ನವದೆಹಲಿ : ಕಳೆದ 27 ವರ್ಷಗಳಿಂದ ರಾಜಧಾನಿ ದೆಹಲಿಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿದ್ದ ಭಾರತೀಯ ಜನತಾ ಪಕ್ಷಕ್ಕೆ ಕೊನೆಗೂ ಕನಸು ನನಸಾಗುವ ಕ್ಷಣ ಸನ್ನಿಹಿತವಾಗಿದೆ ಎಂದು ಬುಧವಾರ ಪ್ರಕಟವಾದ ದೆಹಲಿ ಚುನಾವಣೆ ಕುರಿತಾದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ದೆಹಲಿಯಲ್ಲಿ ಬುಧವಾರ ಮತದಾನ ಮುಕ್ತಾಯವಾದ ಬೆನ್ನಲ್ಲೇ 10 ಪ್ರತ್ಯೇಕ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷಾ ವರದಿ ಪ್ರಕಟಿಸಿದ್ದು, ಈ ಪೈಕಿ 8 ಸಮೀಕ್ಷೆಗಳು ಬಿಜೆಪಿ ಪರ ಗೆಲುವಿನ ಭವಿಷ್ಯ ನುಡಿದಿವೆ.
ಎರಡು ಸಮೀಕ್ಷೆ ಮಾತ್ರ ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್ ಆದ್ಮೀ ಪಕ್ಷ ಮತ್ತೆ ಗೆಲ್ಲುವ ಸುಳಿವು ನೀಡಿವೆ. ಇನ್ನೊಂದೆಡೆ 12 ವರ್ಷಗಳ ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಮರಳುವ ಆಶಾಭಾವನೆಯೊಂದಿಗೆ ಕರ್ನಾಟಕ ಮಾದರಿ ಗ್ಯಾರಂಟಿ ಘೋಷಿಸಿದ್ದ ಕಾಂಗ್ರೆಸ್‌ಗೆ ಮತ್ತೆ ಭಾರೀ ಹಿನ್ನಡೆಯಾಗಿದೆ. ಯಾವುದೇ ಸಮೀಕ್ಷೆಗಳು ಕಾಂಗ್ರೆಸ್‌ಗೆ 3ಕ್ಕಿಂತ ಹೆಚ್ಚು ಸ್ಥಾನ ನೀಡಿಲ್ಲ
ಸಮೀಕ್ಷೆಗಳು ಖಚಿತವಾದರೆ 1998ರ ಬಳಿಕ ಮೊದಲ ಬಾರಿಗೆ ಅಂದರೆ 27 ವರ್ಷ ಬಳಕ ಬಿಜೆಪಿಗೆ ದೆಹಲಿ ಚುಕ್ಕಾಣಿ ಸಿಗಲಿದೆ. ಮತ್ತೊಂದೆಡೆ 10 ವರ್ಷದಿಂದ ಅಧಿಕಾರದಲ್ಲಿದ್ದ ಆಪ್ ಅಧಿಕಾರ ವಂಚಿತವಾಗಲಿದೆ.

