Home » ” ನವರಾತ್ರಿ – ಜಾಗೃತಿ, ಜಯ, ಜೀವನ”
 

” ನವರಾತ್ರಿ – ಜಾಗೃತಿ, ಜಯ, ಜೀವನ”

by Kundapur Xpress
Spread the love

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ
ನಮಸ್ತಸ್ಯೈ ನಮೋ ನಮಃ

ನವರಾತ್ರಿ
ದೇವಿ ಆರಾಧನೆಯ ಮಹಾಪರ್ವ. ದುರ್ದಿನಗಳಲ್ಲಿ ಧೈರ್ಯ, ಕಷ್ಟಗಳಲ್ಲಿ ತಾಳ್ಮೆ, ಜೀವನದಲ್ಲಿ ಜ್ಞಾನ, ಸಮಾಜದಲ್ಲಿ ಶಕ್ತಿ – ಇವೆಲ್ಲವನ್ನು ಕಲಿಸುವ ಸಂಸ್ಕೃತಿಯ ಮಹೋತ್ಸವವೇ ನವರಾತ್ರಿ.
ಒಂಬತ್ತು ದಿನ – ಒಂಬತ್ತು ಮನೋವಿಕಾಸದ ಹಂತಗಳು

ಶೈಲಪುತ್ರಿ → ಸ್ಥಿರತೆ (Rootedness)
ಬ್ರಹ್ಮಚಾರಿಣಿ → ಅನುಶಾಸನ (Discipline)
ಚಂದ್ರಘಂಟಾ → ಆಂತರಿಕ ಶಾಂತಿ (Inner Balance)
ಕೂಷ್ಮಾಂಡ → ಸೃಜನಶೀಲತೆ (Creativity)
ಸ್ಕಂದಮಾತಾ → ಪೋಷಣೆ (Nurturance)
ಕಾತ್ಯಾಯಿನಿ → ಧೈರ್ಯ (Courage)
ಕಾಲರಾತ್ರಿ → ಭಯದ ನಾಶ (Overcoming Fear)
ಮಹಾಗೌರಿ → ಪವಿತ್ರತೆ (Purity)
ಸಿದ್ಧಿದಾತ್ರಿ → ಪರಿಪೂರ್ಣತೆ (Fulfillment)
ಹೀಗಾಗಿ, ನವರಾತ್ರಿ ಕೇವಲ ದೇವರ ಆರಾಧನೆ ಅಲ್ಲ, ಅದು ಮಾನವನ ಆಂತರಿಕ ಪರಿವರ್ತನೆಗೆ ಮಾರ್ಗ.
ದೇವಿಯ ಮೂರು ಮುಖಗಳು – ನಮ್ಮ ಜೀವನದ ಮೂರು ಅಗತ್ಯಗಳು

ದುರ್ಗಾ → ಆಪತ್ತಿನ ಎದುರು ಹೋರಾಡುವ ಧೈರ್ಯ
*ಲಕ್ಷ್ಮೀ*→ ಆರ್ಥಿಕ ಸುಸ್ಥಿರತೆ ಮತ್ತು ಸಂಬಂಧಗಳ ಸಂಪತ್ತು
ಸರಸ್ವತಿ → ಜ್ಞಾನದಿಂದ ಸಿಗುವ ಬೆಳಕು.
ಇಂದಿನ ಪೀಳಿಗೆಗೆ ಇದು ಹೆಲ್ತ್, ವೆಲ್ತ್ & ನೋಲೆಜ್ ಎಂಬ ಸಮತೋಲನ.
ನವರಾತ್ರಿ – ಮಹಿಳಾ ಶಕ್ತಿಗೆ ನಮಿಸುವ ಹಬ್ಬ

