ನಮಗೆ ಬಾಳು ಸಿಕ್ಕಿದೆ, ಶ್ವಾಸ ಸಿಕ್ಕಿದೆ, ಮನುಷ್ಯತ್ವ ಸಿಕ್ಕಿದೆ. ಆದರೆ ಪ್ರತಿದಿನದ ಓಟದಲ್ಲಿ ನಾವು ಈ ಅಮೂಲ್ಯವಾದ ವರಗಳನ್ನು ಮರೆತುಬಿಡುತ್ತೇವೆ.ಅದನ್ನು ನೆನಪಿಸಲು, ಜಗತ್ತೇ ಒಂದಾಗಿ ಆಚರಿಸುವ ದಿನವೇ ಸೆಪ್ಟೆಂಬರ್ 21 – ವಿಶ್ವ ಕೃತಜ್ಞತಾ ದಿನ.
ಕೃತಜ್ಞತೆ ಇದು ಕೇವಲ “ಧನ್ಯವಾದ” ಎಂಬ ಒಂದು ಪದವಲ್ಲ, ನಮಗೆ ಸಿಕ್ಕಿರುವ ಸಣ್ಣ ಸಣ್ಣದರಲ್ಲಿಯೂ ಸಂತೋಷ ಕಂಡುಕೊಳ್ಳುವ ಹೃದಯದ ಭಾವನೆ; ಅದು ಜೀವನ ಕೊಟ್ಟ ಪ್ರತಿಯೊಂದು ಅನುಭವವನ್ನು ದೇವರ ವರವೆಂದು ಸ್ವೀಕರಿಸುವ ಮನೋಭಾವ; ಅದು ಬಾಳಿಗೊಂದು ಧನ್ಯವಾದ ಹೇಳುವ ಶಾಂತ ಮನಸ್ಥಿತಿ.”
“ಕೃತಜ್ಞತೆ ಎಂದರೆ –ನಾವು ಹೊಂದಿರುವದನ್ನು ಮೌಲ್ಯಮಾಪನ ಮಾಡುವುದು, ನಮಗೆ ನೆರವಾದವರನ್ನು ನೆನೆದು ಗೌರವಿಸುವುದು,ನಮಗೆ ಸಿಕ್ಕ ಪ್ರತಿಯೊಂದು ಅನುಭವಕ್ಕೂ ಕೃತಜ್ಞರಾಗುವುದು ಮತ್ತು ಜೀವನವನ್ನು ಕೃತಾರ್ಥವೆಂದು ಅನುಭವಿಸುವುದು.”
ಕೃತಜ್ಞತಾ ಮನೋಭಾವ ಹೆಚ್ಚಿದಂತೆ ನಮ್ಮಲ್ಲಿ ವಿನಯವಂತಿಕೆಯ ಜೊತೆಗೆ ಧನಾತ್ಮಕ ಚೈತನ್ಯ ಕೂಡಾ ವೃದ್ಧಿಯಾಗುವುದು. ಉಪಕಾರ ಪಡೆದವನಿಗೆ ಪ್ರತ್ಯುಪಕಾರ ಅಥವಾ ಒಂದು ಮನದಾಳದ ನಮನ ಅಥವಾ ಕನಿಷ್ಟ ಒಂದು ಸಣ್ಣ ನಗು ಎಲ್ಲವೂ ಕೃತಜ್ಞತೆಗಳೇ. ಧನ್ಯತಾ ಸ್ವಭಾವ ನಮ್ಮಲ್ಲಿ ಅಂತರ್ಗತವಾಗಿರುವ ಅಹಂಕಾರ ಕ್ಷೀಣಿಸುವಂತೆ ಮಾಡುತ್ತದೆ ಎಂಬುದು ಕೂಡಾ ವೈಜ್ಞಾನಿಕವಾಗಿ ಧೃಢಪಟ್ಟ ವಿಷಯ.
