ಉಡುಪಿ : ಐಪಿಎಲ್ ನಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ್ದನ್ನು ಸಂಭ್ರಮಾಚರಣೆ ಮಾಡಿದರೆ ಅದರ ಲಾಭ ನಾವು ಪಡೆಯಬಹುದು ಎಂಬ ದುರುದ್ದೇಶದಿಂದ ಸರ್ಕಾರ ಯಾವುದೇ ಪೂರ್ವ ತಯಾರಿ ಮಾಡದೇ ಈ ಕಾರ್ಯಕ್ರಮ ಆಯೋಜಸಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ವಿರುದ್ಧ ಕಡಿಯಾಳಿಯಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 11 ಮಂದಿ ಸಾವನ್ನಪ್ಪಿದ ಬಳಿಕ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿದೆ. ಹಾಗಾಗಿ ಈ ದುರ್ಘಟನೆಯ ಹೊಣೆ ಹೊತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹಸಚಿವರು ರಾಜೀನಾಮೆ ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರ್ಘಟನೆಯು ರಾಜ್ಯ ಸರ್ಕಾರದ ತಪ್ಪು ಹೆಜ್ಜೆಗೆ ಉದಾಹರಣೆ.ಕಾಲ್ತುಳಿತದಲ್ಲಿ ಜನರು ಮೃತಪಟ್ಟ ಬಳಿಕವೂ ಸಂಭ್ರಮಾಚರಣೆ ನಿಂತಿರಲಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಆತ್ರಾಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಠಾ ಉದಯ ಶೆಟ್ಟಿ, ದಿನಕರ್ ಶೆಟ್ಟಿ ಹೆರ್ಗಾ, ಮುಖಂಡರಾದ ದಿಲ್ಲೇಶ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಯುವಮೋರ್ಚಾ ಪ್ರ.ಕಾರ್ಯದರ್ಶಿ ಶಶಾಂಕ್ ಶಿವತ್ತಾಯ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಮತ್ತಿತರರಿದ್ದರು.