ಸಮಾಜದಲ್ಲಿ ಮಹಿಳೆಯ ಪಾತ್ರವನ್ನು ಗೌರವಿಸುವ ಸಂಕೇತ.
ತಾಯಿ, ಸಹೋದರಿ, ಗುರು, ನಾಯಕಿ – ಎಲ್ಲಾ ರೂಪಗಳಲ್ಲಿಯೂ ಶಕ್ತಿಯ ಪ್ರತೀಕ.
ಇದು ಮಹಿಳೆಗೆ ಗೌರವವಿಲ್ಲದೆ ಸಮಾಜಕ್ಕೆ ಮುನ್ನಡೆಯಿಲ್ಲ ಎಂಬುದನ್ನು ಸಾರುತ್ತದೆ.
ಆಂತರಿಕ ದುಷ್ಟಶಕ್ತಿಗಳ ವಿರುದ್ಧ ಹೋರಾಟ
ರಾಕ್ಷಸ ಹೊರಗಿಲ್ಲ.
ಮಹಿಷಾಸುರ = ಅಹಂಕಾರ
ಶುಂಬ-ನಿಶುಂಬ = ಆಸೆ-ದ್ವೇಷ.
ಮಧು-ಕೈಟಭ = ಆಲಸ್ಯ-ಅಜ್ಞಾನ.
ನವರಾತ್ರಿ ನಮಗೆ ಹೇಳುವುದೇನು? “ನಿನ್ನೊಳಗಿನ ರಾಕ್ಷಸನನ್ನು ಗೆಲ್ಲು, ಅಷ್ಟೇ ಸಾಕು”

ಹಬ್ಬಗಳು ನಮ್ಮ ದೇಶದ ಸಂಸ್ಕೃತಿಯ ಅಸ್ಮಿತೆ. ಹಬ್ಬಗಳೆಂಬ ಪರ್ವವು ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ ವಹಿಸುವಂಥದ್ದು. ಹಬ್ಬಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಲ್ಲ. ಇವುಗಳಲ್ಲಿ ಜೀವನ ಮೌಲ್ಯವಿದೆ, ಮಾನಸಿಕ ನೆಮ್ಮದಿಯಿದೆ. ವಿಜಯನಗರದ ಅರಸರು ಹಾಗೂ ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನಡೆಸುವ ವಿಶಿಷ್ಟ ಹಬ್ಬ ಎಂಬುದು ಇತಿಹಾಸದ ಉಲ್ಲೇಖ. ಹಬ್ಬಗಳ ಆಚರಣೆಯ ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಏನೇ ಇರಲಿ, ಅವುಗಳ ಸಾಮಾಜಿಕ ಕಳಕಳಿ ಬಹಳ ಮಹತ್ತ್ವದ್ದು.

ಸಂಕಷ್ಟ ಬಂದಾಗ ದೇವಾದಿ ದೇವದೇವತೆಗಳೇ ಮೊರೆ ಹೋಗಿದ್ದ ಶಕ್ತಿಸ್ವರೂಪಿಣಿ ದೇವಿಗೆ, ನಿರಂತರ ಒಂಭತ್ತು ದಿನಗಳ ಕಾಲ ಸಲ್ಲಿಸುವ ಪೂಜೆಯೇ ನವರಾತ್ರಿ ಹಬ್ಬ. ಜಗತ್ತಿನಲ್ಲಿ ಯಾವಾಗ ತಾಮಸಿಕ, ಆಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ, ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುವರೋ ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃಪುನಃ ಅವತಾರ ತಾಳುತ್ತಾಳೆ.
ವರ್ಷದ ನಾಲ್ಕು ನವರಾತ್ರಿಗಳಲ್ಲಿ ಮೊದಲನೆಯದಾದ ಚೈತ್ರ ನವರಾತ್ರಿಯು ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿದೆ. ಇದರ ಒಂಭತ್ತನೆ ದಿನ ರಾಮನವಮಿಯೂ ಹೌದು. ಎರಡನೆಯ ಆಷಾಢ ನವರಾತ್ರಿಯನ್ನು ಗುಪ್ತ ನವರಾತ್ರಿ ಅಂತಲೂ ಕರೆಯುತ್ತಾರೆ. ಆಶ್ವಯುಜ ಮಾಸದಲ್ಲಿ ಅಂದರೆ ಈಗ ಆಚರಿಸುತ್ತಿರುವ ಮೂರನೆಯ ನವರಾತ್ರಿಯೇ ಶರನ್ನವರಾತ್ರಿ. ನಾಲ್ಕನೆಯದು ಮಾಘ ಮಾಸದ ನವರಾತ್ರಿ. ಇದರ ಐದನೆಯ ದಿವಸ ಋಷಿ ಪಂಚಮಿ ಆಚರಣೆ ಇದೆ.

ಶರನ್ನವರಾತ್ರಿಯು ಆಶ್ವಯುಜ ಮಾಸದ ಪಾಡ್ಯದ ದಿನದಿಂದ ಪ್ರಾರಂಭ. ಒಂಭತ್ತು ದಿನವೂ ನವಶಕ್ತಿಯ ಆರಾಧನೆಯನ್ನು ಮಾಡಲಾಗುತ್ತದೆ. ದುರ್ಗಾದೇವಿಯ ಪ್ರಥಮ ಅವತಾರ “ಶೈಲಪುತ್ರಿ”ಯ ಆರಾಧನೆ. ಸ್ಥಿರತೆ, ಆಂತರಿಕ ಶಕ್ತಿ ಹಾಗೂ ದೃಢತೆಯ ಸಂಕೇತ.
ಮರುದಿನ ಆಕೆಯ “ಬ್ರಹ್ಮಚಾರಿಣಿ” ರೂಪದ ಆರಾಧನೆ. ಪಾರ್ವತಿಯಾಗಿ ಹುಟ್ಟಿದ ಮರುಜನ್ಮದಲ್ಲಿ ಶಿವನನ್ನೇ ಸೇರಬೇಕನ್ನುವ ಉದ್ದೇಶದಿಂದ ಕಠಿಣ ತಪಸ್ಸನ್ನಾಚರಿಸಿ, ಗುರಿ ಸಾಧಿಸಿದ ಛಲದ ಸಂಕೇತವಾಗಿ ಪೂಜಿಸಲ್ಪಡುವ ಈಕೆ ಜ್ಞಾನ, ತಪಸ್ಸು, ತ್ಯಾಗ, ಸಂಯಮವನ್ನು ಕರುಣಿಸುವವಳು.
“ಚಂದ್ರಘಂಟಾ” ಹೆಸರಿನಲ್ಲಿ ಪೂಜಿಸಲ್ಪಡುವ ದೇವಿಯು ಧೈರ್ಯವನ್ನು, ಶೌರ್ಯವನ್ನು ಕೊಡುವವಳು.
ಬ್ರಹ್ಮಾಂಡವನ್ನೇ ತನ್ನ ದೈವಿಕ ನಗುವಿನಿಂದ ಸೃಷ್ಟಿಸಿದ ಆದಿಶಕ್ತಿ “ಕೂಷ್ಮಾಂಡಾ ದೇವಿ” ಆರೋಗ್ಯ, ಸಂಪತ್ತು ಹಾಗೂ ಜ್ಞಾನವನ್ನು ನೀಡುವವಳು.
“ಸ್ಕಂದಮಾತಾ”ಳಾಗಿ ಸುಖ, ಶಾಂತಿ, ಮೋಕ್ಷ, ಸಂತಾನ ಭಾಗ್ಯ ಕರುಣಿಸುವವಳಾದರೆ, “ಕಾತ್ಯಾಯನಿ”ಯಾಗಿ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಎಂಬುದಾಗಿ ಸಮೃದ್ಧಿ, ಸಾಕ್ಷಾತ್ಕಾರ, ಯಶಸ್ಸನ್ನು ನೀಡುವವಳು.
ಕಾಳರಾತ್ರಿಯ ಅವತಾರಿಣಿ, ರಕ್ತಬೀಜ ಸಂಹಾರಿಣಿ “ಚಾಮುಂಡಿ” ಎನಿಸಿ ಘೋರ ಅವತಾರ ತಾಳಿದ ಈಕೆ… ರೋಗ, ಅಕಾಲಿಕ ಮರಣ, ನಕಾರಾತ್ಮಕ ಶಕ್ತಿನಾಶಿನಿ ಶುಭಂಕರಿ.
ಎಂಟನೇ ದಿನ ತನ್ನ ಮೊದಲಿನ ಸ್ವರೂಪಕ್ಕೆ ಮರಳುವ ಆಕೆ “ಮಹಾಗೌರಿ”ಯಾಗಿ ನಿಶುಂಭನ ಸಂಹಾರವನ್ನು ಮಾಡುತ್ತಾಳೆ. ಜ್ಞಾನವೃದ್ಧಿಯ ಸಂಕೇತ ಈ ಶ್ವೇತವಸನೆ.
ಮಹಾನವಮಿಯ ದಿನ ಸಿದ್ಧಿಧಾತ್ರಿಯಾಗಿ “ಸಿದ್ಧಿಪ್ರದಾಯಿನಿ” ಎಂದೇ ಪೂಜಿತಳಾಗಿ ಅಲೌಕಿಕ ಶಕ್ತಿಧಾತೆ ಪಾಪನಾಶಿನಿಯಾಗಿದ್ದಾಳೆ.
ವಿಜಯದಶಮಿಯಂದು ಮಹಿಷಾಸುರ ಮರ್ದಿನಿಯ ಉಪಾಸನೆ. ದೇವತೆಗಳ ರಕ್ಷಣೆಗಾಗಿ ಅವತರಿಸುವ ದೇವಿ, ಶಿಷ್ಟರಿಗೆಲ್ಲ ಕಂಟಕನಾಗಿದ್ದ ಮಹಿಷಾಸುರನನ್ನು ಸಂಹರಿಸುತ್ತಾಳೆ. ನವರಾತ್ರಿ ಆಚರಣೆಯ ಪ್ರಮುಖ ಹಿನ್ನೆಲೆಯೇ ಈ ಸರ್ವಶಕ್ತಿಯ ಆರಾಧನೆ.