ಕೃತಜ್ಞತೆಯನ್ನು ಬೆಳೆಸುವ ಸುಲಭ ಮಾರ್ಗಗಳು ಪ್ರತಿದಿನ ರಾತ್ರಿ ಮಲಗುವ ಮೊದಲು “ಇಂದು ನಾನು ಧನ್ಯವಾದ ಹೇಳಬೇಕಾದ 3 ವಿಷಯಗಳು ಯಾವವು?” ಎಂದು ಬರೆಯಿರಿ.ಮೌನವಾಗಿ ಪ್ರಕೃತಿಯತ್ತ ನೋಡಿ: ಗಾಳಿ, ಮಳೆ, ಸೂರ್ಯ, ಹೂವು – ಇವುಗಳಿಗೂ ಧನ್ಯವಾದ ಹೇಳಿ. ಕುಟುಂಬ, ಸ್ನೇಹಿತರಿಗೆ “ನೀನು ನನ್ನ ಜೀವನದಲ್ಲಿದ್ದೀಯೆಂಬುದು ನನಗೆ ಭಾಗ್ಯ” ಎಂದು ಹೇಳಿ. ಕಷ್ಟ ಬಂದಾಗ “ಇದು ನನ್ನನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ” ಎಂದು ಮನಸ್ಸಿನಲ್ಲಿ ಭಾವಿಸಿ. ಯಾರಾದರೂ ಸಹಾಯ ಮಾಡಿದಾಗ ನಗೆಯೊಂದಿಗೆ ಹೃದಯದಿಂದ “ಧನ್ಯವಾದ” ಹೇಳಿ. ಪ್ರಕೃತಿ, ಆಹಾರ, ಆರೋಗ್ಯ, ಕುಟುಂಬ – ಇವುಗಳ ಮೌಲ್ಯ ಅರಿತು ಬದುಕುವುದು.
ಕೋಪ, ಅಸಮಾಧಾನ ಬದಲು, ಸಕಾರಾತ್ಮಕ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವುದು.
ಮಿತ್ರರೇ, ನಾವು ಯಾವಾಗಲೂ ದೊಡ್ಡ ಕನಸುಗಳನ್ನು ಕಾಣುತ್ತೇವೆ. ಇನ್ನೂ ಮನೆ ಬೇಕು, ಇನ್ನೂ ಆಸ್ತಿ ಬೇಕು, ಇನ್ನೂ ಅವಕಾಶ ಬೇಕು. ಆದರೆ ಕಣ್ಣನ್ನು ಮುಚ್ಚಿ ನೋಡಿದರೆ – ನಮಗೆ ಬಾಳು ಕೊಟ್ಟ ತಂದೆ-ತಾಯಿ, ಬೆಂಬಲ ನೀಡಿದ ಸ್ನೇಹಿತರು, ಮಾರ್ಗ ತೋರಿದ ಗುರುಗಳು, ಹಸಿರು ಮರಗಳು, ಸುರಿಯುವ ಮಳೆ – ಇವೆಲ್ಲವೂ ಈಗಾಗಲೇ ನಮಗೆ ಸಿಕ್ಕಿರುವ ಅಳತೆಯಿಲ್ಲದ ಸಂಪತ್ತು. ಇವುಗಳ ಮೌಲ್ಯ ಅರಿತಾಗ ಹೃದಯದಲ್ಲಿ ಹುಟ್ಟುವ ಭಾವನೆಗೆ ಒಂದು ಹೆಸರೇ – ಕೃತಜ್ಞತೆ.
