ಕೋಟೇಶ್ವರ: ಪ್ರಧಾನಿ ನರೇಂದ್ರ ಮೋದಿಜಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಸ್ಮರಿಸಿ ಹಮ್ಮಿಕೊಂಡಿರುವ “ಸೇವಾ ಸಂಕಲ್ಪ ಅಭಿಯಾನ”ದ ಅಂಗವಾಗಿ, ಬಿಜೆಪಿ ಮಹಿಳಾ ಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಕೋಟೇಶ್ವರ ಬಸವನಗುಡಿ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಉತ್ಸವ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ ವಹಿಸಿ ಸ್ವಾಗತಿಸಿದರು.
ಕುಂದಾಪುರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಮಾತನಾಡಿ, “ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಮೋದಿಜಿ ಅವರ 25 ವರ್ಷಗಳ ಸುದೀರ್ಘ ಸೇವಾ ಪಯಣವು ಅಭಿವೃದ್ಧಿ, ಅಂತ್ಯೋದಯ ಮತ್ತು ರಾಷ್ಟ್ರ ಮೊದಲು ಎಂಬ ಮಂತ್ರಕ್ಕೆ ಸಾಕ್ಷಿ. ಅವರ ಆಡಳಿತವು ಪ್ರತಿಯೊಬ್ಬ ಕಾರ್ಯಕರ್ತನಿಗೂ ಸ್ಫೂರ್ತಿ” ಎಂದರು.
ಕೋಟೇಶ್ವರ ಶ್ರೀ ರಾಮ ಶಿಶುಮಂದಿರದ ಪ್ರವರ್ತಕ ಶಂಕರ್ ಕಾಮತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಮೋದಿಜಿ ಅವರು ‘ಬಲಿಷ್ಠ ಭಾರತಕ್ಕಾಗಿ ಬಲಿಷ್ಠ ಮಕ್ಕಳು’ ಎಂಬ ದೃಷ್ಟಿಯಿಂದ ಪೋಷಣ್ ಅಭಿಯಾನಕ್ಕೆ ಒತ್ತು ನೀಡಿದ್ದಾರೆ. ಮಗುವಿನ ಮೊದಲ ಶಾಲೆಯೇ ಅಂಗನವಾಡಿ” ಎಂದರು.
ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಅವರು ಅಂಗನವಾಡಿ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಪೌಷ್ಟಿಕ ಆಹಾರ ಕಿಟ್ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್, ಮಹಿಳಾ ಮೋರ್ಚಾ ಪ್ರಭಾರಿ ರೂಪಾ ಬಾಬು ಪೈ, ಪ್ರಮುಖರಾದ ರಾಜೇಶ್ ಉಡುಪ, ಕೃಷ್ಣ ಗೊಲ್ಲ, ಲೋಕೇಶ್ ಅಂಕದಕಟ್ಟೆ, ನಾಗರಾಜ ಮೊಗವೀರ, ಸುರೇಶ್ ದೇವಾಡಿಗ, ಅಭಿಯಾನದ ಸಹ ಸಂಚಾಲಕ ಸುರೇಂದ್ರ ಕಾಂಚನ್ ಸಂಗಮ್, ಮಂಡಲ ಕಾರ್ಯದರ್ಶಿ ನೇತ್ರಾವತಿ ಮಡಿವಾಳ, ಮಹಿಳಾ ಮೋರ್ಚಾ ಕಾರ್ಯದರ್ಶಿ ಆಶಾ ಗೋವಿಂದ, ಶ್ರೀರಾಮ ಶಿಶುಮಂದಿರದ ಕಾರ್ಯದರ್ಶಿ ಸದಾನಂದ ಪೈ ಉಪಸ್ಥಿತರಿದ್ದರು.
ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ವೇತಾ ಶ್ರೀನಿಧಿ ಉಪಾಧ್ಯಾಯ ವಂದಿಸಿದರು.
