ಇಸ್ಲಾಮಾಬಾದ್ : ಪಹಲ್ಗಾಮ್ ನರಮೇಧದ ವಿಷಯದಲ್ಲಿ ಜಾಗತಿಕವಾಗಿ ಒಬ್ಬಂಟಿಯಾಗಿ ರುವ ಪಾಕಿಸ್ತಾನ ಇದೀಗ ಮುಖ ಉಳಿಸಿಕೊಳ್ಳುವ ಯತ್ನಕ್ಕೆ ಮುಂದಾಗಿದೆ. ಭಾರತದ ಸೇನಾ ಕಾರ್ಯಾಚರಣೆಯ ಬೆದರಿಕೆಯಿಂದ ಪತರುಗಟ್ಟಿರುವ ಪಾಕಿಸ್ತಾನವು, ಪಹಲ್ಗಾಮ್ ದಾಳಿ ಕುರಿತು ಯಾವುದೇ ತಟಸ್ಥ ಮತ್ತು ಪಾರದರ್ಶಕ ತನಿಖೆ’ಗೆ ಸಿದ್ದ ಎಂದು ಹೇಳಿ ಹೊಸ ನಾಟಕ ಶುರುಮಾಡಿದೆ.
ಪಹಲ್ಗಾಮ್ ದಾಳಿಯ ಬಳಿಕ ಒಮ್ಮೆಯೂ ಈ ಕುರಿತು ಮಾತನಾಡದೇ ಇದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪಹಲ್ಗಾಮ್ ಘಟನೆಯು ನಮ್ಮ ವಿರುದ್ಧ ಭಾರತ ನಿರಂತರವಾಗಿ ಮಾಡಿಕೊಂಡು ಬಂದಿರುವ ದೂಷಣೆಗೆ ಮತ್ತೊಂದು ಉದಾಹರಣೆಯಾಗಿದೆ. ಇದಕ್ಕೆಲ್ಲ ಅಂತ್ಯ ಹಾಕಬೇಕು. ಹೀಗಾಗಿ ಜವಾಬ್ದಾರಿಯುತ ದೇಶವಾಗಿ ಪಾಕಿಸ್ತಾನವು ಈ ದಾಳಿ ಕುರಿತ ಯಾವುದೇ ತಟಸ್ತ ಪಾರದರ್ಶಕ ಮತ್ತು ವಿಶ್ವಾಸಾರ್ಹ ತನಿಖೆಗೆ ಸಿದ್ದ ಎಂದು ಘೋಷಿಸಿದ್ದಾರೆ.
ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶೆಹಬಾಜ್ ಯಾವತ್ತಿದ್ದರೂ ಶಾಂತಿಯೇ ನಮ್ಮ ಆದ್ಯತೆ. ಹಾಗಂತ ಅದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು. ನಾವು ದೇಶದ ಘನತೆ ಮತ್ತು ಭದ್ರತೆ ವಿಚಾರದಲ್ಲಿ ಯಾವತ್ತೂ ರಾಜಿ ಮಾಡಿ ಕೊಳ್ಳುವುದಿಲ್ಲ. ಯಾವುದೇ ವಿಶ್ವಾಸಾರ್ಹ ತನಿಖೆ ಅಥವಾ ಬಲವಾದ ಸಾಕ್ಷ್ಯಗಳಿಲ್ಲದೆ ಭಾರತವು ಆಧಾರರಹಿತ ಹಾಗೂ ಸುಳ್ಳು ಆರೋಪ ಮಾಡುತ್ತಿದೆ ಎಂದರು

