1975 ಜೂ.12ರಂದು ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ಅವರ 1971ರ ಲೋಕಸಭಾ ಚುನಾವಣಾ ಅಕ್ರಮದ ಕಾರಣದಿಂದ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ, ಅವರು 6 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ 1975 ಜೂ.25ರ ಮಧ್ಯರಾತ್ರಿ ರಾಷ್ಟ್ರಪತಿ ಫಖ್ರುದ್ದೀನ್ ಅಲಿ ಅಹ್ಮದ್ ಅವರ ಮೂಲಕ ಭಾರತದ ಸಂವಿಧಾನದ 352ನೇ ವಿಧಿಯ ಅಡಿಯಲ್ಲಿ ದೇಶದಲ್ಲಿ ಕರಾಳ ‘ತುರ್ತು ಪರಿಸ್ಥಿತಿ’ಯನ್ನು ಘೋಷಿಸಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ ಎಂದು ಬಿಜೆಪಿ ಉಡುಪಿ ಮಾಜಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದರು.
ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ‘ಸಂವಿಧಾನ ಹತ್ಯಾ ದಿವಸ್’ ಕರಾಳ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ‘ಸಂಪೂರ್ಣ ಕ್ರಾಂತಿ’ ಚಳುವಳಿ ದೇಶಾದ್ಯಂತ ಹಬ್ಬಿತ್ತು. ಇಂದಿರಾ ಗಾಂಧಿ ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗಿತ್ತು. ಸಂವಿಧಾನದ 19ನೇ ವಿಧಿಯಡಿಯ ವಾಕ್, ಅಭಿವ್ಯಕ್ತಿ, ಸಭೆ ಸೇರುವ ಹಕ್ಕು ಸ್ಥಗಿತವಾಯಿತು. ವಿರೋಧ ಪಕ್ಷದ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಜಾರ್ಜ್ ಫರ್ನಾಂಡಿಸ್, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಸಾವಿರಾರು ಮಂದಿಯನ್ನು ‘ಮೀಸ’ ಕಾಯ್ದೆಯಡಿ ಬಂಧಿಸಲಾಯಿತು. ಪತ್ರಿಕೆಗಳಿಗೆ ಸೆನ್ಸಾರ್ ಮಾಡಬೇಕೆಂದು ಆದೇಶವಾಯಿತು. ಸರ್ಕಾರದ ವಿರುದ್ಧ ಬರೆಯುವ ಪತ್ರಿಕೆಗಳ ಮೇಲೆ ಒತ್ತಡ, ವಿದ್ಯುತ್ ಕಡಿತ, ಕಾಗದ ಪೂರೈಕೆ ನಿಲ್ಲಿಸುವ ಕ್ರಮಗಳು ನಡೆದವು. ನ್ಯಾಯಾಧೀಶರ ವರ್ಗಾವಣೆ, ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಯಿತು. ಸಂಜಯ್ ಗಾಂಧಿ ಅವರ 5 ಅಂಶದ ಕಾರ್ಯಕ್ರಮಗಳಾದ ಬಲವಂತದ ಸಂತಾನ ನಿಯಂತ್ರಣ, ಕೊಳೆಗೇರಿ ತೆರವು ಮುಂತಾದ ಕ್ರಮಗಳಿಂದ ಗ್ರಾಮೀಣ ಜನರಲ್ಲಿ ಭಯ ಹುಟ್ಟಿತು. ಕೈಗಾರಿಕೆಗಳು, ಸರ್ಕಾರಿ ಕಚೇರಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.
1977ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹಿಂಪಡೆದು ಚುನಾವಣೆ ಘೋಷಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತು ಜನತಾ ಪಕ್ಷ ಅಧಿಕಾರಕ್ಕೆ ಬಂದ ಪರಿಣಾಮವಾಗಿ 44ನೇ ಸಂವಿಧಾನ ತಿದ್ದುಪಡಿ ತರಲಾಯಿತು. ‘ಆಂತರಿಕ ಗೊಂದಲ’ ಬದಲಿಗೆ ‘ಸಶಸ್ತ್ರ ದಂಗೆ’ ಮಾತ್ರ ತುರ್ತು ಪರಿಸ್ಥಿತಿಗೆ ಕಾರಣವಾಗಬಹುದು, ಸಂಸತ್ತಿನ ಅನುಮೋದನೆ ಕಡ್ಡಾಯ, ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗದು ಎಂಬ ಬದಲಾವಣೆಗಳಾದವು.
1975ರಿಂದ 1977ರವರೆಗೆ 21 ತಿಂಗಳ ಪರ್ಯಂತ ನಡೆದ ಕರಾಳ ತುರ್ತು ಪರಿಸ್ಥಿತಿ ಭಾರತೀಯರಿಗೆ ಪ್ರಜಾಪ್ರಭುತ್ವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎಷ್ಟು ಮೌಲ್ಯಯುತ ಎಂಬುದನ್ನು ನೆನಪಿಸುವ ಘಟನೆಯಾಗಿ, ದೇಶದ ಇತಿಹಾಸದಲ್ಲಿ ಶಾಶ್ವತ ಕಪ್ಪು ಚುಕ್ಕೆಯಾಗಿ ಉಳಿದಿದೆ ಎಂದು ಮಟ್ಟಾರ್ ತಿಳಿಸಿದರು.
ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಸಹಿತ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

