ಕೃತಿಯ ಹೆಸರು : ಬೇಲಿ ಮುರಿಯುವ ತವಕ ( ಸಣ್ಣ ಕಥೆಗಳು)
ಲೇಖಕಿ : ಸುಮನಾ ಆರ್.ಹೇರ್ಳೆ
ಇದು ಲೇಖಕಿ ಸುಮನಾ ಹೇರ್ಳೆಯವರ ಎಂಟನೆಯ ಕೃತಿ ಮತ್ತು ಮೊದಲ ಕಥಾಸಂಕಲನ. ಇದರಲ್ಲಿ ಮನುಷ್ಯ ಸಂಬಂಧಗಳ ವಿವಿಧ ಮುಖಗಳನ್ನು ವಿವಿಧ ಆಯಾಮಗಳನ್ನು ಚಿತ್ರಿಸುವ ೩೦ ಪುಟ್ಟ ಪುಟ್ಟ ಕಥೆಗಳಿವೆ. ಈ ಸಂಕಲನಕ್ಕೆ ಅತ್ಯಂತ ಅರ್ಥಪೂರ್ಣವಾಗಿ ಅವರು ‘ ಬೇಲಿ ಮುರಿಯುವ ತವಕ’ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಪರಂಪರಾಗತ ಪದ್ದತಿ ಮತ್ತು ತಪ್ಪು ನಂಬಿಕೆಗಳಿಂದ ನಿರ್ಮಿತವಾದ ಬೇಲಿಗಳು ಮತ್ತು ಮನುಷ್ಯ-ಮನುಷ್ಯರ ನಡುವೆ ಒಳಗಿನ ಅಹಂಕಾರವನ್ನು ಗೆಲ್ಲಲಾರದೆ ಹುಟ್ಟಿಕೊಂಡ ಬೇಲಿಗಳನ್ನು ಮುರಿಯುವ ತವಕ ಅವರ ಕಥೆಗಳಲ್ಲಿದೆ.
ನಮ್ಮ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ನೂರಾರು ಬೇಲಿಗಳು ಎದುರಾಗುತ್ತವೆ. ಸಂಘಜೀವಿಯಾದ ಮನುಷ್ಯರು ಸಮಾಜದಲ್ಲಿ ಎಲ್ಲರ ಜತೆಗೆ ಸೌಹಾರ್ದಯುತವಾಗಿ ಬದುಕಬೇಕಿದ್ದರೆ ಎಂದೂ ತಮಗೆ ಇಷ್ಟ ಬಂದಂತೆ ವರ್ತಿಸುವ ಹಾಗಿಲ್ಲ. ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳ ಬೇಕಿದ್ದರೆ ಕೆಲವು ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ. ಅದಕ್ಕಾಗಿ ನಮ್ಮ ಹಿರಿಯರು ಕೆಲವು ವಿಧಿ- ನಿಷೇಧಗಳನ್ನು ಹಾಕಿದ್ದಾರೆ. ಕೆಲವೊಮ್ಮೆ ನಾವು ಆಧುನಿಕ ಚಿಂತನೆಯವರಿಗೆ ಆ ವಿಧಿ ನಿಷೇಧಗಳ ಹಿಂದಿನ ಕಾರಣ ತಿಳಿದಿರುವುದಿಲ್ಲ. ಕೆಲವೊಮ್ಮೆ ಅವು ಅರ್ಥ ಹೀನ ಅನ್ನಿಸಬಹುದು. ಅಥವಾ ಸಂಪ್ರದಾಯವಾಗಿ ಬೆಳೆದು ಬಂದ ಆ ಪದ್ಧತಿಗಳು ಇಂದಿನ ಬದಲಾದ ಬದುಕಿಗೆ ನಿಜವಾಗಿಯೂ ಹೊಂದಿಕೆಯಾಗದೆ ಇರಬಹುದು. ಏನಿದ್ದರೂ ಅವು