ಅಮೃತಸರ : ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಮೃತಸರದ ಖಾಂಡ್ವಾಲಾದ ದೇವಾಲಯದ ಮೇಲೆ ಹ್ಯಾಂಡ್ ಗ್ರೆನೇಡ್ ಎಸೆದಿದ್ದು, ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಖಾಂಡ್ವಾಲಾದ ಠಾಕೂರ್ ದ್ವಾರ ದೇವಾಲಯದ ಮೇಲೆ ನಡೆದ ಗ್ರೆನೇಡ್ ದಾಳಿ ಶನಿವಾರ ಮುಂಜಾನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 14-15ರ ಮಧ್ಯರಾತ್ರಿ 12:35ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ. ಆದರೆ, ಪ್ರದೇಶದಲ್ಲಿ ಭೀತಿ ಸೃಷ್ಟಿಸಿತು. ಅಮೃತಸರ ಪೊಲೀಸ್ ಆಯುಕ್ತ ಗುರುಪ್ರೀತ್ ಭುಲ್ಲರ್ ದಾಳಿಯಲ್ಲಿ ಪಾಕಿಸ್ತಾನದ ಸಂಭಾವ್ಯ ನಂಟನ್ನು ಶಂಕಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಧ್ವಜವನ್ನು ಹೊತ್ತ ಇಬ್ಬರು ಯುವಕರು ಮೋಟಾರ್ ಸೈಕಲ್‌ನಲ್ಲಿ ಗುರುದ್ವಾರದ ಬಳಿ ಬಂದಿರುವುದು ಸೆರೆಯಾಗಿದೆ. ದೇವಾಲಯದ ಹೊರಗೆ ಸ್ವಲ್ಪ ಹೊತ್ತು ನಿಂತ ದುಷ್ಕರ್ಮಿಗಳು ಆವರಣದ ಕಡೆಗೆ ವಸ್ತುವನ್ನು ಎಸೆಯುವ ಮೊದಲು ಬೈಕ್ ನಿಲ್ಲಿಸಿದರು. ಬಳಿಕ ದಾಳಿಕೋರರು ಅಲ್ಲಿಂದ ಓಡಿಹೋಗುತ್ತಿದ್ದಂತೆ ಪ್ರಬಲ ಸ್ಫೋಟ ಸಂಭವಿಸಿ ಪ್ರದೇಶದಲ್ಲಿ ಭೀತಿ ಸೃಷ್ಟಿಸಿತು. ದಾಳಿ ವೇಳೆ ದೇವಾಲಯದ ಒಳಗಿದ್ದ ಪೂಜಾರಿ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.
ಪೊಲೀಸರು ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಸಕ್ರಿಯ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದು, ಇದಕ್ಕೆ ಸ್ಥಳೀಯರು ಸಹಕರಿಸುವಂತೆ ಮನವಿ ಮಾಡಿದ್ದಾರೆ

