾಗ ಒಂದು ವರ್ಷವಿಡೀ ಆಘಾತದಲ್ಲಿ ಕಳೆದ ಲೇಖಕಿ ತನ್ನ ಬರೆಯುವ ಪ್ರತಿಭೆಯನ್ನು ಕಲಾಭಿರುಚಿಯನ್ನು ನೆನೆದು ಲೇಖನಿ ಕೈಗೆತ್ತಿಕೊಳ್ಳುತ್ತಾ ವಿಧಿಯೆಸೆದ ಸವಾಲಿಗೆ ಸೂಕ್ತ ಜವಾಬು ನೀಡುತ್ತಾರೆ

