Home » ವಿಜಯದಶಮಿ -ನಾಯಕತ್ವ, ಸತ್ಯ, ಧರ್ಮ ಮತ್ತು ಸೀಮೋಲ್ಲಂಘನ
 

ವಿಜಯದಶಮಿ -ನಾಯಕತ್ವ, ಸತ್ಯ, ಧರ್ಮ ಮತ್ತು ಸೀಮೋಲ್ಲಂಘನ

by Kundapur Xpress
Spread the love

ದಶ ದಿನಗಳ ದಸರಾ ಉತ್ಸವದ ಕೊನೆಗೆ ಬರುವ ವಿಜಯದಶಮಿ, “ಧರ್ಮದ ಜಯ – ಅಧರ್ಮದ ನಾಶ” ಎಂಬ ಶಾಶ್ವತ ಸಂದೇಶವನ್ನು ನೀಡುತ್ತದೆ. ರಾವಣನ ಅಹಂಕಾರ, ದುರುಳತನ, ದುರಾಶೆಗಳನ್ನು ಸೋಲಿಸಿ, ರಾಮನು ಸಾಧಿಸಿದ ಧರ್ಮಯುದ್ಧವನ್ನು ಈ ದಿನ ಸ್ಮರಿಸುತ್ತೇವೆ.
ದುರ್ಗುಣಗಳ ವಿರುದ್ಧ ಸದ್ಗುಣಗಳ ಜಯ, ಕತ್ತಲಿನ ವಿರುದ್ಧ ಬೆಳಕಿನ ಸಮರ, ಅಧರ್ಮದ ವಿರುದ್ಧ ಧರ್ಮದ ಜಯಭೇರಿಯನ್ನು ಸಾರುವ ದಸರಾ ಒಂದರ್ಥದಲ್ಲಿ ಸೀಮೋಲ್ಲಂಘನವೇ. ದೇವತೆಗಳ ಪ್ರಾರ್ಥನೆಯಂತೆ ದುಷ್ಟ ಸಂಹಾರಕ್ಕಾಗಿ ತ್ರಿಮೂರ್ತಿಗಳ ಮತ್ತು ಇಂದ್ರಾದಿದೇವತೆಗಳ ಶಕ್ತಿಯನ್ನೆಲ್ಲಾ ತನ್ನಲ್ಲಿ ಆವೀರ್ಭವಿಸಿಕೊಂಡು ಅಷ್ಟಭುಜೆಯಾಗಿ ಚಕ್ರ, ಗದೆ, ತ್ರಿಶೂಲ, ವಜ್ರಾಯುಧಗಳೇ ಮೊದಲಾದ ಸಮಸ್ತ ಆಯುಧಪಾಣಿಯಾಗಿ ಭುವಿಯಲ್ಲಿ ಅವತರಿಸಿದ ಮಹಾದೇವಿಯ ಆರಾಧನೆಯೇ ನವರಾತ್ರಿ ಮತ್ತು ವಿಜಯದಶಮಿ.
ವಿಜಯದಶಮಿಯ ಒಂದು ಮುಖ್ಯ ಆಚರಣೆ ಎಂದರೆ ಸೀಮೋಲ್ಲಂಘನ ಇದರಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಹಳ್ಳಿಯ ಗಡಿಯನ್ನು ದಾಟಿ ಹೊಲಗಳಲ್ಲಿ ಸುತ್ತಾಡಿ, ಮರಗಳ ಎಲೆಗಳನ್ನು (ಮರದ ಚಿನ್ನ ಎಂದು ಕರೆಯುವ ಅಪರಂಜಿ ಎಲೆ) ಪರಸ್ಪರ ಹಂಚಿಕೊಳ್ಳುತ್ತಾರೆ.
ಪಾಂಡವರು ಅರಣ್ಯವಾಸಕ್ಕೆ ಹೋಗುವ ಮೊದಲು ತಮ್ಮ ಶಸ್ತ್ರಾಸ್ತ್ರಗಳನ್ನು ಅಪ್ತ ಮರದ ಬಳಿ ಅಡಗಿಸಿ ಇಟ್ಟಿದ್ದರು.

