Categories
ಕರಾವಳಿ ಸುದ್ದಿ

ಅಮ್ಮಣ್ಣಿ ನಿಧನ : ಅನಾಥವಾದ ಶ್ವಾನಗಳು

ಕುಂದಾಪುರ: ನಗರದ ಚಿಕ್ಕನ್ ಸಾಲ್ ರಸ್ತೆಯ ಸಸಿಹಿತ್ಲು ನಿವಾಸಿಯಾದ ದಾಸ ಕುಟುಂಬದ ಕಮಲ ಯಾನೆ ಅಮ್ಮಣ್ಣಿ ಎಂಬುವರು ಬುಧವಾರ ನಿಧನ ಹೊಂದಿದ್ದರು ಅವಿವಾಹಿತರಾಗಿದ್ದ ಅವರಿಗೆ 63 ವರ್ಷ ವಯಸ್ಸಾಗಿತ್ತು

ನಗರದ ಪೋಸ್ಟ್ ಆಫೀಸ್ ಹಾಗೂ ಇತರ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದು ಒಬ್ಬಂಟಿಯಾಗಿಯೇ ಜೀವಿಸುತ್ತಿದ್ದರು

ಶ್ವಾನಪ್ರಿಯರಾದ ಇವರು ತನ್ನ ಜೀವಿತ ಅವಧಿಯಲ್ಲಿ 12 ಶ್ವಾನಗಳನ್ನು ತನ್ನ ಮನೆಯಲ್ಲಿ ಸಾಕುತ್ತಿದ್ದರು ದುಡಿದ ಹಣದಲ್ಲಿ ಶ್ವಾನಗಳ ಆರೈಕೆ ಮಾಡುತ್ತಿದ್ದು ಬೀದಿ ನಾಯಿಗಳಿಗೂ ಆಹಾರ ನೀಡುತ್ತಿದ್ದರು

ಅಮ್ಮಣ್ಣಿಯವರು ನಿಧನದ ದಿನ ಅವರ ಮೃತ ದೇಹದ ಮೇಲೆ ಎರಡು ಶ್ವಾನಗಳು ಎರಡು ಕಾಲನ್ನು ಇಟ್ಟು ಕಣ್ಣೀರು ಹಾಕಿದ್ದು ನೆರೆದವರ ದುಃಖವನ್ನು  ಇಮ್ಮಡಿಗೊಳಿಸಿದೆ ಇದೀಗ ಅನಾಥವಾದ ಶ್ವಾನಗಳು ಅವರ ದುಃಖದ ನೆನಪಿನಲ್ಲೇ ಕೊರಗುತ್ತಿವೆ

Categories
ಕರಾವಳಿ ಸುದ್ದಿ

  ಶಾಸಕರ ನೂತನ ಕಚೇರಿ ಉದ್ಘಾಟನೆ

ಕುಂದಾಪುರ : ಕುಂದಾಪುರ ನಗರದ ತಾಲೋಕು ಪಂಚಾಯತ್‌ ಕಟ್ಟಡದಲ್ಲಿ ಕುಂದಾಪುರದ ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿಯವರ ನೂತನ ಕಚೇರಿ ಉದ್ಘಾಟನೆಗೊಂಡಿತು

