ಪುಸ್ತಕ: ಪರಿಪ್ರೇಕ್ಷ್ಯ
ಲೇಖಕರು: ಡಾ.ಪಾರ್ವತಿ ಜಿ ಐತಾಳ್
ಬೆಲೆ:೧೭೦
ಪುಟ:೧೫೨
ಪ್ರಕಾಶನ: ಸಾಧನಾ ಪ್ರಕಾಶನ
ಭಾಷೆಯ ಅಭಿವೃದ್ಧಿಗೆ ಕೊಡುಕೊಳ್ಳುವಿಕೆಯಂತೆ ನಮ್ಮ ಸಾಹಿತ್ಯ,ನಾಟಕರಂಗದ ಅವಲೋಕನ,ನಡೆದುಬಂದ ದಾರಿಯನ್ನು ತಿಳಿದುಕೊಳ್ಳುವುದರೊಂದಿಗೆ ಬೇರೆ ದೇಶದ,ಭಾಷೆಯ ಬೆಳೆದುಬಂದ ದಾರಿ ಅಲ್ಲಿನ ಸಾಹಿತ್ಯ,ನಾಟಕರಂಗದ ಅಧ್ಯಯನದಿಂದ ನಾವು ನಮ್ಮಲ್ಲಿ ಅಳವಡಿಸಿಕೊಂಡು,ಬದಲಾವಣೆ ತಂದುಕೊಂಡು,ನಮ್ಮ ಭಾಷಾ ಸಾಹಿತ್ಯ,ರಂಗಭೂಮಿಯಲ್ಲಿ ಹೊಸಪ್ರಯೋಗಗಳನ್ನು ಮಾಡಿದರೆ ಭಾಷೆಯ ಬೆಳವಣಿಗೆ ಸಾಧ್ಯ.
ಖ್ಯಾತ ಲೇಖಕಿ,ವಿಮರ್ಶಕಿ,ಅನುವಾದಕಿಯಾಗಿರುವ ಡಾ.ಪಾರ್ವತಿ ಜಿ.ಐತಾಳ್ ರವರು ತಮ್ಮ ೧೦ನೇ ಲೇಖನ ಸಂಕಲನ ʼಪರಿಪ್ರೇಕ್ಷ್ಯʼ ದ ಮೂಲಕ ಅವರ ದೃಷ್ಠಿಕೋನವನ್ನೂ,ಅನುಭವವನ್ನೂ,ಅಧ್ಯಯನವನ್ನೂ ನಮ್ಮ ಮುಂದಿಡುತ್ತಾ ಅನೇಕ ಮಾಹಿತಿಗಳನ್ನು ನಮಗೆ ಒದಗಿಸಿದ್ದಾರೆ.ಚೀನಾದಲ್ಲಿ ಗದ್ಯ,ಕಾವ್ಯ ಬೆಳೆದು ಬಂದ ದಾರಿಯತ್ತ ದೃಷ್ಠಿಹರಿಸಿ,ಕನ್ನಡ ನಾಟಕ ರಂಗಭೂಮಿ ಬೆಳೆದು ಬಂದ ಪರಿಯತ್ತ ಇಣುಕುನೋಟ ಬೀರಿ,ಅಲ್ಲಿಯ ಸಕಾರಾತ್ಮಕ ಅಂಶಗಳನ್ನು ಗಮನಿಸಿ ನಮಗೆ ತಿಳಿಸಿದ್ದಾರೆ.ಕುಂದಾಪುರ ಕನ್ನಡದಲ್ಲಿ ಸಾಹಿತ್ಯ,ಸಂಸ್ಕೃತಿ ನಡೆದು ಬಂದ ದಾರಿಯತ್ತ ಬೆಳಕು ಬೀರಿ ಇಂದಿನ ಯುವಪೀಳಿಗೆಗೆ ಪ್ರಾಂತೀಯ ಭಾಷೆಯ ಮಹತ್ವವನ್ನು ತಿಳಿಸಿದ್ದಾರೆ. ಇಂದಿನ ಯುಗದಲ್ಲಿ ಯಂತ್ರಗಳನ್ನು ಉಪಯೋಗಿಸಿ ಕೆಲಸಗಳು ಬೇಗ ಮುಗಿದಾಗ,ಉಳಿದ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ನಮ್ಮ ಭಾಷಾ ಬೆಳವಣಿಗೆಯತ್ತ ಅ ಧ್ಯಯನ ನಡೆಸಲು ಕರೆನೀಡುತ್ತಿದ್ದಾರೆ.
