ಭಾರತೀಯ ಜನಸಂಘದ ಸಂಸ್ಥಾಪಕ ಹಾಗೂ ದೇಶದ ಅಖಂಡತೆ ಮತ್ತು ಏಕತೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದ ಧೀಮಂತ ನಾಯಕ ಡಾ| ಶ್ಯಾಮಪ್ರಸಾದ್ ಮುಖರ್ಜಿ ಪ್ರಾತ: ಸ್ಮರಣೀಯರು. ‘ಒಂದು ದೇಶದಲ್ಲಿ ಎರಡು ಪ್ರಧಾನಿ, ಎರಡು ಸಂವಿಧಾನ, ಎರಡು ಧ್ವಜ ಇರಬಾರದು’ ಎಂದು ಪ್ರತಿಪಾದಿಸಿ, ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಏಕೀಕರಣಕ್ಕಾಗಿ ಹೋರಾಡಿದ ಡಾ! ಶ್ಯಾಮಪ್ರಸಾದ್ ಮುಖರ್ಜಿ ಅವರ ಜೀವನಾದರ್ಶಗಳು ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ತಿಳಿಸಿದರು.
ಅವರು ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಡಾ! ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿನದ ಸ್ಮರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಲ್ಕತ್ತಾ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ಉಪ ಕುಲಪತಿಯಾಗಿ ಸೇವೆ ಸಲ್ಲಿಸಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾ| ಮುಖರ್ಜಿ ಅವರು ಭಾರತದ ಮೊದಲ ಕೈಗಾರಿಕಾ ಮತ್ತು ಸರಬರಾಜು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ತುಷ್ಟೀಕರಣದ ನೀತಿಗಳನ್ನು ವಿರೋಧಿಸಿ ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿದ ಡಾ! ಮುಖರ್ಜಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದೊಂದಿಗೆ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ವಿಭಜಕ ‘370ನೇ ವಿಧಿ’ಯನ್ನು ಬಲವಾಗಿ ವಿರೋಧಿಸಿದ್ದ ಡಾ| ಶ್ಯಾಮಪ್ರಸಾದ್ ಮುಖರ್ಜಿ ಅವರು 1953ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದಾಗ ಬಂಧನಕ್ಕೊಳಗಾಗಿ ಜೈಲುವಾಸದಲ್ಲಿರುವಾಗಲೇ ಅನುಮಾನಾಸ್ಪದವಾಗಿ ನಿಧನರಾದರು. ಅವರ ದೂರದೃಷ್ಟಿ, ರಾಷ್ಟ್ರಭಕ್ತಿ, ಉದಾತ್ತ ಚಿಂತನೆಗಳು, ತ್ಯಾಗ ಮತ್ತು ಬಲಿದಾನ ಪಕ್ಷದ ಕಾರ್ಯಕರ್ತರಿಗೆ ದಾರಿದೀಪ ಎಂದು ದಿನಕರ ಶೆಟ್ಟಿ ಹೆರ್ಗ ತಿಳಿಸಿದರು.
ಡಾ| ಶ್ಯಾಮಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಸಾಮೂಹಿಕ ಪುಷ್ಪಾರ್ಚನೆಗೈಯಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

