Home » “ವಿಶ್ವ ಜನಸಂಖ್ಯಾ ದಿನಾಚರಂಣೆ”
 

“ವಿಶ್ವ ಜನಸಂಖ್ಯಾ ದಿನಾಚರಂಣೆ”

by Kundapur Xpress
Spread the love

ವರ್ತಮಾನದಲ್ಲಿ ವಿಶ್ವದೆಲ್ಲೆಡೆ ಹೆಚ್ಚುತ್ತಿರುವ ಸಮಸ್ಯೆಗಳ ಪೈಕಿ ಜನಸಂಖ್ಯಾ ಹೆಚ್ಚಳ ಒಂದು ಪ್ರಮುಖ ಸಮಸ್ಯೆಯಾಗಿದೆ. ನಿಯಂತ್ರಣವಿಲ್ಲದ ಜನಸಂಖ್ಯೆ ಯಾವುದೇ ರಾಷ್ಟ್ರದ ಆರ್ಥಿಕತೆ, ಪರಿಸರ ಹಾಗೂ ಸಮಾಜದ ಮೇಲೆಯೂ ಭಾರೀ ಒತ್ತಡವನ್ನು ಸೃಷ್ಟಿಸುತ್ತದೆ.

ಪ್ರತಿ ವರ್ಷ ಜುಲೈ 11ನ್ನು ವಿಶ್ವ ಜನಸಂಖ್ಯಾ ದಿನವೆಂದು ಆಚರಿಸುತ್ತಾ ಬರಲಾಗಿದೆ. ವಿಶ್ವದ ಜನಸಂಖ್ಯೆ 500 ಕೋಟಿ ದಾಟಿದ ದಿನ ಜುಲೈ 11. ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯಾ ದಿನ 2025 ಇದರ ಘೋಷಿತ ವಿಷಯ ; “ನ್ಯಾಯಯುತ ಮತ್ತು ಭರವಸೆಯ ಜಗತ್ತಿನಲ್ಲಿ ಯುವಜನರು ಬಯಸುವ ಕುಟುಂಬಗಳನ್ನು ರಚಿಸಲು ಸಬಲೀಕರಿಸುವುದು”. ಜಾಗತಿಕವಾಗಿ ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಜನಸಂಖ್ಯಾ ಹೆಚ್ಚಳವು ಕಾರಣವೆಂದು ಹೇಳಬಹುದು. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಅಭಿವೃದ್ಧಿ ಮಂಡಳಿಯು 1989 ರಲ್ಲಿ ಜುಲೈ 11 ನ್ನು ಜನಸಂಖ್ಯಾ ದಿನವೆಂದು ಘೋಷಿಸಿತು. 90ರ ದಶಕದಲ್ಲಿ ಜನಸಂಖ್ಯೆಯಲ್ಲಿ ಚೀನಾಕ್ಕಿಂತ ಬಹಳ ಹಿಂದಿದ್ದ ಭಾರತ ಈಗ 142.86 ಕೋಟಿ ಜನಸಂಖ್ಯೆ ಹೊಂದಿ, ವಿಶ್ವದ ಮೊದಲ ದೇಶವಾಗಿ ಹೊರಹೊಮ್ಮಿದೆ. ಆದರೆ ಇದನ್ನು ಸಕಾರಾತ್ಮಕವಾದ ಬೆಳವಣಿಗೆಯ ಮೂಲಕ ಸರ್ಕಾರ ಉಪಯೋಗಿಸಿದರೆ, ದೇಶದ ಅಭಿವೃದ್ಧಿ ನಾಗಾಲೋಟದಲ್ಲಿ ಸಾಗುವುದು ಖಂಡಿತ.

