ಬೆಂಗಳೂರು : ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಲಂಚ ನೀಡಿದವರಿಗಷ್ಟೇ ವಸತಿ ಹಂಚಿಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ್ ವಿರುದ್ಧ ರಾಜ್ಯ ಸರ್ಕಾರದ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರವಿದೆ ಎಂಬ ಅರ್ಥ ಬರುವಂತೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ. ನಾನು ಈ ವಿಚಾರ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ವಸತಿ ಹಂಚಿಕೆಯಾಗುವಾಗ ಸ್ಥಳೀಯ ಪಂಚಾಯತಿ, ಸಂಸ್ಥೆಗಳು ಫಲಾನುಭವಿಗಳ ಆಯ್ಕೆ ಮಾಡುತ್ತಾರೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ. ಹೀಗಿರುವಾಗ ಫಲಾನುಭವಿಗಳು ಹಣ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಿ.ಆರ್.ಪಾಟೀಲ್ ಯಾವ ಉದ್ದೇಶದಿಂದ ಹೇಳಿದ್ದಾರೋ ತಿಳಿದಿಲ್ಲ. ಆದರೆ, ಅವರ ಹೇಳಿಕೆ ಸರಿಯಲ್ಲ. ಅದನ್ನು ನಾನು ಖಂಡಿಸುತ್ತೇನೆ. ನಮ್ಮ ಸರ್ಕಾರದಲ್ಲಿ ‘ಅಂತಹ ವಿಚಾರಗಳಿಲ್ಲ. ಈ ವಿಚಾರವಾಗಿ ನಾನು ಮತ್ತು ಮುಖ್ಯಮಂತ್ರಿ ಅವರು ಬಿ.ಆರ್.ಪಾಟೀಲ್ ಅವರೊಂದಿಗೆ ಮಾತನಾಡುತೇವೆ ಎಂದು ಶಿವಕುಮಾರ್ ಹೇಳಿದರು.

