ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಸಿದ್ದಾಪುರ–ಶಿವಮೊಗ್ಗ ಜಿಲ್ಲಾ ರಸ್ತೆ ಪಕ್ಕದಲ್ಲಿ ಚಿರತೆಯನ್ನು ಕೊಂದು ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಗೌಪ್ಯ ಮಾಹಿತಿ ಆಧರಿಸಿ ಎ4 ಆರೋಪಿ ಮಂಜುನಾಥ ಶೆಟ್ಟಿ (ರಘುರಾಮ ಶೆಟ್ಟಿ ಪುತ್ರ), ಸಾಲಿಮಕ್ಕಿ, ಯಡಮೊಗೆ ಗ್ರಾಮ, ಕುಂದಾಪುರ ತಾಲೂಕು ಅವರನ್ನು ಬಂಧಿಸಲಾಯಿತು. ಅವರ ವಿಚಾರಣೆಯ ಆಧಾರದಲ್ಲಿ ಎ1 ಆರೋಪಿ ಮಹಮ್ಮದ್ ನದೀಮ್ ಕರಾಣಿ (ಅಮೀರ್ ಸಾಹೇಬ್ ಕರಾಣಿ ಪುತ್ರ), ಕಂಡ್ಲೂರು, ಕಾವ್ರಾಡಿ ಗ್ರಾಮ, ಕುಂದಾಪುರ ತಾಲೂಕು, ಎ5 ಆರೋಪಿ ನಾಗರಾಜ ಭೋವಿ (ವೆಂಕಟರಮಣ ಭೋವಿ ಪುತ್ರ), ಹನೆಬಚ್ಚಲು, ಯಡಮೊಗೆ ಗ್ರಾಮ ಹಾಗೂ ಎ6 ಆರೋಪಿ ವೆಂಕಟರಮಣ ಭೋವಿ (ರಾಮ ಭೋವಿ ಪುತ್ರ), ಹನೆಬಚ್ಚಲು, ಯಡಮೊಗೆ ಗ್ರಾಮ ಇವರನ್ನೂ ಬಂಧಿಸಲಾಗಿದೆ.
ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.
ಬಂಧಿತ ಆರೋಪಿಗಳ ಮಾಹಿತಿ ಹಾಗೂ ಅವರು ತೋರಿಸಿದ ಸ್ಥಳದ ಆಧಾರದಲ್ಲಿ ಚಿರತೆಯ ಕಾಲಿನ ನಾಲ್ಕು ಉಗುರುಗಳು, ಮೂಳೆಯ ಅವಶೇಷಗಳು, ಒಂದು ಬಂದೂಕು, ಐದು ಜೀವಂತ ಗುಂಡುಗಳು, ಎರಡು ಮೋಟಾರ್ ಬೈಕ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಕುಂದಾಪುರದ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೆನ್ ಪಿ ಅವರ ಮಾರ್ಗದರ್ಶನದಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ಸಿಬ್ಬಂದಿ, ಕುಂದಾಪುರ ಮತ್ತು ಬೈಂದೂರು ವಲಯದ ಅರಣ್ಯ ಸಿಬ್ಬಂದಿ, ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ನಿರಂಜನ್ ಗೌಡ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