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಬಿ.ಅಪ್ಪಣ್ಣ ಹೆಗ್ಡೆಯವರು ದೀಪ ಬೆಳಗಿಸಿ ನೂತನ ಕಚೇರಿಯನ್ನು ಉದ್ಘಾಟಿಸಿ ನೂತನ ಶಾಸಕರ ಕಚೇರಿಯು ಜನಸಾಮಾನ್ಯರ ಸಮಸ್ಯೆಗಳ ಪರಿಹಾರ ಕೇಂದ್ರವಾಗಲಿ ಎಂದು ಶುಭ ಹಾರೈಸಿದರುಸಮಾರಂಭದಲ್ಲಿ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷರಾದ ಶಂಕರ್‌ ಅಂಕದಕಟ್ಟೆ ಪುರಸಭಾ ಮಾಜಿ ಉಪಾಧ್ಯಕ್ಷ ರಾಜೇಶ್‌ ಕಾವೇರಿ ದಿನಾಕರ್‌ ಶೆಣೈ ಮಹಿಳಾ ಮೋರ್ಚಾದ  ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್‌ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯೆ ಶ್ರೀಲತಾ ಶೆಟ್ಟಿ ಕುಂದಾಪುರ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ರೂಪಾ ಪೈ ಪ್ರಧಾನ ಕಾರ್ಯದರ್ಶಿ ಸೌರಬಿ ಪೈ ಹಾಗೂ ಕುಂದಾಪುರ ಪುರಸಭಾ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು ಮಹಿಮ್‌ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಶಂಕರ್‌ ಅಂಕದಕಟ್ಟೆ ಸ್ವಾಗತಿಸಿ ವಂದಿಸಿದರು

Categories
ಕರಾವಳಿ ಸುದ್ದಿ

ನೀರಿನ ಚರಂಡಿಗೆ ಬಿದ್ದು ವ್ಯಕ್ತಿ ಸಾವು

ನೀರಿನ ಚರಂಡಿಗೆ ಬಿದ್ದು ವ್ಯಕ್ತಿ ಸಾವು

ಉಡುಪಿ : ಇಲ್ಲಿನ ಮಠದಬೆಟ್ಟು ಎಂಬಲ್ಲಿ ಕಾಲುಸಂಕದಿಂದ ಆಕಸ್ಮಿಕವಾಗಿ ಜಾರಿ ಮಳೆ ನೀರು ಹರಿಯುವ ಚರಂಡಿಗೆ ಬಿದ್ದು 33 ವರ್ಷದ ವ್ಯಕ್ತಿ ಒಬ್ಬರು ಮೃತಪಟ್ಟಿದ್ದಾರೆ

ಮೃತಪಟ್ಟವರನ್ನು ಬೈಂದೂರು ಮೂಲದ ಸತೀಶ್ (33 ವರ್ಷ) ಎಂದು ಗುರುತಿಸಲಾಗಿದ್ದು ಈತ ಉಡುಪಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ ಬುಧವಾರ ಮಧ್ಯಾಹ್ನದಿಂದ ಸತೀಶ್ ನಾಪತ್ತೆಯಾಗಿದ್ದು ಗುರುವಾರ ಆತನ ಶವ ಮಳೆ ನೀರು ಹರಿಯುವ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಮೃತದೇಹವನ್ನು ಪತ್ತೆ ಹಚ್ಚಲು ಉಡುಪಿಯ ಮುಳುಗು ತಜ್ಙರಾದ ಈಶ್ವರ್‌ ಮಲ್ಪೆಯವರು ಶ್ರಮ ವಹಿಸಿದ್ದಾರೆ ಮೃತ ದೇಹವನ್ನು ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories
ಕರಾವಳಿ ಸುದ್ದಿ

ಸಂಘದಿಂದ ಸನ್ಮಾನ

ಕುಂದಾಪುರ ಮಂಗಳೂರು ವೃತ್ತ ಅರಣ್ಯ ಇಲಾಖೆಯ ಕುಂದಾಪುರ ವಿಭಾಗದ ಅರಣ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿದ ಕೆ ಸೂರ್ಯನಾರಾಯಣ ರವರು ಇತ್ತೀಚಿಗೆ ನಿವೃತ್ತರಾಗಿದ್ದು ಅವರನ್ನು ಮಂಗಳೂರು ವೃತ್ತ ಅರಣ್ಯ ಇಲಾಖೆಯ ವಾಹನ ಚಾಲಕರ ಸಂಘದಿಂದ ವತಿಯಿಂದ ಉಡುಪಿಯ ಸಾರಥಿ ಭವನದಲ್ಲಿ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮೋಹನ್ ದೇವಪ್ಪ ಜಯಪ್ರಕಾಶ್ ಭಾಸ್ಕರ್ ವಿನೋದ್ ಹಾಗೂ ಜೊಯ್ ಉಪಸ್ಥಿತರಿದ್ದರು ಉಡುಪಿ ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷರಾದ ಶೇಷಪ್ಪ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ದಿನೇಶ್ ರವರು ಉಪಸ್ಥಿತರಿದ್ದು ಕೆ ಸೂರ್ಯನಾರಾಯಣ‌ ರವರನ್ನು ಸನ್ಮಾನಿಸಿದರು