13 ವರ್ಷಗಳ ಬಳಿಕ ಹಿಂದಿರುಗಿ ಬಂದಾಗ ಅದೇ ಮರದ ಬಳಿ ಶಸ್ತ್ರಾಸ್ತ್ರಗಳನ್ನು ಪಾವಿತ್ರ್ಯದಿಂದ ಪಡೆದು ವಿಜಯ ಸಾಧಿಸಿದರು.

ಆ ದಿನವೇ ವಿಜಯದಶಮಿ; ಆದ್ದರಿಂದ ಆ ಮರವನ್ನು ಅಪರಂಜಿ/ಅಪ್ತ ಮರ ಎಂದು ಪೂಜಿಸಿ, ಎಲೆಗಳನ್ನು ಚಿನ್ನವೆಂದು ಹಂಚುವ ಆಚರಣೆ ಪ್ರಾರಂಭವಾಯಿತು.

ಸೀಮೋಲ್ಲಂಘನದ ಸುಂದರ ಸಂದೇಶ
ಗಡಿ ದಾಟುವುದು ಅಂದರೆ – ಅಜ್ಞಾನ, ಹೆದರಿಕೆ, ಬಡತನ, ಸಣ್ಣತನದ ಗಡಿಗಳನ್ನು ದಾಟಿ, ಹೊಸ ಬೆಳಕನ್ನು ಕಂಡುಕೊಳ್ಳುವುದು.

ಅಪರಂಜಿ ಎಲೆ ಹಂಚಿಕೊಳ್ಳುವುದು ಅಂದರೆ – ಸಂಪತ್ತು ಹಂಚಿದಷ್ಟೂ ಹೆಚ್ಚುತ್ತದೆ, ದಾನ ಮಾಡಿದಷ್ಟೂ ಮನಸ್ಸು ಶ್ರೀಮಂತವಾಗುತ್ತದೆ.

ಜೀವನ ಪಾಠ 

ವಿಜಯದಶಮಿ ನಮಗೆ ಹೇಳುವ ಪಾಠ ಸ್ಪಷ್ಟ: ಜ್ಞಾನದಿಂದ ಅಜ್ಞಾನವನ್ನು ಗೆಲ್ಲೋಣ ಧೈರ್ಯದಿಂದ ಭಯವನ್ನು ಗೆಲ್ಲೋಣ ಸತ್ಯದಿಂದ ಸುಳ್ಳನ್ನು ಗೆಲ್ಲೋಣ ಸಹಕಾರದಿಂದ ಅಸಹಕಾರವನ್ನು ಗೆಲ್ಲೋಣ

ಇಂದಿನ ಕಾಲದಲ್ಲಿ ನಿಜವಾದ ಸೀಮೋಲ್ಲಂಘನ ಎಂದರೆ,ಅಹಂಕಾರದ ಗಡಿಯನ್ನು ದಾಟಿ ವಿನಯವನ್ನು ಅರಿಯುವುದು,
ಸ್ವಾರ್ಥದ ಗಡಿಯನ್ನು ದಾಟಿ ಪರಹಿತವನ್ನು ನೋಡುವುದು, ಅಸಮಾಧಾನದ ಗಡಿಯನ್ನು ದಾಟಿ ಕೃತಜ್ಞತೆಯನ್ನು ಅನುಭವಿಸುವುದು.