ನಮ್ಮ ಪಾಲಿಗೆ ಬೇಲಿಗಳೇ. ಬದುಕಿನ ಕುರಿತು ವೈಜ್ಞಾನಿಕವಾಗಿ ಚಿಂತನೆ ಮಾಡುವವರಿಗೆ ಅಥವಾ ಪ್ರಶ್ನೆ ಮಾಡುವವರಿಗೆ ಆ ಬೇಲಿಗಳನ್ನು ಮುರಿಯ ಬೇಕು ಅನ್ನಿಸ ಬಹುದು. ಸುಮನಾ ಅವರ ಕಥೆಗಳ ಹಿಂದಿನ ಚಿಂತನೆ ಇದೇ ಆಗಿದೆ. ಇಲ್ಲಿ ಮೊದಲಿಗೆ ಬರುವ ‘ ಬೇಲಿ ಮುರಿಯುವ ತವಕ’ ಎಂಬ ಶೀರ್ಷಿಕೆಯ ಕಥೆಯಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಬೆಳೆದುಕೊಂಡು ಬಂದ ಕನ್ಯಾದಾನದ ಕುರಿತಾದ ಒಂದು ಸಂದರ್ಭವಿದೆ. ಸ್ತ್ರೀಯರು ಪುರುಷರಿಗಿಂತ ಕೆಳಗಿನ ಮಟ್ಟದಲ್ಲಿ ಇರಬೇಕಾದವರು ಎಂಬ ಒಂದು ಕಾಲದಲ್ಲಿ ಹುಟ್ಟಿಕೊಂಡ ಪದ್ಧತಿಯದು. ಕನ್ಯಾಪಿತೃಗಳು ವರನ ಕಾಲು ತೊಳೆಯುವ ಪದ್ಧತಿ . ಈ ಕಥೆಯಲ್ಲಿ ಅದಕ್ಕೆ ಮದುವೆಯಾಗುವ ಹೆಣ್ಣಿನ ತೀವ್ರ ವಿರೋಧವಿದೆ. ವಯಸ್ಸಿನಲ್ಲಿ ಹಿರಿಯರೂ ತಂದೆ-ತಾಯಿಗಳ ಸಮಾನರೂ ಆದ ಕನ್ಯಾ ಪಿತೃಗಳಿಗೆ ಇದು ಅವಮಾನಕರ ಎಂಬ ಭಾವನೆ ಅವಳದ್ದು. ಆದ್ದರಿಂದ ಹಠ ಹಿಡಿದು ಅವಳು ಅಪ್ಪ ಅಮ್ಮ ರಿಗೆ ಹೇಳಿ ವಿವಾಹದ ವಿಧಿಗಳಿಂದ ಅದನ್ನು ದೂರವಿರಿಸುವುದರಲ್ಲಿ ಯಶಸ್ವಿಯಾಗುತ್ತಾಳೆ.
ಇಂಥ ಹಲವು ಬೇಲಿಗಳು ನಮ್ಮ ಸಮಾಜದಲ್ಲಿವೆ. ಉದಾಹರಣೆಗೆ ಜಾತಿ ಪದ್ದತಿ. ಈ ಬೇಲಿಯನ್ನು ಮುರಿಯ ಬೇಕೆಂದೇ ಅಂತರ್ಜಾತೀಯ ವಿವಾಹದ ಪರಿಕಲ್ಪನೆ ಹುಟ್ಟಿಕೊಂಡಿತು. ಭೈರಪ್ಪನವರ ಕಾದಂಬರಿ ‘ ದಾಟು’ ಇದೇ ವಸ್ತುವಿನ ಮೇಲೆ ಬರೆಯಲ್ಪಟ್ಟಿದೆ. ಆದರೆ ಅದು ಬೇಲಿಯನ್ನು ‘ ದಾಟುವ ‘ ಸಾಧ್ಯತೆಯನ್ನಷ್ಟೇ ಚರ್ಚಿಸುತ್ತದೆ ಹೊರತು ದಾಟುವುದರಲ್ಲಿ ಯಶಸ್ಸು ಪಡೆಯುವುದಿಲ್ಲ. ಯಾಕೆಂದರೆ ಸಾವಿರಾರು ವರ್ಷಗಳ ಕಾಲ ನಡೆದುಕೊಂಡು ಬಂದ ಒಂದು ಪದ್ಧತಿಯನ್ನು ರಾತ್ರಿ ಬೆಳಗಾಗುವುದರೊಳಗೆ ಬದಲಾಯಿಸುವುದು ಸುಲಭವಲ್ಲ.