ಇನ್ನೊಂದು ವಿಶೇಷ ಹಿನ್ನೆಲೆಯೂ ಇದೆ. ದ್ವಾಪರಾಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯ ಸಾಧಿಸಿದರು ಎಂದು ಹೇಳುತ್ತಾರೆ. ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ.

ನಾರದರ ಸಲಹೆಯಂತೆ ರಾಮ ನವರಾತ್ರಿ ವ್ರತದ ಆಚರಣೆಯನ್ನು ಮಾಡಿದ ನಂತರ, ರಾವಣನ ಮೇಲೆ ಯುದ್ಧದಲ್ಲಿ ವಿಜಯಹೊಂದಿದ ಎನ್ನುವುದು ಮತ್ತೊಂದು ಪ್ರತೀತಿ. ಅದಕ್ಕಾಗಿ ಉತ್ತರ ಭಾರತದಲ್ಲಿ ರಾವಣ, ಕುಂಭಕರ್ಣ, ಇಂದ್ರಜಿತು ಈ ಮೂವರ ಮೂರ್ತಿ ಮಾಡಿ ವಿಜಯದಶಮಿಯ ದಿನ ದಹಿಸುತ್ತಾರೆ. ಪವಿತ್ರ ಗ್ರಂಥಗಳ ಪೂಜೆ, ಆಯುಧಗಳ ಪೂಜೆ ಕೂಡ ನವರಾತ್ರಿಯ ವಿಶೇಷ. ನವರಾತ್ರಿಯ ಎಲ್ಲ ದಿನಗಳಲ್ಲಿ
ದೇವಿಯ ವಿವಿಧ ರೂಪಗಳನ್ನು ಪ್ರತ್ಯೇಕವಾಗಿಯೇ ಶೃಂಗರಿಸಿ ಭಕ್ತಿ, ಶ್ರದ್ಧೆ, ಉಲ್ಲಾಸದಿಂದ ಆರಾಧಿಸಲಾಗುತ್ತದೆ‌.