ಸೀಮೋಲ್ಲಂಘನ ಎಂದರೆ ಕೇವಲ ಗಡಿ ದಾಟುವ ಸಂಪ್ರದಾಯವಲ್ಲ; ಅದು ಮನಸ್ಸಿನ ಬಂಧನಗಳನ್ನು ಮುರಿದು, ಬೆಳಕಿನ ದಾರಿಯಲ್ಲಿ ಹೆಜ್ಜೆ ಇಡುವ ಪ್ರತಿಜ್ಞೆ. ಹತ್ತುಸಾವಿರ ವರ್ಷಗಳ ಪೂರ್ವದಲ್ಲಿ ಸೀತಾನ್ವೇಷಣಕ್ಕಾಗಿ ಸಮುದ್ರ ಮಾರ್ಗದಲ್ಲಿ ಲಂಘಿಸುತ್ತಾ ಸಾಗಿದ ಹನೂಮಂತ. ಜಾಂಬವಂತನ ಪ್ರೇರಣೆ, ಪ್ರೋತ್ಸಾಹ ಹನೂಮಂತನ ಬೆಳವಣಿಗೆಗೆ ಕಾರಣವಾಯಿತು. ಸಮುದ್ರವನ್ನು ತನಗೆ ದಾಟಲು ಸಾಧ್ಯ ಎಂದು ಹನೂಮಂತನಿಗೆ ತಿಳಿದೇ ಇರಲಿಲ್ಲ. ಅವನ ಅಜ್ಞಾನ ನಿವಾರಣೆ ಆದುದು, ವಿಕಲ್ಪ ದೂರವಾದುದು ಜಾಂಬವಂತನಿಂದಲೆ. ಅಷ್ಟರಮಟ್ಟಿಗೆ ಹನೂಮಂತ ಸೀಮೋಲ್ಲಂಘನೆ ಮಾಡಿ ಲಂಕೆಗೆ ಸೇರಿದ. ಶ್ರೀರಾಮ ಸೀತಾಮಾತೆಯನ್ನು ಬಂಧ ವಿಮುಕ್ತಗೊಳಿಸಿದ್ದು ರಾವಣನ ವಧೆಯ ಮೂಲಕ. ಅಂದೇ ವಿಜಯ ದಶಮಿ.

ಈ ದಿನ ಮೂವರು ಮೇರು ವ್ಯಕ್ತಿಗಳಾದ ಶ್ರೀಮಧ್ವಾಚಾರ್ಯರು, ಮೋಹನದಾಸ ಕರಮಚಂದ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮದಿನ. ಅವರೆಲ್ಲರೂ ಹೇಗೆ ಸೀಮೋಲ್ಲಂಘನ ಮಾಡಿದರೆಂದು ನೋಡೋಣ.

“ಹರಿ ಸರ್ವೋತ್ತಮ, ವಾಯು ಜೀವೋತ್ತಮ” ಎಂದು ಸಮಾಜಮುಖಕ್ಕೆ ಸಾರಿ ಹೇಳಿದ, ದ್ವೈತ ಸಿದ್ಧಾಂತ ಪ್ರತಿಪಾದಕ ಶ್ರೀಮಧ್ವಾಚಾರ್ಯರು ಸಾಮಾಜಿಕ ಚಿಂತನೆಯಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಸೀಮೋಲ್ಲಂಘನ ಮಾಡಿದವರು. ನಮ್ಮ ರಾಜ್ಯದಲ್ಲಿ ಜನಿಸಿ ಕನ್ನಡದಲ್ಲಿ ದಾಸ ಸಾಹಿತ್ಯಕ್ಕೆ ಕೊಡುಗೆ ನೀಡಿದ ಹೆಗ್ಗಳಿಗೆ ಅವರಿಗೆ ಸಲ್ಲುತ್ತದೆ. ಮನುಕುಲದ ಒಳಿತಿಗಾಗಿ, ಸಜ್ಜನರ ಉದ್ಧಾರಕ್ಕಾಗಿ ತಮ್ಮದೇ ಆದ ಸಿದ್ಧಾಂತವನ್ನು ಪ್ರಚುರ ಪಡಿಸಿದ ಮಹಾನುಭಾವರಲ್ಲಿ ಶ್ರೀಮಧ್ವಾಚಾರ್ಯರು ಒಬ್ಬರು.