Categories
ಕರಾವಳಿ ಸುದ್ದಿ

ಬೈಂದೂರು ಶಾಸಕರು ಪಾರು

ಕುಂದಾಪುರ : ಮರ ತೆರವು ಕಾರ್ಯಚರಣೆ ವೇಳೆ ಇನ್ನೊಂದು ಮರ ಉರುಳಿದ್ದರಿಂದ ಬೈಂದೂರು ಶಾಸಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ  ಕುಂದಾಪುರ ತಾಲೂಕಿನ ಹಾಲಾಡಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವೊಂದನ್ನು ತೆರೆವುಗೊಳಿಸುವ ಸಂದರ್ಭ ಇನ್ನೊಂದು ಮರ ಬಿದ್ದು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಹಾಗೂ ಬೆಂಬಲಿಗರು ಕೂದಲಳೆತೆಯ ಅಂತರದಲ್ಲಿ ಪಾರಾಗಿದ್ದಾರೆ

ಕಾರ್ಯನಿಮಿತ್ತ ಹಾಲಾಡಿ ಮಾರ್ಗವಾಗಿ ತೆರಳುತ್ತಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ ಮರ ರಸ್ತೆಗೆ ಅಡ್ಡವಾಗಿ ಬಿದ್ದಿದ್ದರಿಂದ ತನ್ನ ಬೆಂಬಲಿಗರ ಸಹಕಾರದೊಂದಿಗೆ ತೆರವುಗೊಳಿಸುತ್ತಿರುವ ಸಂದರ್ಭ ಅದೇ ಜಾಗದಲ್ಲಿ ಇನ್ನೊಂದು ಮರ ಬೀಳುವುದನ್ನು ಕಂಡು ಬೆಂಬಲಿಗರು ಮತ್ತು ಗುರುರಾಜ್ ಗಂಟಿಹೊಳೆ ಪಕ್ಕಕ್ಕೆ ಓಡಿರುವುದರಿಂದ ಸಂಭವಿಸುವ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ

ವರದಿ:ಈಶ್ವರ್‌ ನಾವುಂದ

Categories
ಶಿಕ್ಷಣ

 ಸಿ .ಎ. ಫೌಂಡೇಷನ್ ವಿದ್ಯಾರ್ಥಿಗಳ ಮಾಹಿತಿ ಕಾರ್ಯಗಾರ.

ಉಡುಪಿ: ಸಿ.ಎ ಸಿ.ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿ.ಎ. ಫೌಂಡೇಷನ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ಜೂನ್ 25 ಭಾನುವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ ಎ ಗೋಪಾಲ ಕೃಷ್ಣಭಟ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿ. ಎ. ತರಬೇತಿ ಪಡೆಯುವ ವಿದ್ಯಾರ್ಥಿಗಳನ್ನು ಕುರಿತು “ಸರಿಯಾದ ಯೋಜನೆ ಹಾಗೂ ಛಲ ಬಿಡದ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ. ಸಫಲತೆಯ ಶಿಖರ ಏರಲು ಕಷ್ಟ ಪಟ್ಟು ಕೆಲಸ ಮಾಡುವುದೊಂದೇ ಹಾದಿ. ” ಎಂದು ಹೇಳಿ, ಸಿ. ಎ. ಕೋರ್ಸಿನ ಬಗ್ಗೆ, ‘ಐ.ಸಿ.ಎ.ಐ’ನ ಹೊಸತಾಗಿ ತಿದ್ದುಪಡಿಯಾದ ನಿಯಮಗಳ ಬಗ್ಗೆ ಮತ್ತು ಪರೀಕ್ಷಾಪೂರ್ವ ತಯಾರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಿದ್ಧಾಂತ್ ಫೌಂಡೇಶನ್ ನ ಖಜಾಂಚಿಯಾದ ನಮಿತಾ ಜಿ.ಭಟ್, ತ್ರಿಶಾ ವಿದ್ಯಾ ಕಾಲೇಜಿನ ಸಿಬ್ಬಂದಿ ವರ್ಗದವರು, ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೌರಿ ಕಾಮತ್ ನಿರೂಪಿಸಿ ವಂದಿಸಿದರು

