ಮಾನವನ ಈ ಭೂಮಿಯಲ್ಲಿನ ಅಸ್ತಿತ್ವ, ಕೇವಲ ಅವನ ಶ್ರೇಷ್ಠತೆಯ ಚಿಹ್ನೆಯಲ್ಲ, ಬದಲಿಗೆ ಅವನು ಪ್ರಕೃತಿಯ ಸಹಯಾತ್ರಿಯೂ ಹೌದು. ಈ ಸಹಯಾತ್ರೆಯಲ್ಲಿ ಪ್ರಾಣಿಗಳು — ನಮ್ಮ ಅಸ್ತಿತ್ವದ ಅವಿಭಾಜ್ಯ ಅಂಗಗಳು.
ಅಕ್ಟೋಬರ್ 4ರಂದು ಆಚರಿಸುವ “ವಿಶ್ವ ಪ್ರಾಣಿ ದಿನ”, ಮಾನವ ಮತ್ತು ಪ್ರಾಣಿಗಳ ನಡುವಿನ ದಯೆ, ಸಹಾನುಭೂತಿ ಮತ್ತು ಸಹಅಸ್ತಿತ್ವದ ಬಾಂಧವ್ಯವನ್ನು ಸ್ಮರಿಸುತ್ತದೆ.
ಈ ದಿನವನ್ನು ಇಟಲಿಯ ಸೈಂಟ್ ಫ್ರಾನ್ಸಿಸ್ ಅಸ್ಸಿಸಿ ಅವರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಅವರು ಎಲ್ಲಾ ಪ್ರಾಣಿಗಳಲ್ಲಿ ದೈವತ್ವವನ್ನು ಕಂಡ ಮಹಾತ್ಮರು.
ಜಗತ್ತಿನ ಎಲ್ಲಾ ಚರಾಚರ ವಸ್ತುಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಪರಸ್ಪರ ಹೊಂದಾಣಿಕೆ ಇದೆ. ಜಗತ್ತು ನಡೆಯುತ್ತಿರುವುದೇ ನಂಬಿಕೆ ಮತ್ತು ಹೊಂದಾಣಿಕೆಗಳಿಂದ. ವಿವಿಧ ರೀತಿಯ ಪ್ರಾಣಿಗಳು ಪ್ರಕೃತಿಯಲ್ಲಿ ಅವಲಂಬಿತವಾಗಿವೆ. ಒಂದು ಸರಪಳಿ ರೀತಿಯಲ್ಲಿ ಸಹಜವಾಗಿ ಜೀವನ ಸಾಗುತ್ತಿರುತ್ತದೆ. ಉದಾಹರಣೆಗೆ, ಒಂದು ಪ್ರಾಣಿಗೆ ಇನ್ನೊಂದು ಪ್ರಾಣಿ ಆಹಾರ. ಪ್ರಾಣಿಗಳಿಗೆ ಆರೋಗ್ಯ ಕೆಟ್ಟರೆ ಅವುಗಳೇ ಆರೈಕೆ ಮಾಡಿಕೊಂಡು ಔಷಧಿ ಕಂಡುಕೊಂಡು ಸುಧಾರಿಸಿಕೊಳ್ಳುತ್ತವೆ.