ಅತಿ ಹೆಚ್ಚು ಜನಸಂಖ್ಯೆ ಇರುವ ಐದು ದೇಶಗಳು ಯಾವುದೆಂದರೆ ಭಾರತ, ಚೀನಾ, ಅಮೇರಿಕಾ, ಇಂಡೋನೇಷ್ಯಾ ಹಾಗೂ ಪಾಕಿಸ್ತಾನ. ಈ ಜನಸಂಖ್ಯೆ ಹೆಚ್ಚಳಕ್ಕೆ ಮುಖ್ಯ ಕಾರಣ ಜನರ ಜೀವಿತಾವಧಿ ಹೆಚ್ಚಿರುವುದು, ಪೋಷಕಾಂಶಯುಕ್ತ ಆಹಾರ ಸೇವನೆ, ವೈದ್ಯಕೀಯ ಸೌಲಭ್ಯ. ಆದರೆ ಭಾರತದ ಜನಸಂಖ್ಯೆಯಲ್ಲಿ ಯುವಜನತೆಯ ಸಂಖ್ಯೆ ಶೇಕಡ 50ರಷ್ಟಿದೆ. ಜನಸಂಖ್ಯೆ ಎಷ್ಟಾದರೇನು…? ನಮ್ಮ ಭೂಮಿ ಪುಷ್ಪಕವಿಮಾನದಂತಿದೆ ಎಂದು ಸುಮ್ಮನಿರುವಂತಿಲ್ಲ. ಕಾರಣ, ಪ್ರತಿಯೊಬ್ಬರಿಗೆ ಇರಲಿಕ್ಕೆ ಎಷ್ಟು ಜಾಗ ಬೇಕು ಎಂಬ ನಿಟ್ಟಿನಲ್ಲಿ ಮಾತ್ರ ಭೂಮಿಯ ಜಾಗವನ್ನು ಪರಿಗಣಿಸುವಂತಿಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಆಹಾರ ಪೂರೈಸಲಿಕ್ಕೆ ಹಲವಾರು ಎಕರೆ ಫಲವತ್ತಾದ ಭೂಮಿ, ಶುದ್ಧ ಜಲ, ಜೊತೆಗೆ ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳಲು ಹಲವಾರು ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳುವ ಅಗತ್ಯತೆಗಳಿರುತ್ತವೆ. ಈ ಜನಸಂಖ್ಯೆಯ ಏರಿಕೆ ಬಹುತೇಕ ಬಡತನ, ಅಜ್ಞಾನ, ಮೌಢ್ಯತೆ ಇರುವ ಧಾರ್ಮಿಕ ಶ್ರದ್ಧೆ, ಅಪಕ್ವ ಚಾಪಲ್ಯತೆ ಮುಂತಾದವು ರಾರಾಜಿಸುವ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುವುದು. ಮುಂದುವರಿದ ದೇಶಗಳಲ್ಲಿ ನಡೆಯುತ್ತಿರುವ ಅಪಕ್ವ ಅಮಾನವೀಯ ಜನಸಂಖ್ಯಾ ನಿಯಂತ್ರಣ ಕ್ರಮಗಳು ಸರಿ ಎಂದು ಹೇಳುವಂತಿಲ್ಲ. ಯಾವುದೇ ಧರ್ಮ, ಜಾತಿ ಭೇದಗಳಿಲ್ಲದೇ ಹೆಚ್ಚು ಮಕ್ಕಳಾಗದಂತಹ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಜನಸಂಖ್ಯೆ ಹೆಚ್ಚಳವಾಗದಂತೆ ನಿಗಾ ವಹಿಸುತ್ತೇವೆ ಎಂಬ ಜವಾಬ್ದಾರಿ ಈ ಪ್ರಪಂಚದಲ್ಲಿನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕಿದೆ.

