Home » ವಿದೇಶದಿಂದ ಗಿಫ್ಟ್ ಕೋರಿಯರ್‌ ಬಂದಿದೆ ಎಂದು ನಂಬಿಸಿ 13,99,700 ರೂ. ವಂಚನೆ
 

ವಿದೇಶದಿಂದ ಗಿಫ್ಟ್ ಕೋರಿಯರ್‌ ಬಂದಿದೆ ಎಂದು ನಂಬಿಸಿ 13,99,700 ರೂ. ವಂಚನೆ

by Kundapur Xpress
Spread the love

ಶಿರ್ವಾ: ವಿದೇಶದಿಂದ ಗಿಫ್ಟ್ ಕೋರಿಯರ್‌ ಬಂದಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಂದ ಹಂತ ಹಂತವಾಗಿ 13,99,700 ರೂ. ಹಣವನ್ನು ಕಸಿದುಕೊಂಡಿರುವ ಸೈಬರ್ ವಂಚನೆ ಪ್ರಕರಣ ಶಿರ್ವಾದಲ್ಲಿ ಬೆಳಕಿಗೆ ಬಂದಿದೆ.

ಪಿರ್ಯಾದಿದಾರರಾದ ವಿದ್ಯಾ ಅವರು ಕೆನರ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಸುಮಾರು ಒಂದು ತಿಂಗಳ ಹಿಂದೆ ಮೊಬೈಲ್ ಮೂಲಕ ‘ಮಿಲರ್ ಗೇರ್ ಹಾರ್ಡ್’ ಎಂಬ ವ್ಯಕ್ತಿಯೊಂದಿಗೆ ಪರಿಚಯವಾಗಿತ್ತು. ಆತ ತಾನು ವಿದೇಶದಲ್ಲಿದ್ದು, ತನ್ನ ಹೆಸರಿನಲ್ಲಿ ಗಿಫ್ಟ್ ಕೋರಿಯರ್ ಕಳುಹಿಸಿರುವುದಾಗಿ 22/02/2026ರಂದು ತಿಳಿಸಿ ಅದರ ಛಾಯಾಚಿತ್ರವನ್ನೂ ವಾಟ್ಸಪ್ ಮೂಲಕ ಕಳುಹಿಸಿದ್ದಾನೆ.

ಮರುದಿನ 23/02/2026ರಂದು ಬೆಳಿಗ್ಗೆ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ, ವಿದೇಶದಿಂದ ಬಂದಿರುವ ಕೋರಿಯರ್ ವಿಮಾನ ನಿಲ್ದಾಣದಿಂದ ಬಿಡುಗಡೆಯಾಗಲು 49,700 ರೂ. ಪಾವತಿಸಬೇಕೆಂದು ತಿಳಿಸಿದ್ದಾಳೆ. ಅದರಂತೆ ಪಿರ್ಯಾದಿದಾರರು ಐಡಿಬಿಐ ಬ್ಯಾಂಕ್ ದೆಹಲಿ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಬಳಿಕ ಕೋರಿಯರ್‌ನಲ್ಲಿ 30,000 ಪೌಂಡ್ ವಿದೇಶಿ ಕರೆನ್ಸಿ ಇದೆ, ಇದು ಕಾನೂನುಬಾಹಿರವಾಗಿರುವುದರಿಂದ ತುರ್ತಾಗಿ ಮತ್ತಷ್ಟು ಹಣ ಪಾವತಿಸಬೇಕೆಂದು ಹೇಳಿ 1,89,000 ರೂ. ಪಡೆದುಕೊಂಡಿದ್ದಾರೆ.
ಇದಲ್ಲದೆ ಮನಿ ಎಕ್ಸ್‌ಚೇಂಜ್‌, ಡಾಕ್ಯುಮೆಂಟೇಶನ್ ಸೇರಿದಂತೆ ವಿವಿಧ ನೆಪಗಳಲ್ಲಿ ಹಲವು ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಲು ಒತ್ತಾಯಿಸಿದ್ದು, 23/02/2026ರಿಂದ 27/02/2026ರವರೆಗೆ ಒಟ್ಟು 13,99,700 ರೂ. ಹಣವನ್ನು ವಂಚಕರು ಕಸಿದುಕೊಂಡಿದ್ದಾರೆ.

ಕೋರಿಯರ್‌ನಲ್ಲಿ 30,000 ಪೌಂಡ್ ಇದ್ದು, ಅದು ಭಾರತೀಯ ಕರೆನ್ಸಿಯಲ್ಲಿ ಸುಮಾರು 37 ಲಕ್ಷ ರೂ. ಆಗುತ್ತದೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ಆದರೆ ಇದುವರೆಗೆ ಯಾವುದೇ ಕೋರಿಯರ್ ಬಂದಿಲ್ಲವೆಂಬುದು ತಿಳಿದು ಬಂದ ನಂತರ ವಿದ್ಯಾ ಅವರು ಶಿರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆದೂರಿನ ಆಧಾರದಲ್ಲಿ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2026 ಅಡಿಯಲ್ಲಿ ಐಟಿ ಕಾಯ್ದೆಯ 66(ಡಿ) ಹಾಗೂ ಬಿಎನ್‌ಎಸ್‌ ಕಲಂ 316(2), 318(4) r/w 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Related Articles

error: Content is protected !!