ಗಾಂಧೀಜಿಯವರ ದಕ್ಷಿಣ ಆಫ್ರಿಕಾದ ಪ್ರಯಾಣದ ವೇಳೆ ಒಬ್ಬ ಬಿಳಿಯನಿಂದ ಆದ ಅವಮಾನ ಅವರಿಗೆ ಕರಿಜನಾಂಗದ ಪರವಾಗಿ ಹೋರಾಟ ನಡೆಸಲು ಪ್ರೇರಣೆಯಾಯಿತು. ಕುದುರೆ ಗಾಡಿ, ಹೋಟೆಲ್ ಗಳಲ್ಲಿ ಅವಮಾನ, ಡರ್ಬಾನಿನ ನ್ಯಾಯಲಯದಲ್ಲಿ ಪೇಟ ತೆಗೆಯುವಂತೆ ಒತ್ತಾಯಿಸಿ ಅವಮಾನ ಮುಂತಾದ ಘಟನೆಗಳು ಅವರಿಗೆ ಪಂಥಾಹ್ವಾನ ಒಡ್ಡಿದವೇ ವಿನಃ ಜೀವನಸ್ಫೂರ್ತಿಯನ್ನು ಕುಗ್ಗಿಸಲಿಲ್ಲ.
ಭಾರತಕ್ಕೆ ಬಂದು ಸರಳ ಜೀವನ, ಉನ್ನತ ಚಿಂತನೆ, ಸತ್ಯ, ಶಾಂತಿ, ಅಹಿಂಸೆಯ ಸಿದ್ಧಾಂತಗಳ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ ಸಮಾಜ ಸುಧಾರಣೆ ಮಾಡಿದ್ದು ಕೂಡಾ ಸೀಮೋಲ್ಲಂಘನವೇ.

ಭಾರತದ ಎರಡನೇ ಪ್ರಧಾನಿಯಾಗಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಮಹಾನ್ ವ್ಯಕ್ತಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮದಿನ ಕೂಡ ಅಕ್ಟೋಬರ್ 2. ಭಾರತಕ್ಕೆ ಐತಿಹಾಸಿಕ ದಿನ. ಶಾಸ್ತ್ರೀಜಿಯವರ ಜೀವನ ಇಡೀ ದೇಶಕ್ಕೆ ಮಾದರಿಯಾಗಿದೆ. “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎನ್ನುವ ಗಾದೆಮಾತಿಗೆ ಅನ್ವರ್ಥನಾಮ ಇವರು. ದೇಶಕ್ಕಾಗಿ ಸರಳ ಜೀವನ, ಉನ್ನತ ವಿಚಾರಗಳ ಮೂಲಕ ಇಂದಿಗೂ ಅಜರಾಮರರಾಗಿರುವ ಧೀಮಂತ ವ್ಯಕ್ತಿ.
ಒಬ್ಬ ಶಾಲಾ ಮಾಸ್ತರರ ಮಗನಾಗಿ ಕಾಶೀ ವಿದ್ಯಾಪೀಠದಲ್ಲಿ ಸಂಸ್ಕೃತ ಕಲಿಯುವಾಗ ಅವರಿಗೆ “ಶಾಸ್ತ್ರೀ” ಎನ್ನುವ ಬಿರುದು ನೀಡಿ ಪುರಸ್ಕರಿಸಲಾಯಿತು.
“ಜೈ ಜವಾನ್ ಜೈ ಕಿಸಾನ್” ಘೋಷಣೆಯ ಮೂಲಕ ದೇಶದ ಎರಡು ಬೆನ್ನೆಲುಬುಗಳಿಗೆ ಮಹತ್ತ್ವ ನೀಡಿದ ಶ್ರೇಷ್ಠ ಪುರುಷ. ಸಾರ್ವಜನಿಕ ಜೀವನದಲ್ಲಿ ಸಚ್ಚಾರಿತ್ರ, ಪಾರದರ್ಶಕತೆ, ಸರಳತೆ, ದಿಟ್ಟ, ನೇರ ನಿಲುವಿಗೆ ಸಾಕ್ಷೀಭೂತರಾಗಿ ಬದುಕಿದವರು. ಇವರು ರೈಲ್ವೇ ಮಂತ್ರಿಯಾಗಿದ್ದಾಗ ಆದ ರೈಲ್ವೇ ಅಪಘಾತಕ್ಕೆ, ತಾವು ಜವಾಬ್ದಾರಿ ಎಂದು ರಾಜಿನಾಮೆಯನ್ನು ನೀಡಿದರು. ಇದು ಜನಸಾಮಾನ್ಯರಲ್ಲಿ ಮತ್ತು ಸಂಸತ್ತಿನಲ್ಲಿ ಅವರ ಬಗೆಗೆ ಗೌರವವನ್ನು ಹೆಚ್ಚಿಸಿತು. ದೇಶಾದ್ಯಂತ ಆಹಾರದ ಕೊರತೆ ಇದ್ದಾಗ ಅವರು ಸ್ವಯಂ ಪ್ರೇರಿತರಾಗಿ ಪ್ರತಿ ಸೋಮವಾರ ರಾತ್ರಿ ಉಪವಾಸವನ್ನು ಮಾಡಿದರು. ದೇಶವಾಸಿಗಳಲ್ಲಿಯೂ ಕೂಡ ವಾರಕ್ಕೆ ಒಂದು ದಿನ ಉಪವಾಸ ಮಾಡುವಂತೆ ವಿನಂತಿಸಿಕೊಂಡರು. ಅವರ ಮನವಿಗೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಧಿಕಾರದಾಹಿ ನಾಯಕರ ಮೇಲಾಟದಲ್ಲಿ ಮರೆಯಾದ ಅನನ್ಯಚೇತನ ಶಾಸ್ತ್ರೀಜಿಯವರು. ಅವರಂತಹ ನಿಸ್ವಾರ್ಥ, ಧೀಮಂತ, ಶ್ರೇಷ್ಠ ವ್ಯಕ್ತಿತ್ವವನ್ನು ದೇಶ ಮತ್ತೆ ಕಾಣಲೇ ಇಲ್ಲ.

ಹೀಗೆ ಎಲ್ಲ ಶ್ರೇಷ್ಠ ಸಾಧಕರ ಜೀವನಪ್ರೀತಿ, ಧ್ಯೇಯ ನಿಷ್ಠೆ, ಸಾಧನೆಯ ವಿಧಿವಿಧಾನಗಳು ಅವರಲ್ಲಿನ ಮಹತ್ತನ್ನೇ ಬೆಳಕಿಗೆ ತರುತ್ತವೆ. ಅವರಲ್ಲಿ ಇರುವ ಕ್ಷುಲ್ಲಕತನ ಹೇಳಹೆಸರಿಲ್ಲದಾಗಿ, ಸಾಮರ್ಥ್ಯ ಪ್ರಕಾಶಕ್ಕೆ ಬರುತ್ತದೆ. ನಮ್ಮ ಬದುಕಿಗೂ ಇದು ಮಾದರಿ. ನಮ್ಮೆಲ್ಲರ ಜೀವನದುದ್ದಕ್ಕೂ ಇಂತಹ ಸೀಮೋಲ್ಲಂಘನ ಏರ್ಪಡಲಿ.
“ಪ್ರತಿ ವಿಜಯದಶಮಿಯೂ ನಮ್ಮೊಳಗಿನ ರಾಮನನ್ನು ಜಾಗೃತಗೊಳಿಸಲಿ,
ಪ್ರತಿ ಸೀಮೋಲ್ಲಂಘನವೂ ನಮ್ಮ ಜೀವನಕ್ಕೆ ಹೊಸ ಗಡಿ ದಾಟುವ ಧೈರ್ಯ ನೀಡಲಿ.”
ಜೀವನದಲ್ಲಿ ಎದುರಾಗುವ ಪ್ರತಿಯೊಂದು ರಾವಣ
ಅದು ಕೋಪವಾಗಿರಲಿ, ದುಃಖವಾಗಿರಲಿ, ಅಸಹನೆ ಆಗಿರಲಿ –ಇವನ್ನೆಲ್ಲಾ ಸೋಲಿಸಿ, ನಮ್ಮೊಳಗಿನ ರಾಮನ ಧೈರ್ಯ, ಸತ್ಯ, ಕರುಣೆ ಎದ್ದು ಬರುವ ವಿಜಯದಶಮಿ ಹಬ್ಬದ ಬೆಳಕು ನಿಮ್ಮ ಮನದ ಮಬ್ಬುಗಳನ್ನು ಕಳೆದು ಪ್ರೀತಿ, ಸಮಾಧಾನ, ಆಶಾಕಿರಣಗಳಿಂದ ನಿಮ್ಮ ಬದುಕು ತುಂಬಿ ಹರಿಯಲಿ.

 “ಸರ್ವೇ ಜನಾ ಸುಖಿನೋ ಭವಂತು”

ಸ್ವರ್ಣ ಕುಂದಾಪುರ,ಆಪ್ತಸಮಾಲೇಚಕಿ

 

Related Articles

error: Content is protected !!