ತಾಯಿತಂದೆಯರಿಗೆ ವಯಸ್ಸಾದಾಗ ಮಕ್ಕಳು ಅವರನ್ನು ದೂರವಿಟ್ಟು ತಮ್ಮ ನಡುವೆ ಬೇಲಿ ಕಟ್ಟಿಕೊಳ್ಳುವ ನಿರ್ಲಕ್ಷ್ಯ ಧೋರಣೆಯನ್ನು ಇಂದಿನ ಕೌಟುಂಬಿಕ ಬದುಕಿನಲ್ಲಿ ಅಲ್ಲಲ್ಲಿ ನಾವು ಕಾಣುತ್ತೇವೆ. ಸುಮನಾ ಅವರ ಹಲವು ಕಥೆಗಳು ಅದನ್ನು ವಿರೋಧಿಸಿ ವೃದ್ಧಾಪ್ಯದಲ್ಲಿ ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳುತ್ತವೆ.
ಸುಮನಾ ಅವರ ಹೆಚ್ಚಿನ ಕತೆಗಳು ಸಾಮಾಜಿಕ ಮತ್ತು ಕೌಟುಂಬಿಕ ಬದುಕಿನ ಸುತ್ತ ಬರೆದಂಥ ಕಥೆಗಳು. ಮದುವೆ, ದಾಂಪತ್ಯ, ಮಕ್ಕಳು, ಗಂಡು-ಹೆಣ್ಣಿನ ನಡುವಣ ಸಂಬಂಧ, ನೆರೆಹೊರೆಯವರ ಜತೆಗಿನ ಸಂಬಂಧ, ಕುಟುಂಬದಲ್ಲೂ ಹೊರಗೂ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣಿನ ಮೇಲೆ ವಿಧಿಸಿದ ಕಟ್ಟುಪಾಡುಗಳು, ಹೆಣ್ಣಿನ ಜಾಣ್ಮೆ, ಸ್ತ್ರೀ ಸ್ವಾತಂತ್ರ್ಯ- ಹೀಗೆ ಅವರ ಕಥಾವಸ್ತುಗಳು ಒಂದು ನಿರ್ದಿಷ್ಟ ವಲಯದಲ್ಲಿ ಸಾಗುತ್ತವೆ.
ಕಥಾನಾಯಕಿ ಮದುವೆಯಾಗಿ ಮುಂಬೈಗೆ ಹೋದ ನಂತರ ಗಂಡ ಅವಳನ್ನು ಮನೆಯೊಳಗೆ ಕೂಡಿ ಹಾಕಿದಾಗ ಅವಳು ಹೇಗೋ ತಪ್ಪಿಸಿಕೊಂಡು ಬಂದು ಸ್ವತಂತ್ರಳಾಗುವುದು (ಗೂಡು ತೊರೆದ ಹಕ್ಕಿ), ಬುದ್ದಿವಂತ ಹುಡುಗಿಯ ಬಗ್ಗೆ ಹೊಟ್ಟೆಕಿಚ್ಚಾಗಿ ಕಡಿಮೆ ಕಲಿತ ಒಬ್ಬ ಅಯೋಗ್ಯನೊಂದಿಗೆ ಅವಳ ಮದುವೆ ಮಾಡಿಸುವ ಸೋದರಮಾವನ ಕುತಂತ್ರಕ್ಕೆ ಬಲಿಯಾದ ಹೆಣ್ಣು ಸಾಧ್ಯವಾದಷ್ಟೂ ಗಂಡನಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ ವಿಫಲಳಾದಾಗ ಅವನನ್ನು ಬಿಟ್ಟು ಬಂದು ಸ್ವತಂತ್ರ ಬದುಕು ಕಟ್ಟಿಕೊಳ್ಳುವುದು (ಗೂಡಿನಿಂದ ಬಾನಿಗೆ)- ಇವು ಮತ್ತು ಇನ್ನೂ ಕೆಲವು ಕಥೆಗಳು ಹೆಣ್ಣು ತನ್ನ ಜೀವನವನ್ನು ಸಫಲ ಮಾಡಿಕೊಳ್ಲುವ ಪ್ರಯತ್ನದ ಬಗ್ಗೆ ಇವೆ.