ಬುದ್ಧಿವಂತಿಕೆಯಲ್ಲಿ, ಜ್ಞಾನದಲ್ಲಿ ಮಾನವನನ್ನು ಮೀರಿಸುವ ಪ್ರಾಣಿ ಬೇರೊಂದಿಲ್ಲ. ಆದರೆ ಕೆಲವೊಂದು ಗುಣ ಸ್ವಭಾವಗಳಲ್ಲಿ ಮಾನವನನ್ನು ಮೀರಿಸುವ ಪ್ರಾಣಿಗಳೂ ಇವೆ. ಪ್ರಾಣಿಗಳು ಪರಾವಲಂಬಿಗಳಾದರೂ ಮಾನವನಿಗಿಂತ ಬುದ್ಧಿಶಕ್ತಿ, ಮುಂದಾಲೋಚನೆ ಅವುಗಳಿಗೆ ತುಂಬಾನೇ ಇರುತ್ತವೆ. ಇದು ಯಾರೂ ಕಾನೂನು ಮಾಡಿದ್ದಲ್ಲ. ಯಾರೂ ಕಲಿಸಿ ಕೊಟ್ಟದ್ದಲ್ಲ. ಎಲ್ಲಾ ಆ ದೇವನೇ ಸೃಷ್ಟಿಸಿ ಬಿಟ್ಟಿದ್ದಾನೆ. ಸಕ್ಕರೆ ಚೆಲ್ಲಿದರೆ ಎಲ್ಲಿಂದಲೋ ಇರುವೆಗಳು ಬರುತ್ತವೋ ಗೊತ್ತಿಲ್ಲ. ಅವುಗಳಿಗೆ ಯಾರೂ ಕರೆ ಮಾಡದಿದ್ದರೂ ಹಾಜರಾಗಿ ಬಿಡುತ್ತವೆ. ಪಪ್ಪಾಯಿ ಎಲೆಯು ಒಂದು ಔಷಧಿ ಅಂತ ಇತ್ತೀಚೆಗಷ್ಟೇ ನಮಗೆ ತಿಳಿದಿರುವುದು. ಆದರೆ ಮಂಗಗಳಿಗೆ ಅದೆಲ್ಲ ಮೊದಲೇ ತಿಳಿದಿತ್ತು. ಅಂದರೆ ಪ್ರಾಣಿಗಳಿಗೆ ಹುಟ್ಟಿನಿಂದಲೇ ಅವುಗಳ ಆಹಾರ, ಔಷಧಿ, ಅವುಗಳ ಶತ್ರುಗಳು ಯಾರು ಎಂಬುದೆಲ್ಲವೂ ತಿಳಿದಿರುತ್ತದೆ. ಇಂತಹ ಎಷ್ಟೋ ಸೋಜಿಗಗಳು ಜಗತ್ತಿನಲ್ಲಿ ನಿತ್ಯವೂ ನಡೆಯುತ್ತಿರುತ್ತವೆ.
ಮನುಷ್ಯನು ಜೀವನದಲ್ಲಿ ಪ್ರಾಣಿಗಳಿಂದಲೂ ಪಾಠ ಕಲಿಯಬೇಕಿದೆ. ಅವುಗಳ ಬುದ್ಧಿವಂತಿಕೆ ಮಾನವನಿಗಿಂತಲೂ ಜಾಸ್ತಿಯೇ ಇದೆ. ಸಾಕುಪ್ರಾಣಿಗಳಲ್ಲಿ ನಾಯಿಯ ನಿಯತ್ತು, ನಿಷ್ಠೆಯು ಮನುಷ್ಯನಿಗೆ ಪಾಠ. ನಾಯಿಗಳು ರಕ್ಷಣಾವ್ಯವಸ್ಥೆಯಲ್ಲಿ ಮನುಷ್ಯನಿಗೂ ಮೀರಿದ ಸೂಕ್ಷ್ಮದ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತವೆ.
ಈ ಜಗತ್ತಿನ ಆಧುನಿಕತೆಯ ನಿರ್ಮಾಣದಲ್ಲಿ ಪ್ರಾಣಿಗಳಿಗೆ ಬದುಕಲು ಸ್ಥಳವಿಲ್ಲವಾಗಿದೆ. ಪ್ರಾಣಿಗಳನ್ನು ಕೇವಲವಾಗಿ ನೋಡುವ ಮನಸ್ಥಿತಿಯಿಂದ ಮನುಷ್ಯ ಹೊರಬರಬೇಕು. ಪ್ರಾಣಿಗಳೇ ಇಲ್ಲದ ಪ್ರಪಂಚದಲ್ಲಿ ನಮ್ಮ ಜೀವನ ಹೇಗೆ ಸಾಧ್ಯ ಎಂಬುದು ಮನದಲ್ಲಿ ಮೂಡಲೇಬೇಕಾದ ಚಿಂತನೆ. ಪರಿಸರದ ಸಮತೋಲನವನ್ನು ಕಾಪಾಡುವುದರಲ್ಲಿ ಪ್ರಾಣಿಗಳ ಪಾತ್ರ ಹಾಗೂ ಕೊಡುಗೆ ಅಪಾರ. ಕೇಳಿದ್ದನ್ನು ಕೊಡುವ ಕಾಮಧೇನು ಅಂತ ಹಿರಿಯರು ಗೋವುಗಳನ್ನು ಪೂಜಿಸುತ್ತಿದ್ದರು. ಸಂಸಾರಕ್ಕೆ ಕಷ್ಟ ಬರುವ ಸೂಚನೆ ಬಂದಾಗ ಗೋವುಗಳಿಗೆ ಏನಾದರೂ ಖಾಯಿಲೆಯಂತಹ ಕಷ್ಟ ಬರುತ್ತದೆ. ಅಂದರೆ ಮನೆಯವರ ಸಂಕಷ್ಟಗಳನ್ನು ಗೋವುಗಳೇ ಅನುಭವಿಸಿ, ಮನೆಯವರನ್ನು ಕಾಪಾಡುತ್ತವೆ ಎಂಬುದು ನಮ್ಮ ಹಿರಿಯರ ನಂಬಿಕೆ. ಇದು ನಮ್ಮ ಅನುಭವದ ಸತ್ಯವೂ ಹೌದು.