ಕೃತಜ್ಞತೆ ಎಂದಾಗ ಮೊದಲು ನೆನಪಿಸಬೇಕಾದುದು ಸೃಷ್ಟಿಯ ಸೂತ್ರಧಾರ ಭಗವಂತನನ್ನು. ಪ್ರಕೃತಿಯ ನಿಯಮದಂತೇ ನಡೆಯುವ ಸೃಷ್ಟಿಯನ್ನು ಕೃತಕವಾಗಿ ಉಂಟುಮಾಡಲು ಮನುಷ್ಯನಿಗೆ ಇದುವರೆಗೂ ಸಾಧ್ಯವಾಗಿಲ್ಲ. ವಿಪರ್ಯಾಸ ಏನೆಂದರೆ ವೈಜ್ಞಾನಿಕವಾಗಿ ನಾವು ಎಷ್ಟು ವಿಕಸನ ಹೊಂದಿದ್ದರೂ ನಮ್ಮ ಜೀವಕ್ಕೆ ಅನಿವಾರ್ಯವಾದ ಒಂದು ಹನಿ ರಕ್ತವನ್ನೂ ಕೂಡಾ ಕೃತಕವಾಗಿ ತಯಾರಿಸಿ ದೇಹಕ್ಕೆ ಒದಗಿಸುವ ಸೂತ್ರ ಮಾನವನು ಇದುವರೆಗೆ ಕಂಡುಹಿಡಿದಿಲ್ಲ. ಮನುಷ್ಯ ಎಲ್ಲದಕ್ಕೂ ಬೆಲೆ ಕಟ್ಟುತ್ತಾನೆ ಆದರೆ ಭಗವಂತ ನಮಗೆ ಪುಕ್ಕಟೆಯಾಗಿ ಕೊಟ್ಟಂತಹ ಬೆಲೆ ಕಟ್ಟಲಾಗದ ಶರೀರದ ಪ್ರತಿಯೊಂದು ಅಂಗಾಂಗಗಳ ಬೆಲೆ ಅರಿವೆಯೇ ಇಲ್ಲದಂತೆ ವರ್ತಿಸುತ್ತಾನೆ.
ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳ ಒಟ್ಟು ಮೌಲ್ಯ ಲೆಕ್ಕ ಹಾಕಿದರೆ ಊಹಿಸಲೂ ಅಸಾಧ್ಯ. ಯಾವುದಾದಾರೂ ಅಂಗಾಂಗ ನಿಷ್ಕ್ರಿಯಗೊಂಡಾಗ ಅಥವಾ ನಿಷ್ಕ್ರಿಯಗೊಂಡ ಒಂದೊಂದು ಅಂಗಾಂಗಗಳ ಮರುಜೋಡಣೆಗೆ ತಗಲುವ ಈಗಿನ ವೆಚ್ಚವನ್ನು ಲೆಕ್ಕ ಹಾಕಿದಾಗಲೇ ಕೋಟಿ ಕೋಟಿ ಬೆಲೆ ಬಾಳುವ ನಮ್ಮ ದೇಹ ಭಗವಂತ ನಮಗೆ ಉಚಿತವಾಗಿ ಕೊಟ್ಟಿದ್ದಾನೆ ಎಂದು ಅರಿವಿಗೆ ಬರುವುದು. ಎಷ್ಟೇ ಶ್ರೀಮಂತನಾದರೂ ಕೂಡಾ ಮರಣವನ್ನು ಜಯಿಸುವ ವಿದ್ಯೆ ಕಲಿತಿಲ್ಲ ಎಂದಾದ ಮೇಲೆ ನಮಗೆ ಪರಿಪೂರ್ಣ ಅಂಗಾಂಗಗಳನ್ನೂ, ಬುದ್ಧಿಯನ್ನೂ ಕರುಣಿಸಿದ ಭಗವಂತನಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ಜಗತ್ತಿನಲ್ಲಿ ಹಲವರಿಗೆ ತಂದೆ ತಾಯಿಯ ಜೊತೆ ಬಾಳುವ ಸುಯೋಗವೇ ಇಲ್ಲ, ಇನ್ನು ಕೆಲವರಿಗೆ ಮಕ್ಕಳ ಭಾಗ್ಯವೇ ಇಲ್ಲ. ದುಡ್ಡಿದ್ದವನಿಗೆ ಆರೋಗ್ಯವಿಲ್ಲ, ಆರೋಗ್ಯ ಇದ್ದವನಿಗೆ ಬದುಕಲು ದುಡ್ಡೇ ಇಲ್ಲ. ಹೀಗಿದ್ದ ಮೇಲೆ ….ಡಿವಿಜಿಯವರ ಕವನದ ಸಾಲಿನಂತೆ –
