ಅಮೃತಸರ : ಭಾರತೀಯ ವಾಯು ನೆಲೆಗಳ ಮೇಲೆ ಮೂರು ದಿನಗಳ ಕಾಲ ದಾಳಿ ನಡೆಸಿ ಹಾನಿಗೊಳಿಸಲು ಸಾಧ್ಯವಾಗದೆ ಹತಾಶೆಯಿಂದ ಪಾಕಿಸ್ತಾನ ಇಲ್ಲಿರುವ ಸಿಬ್ಬರ ಪವಿತ್ರ ಸ್ವರ್ಣ ದೇಗುಲದ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಅವುಗಳನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯ ಗನ್‌ಗಳು ಹೊಡೆದುರುಳಿಸಿದ್ದು ಹೇಗೆಂದು ಭಾರತೀಯ ಸೇನೆ ಪ್ರಾತ್ಯಕ್ಷಿಕೆ ವಿಡಿಯೋ ಸೋಮವಾರ ಬಿಡುಗಡೆಗೊಳಿಸಿದೆ.
ಆಕಾಶ್ ತೀರ್ ವಾಯು ರಕ್ಷಣಾ ವ್ಯವಸ್ಥೆ ಮತ್ತು ಎಲ್-70 ವಾಯು ರಕ್ಷಣಾ ಗನ್ ಗಳನ್ನು ಒಳಗೊಂಡಿದ್ದ ವಾಯು ರಕ್ಷಣಾ ವ್ಯವಸ್ಥೆಯು ಅಮೃತಸರದ ಸ್ವರ್ಣ ದೇಗುಲ ಮತ್ತು ಇತರ ನಗರಗಳನ್ನು ಪಾಕಿಸ್ತಾನದ ಡ್ರೋನ್ ದಾಳಿಯಿಂದ ತಪ್ಪಿಸಿದೆ. ನಾವು ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದವು, ಇದರಿಂದ ಪಾಕ್ ನಾಗರಿಕರ ಸಾವು-ನೋವು ಉಂಟಾಗಿಲ್ಲ. ನೇರವಾಗಿ ಭಾರತದೊಳಗೆ ದಾಳಿ ನಡೆಸಲು ಪಾಕಿಸ್ತಾನಕ್ಕೆ ಧೈರ್ಯವಿಲ್ಲ. ಇದೇ ಕಾರಣಕ್ಕೆ ಭಯೋತ್ಪಾದನೆಯನ್ನೇ ತನ್ನ ರಾಷ್ಟ್ರೀಯ ನೀತಿಯನ್ನಾಗಿಸಿದೆ. ಮಾನವರಹಿತ ಡ್ರೋನ್ ಗಳಿಂದ ಭಾರತೀಯ ನಗರ, ಗಡಿ ಪ್ರದೇಶಗಳ ಮೇಲೆ ದಾಳಿಗೆ ಯತ್ನಿಸಿದೆ. ಟರ್ಕಿ ನಿರ್ಮಿತ ಕಮಿಕಾಜಿ, ಯಿಹಾ-3, ಸೋಂಗರ್ ಡೋನ್ ಗಳನ್ನು ಪಾಕ್ ಬಳಸಿದ್ದರೆ, ನಾವು ಅವುಗಳನ್ನು ಹೊಡೆದುರುಳಿಸಿದ್ದೇವೆ ಎಂದು 15ನೇ ಪದಾತಿ ದಳ ವಿಭಾಗದ ಜನರಲ್ ಮೇಜರ್ ಕಾರ್ತಿಕ್ ಸಿ. ಶೇಷಾದ್ರಿ ತಿಳಿಸಿದ್ದಾರೆ.