ಹಿಂದೆಲ್ಲಾ ಅಕ್ಕಿ ಹಿಟ್ಟಿನಿಂದ ರಂಗೋಲಿ ಬರೆಯುತ್ತಿದ್ದರು. ಇರುವೆಗಳಿಗೆ ಆಹಾರ ಸಿಗಲಿ ಅಂತ. ನಾವು ಊಟ ಮಾಡುವ ಮೊದಲು ಒಂದು ಮುಷ್ಟಿ ಅನ್ನವನ್ನು ಎಲೆಯಲ್ಲಿ ಹಾಕಿ ಹೊರಗೆ ಇಡುತ್ತಿದ್ದರು. ಹಸಿವಾದ ಪ್ರಾಣಿಗಳು ತಿನ್ನಲಿ ಎಂದು. ಹಾಗೆ ಪಕ್ಷಿಗಳಿಗೂ ನೀರನ್ನು ಬಟ್ಟಲಲ್ಲಿ ಇಡುತ್ತಿದ್ದರು. ಆದರೆ ಇಂದು ಮಾನವನ ಅತಿಯಾದ ಆಮಿಷ ಮತ್ತು ಅಜ್ಞಾನದಿಂದ ಅವುಗಳ ಅಸ್ತಿತ್ವವೇ ಅಪಾಯದಲ್ಲಿದೆ —
ಕಾಡು ನಾಶ, ಪ್ಲಾಸ್ಟಿಕ್ ಮಾಲಿನ್ಯ, ಬೇಟೆ, ಮತ್ತು ನಿರ್ಲಕ್ಷ್ಯದಿಂದ ಸಾವಿರಾರು ಪ್ರಾಣಿಗಳು ನಾಶವಾಗುತ್ತಿವೆ.
ಪ್ರಾಣಿ ಇಲ್ಲದ ಭೂಮಿಯನ್ನು ಕಲ್ಪಿಸಿ ನೋಡಿ —
ನಿಸರ್ಗದ ನಾದ ನಿಲ್ಲುತ್ತದೆ,
ಹೂವುಗಳಿಗೆ ಪರಾಗಸಂಚಯ ಮಾಡುವ ಚಿಟ್ಟೆಗಳು ಇಲ್ಲ,
ಅರಣ್ಯಗಳು ನಿರ್ಜೀವವಾಗುತ್ತವೆ,
ಮತ್ತು ಮನುಷ್ಯನ ಹೃದಯವೂ ಖಾಲಿಯಾಗುತ್ತದೆ.ಎಲ್ಲಾ ಪ್ರಾಣಿಗಳೂ ಒಂದಲ್ಲ ಒಂದು ರೀತಿ ಮಾನವನಿಗೆ ಪ್ರಯೋಜನಕಾರಿ.
ಹಾಗಾಗಿಯೇ ಹಿರಿಯರ ಈ ಕಲ್ಪನೆಗಳ ಜೀವನಕ್ರಮದ ಪದ್ಧತಿ ಇಷ್ಟೊಂದು ಮೌಲ್ಯಯುತವಾಗಿರುವುದು. ಆದರೆ ಮಾನವನಿಗೆ ಮಾನವನೇ ಶತ್ರು ಆಗಿದ್ದಾನೆ. ಆಧುನಿಕತೆಯ ನಿರ್ಮಾಣದಲ್ಲಿ ಅವಶ್ಯಕ ಮೂಲಭೂತಗಳು ಜೀವಿಗಳಿಗೆ ಮರೀಚಿಕೆಯಾಗಿವೆ. ದೇವರು ಸೃಷ್ಟಿಸಿದ ವ್ಯವಸ್ಥೆಯನ್ನು ಮಾನವನು ಅವ್ಯವಸ್ಥೆ ಮಾಡಿಕೊಂಡು ಅತೃಪ್ತಿಯಿಂದ ಬದುಕುತ್ತಿದ್ದಾನೆ.
