ಛಾತರ್‌ಪುರ (ಮಧ್ಯಪ್ರದೇಶ) : ಗುಲಾಮಗಿರಿಯ ಮಾನಸಿಕತೆಯವರು ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಮುಖ್ಯವಾಗಿ ಮಹಾ ಕುಂಭಮೇಳವನ್ನು ಅಣಕಿಸುತ್ತಿರುವುದು ತೀರಾ ಅಕ್ಷಮ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕೆಲವು ನಾಯಕರನ್ನು ತರಾಟೆಗೆತ್ತಿಕೊಂಡಿದ್ದಾರೆ. ಇದೇ ವೇಳೆ ಪ್ರಯಾಗರಾಜ್ ಮಹಾಕುಂಭವು ಏಕತೆಯ ಮಹಾಕುಂಭವೆಂದು ಬಣ್ಣಿಸಿದರು.
ಮಧ್ಯಪ್ರದೇಶದ ಛಾತರ್‌ಪುರದಲ್ಲಿ ಕ್ಯಾನ್ಸರ್ ಆಸ್ಪತ್ರೆ ಒಳಗೊಂಡ ಶ್ರೀ ಬಗೇಶ್ವರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಬಗೇಶ್ವರವು ಶ್ರೀರಾಮ ಭಕ್ತ ಹನುಮಾನ್‌ಗೆ ಸಂಬಂಧಪಟ್ಟ ವಿಶೇಷ ಧಾಮವಾಗಿದೆ. ಈಚಿನ ದಿನಗಳಲ್ಲಿ ನಾಯಕರ ಗುಂಪೊಂದು ನಮ್ಮ ಧರ್ಮದ ಅವಹೇಳನದಲ್ಲಿ ತೊಡಗಿದೆ. ದೇಶವಾಸಿಗಳ ಏಕತೆಯನ್ನು ಮುರಿದು, ಜನರನ್ನು ಒಡೆಯುವುದು ಇವರ ಷಡ್ಯಂತ್ರವಾಗಿದೆ. ಕೆಲವು ಸನ್ನಿವೇಶಗಳಲ್ಲಿ ವಿದೇಶಿ ಶಕ್ತಿಗಳು ಕೂಡ ಇಂತಹ ಜನರನ್ನು ಬೆಂಬಲಿಸುವ ಮೂಲಕ ನಮ್ಮ ರಾಷ್ಟ್ರ ಧರ್ಮವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು