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು
ಗುರುತಿಸೊಳಿತಿರುವುದನು ಕೇಡುಗಳ ನಡುವೆ
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು
ಹರುಷಕದೆ ದಾರಿಯೆಲೊ ಮಂಕುತಿಮ್ಮ
ನಾವು ಸಿಗದ ವಸ್ತುಗಳಿಗಾಗಿ ಹಾತೊರೆಯುವಾಗ ಕೈಯಲ್ಲಿರುವ ಸಣ್ಣ ಪುಟ್ಟ ಸಂತೋಷಗಳನ್ನು, ಅವಕಾಶಗಳನ್ನು ಮರೆಯಬಾರದು ಎಂಬುದೇ ಇಲ್ಲಿಯ ಆಶಯ.ನಮ್ಮ ಬದುಕು ರೂಪುಗೊಳ್ಳಲು ಬೆನ್ನೆಲುಬಾಗಿ ನಿಂತ ನಮ್ಮ ಹೆತ್ತವರು, ಗುರುಗಳು, ಒಡಹುಟ್ಟು, ಸ್ನೇಹಿತರು, ಬಂಧುಗಳು ಮುಂತಾದವರು ಮಾಡಿದ ತ್ಯಾಗದ ಬೆಲೆ ಕಟ್ಟಲು ಅಸಾಧ್ಯ. ಇನ್ನೂ ಹೇಳಬೇಕೆಂದರೆ ಕೃತಜ್ಞತೆ ಸಲ್ಲಿಸಬೇಕಾದುದು ಕೇವಲ ಸಹಾಯ ಹಸ್ತ ನೀಡಿದವರಿಗೆ ಮಾತ್ರವಲ್ಲ, ನಮ್ಮನ್ನು ಹೆಜ್ಜೆ ಹೆಜ್ಜೆಗಳಲ್ಲಿ ವಿರೋಧಿಸಿದವರು, ಅಪಮಾನ ಮಾಡಿದವರು, ಕಷ್ಟ ತಂದೊಡ್ಡಿದವರೂ ಕೂಡಾ ಕೃತಜ್ಞತೆಗೆ ಅರ್ಹರು. ಕಾರಣ ವಿರೋಧ ಇದ್ದಾಗಲೇ ಗೆಲ್ಲುವ ಛಲ ಹುಟ್ಟುವುದು, ಕಷ್ಟ ಬಂದಾಗಲೇ ಪರಿಹಾರವನ್ನು ಹುಡುಕುವ ಧೈರ್ಯ ಮೈಗೂಡುವುದು. ಕೃತಜ್ಞತೆ ಇಲ್ಲದ ಮಾನವನು ಜಡವಸ್ತುವಿಗೆ ಸಮಾನ ಎಂದು ಬಲ್ಲವರ ನುಡಿ. ಯಾರು ಕೃತಜ್ಞತೆ ಇರದೆ ಫಲವನ್ನು ಉಣ್ಣುತ್ತಾನೋ ಅವರನ್ನು ಕಳ್ಳರು ಎಂದರೂ ತಪ್ಪಿಲ್ಲ. ಎಷ್ಟೋ ಸಂದರ್ಭದಲ್ಲಿ ನಾವು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರ ಇನ್ಯಾರೋ ತೀರಿಸುತ್ತಾರೆ. ಅರ್ಥಾತ್ ನಾವು ಮಾಡಿದ ಉಪಕಾರಕ್ಕೆ ಆ ಕ್ಷಣಕ್ಕೆ ಅದೇ ವ್ಯಕ್ತಿಯಿಂದಲೇ ಕೃತಜ್ಞತೆ ದೊರಕದಿದ್ದರೂ ಭಗವಂತನ ಖಾತೆಯಲ್ಲಿ ನಾವು ಮಾಡಿದ ಸತ್ಕಾರ್ಯಗಳು ಕಾಲಕಾಲಕ್ಕೆ ಸಂಗ್ರಹವಾಗಿ ಅಗತ್ಯ ಬಂದಾಗ ಮತ್ತೊಂದು ರೂಪದಲ್ಲಿ ನಮಗೇ ಹಿಂದಿರುಗುತ್ತದೆ ಎಂಬುದೂ ಸತ್ಯ.