ಅದಕ್ಕಾಗಿಯೇ, ಈ ದಿನವು ಕೇವಲ ಪ್ರಾಣಿಗಳನ್ನು ನೆನಪಿಸುವ ದಿನವಲ್ಲ —
*ನಮ್ಮ ಮಾನವೀಯತೆಯನ್ನು ನೆನಪಿಸುವ ದಿನವೂ ಆಗಿದೆ.*
ಪ್ರಾಣಿಗಳ ಹಕ್ಕು, ಕಲ್ಯಾಣ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದೇ ವಿಶ್ವ ಪ್ರಾಣಿ ದಿನದ ಆಚರಣೆಯ ಮುಖ್ಯ ಉದ್ದೇಶ. ವಿಶ್ವಾದಾದ್ಯಂತ ಪ್ರಾಣಿಗಳ ಸ್ಥಾನಮಾನವನ್ನು ಹೆಚ್ಚಿಸಲು ಮತ್ತು ಅವುಗಳ ಕಲ್ಯಾಣದ ಗುಣಮಟ್ಟವನ್ನು ಸುಧಾರಿಸಲು ವಿಶ್ವ ಪ್ರಾಣಿ ದಿನ ಅಸ್ತಿತ್ವದಲ್ಲಿದೆ. ಮಾನವರಾದ ನಮಗೆ ಈ ಪ್ರಪಂಚದಲ್ಲಿ ಬದುಕಲು ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕನ್ನು ಎಲ್ಲಾ ಪ್ರಾಣಿಗಳಿಗೂ ಪರಮಾತ್ಮ ಕರುಣಿಸಿದ್ದಾನೆ ಎಂಬುದನ್ನು ಅರ್ಥೈಸುವ ಸರ್ವಪ್ರಯತ್ನ.
ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧದ ಪರಿಣಾಮವಾಗಿ, ಪ್ರಾಣಿಗಳ ಮೇಲೆ ಮಾನವನ ನಿಯಂತ್ರಣ ಮಾತ್ರವಲ್ಲದೆ ಆರೈಕೆ, ಸ್ನೇಹಶೀಲತೆ ಮತ್ತು ಅನ್ಯೋನ್ಯತೆಯಿಂದ ದೈನಂದಿನ ಸಂವಹನಗಳು ಕಂಡುಬರುತ್ತವೆ. ಇದೆಲ್ಲವೂ ಹೆಚ್ಚಿದಲ್ಲಿ ಮಾನವೀಯತೆ ತನ್ನಿಂತಾನೇ ಮತ್ತಷ್ಟು ಮೈಗೂಡಿಗೊಳ್ಳುತ್ತದೆ.
ಪ್ರಾಣಿಗಳ ಬಗೆಗಿನ ಚಿಂತನೆಯು ಅವುಗಳ ಆಂತರಿಕ ಜಗತ್ತು, ಅವುಗಳ ಸಂವೇದನೆ ಮತ್ತು ಮಾನವರೊಂದಿಗೆ ಅವುಗಳ ಸಂಬಂಧದ ಬಗ್ಗೆ ಆಳವಾದ ವಿಮರ್ಶೆಯನ್ನು ಒಳಗೊಂಡಿರುತ್ತದೆ.
ಪ್ರಾಣಿಗಳ ದಿನಾಚರಣೆ ವರ್ಷಕ್ಕೊಮ್ಮೆ ಆಗಬಾರದು. ಪ್ರಾಣಿಹಿಂಸೆಯನ್ನು ತಡೆಗಟ್ಟುವುದು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳ ಸಂರಕ್ಷಣೆಯ ಬಗೆಗಿನ ಚಿಂತನೆಯು ಬಹಳ ಮಹತ್ತ್ವದ್ದಾಗಿದೆ.
ನಮ್ಮ ಅಂತರಂಗದಲ್ಲಿ ಪ್ರಾಣಿಗಳಿಗೆ ದಯೆಯಿರಲಿ ; ಅವುಗಳ ಸಂಕಷ್ಟಕ್ಕೆ ನಮ್ಮ ಮನ ಮರುಗಲಿ
ಎಂಬ ಘೋಷಣೆಯೊಂದಿಗೆ ಮಂಕುತಿಮ್ಮನ ಕಗ್ಗ –
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು
ಅವನ ಬಂಧುತೆಯ ಜಡೆಯ ಬಿಡಿಸುವನು
ಜೀವ ಜೀವಕೆ ನಂಟು ಜಡಚೇತನಕೆ ನಂಟು
ಆವುದಕಂಟಿರದು -ಮಂಕುತಿಮ್ಮ
ನಂಟು ಅಂಟಿರದ ಜೀವನವೇ ಇಲ್ಲ ಎನ್ನುವ ಡಿ.ವಿ.ಜಿ. ಯವರ ಮಾತುಗಳು ಅದೆಷ್ಟು ಸುಂದರ ಅಲ್ಲವೇ?.
ಪ್ರತಿ ಜೀವಿಯಲ್ಲೂ ಪರಮಾತ್ಮನ ಕಣವಿದೆ ಎನ್ನುವ ಭಾರತೀಯ ತತ್ವವೇ ನಮ್ಮ ಮಾರ್ಗದೀಪ.
“*ಜೀವ ದಯೆ ಬುದ್ಧ ಧರ್ಮದ ಮುದ್ರೆ*” — ಎಂದು ಬಸವಣ್ಣ ಹೇಳಿದಂತೆಯೇ,
ಪ್ರಾಣಿಯ ಮೇಲಿನ ಕರುಣೆ ಮಾನವನ ನಿಜವಾದ ಸಂಸ್ಕಾರ.
ಹುಲಿ ಕಾಡು ಹುಲಿಯ ಮನೆ,ಕಾಡು ಕಿತ್ತು ಮನೆ ಕಟ್ಟಿದವನು ಹುಲಿಯ ದಾಹದ ನೆನೆ
ರಾಷ್ಟ್ರಕವಿ ಕುವೆಂಪು ಈ ಸಾಲುಗಳ ಮೂಲಕ ಪ್ರಾಣಿಗಳ ನಿವಾಸ ಹಕ್ಕು ಮತ್ತು ಮಾನವನ ಅತಿಯಾದ ಸ್ವಾರ್ಥದಿಂದ ಪ್ರಕೃತಿಗೆ ಉಂಟಾಗುವ ಹಾನಿ ಕುರಿತು ಎಚ್ಚರಿಸುತ್ತಾರೆ.
ಮರದ ಕೊಂಬೆಯ ಮೇಲೂ ಜೀವದ ಹಾಡಿದೆ,ಅದರಲ್ಲೂ ದೈವದ ನಾದ ಇದೆ
ಕವಿ ಬೇಂದ್ರೆಯವರು ಇಲ್ಲಿ ಪ್ರತಿ ಜೀವಿಯಲ್ಲಿಯೂ ದೈವದ ಸ್ಪಂದನೆ ಇದೆ ಎಂದು ಮನವರಿಕೆ ಮಾಡುತ್ತಾರೆ.
ನಾವು ಎಲ್ಲರೂ ಸೇರಿ ಈ ವಿಶ್ವ ಪ್ರಾಣಿ ದಿನದಲ್ಲಿ ಒಂದು ಪ್ರತಿಜ್ಞೆ ಮಾಡೋಣ —
ನಿಸರ್ಗವನ್ನು ಪ್ರೀತಿಸೋಣ,ಪ್ಲಾಸ್ಟಿಕ್ ತ್ಯಜಿಸೋಣ, ಪ್ರಾಣಿಗಳನ್ನು ಕಾಪಾಡೋಣ,
ಏಕೆಂದರೆ *ಅವು ಬದುಕಿದಾಗಲೇ ನಮ್ಮ ಭೂಮಿಯೂ ಜೀವಂತವಾಗಿರುತ್ತದೆ.
“ಈ ವಿಶ್ವ ಪ್ರಾಣಿ ದಿನವು ನಮಗೆ ಕರುಣೆ, ಅಹಿಂಸೆ ಮತ್ತು ಸಹಅಸ್ತಿತ್ವದ ಪಾಠ ಕಲಿಸಲಿ. ”
ಸ್ವರ್ಣ ಕುಂದಾಪುರ, ಆಪ್ತಸಮಾಲೋಚಕಿ

