ಬೆಂಗಳೂರು : ಬಹು ನರೀಕ್ಷತ ಆರ್ ವಿ ರೋಡ್ ಬೊಮ್ಮಸಂದ್ರ ನಡುವಿನ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಭಾನುವಾರ ವಿಶೇಷ ವಿಮಾನದಲ್ಲಿ ಹೊಸ ದಿಲ್ಲಿಯಿಂದ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿಯವರು ಬೆಂಗಳೂರು ಬೆಳಗಾವಿ, ಅಮೃತಸರ-ಶ್ರೀ ಮಾತಾ ವೈಷ್ಟೋದೇವಿ ಕಾಟ್ರಾ (ವರ್ಚುವಲ್) ಹಾಗೂ ನಾಗುರ-ಪುಣೆ (ವರ್ಚುವಲ್) ಸೇರಿದಂತೆ ಮೂರು ನೂತನ ವಂದೇ ಭಾರತ್ ರೈಲಿಗೂ ಹಸಿರುವ ನಿಶಾನೆ ತೋರಲಿದ್ದಾರೆ. ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಆರ್.ವಿ. (ರಾಗಿಗುಡ್ಡ) ಮೆಟ್ರೋ ನಿಲ್ದಾಣ ತಲುಪಲಿದ್ದಾರೆ.
ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ರಾಗಿಗುಡ್ಡದಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ಹಳದಿ ಮಾರ್ಗಕ್ಕೆ (ಚಾಲಕ ರಹಿತ) ಚಾಲನೆ ನೀಡಲಿದ್ದಾರೆ. ಅಲ್ಲಿಂದ 19.15 ಕಿಲೋ ಮೀಟರ್ ಮೆಟ್ರೋದಲ್ಲಿಯೇ ಪ್ರಯಾಣಿಸಲಿದ್ದಾರೆ. ಬಳಿಕ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಐಐಟಿ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್, ಎಚ್. ಡಿ.ಕುಮಾರಸ್ವಾಮಿ, ವಿ. ಸೋಮಣ್ಣ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಭಾಗವಹಿಸಲಿದ್ದಾರೆ.