ಮಕ್ಕಳು ಕೃತಘ್ನರಾಗಿ ವೃದ್ಧರಾದ ತಾಯಿ ತಂದೆಯರನ್ನು ಕಡೆಗಣಿಸುವುದರ ಕುರಿತು ಇಲ್ಲಿ ಎರಡು ಕಥೆಗಳಿವೆ. ‘ಅಂತರಾಳ’ಎಂಬ ಕಥೆಯಲ್ಲಿ, ದೂರದ ಮುಂಬೈನಲ್ಲಿದ್ದ ಮಗನು ಅಮ್ಮನಿಗೆ ಹುಷಾರಿಲ್ಲವೆಂದು ಗಡಬಡಿಸಿ ಊರಿಗೆ ಬಂದಾಗ, ಅವನಿಗೆ ಗೊತ್ತಾಗುವುದು ಅಮ್ಮನ ಬಿ.ಪಿ.ಹೆಚ್ಚಾಗಲು ಕಾರಣ ಮಕ್ಕಳಾದ ತಾವು ತಮ್ಮ ದೊಡ್ಡಸ್ತಿಕೆಗೆ ಕುಂದು ಬರುವುದೆಂದು, ತಾಯಿಯನ್ನು ಆಕೆಯ ಇಷ್ಟ ಬಂದ ರೀತಿಯಲ್ಲಿ ಇರದಂತೆ ತಡೆದದ್ದು, ಹೊರಗೆ ಹೋಗಲು ಬಿಡದೆ ಮನೆಯಲ್ಲೇ ಇರುವಂತೆ ಮಾಡಿದ್ದು ಎಂದು. ‘ನಾ ಮಾಡಿದ ಕರ್ಮ ಬಲವಂತವಾದರೆ’ ಎಂಬ ಕತೆಯೂ ಹೆತ್ತವರನ್ನು ವೃದ್ಧಾಶ್ರಮದಲ್ಲಿ ಹಾಕುವ ಕುರಿತಾಗಿದೆ. ಹಾಗೆಯೇ ವೃದ್ಧರ ನಾಜೂಕು ಮನಸ್ಥಿತಿಯನ್ನು ಚಿತ್ರಿಸುವ ಕಥೆಗಳೂ ಇವೆ. ಹೆಂಡತಿಯನ್ನು ಅಪಾರವಾಗಿ ಪ್ರೀತಿಸಿದ, ಆದರೆ ಅವಳನ್ನು ಎಳೆಯ ಪ್ರಾಯದಲ್ಲೇ ಕಳೆದುಕೊಂಡ ಒಬ್ಬ ವ್ಯಕ್ತಿ ಅವಳು ನೆಟ್ಟ ಜಾಜಿ ಮಲ್ಲಿಗೆ, ಪಾರಿಜಾತ ಮೊದಲಾದ ಹೂಗಿಡಗಳಿರುವ ಚೆಂದದ ಮನೆಯಲ್ಲಿ ಅವಳಿಲ್ಲದೆ ಇರಲಾಗದೆ ಅದನ್ನು ಬೇರೆಯವರಿಗೆ ಮಾರಿ ಅಪರೂಪಕ್ಕೊಮ್ಮೆ ಆ ವಾತಾವರಣದಲ್ಲಿ ಕಳೆಯಲೆಂದು ಬರುತ್ತಿರುತ್ತಾನೆ.