121
ಮಂಗಳೂರು : ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ (32) ಹತ್ಯೆ ಬೆನ್ನಲ್ಲೇ ಮಂಗಳೂರು ಪ್ರಕ್ಷುಬ್ಧಗೊಂಡಿದೆ. ಹತ್ಯೆಗೆ ಪ್ರತೀಕಾರವಾಗಿ ಮಂಗಳೂರಿನ 3 ಕಡೆ ಚೂರಿ ಇರಿತ ಘಟನೆ ಹಾಗೂ 1 ಕಡೆ ತಲವಾರ್‌ನಿಂದ ಹಲ್ಲೆ ಸಂಭವಿಸಿದ್ದು ಐವರಿಗೆ ಗಾಯಗಳಾಗಿವೆ. ಇದೇ ವೇಳೆ ಪರಾರಿ ಆಗಿರುವ ಸುಹಾಸ್ ಹಂತಕರ ಪತ್ತೆಗೆ ಯತ್ನಗಳು ಮುಂದುವರಿದಿವೆ.
ಈ ಮಧ್ಯೆ, ಹತ್ಯೆ ಖಂಡಿಸಿ ಹಿಂದುಪರ ಸಂಘಟನೆಗಳು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಂಗಡಿ ಬಂದ್ ಆಗಿದ್ದವು. ಬಂದ್ ವೇಳೆ ಬಸ್ ಗಳಿಗೆ ಕಲ್ಲು ತೂರಲಾಗಿದ್ದು, 9 ಬಸ್ ಜಖಂಗೊಂಡಿವೆ. ಬಲವಂತವಾಗಿ ಅಂಗಡಿ ಬಂದ್ ಮಾಡಿಸಲು ಮುಂದಾದ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಮೇ 6 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಹಾಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ.

