ಉಡುಪಿ : ಸಾವರ್ಕರ್ ಪ್ರತಿಷ್ಠಾನ ಮೈಸೂರು ಅರ್ಪಿಸುವ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಜೀವನಾಧಾರಿತ ಕನ್ನಡ ನಾಟಕ “ಕರಿನೀರ ವೀರ” ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ನಾಟಕವನ್ನು ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪರವರು ರಚಿಸಿ ನಿರ್ದೇಶಿಸಿದ್ದಾರೆ.
ಇದೇ ನವೆಂಬರ್ 28 ರಂದು ಉಡುಪಿಯ ಪೂರ್ಣ ಪ್ರಜ್ಞಾ ಸಭಾಂಗಣದಲ್ಲಿ ಸಂಜೆ 6ಕ್ಕೆ ಪ್ರದರ್ಶನ ನಡೆಯಲಿದೆ. ನಾಟಕವು ಈಗಾಗಲೇ ರಾಜ್ಯದ ಹಲವು ನಗರಗಳಲ್ಲಿ ಒಟ್ಟು 10 ಕ್ಕೂ ಅಧಿಕ ಯಶಸ್ವಿ ಪ್ರದರ್ಶನ ಕಂಡಿದ್ದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ನಾಟಕವು ರಾಜ್ಯಾದ್ಯಂತ 100 ಕ್ಕೂ ಹೆಚ್ಚು ಪ್ರದರ್ಶನ ಏರ್ಪಡಿಸುವ ಗುರಿಯನ್ನು ಸಾವರ್ಕರ್ ಪ್ರತಿಷ್ಠಾನ ಹೊಂದಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ ಕಷ್ಟದ ಹಾದಿ ಹಿಡಿದು ಅತಿ ಕಠಿಣ ಶಿಕ್ಷೆ ಅನುಭವಿಸಿದ ಮಹಾನ್ ವ್ಯಕ್ತಿ, ಅವರ ಸಹೋದರರು ಹಾಗೂ ಮಡದಿ, ಅತ್ತಿಗೆ ಸೇರಿ ಕುಟುಂಬವೇ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಸವೆಸಿದವರು. ಅಂಥವರ ಬಗ್ಗೆ ರಾಜಕೀಯ ದುರುದ್ದೇಶದಿಂದ, ಪೂರ್ವಗ್ರಹ ಪೀಡಿತರಾಗಿ ಮಾತನಾಡುವ ಜನರು ಸಾವರ್ಕರ್ ಏನು ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಘನ ಉದ್ದೇಶವನ್ನು ಪ್ರತಿಷ್ಠಾನ ಹೊಂದಿದೆ.