Home » ಉಡುಪಿ : ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ
 

ಉಡುಪಿ : ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ

by Kundapur Xpress
Spread the love

ಉಡುಪಿ: ನಗರಸಭೆಯ ಪ್ರಭಾರ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯೋಗೀಶ್ (34) ಅವರು ನೀಡಿದ ದೂರಿನ ಆಧಾರದಲ್ಲಿ ಮೂವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಆರೋಪಿಗಳಾದ ಯೋಗೀಶ್ ಪ್ರಭು, ವಿನಯ್ ಕುಮಾರ್ ಹಾಗೂ ಸ್ಮಿತಾ ಬಿ. ಬಂಗೇರಾ ಅವರು ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಕರ್ತವ್ಯ ನಿಯೋಜನೆ ಮಾಡಬೇಕು. ಇಲ್ಲದಿದ್ದರೆ ಸ್ಮಿತಾ ಬಿ. ಬಂಗೇರಾ ಅವರ ಮೂಲಕ ಲೈಂಗಿಕ ಕಿರುಕುಳದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಭಯಗೊಂಡು ದೂರುದಾರರು ₹2 ಲಕ್ಷವನ್ನು ನಗದು ರೂಪದಲ್ಲಿ ನೀಡಿದ್ದು, ಬಳಿಕ ಉಳಿದ ₹8 ಲಕ್ಷ ನೀಡುವಂತೆ ಆರೋಪಿಗಳು ಒತ್ತಡ ಹೇರಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಣ ನೀಡಲು ನಿರಾಕರಿಸಿದ ಬಳಿಕ, 2026ರ ಜನವರಿ 29ರಂದು ಸ್ಮಿತಾ ಬಿ. ಬಂಗೇರಾ ಅವರ ಹೆಸರಿನಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬಳಿಕ ದೂರುದಾರರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ ಎಂದು ಹೇಳಲಾಗಿದೆ.

ಜೂನ್ 30ರಂದು ಮತ್ತೆ ಕರೆ ಮಾಡಿ ಉಳಿದ ₹8 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದು, ಇಲ್ಲವಾದರೆ ಮತ್ತೊಂದು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಜುಲೈ 6ರಂದು ಮಣಿಪಾಲ ಪೆರಂಪಳ್ಳಿ ಸರ್ಕಲ್‌ನಲ್ಲಿ ಯೋಗೀಶ್ ಪ್ರಭು ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 91/2026ರಡಿ SC/ST (ಅತ್ಯಾಚಾರ ತಡೆ) ಕಾಯ್ದೆಯ ಕಲಂ 3(1)(r), 3(1)(s), 3(5) ಹಾಗೂ BNS ಕಲಂ 308(2), 352, 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Related Articles

error: Content is protected !!