ನವರಾತ್ರಿಯಲ್ಲಿ ದೇವಿತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಬೇಕಾದರೆ ನವರಾತ್ರಿ ಕಾಲದಲ್ಲಿ ‘ಶ್ರೀದುರ್ಗಾದೇವ್ಯೈ ನಮಃ’ ಎಂಬ ನಾಮಜಪವನ್ನು ಮಾಡೋಣ.
ಮನುಷ್ಯನ ಜೀವನದ ಅಡಚಣೆಗಳನ್ನು, ದಿನನಿತ್ಯದ ಜಂಜಡಗಳನ್ನು, ಮಾನಸಿಕ ತುಮುಲಗಳನ್ನು ಮರೆತು ಖುಷಿಯನ್ನು ಅನುಭವಿಸಲು ಬೇಕು ಈ ಸಂಭ್ರಮದಿಂದ ಹಬ್ಬ. ಹಬ್ಬಗಳು ಎನ್ನುವ ಪರಿಕಲ್ಪನೆ ಇಲ್ಲದೆ ಇದ್ದಿದ್ದರೆ ನಮ್ಮ ಒತ್ತಡದ ಜೀವನದಲ್ಲಿ ಇಂತಹ ಧಾರ್ಮಿಕ ವಿಶೇಷಗಳು ಸಾಧ್ಯವಾಗುತ್ತಿರಲಿಲ್ಲ. ಅದರ ಪಾರಮಾರ್ಥಿಕ ಇಂಗಿತಗಳು ಏನೇ ಇದ್ದರೂ ಅವುಗಳಿಂದ ಪರಮ ಸಂತೋಷದ ಅನುಭವ ದೊರಕುತ್ತವೆ. ಕೆಟ್ಟದ್ದರ ಮೇಲೆ ಒಳಿತಿನ ವಿಜಯವನ್ನು ಹೇಗೆ ನವರಾತ್ರಿಯು ಸೂಚಿಸುತ್ತದೆಯೋ ಹಾಗೇ ಕೆಟ್ಟ ಆಲೋಚನೆ, ಅಹಿತಕರ ಘಟನೆಗಳು, ನಕಾರಾತ್ಮಕ ಶಕ್ತಿಗಳ ಆರ್ಭಟವನ್ನು ಆ ದೇವಿ ನಿಗ್ರಹಿಸಲಿ ಎಂಬುದು ಪ್ರಾರ್ಥನೆ.
ಇಂದಿನ ಪೀಳಿಗೆಗೆ ನವರಾತ್ರಿಯ ಸಂದೇಶ

ನವರಾತ್ರಿ ಎಂದರೆ ಹೊಸ ಬಟ್ಟೆ, ಅಲಂಕಾರ, ಹಬ್ಬದ ಊಟ ಮಾತ್ರವಲ್ಲ. ಅದು ಮನಸ್ಸನ್ನು ಶುದ್ಧಗೊಳಿಸುವ, ದುಷ್ಟ ಅಭ್ಯಾಸಗಳನ್ನು ಬಿಡುವ, ಒಳಗಿನ ಶಕ್ತಿಯನ್ನು ಅರಿಯುವ ಕಾಲ.
ನವರಾತ್ರಿ ನಮಗೆ ಕಲಿಸುವುದೇನುಂದರೆ – “ನಿನ್ನೊಳಗಿನ ದುರ್ಬಲತೆಗಳನ್ನು ಗೆದ್ದಾಗ ಮಾತ್ರ ನಿನ್ನ ನಿಜವಾದ ಶಕ್ತಿ ಹೊರಹೊಮ್ಮುತ್ತದೆ; ದೇವಿ ನಿನ್ನೊಳಗೇ ಇದ್ದಾಳೆ, ಅವಳನ್ನು ಜಾಗೃತಗೊಳಿಸಿ ಬದುಕನ್ನು ಜಯಮಯವಾಗಿಸು.”
“ಈ ನವರಾತ್ರಿ ನಿಮ್ಮ ಮನದಲ್ಲಿ ಧೈರ್ಯ, ಮನೆಯಲ್ಲಿ ಸಂತೋಷ, ಜೀವನದಲ್ಲಿ ಬೆಳಕು ತುಂಬಲಿ.

ಎಲ್ಲರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.


ಸ್ವರ್ಣ ಕುಂದಾಪುರ

ಆಪ್ತ ಸಮಾಲೋಚಕಿ

 

Related Articles

error: Content is protected !!