(ಅವಳು). ಇನ್ನೊಂದು ಕಥೆಯಲ್ಲಿ ಪ್ರಕೃತಿ ಪ್ರೇಮಿಯಾದ ಕಥಾನಾಯಕ ಮನೆಯ ಸುತ್ತಲನ್ನು ಹಸಿರಾಗಿಸಿದ್ದ ಅಜ್ಜಯ್ಯನ ನೆನಪಿನಲ್ಲಿದ್ದಾಗ ತಮ್ಮ ಮೊಮ್ಮಗನನ್ನು ಕಳೆದುಕೊಂಡು ದುಃಖಿತರಾದ ಪಕ್ಕದ ಮನೆಯ ವೃದ್ಧರೊಬ್ಬರು ಬಂದು ಮಾತನಾಡಿ ಅವನಲ್ಲಿ ತಮ್ಮ ಮೊಮ್ಮಗನನ್ನು ಕಾಣುತ್ತಾರೆ. ಅವರ ನಡುವೆ ಒಂದು ವಿಶಿಷ್ಟ ಸಂಬಂಧ ಏರ್ಪಡುತ್ತದೆ.(ಹೊಸಬೆಳಕು).
ಒಂದು ವಿವಾಹೇತರ ಸಂಬಂಧದ ಕುರಿತಾದ ಕಥೆಯ ಅಂತ್ಯ ಆಸಕ್ತಿಕರವಾಗಿದೆ. ಕಥಾನಾಯಕ ಒಬ್ಬ ಸಾಹಿತಿ. ಅವನ ಅಭಿಮಾನಿಯೊಬ್ಬಳು ಅವನ ಬಗ್ಗೆ ಸದಾ ಮೆಚ್ಚುಗೆಯ ಮಾತನಾಡಿದಾಗ ಅವಳಿಗೆ ತನ್ನಲ್ಲಿ ಪ್ರೇಮಾಂಕುರವಾಗಿದೆ ಎಂದು ತಿಳಿದು ಅವನು ಕನಸು ಕಾಣುತ್ತಾನೆ. ಅವಳು ಒಂಟಿಯಾಗಿ ಸಿಕ್ಕಾಗ ಅವಳನ್ನು ಅಪ್ಪಿಕೊಳ್ಳಲು ಹೋಗುತ್ತಾನೆ. ಅಷ್ಟರಲ್ಲಿ ಅವಳ ಗಂಡ ಅಲ್ಲಿಗೆ ಬಂದಾಗ ಅವಳು ಅವನನ್ನು ಬೈದು ಬಿಡುತ್ತಾಳೆ. ಆಗ ಅವನಿಗೆ ನಿದ್ರೆಯಿಂದ ಎಚ್ಚರವಾಗುತ್ತದೆ.(ಸರಿದ ಮಾಯೆ).
ನಮ್ಮ ಸುತ್ತಮುತ್ತ ಕಾಣುವ ಇಂಥ ಹಲವಾರು ವಿಷಯಗಳು ಸುಮನಾ ಅವರ ಕತೆಗಳಿಗೆ ವಸ್ತುಗಳಾಗಿವೆ. ಆ ವಸ್ತುಗಳನ್ನು ಅವರು ಬಳಸುವ ರೀತಿ ಮತ್ತು ಕಥೆಗಳು ಸಾಗುವ ಹಾದಿಗಳು ಚೇತೋಹಾರಿಯಾಗಿವೆ. ನಡುನಡುವೆ ಸಾಂದರ್ಭಿಕವಾಗಿ ಅವರು ಮಾಡುವ ಪ್ರಕೃತಿಯ ವರ್ಣನೆ, ಬಳಸುವ ಅಲಂಕಾರಗಳು, ಗಾದೆ ಮಾತುಗಳ ಪ್ರಯೋಗಗಳು ಕಥೆಗಳ ಸೊಗಸನ್ನು ಇನ್ನಷ್ಟು ಹೆಚ್ಚಿಸಿವೆ.