ಅನುವಾದದ ಅಗತ್ಯತೆ,ಅನುವಾದ ಮಾಡುವಾಗ ಅನುಸರಿಸಬೇಕಾದ ಕ್ರಮಗಳು,ಇವುಗಳ ಮಾಹಿತಿ ನೀಡುತ್ತಾ,ಅನುವಾದ ಮಾಡಲು ಅವರಿಗೆ ಸಿಕ್ಕ ಪ್ರೇರಣೆ ಇವೆಲ್ಲವನ್ನು ಹಂಚಿಕೊಳ್ಳುವಂತಹ ಅವರ ಸಂದರ್ಶನವನ್ನು ಪ್ರಸ್ತುತ ಪಡಿಸಿರುವ ಲೇಖಕಿ,ಎಂ.ಟಿ.ವಾಸುದೇವನ್ ನಾಯರ್ ರವರ ಕಿರು ಸಂದರ್ಶನವನ್ನು ಬರೆದಿದ್ದಾರೆ.ಒಂದೆರಡು ಅನುವಾದದ ಉದಾಹರಣೆಗಳನ್ನು ನೀಡುತ್ತಾ ಹೊಸ ಅನುವಾದಕರಿಗೆ ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ.೯೨ ವರ್ಷಗಳ ತುಂಬು ಜೀವನ ನಡೆಸಿ,ಸಾಹಿತ್ಯ,ಚಲನಚಿತ್ರರಂಗಕ್ಕೆ ಕೊಡುಗೆ ನೀಡಿದ ಎಂ.ಟಿ.ವಾಸುದೇವನ್ ನಾಯರ್ ಇಹಲೋಕ ತ್ಯಜಿಸಿದಾಗ ʼಮಲಯಾಳ ಸಾಹಿತ್ಯದಲ್ಲಿ ಒಂದು ಯುಗದ ಅಂತ್ಯʼಎಂಬ ಲೇಖನದ ಮೂಲಕ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿ,ಅವರ ಬರವಣಿಗೆ ,ಅನುವಾದಕ್ಕೆ ಪ್ರೇರಣೆ ನೀಡಿದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ನಾಟಕ,ಯಕ್ಷಗಾನ ಕಲಾಪ್ರದರ್ಶನಗಳ ವಿಮರ್ಶೆಯನ್ನು ನಮ್ಮ ಮುಂದಿಡುತ್ತಾ,ಅವುಗಳ ಬೆಳವಣಿಗೆಗಾಗಿ ಇಂದಿನ ಫ್ಯೂಷನ್ ಕಲೆಯನ್ನು ಒಪ್ಪಿಕೊಂಡು ಕಾಲಕ್ಕೆ ತಕ್ಕಂತೆ ನಡೆಯತ್ತಾ ನಮ್ಮ ಕಲೆಯನ್ನು ಉಳಿಸಿಬೆಳೆಸುವ ಕರೆ ನೀಡುತ್ತಿದ್ದಾರೆ.ಇಂಜಿನಿಯರ್,ಡಾಕ್ಟರ್ ಎಂದು ಉದ್ಯೋಗದತ್ತ ಮನಹೊರಳಿಸಿ,ಕಲೆ,ಸಾಹಿತ್ಯದೆಡೆ ಒಲವು ಕಡಿಮೆ ಮಾಡಬಾರದು,ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಕಲಾವಿದರಾಗಲು ಮನಸು ಮಾಡಬೇಕು ಎಂಬ ಕರೆಯನ್ನೂ ನೀಡುತ್ತಾರೆ.
ಹೀಗೆ ಸಾಹಿತ್ಯ,ಯಕ್ಷಗಾನ,ನಾಟಕ ಇತ್ಯಾದಿ ಕಲೆಗಳಿಂದ ನಮ್ಮ ಸಂಸ್ಕೃತಿ ಬೆಳೆದು ನಮ್ಮ ಭಾಷಾಭಿವೃದ್ಧಿಯೆಡೆ ಸಾಗುವಲ್ಲಿ ಇಂದಿನ ಯುವಜನಾಂಗ ಕೈಜೋಡಿಸಬೇಕಿದೆ.ಯುವಜನರು ಮನಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲರು,ಲೇಖಕಿಯ ಪರಿಪ್ರೇಕ್ಷ್ಯವನ್ನು ನಾವು ಓದಿ ಅಳವಡಿಸಿಕೊಂಡು ನಮ್ಮ ಭಾಷೆ ಬೆಳವಣಿಗೆಯತ್ತ ಹೆಜ್ಜೆ ಹಾಕಿದರೆ ಲೇಖಕಿಯ ಲೇಖನಗಳು ಸಾರ್ಥಕ.