ಭಾರತವು ವಿಶ್ವದಲ್ಲಿ ಅತ್ಯಧಿಕ ದುಡಿಯುವ ವಯಸ್ಸಿನ ಜನಸಂಖ್ಯೆಯನ್ನು ಹೊಂದಿದ ದೇಶವಾಗಿದೆ. ಆದರೆ ಅದಕ್ಕೆ ತಕ್ಕಂತೆ ಉದ್ಯೋಗದ ಸೃಷ್ಟಿಯಾಗಬೇಕಿದೆ. ಈ ಜನಸಂಖ್ಯಾ ದಿನದ ಉದ್ದೇಶವೇನೆಂದರೆ ಜನಸಂಖ್ಯಾ ನಿಯಂತ್ರಣ ಮಾರ್ಗವನ್ನು ಅನುಸರಿಸಬೇಕಾಗಿರುವುದು.
* ಕುಟುಂಬ ನಿಯೋಜನೆ ಬಗ್ಗೆ ಜಾಗೃತಿ.
* ಶಿಕ್ಷಣ ಹೆಚ್ಚಿಸುವುದು, ವಿಶೇಷವಾಗಿ ಮಹಿಳೆಯರಿಗೆ.
* ಶಿಸ್ತಿನ ಕುಟುಂಬ ಯೋಜನೆ.
* ಸರ್ಕಾರದ ಕ್ರಮಗಳನ್ನು ಪಾಲಿಸುವುದು.

ನಮ್ಮ ಸರ್ಕಾರ ಕೈಗೆತ್ತಿಕೊಂಡ ಕ್ರಮಗಳು ಜನಸಂಖ್ಯಾ ನಿಯಂತ್ರಣಕ್ಕೆ ತುಂಬಾ ಪ್ರಯೋಜನವಾಗುವಂತದ್ದು.
ಅವುಗಳು ;
ಕುಟುಂಬ ಕಲ್ಯಾಣ ಯೋಜನೆ,
ಪ್ರಸೂತಿಸೇವೆ, ಸಂತಾನ ನಿಯಂತ್ರಣ ಸಾಧನಗಳ ಲಭ್ಯತೆ, ಮಹಿಳಾ ಸಬಲೀಕರಣ, ಆರೋಗ್ಯ, ಪೌಷ್ಟಿಕತೆಯ ಮೇಲ್ಕೊಡುಗೆ. ಸರ್ಕಾರವೇನೋ ಕೊಟ್ಟಿತು. ಆದರೆ ನಮ್ಮ ನಾಗರಿಕರ ಜವಾಬ್ದಾರಿ ಇದೆ. ಮೊದಲು ನಾನು ಬದಲಾಗುತ್ತೇನೆ ಎಂಬ ಭಾವನೆ ಪ್ರತಿಯೊಬ್ಬರಿಗೂ ಬರಬೇಕು. ನಂತರ ಕುಟುಂಬದ ಗುಣಮಟ್ಟದ ಜೀವನಕ್ಕೆ ಆದ್ಯತೆ, ಯುವಜನತೆಗೆ ಶಿಕ್ಷಣದ ಜೊತೆಗೆ ಜವಾಬ್ದಾರಿಯ ಜೀವನದ ಬೋಧನೆ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿ.

ಹಾಗಾದರೆ ಮಕ್ಕಳು ಎಷ್ಟಿರಬೇಕು ಎನ್ನುವುದು ಒಂದು ಮಾತು.
ಮೊದಲು 70/ 80ರ ದಶಕಗಳಲ್ಲಿ ಎರಡು ಬೇಕು ಮೂರು ಸಾಕು ಎಂದಿತ್ತು. ನಂತರ ಆರತಿಗೊಬ್ಬಳು ಕೀರ್ತಿಗೊಬ್ಬ ಎಂದಾಯಿತು. ನಂತರ ಅದು ಬೇಕೇ ಎನ್ನುವವರೆಗೆ ಹೋದದ್ದಾಯಿತು. ಕಾರಣವೂ ಇತ್ತು. ತಿನ್ನುವ ಊಟಕ್ಕೆ ಕೊರತೆಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ವಾರದಲ್ಲೊಂದು ದಿನ ಉಪವಾಸದ ಬಗ್ಗೆ ಹೇಳುವ ಹಂತಕ್ಕೆ ಹೋದಾಗ, ಅರ್ಥಶಾಸ್ತ್ರಜ್ಞರು ಇದಕ್ಕೆ ಕಾರಣ ಜನಸಂಖ್ಯೆ ಎಂದಿದ್ದರು. ಆದರೆ ಜನಸಂಖ್ಯಾ ನಿಯಂತ್ರಣಕ್ಕೆ ಜಾತಿಭೇದವಿಲ್ಲದೆ ಎಲ್ಲರೂ ಸ್ಪಂದಿಸುವ ಅಗತ್ಯವಿದೆ. ಧರ್ಮದ ಕಾರಣವಿಟ್ಟು ಜನಸಂಖ್ಯಾ ನಿಯಂತ್ರಣದ ವಿರುದ್ಧ ಹೋಗುವವರಿಗೆ ಕಠಿಣ ಶಿಕ್ಷೆಯಾಗಬೇಕು. ನಿಯಮ ಉಲ್ಲಂಘನೆ ಮಾಡಿದವರಿಗೆ ಸರ್ಕಾರಿ ಸೌಲಭ್ಯಗಳ ನಿರಾಕರಣೆ, ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸಹಾಯಧನ ಕಡಿತ, ಸ್ಥಾನೀಯ ಚುನಾವಣೆ ಸ್ಪರ್ಧೆಗೆ ನಿರ್ಬಂಧ, ಸರ್ಕಾರಿ ಉದ್ಯೋಗಕ್ಕೆ ಅವಕಾಶ ಕೊಡದಿರುವಿಕೆ ಹಾಗೆಯೇ ಎಲ್ಲಾ ಜನಾಂಗದವರಿಗೂ ಒಂದೇ ನೀತಿಯನ್ನು ತಂದರೆ ಜನಸಂಖ್ಯೆಯ ಹೆಚ್ಚಳವನ್ನು ನಿಯಂತ್ರಿಸಬಹುದು.

ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ 2030ರ ವೇಳೆಗೆ ವಿಶ್ವ ಜನಸಂಖ್ಯೆಯು 8.6 ಬಿಲಿಯನ್ ತಲುಪುವ ನಿರೀಕ್ಷೆ ಇದೆ. ಕಳೆದ 20 ವರ್ಷಗಳಲ್ಲಿ ಜನರ ಜೀವಿತಾವಧಿ ಅನಿರೀಕ್ಷಿತವಾಗಿ ಹೆಚ್ಚಾಗಿದೆ. ಇದರ ಬಗ್ಗೆ ಮಾಧ್ಯಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಪ್ರಸಾರವಾಗಬೇಕಿದೆ. ಆರೋಗ್ಯ ಶಿಬಿರಗಳು, ಕುಟುಂಬ ಯೋಜನಾ ಸಮಾವೇಶ, ಅಲ್ಲಲ್ಲಿ ಸಾರ್ವಜನಿಕ ಉಪನ್ಯಾಸ ಹಾಗು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನದ ಮೂಲಕ ಜಾಗೃತಿ ಇತ್ಯಾದಿಗಳನ್ನು ಮಾಡಬೇಕಿದೆ. ಹೀಗೆ ವಿಶ್ವ ಜನಸಂಖ್ಯಾ ದಿನ ಒಂದು ಸ್ಮರಣೆಯ ದಿನವಾಗಿದೆ. ಇದು ನಮ್ಮ ಭವಿಷ್ಯದ ಮೇಲೆ ಜನಸಂಖ್ಯೆಯ ಪರಿಣಾಮವನ್ನು ತೋರುವ ದಿನ. ಜನಸಂಖ್ಯೆಯ ನಿಯಂತ್ರಣಕ್ಕೆ ಪ್ರತಿ ವ್ಯಕ್ತಿಯು ಗಮನಹರಿಸಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಅಷ್ಟೇ.

ಶ್ರೀಮತಿ ಸ್ವರ್ಣ ಕುಂದಾಪುರ

ಆಪ್ತ ಸಮಾಲೋಚಕಿ

 

Related Articles

error: Content is protected !!