ಕೃತಜ್ಞತೆಗೆ ಅರ್ಹರಾದವರು ನಮ್ಮ ಜೀವನದಲ್ಲಿ ಇನ್ನೂ ಅನೇಕರಿದ್ದಾರೆ. ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಜೀವಿಸಲು ಮತ್ತೊಂದು ದಿನ ಕರುಣಿಸಿದ್ದಕ್ಕೆ ಅಥವಾ ರಾತ್ರಿ ನಿದ್ದೆಯಲ್ಲಿ ಕರೆದುಕೊಂಡು ಹೋಗದ್ದದ್ದಕ್ಕೆ ಮೃತ್ಯು ದೇವತೆಗೆ ಕೃತಜ್ಞತೆ ಹೇಳಲೇಬೇಕು. ನಮಗೆ ನಿತ್ಯ ಸೇವೆ ಒದಗಿಸುವ ಪ್ರತಿಯೊಬ್ಬರಿಗೂ, ಆಹಾರ ಸ್ವೀಕರಿಸುವಾಗ ಅನ್ನದಾತನಿಗೂ, ಗಾಳಿ, ನೀರು, ಅಗ್ನಿ ಮುಂತಾದ ಪಂಚಭೂತಗಳಿಗೂ, ಆಹಾರ ತಯಾರಿಸಿದವರಿಗೂ, ಆಹಾರ ಬಡಿಸಿದವರಿಗೂ ಹೀಗೆ ಪ್ರತೀಯೊಬ್ಬರಿಗೂ ಕೃತಜ್ಞತೆ ಹೇಳಲೇಬೇಕು. ನಾವು ನಮ್ಮ ಜೀವನವನ್ನು ಬೆಳಗಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಹೆತ್ತವರ ಕಣ್ಣೆದುರೇ ಅವರು ಹೆಮ್ಮೆ ಪಡುವಂತೆ ಬೆಳೆಯೋಣ, ಗುರುವಿನ ಕಣ್ಣೆದುರು ಸದಾ ಉತ್ತಮ ಶಿಷ್ಯನಾಗಿ ತನ್ಮೂಲಕ ಸಮಾಜಕ್ಕೆ, ದೇಶಕ್ಕೆ, ಬೆಳಕಾಗೋಣ. ಸ್ನೇಹಿತರ ಜೊತೆ ಒಡನಾಟವನ್ನು ಕೊನೆವರೆಗೂ ಹಚ್ಚಹಸಿರಾಗಿ ಉಳಿಸಿಕೊಳ್ಳೋಣ. ಪ್ರಕೃತಿಯ ಜೊತೆ ಪ್ರಕೃತಿ ಸಂರಕ್ಷಕರಾಗೋಣ ಹಾಗೂ ವಿರೋಧಿಗಳ ಜೊತೆ ಅವರು ವಿರೋಧವನ್ನು ಮರೆತು ಸ್ನೇಹ ಬಯಸುವ ಮಟ್ಟಕ್ಕೆ ಬೆಳೆದು ನಿಲ್ಲೋಣ. ಈ ಮೂಲಕ ನಾವು ಸೃಷ್ಟಿಯ ಪ್ರತಿಯೊಬ್ಬರಿಗೂ, ಪ್ರತಿಯೊಂದಕ್ಕೂ ಕೃತಜ್ಞತೆಯನ್ನು ಸಲ್ಲಿಸೋಣ ಎಂದು ಹೇಳುತ್ತಾ ಈ ಲೇಖನ ಓದಿದ ನಿಮಗೆಲ್ಲರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ವಿಶ್ವ ಕೃತಜ್ಞತಾ ದಿನದ ಶುಭಾಶಯಗಳೊಂದಿಗೆ,

ಸ್ವರ್ಣ ಕುಂದಾಪುರ
ಆಪ್ತ ಸಮಾಲೋಚಕಿ