ಸುಮನಾ ಅವರ ಕಥೆಗಳಲ್ಲಿ ಮನುಷ್ಯ ಸಂಬಂಧಗಳ ಬಗೆಗಿನ ಕಾಳಜಿಯಿದೆ. ಸಮಾಜದ ಓರೆಕೋರೆಗಳು ಸರಿಯಾಗಬೇಕೆಂದು ಬಯಸುವ ಸಮಾಜಮುಖಿ ಚಿಂತನೆಯಿದೆ.. ಮದುವೆ, ಕುಟುಂಬ, ದಾಂಪತ್ಯಗಳಲ್ಲಿ ಸಾಮರಸ್ಯವಿರಬೇಕೆಂಬ ಆಗ್ರಹವಿದೆ.ಇಂಥ ಚಿಂತನೆಗಳಿಗೆ ಅನುಗುಣವಾಗಿ ಅವರು ಸಂಬಂಧಗಳ ಮುಕ್ತತೆಗೆ ಅಡ್ಡ ಬರುವ ಬೇಲಿಗಳು ಮುರಿದು ಹೋಗಲಿ ಎಂದು ಆಶಿಸುತ್ತಾರೆ.
ಬರವಣಿಗೆ ಅನ್ನುವುದು ಒಂದು ಕಲೆ. ಒಂದು ದೈವದತ್ತ ವರ. ಸುಮನಾ ಅವರಿಗೆ ಈ ಕಲೆ ಚೆನ್ನಾಗಿ ಸಿದ್ದಿಸಿದೆ. ಈ ಹಿಂದೆ ಅವರು ಬರೆದ ಘಜಲ್ ಸಂಕಲನ, ಮುಕ್ತಕಗಳ ಸಂಕಲನ, ಚೌಪದಿಯಲ್ಲಿ ಬರೆದ ‘ ಗುರು ನರಸಿಹ ಕಾವ್ಯಧಾರೆ’ ಮೊದಲಾದ ಕೃತಿಗಳಲ್ಲಿ ಛಂದೋಬದ್ಧವಾಗಿ ಬರೆಯುವ ತಮ್ಮ ಪ್ರತಿಭೆಯನ್ನು ಪ್ರಕಟಪಡಿಸಿದ್ದಾರೆ. ಗದ್ಯದಲ್ಲೂ ತಾನು ಆಕರ್ಷಕವಾಗಿ ಬರೆಯಬಲ್ಲೆ ಎಂಬುದನ್ನು ತಮ್ಮ ಈ ಕಥಾಸಂಕಲನದಲ್ಲಿ ಸಾಬೀತು ಪಡಿಸಿದ್ದಾರೆ. ಹೇಳಬೇಕು ಅನ್ನಿಸಿದ್ದನ್ನು ಅನಾಯಾಸ ವಾಗಿ ಮತ್ತು ಅಚ್ಚುಕಟ್ಟಾಗಿ ವ್ಯಾಕರಣಶುದ್ದಿಯೊಂದಿಗೆ
ಬರೆಯುವ ಪ್ರತಿಭೆ ಅವರಲ್ಲಿದೆ. ಅವರ ಸರಳವಾದ ಕಥನ ಶೈಲಿ ಮತ್ತು ಅನಗತ್ಯ ವಿವರಣೆಗಳಿಲ್ಲದ ಬಿಗಿಯಾದ ರಚನಾಬಂಧಗಳು ಓದುಗರಿಗೆ ಮುದನೀಡುತ್ತವೆ.