Categories
ಹೊಂಗಿರಣ

ಆನಂದದ ಆಶಾಕಿರಣ

ಪಾಶ್ಚಾತ್ಯ ಸಂಸ್ಕøತಿಯ ಪ್ರಭಾವದಲ್ಲಿ ಇಂದ್ರಿಯ ಸುಖಭೋಗಗಳನ್ನು ಹೆಚ್ಚೆಚ್ಚು ಅಪೇಕ್ಷೆ ಪಡುವ ನಾವು ನಿಜವಾಗಿಯೂ ನಮ್ಮ ಬದುಕನ್ನು ದುಃಖ ಸಾಗರಕ್ಕೆ ದೂಡುತ್ತಿದ್ದೇವೆ. ದೇಹ ಸಂಬಂಧವಾದ ನಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುವ ಮೂಲಕ ನಾವು ನಿಜಕ್ಕೂ ಭಾವಿಸುವುದು ಏನನ್ನು? ‘ಇದೊಂದು ಆಸೆಯನ್ನು ಪೂರೈಸಿದರೆ ಮತ್ತೆ ಸಂತಸದಿಂದ ಬದುಕಬಹುದು’ಎಂದು ತಾನೆ? ಆದರೆ ಆಸೆಗಳು ಅಗಣಿತ. ಅರ್ಥಶಾಸ್ತ್ರಜ್ಞ ಆ್ಯಡಂ ಸ್ಮಿತ್ ಇದನ್ನು ನೂರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಆದರೆ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಗೌತಮ ಬುದ್ಧ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಇಷ್ಟು ತಿಳಿದರೂ ಆಸೆಗಳು ಅಗಣಿತವೆಂಬ ಪ್ರಜ್ಞೆ ನಮ್ಮಲ್ಲಿ ಮೂಡುವುದೇ ಇಲ್ಲ. ಹಾಗಾಗಿ ನಮ್ಮ ಬದುಕು ಪುಟ್ಟ ಮಕ್ಕಳು ಆಡುವ ಆಟಕ್ಕಿಂತ ಭಿನ್ನವೇನೂ ಅಲ್ಲ. ತನಗೆ ಬೇಕೆನಿಸುವ ಆಟಿಕೆಗಳನ್ನು ಕೂಡಿಸೆಂದು ತಾಯ್ತಂದೆಯರನ್ನು ಕಾಡಿಸಿ ಪೀಡಿಸುವ ಪುಟ್ಟ ಮಕ್ಕಳಂತೆ ನಾವು ಕೂಡ. ಆದುದರಿಂಲೇ ಇಂದ್ರಿಯ ಸುಖದ ಬೆನ್ನು ಹತ್ತಿದವರಿಗೆ ದುಃಖ ನಿಶ್ಚಿತ. ಸ್ವಾಮಿ ವಿವೇಕಾನಂದರ ಪ್ರಾಕಾರ ‘ಒಬ್ಬನು ಎಷ್ಟು ಕಡಿಮೆ ಇಂದ್ರಿಯ ಸುಖವನ್ನು ಅನುಭವಿಸುವನೋ ಅಷ್ಟೂ ಅವನು ಉತ್ತಮ ರೀತಿಯಲ್ಲಿ ಬದುಕುವನು’ ಎಂಬ ಮಾತು ಅಕ್ಷರಶಃ ಸತ್ಯ. ಇಂದ್ರೀಯ ಸುಖವೇ ಪರಮ ಸುಖವಲ್ಲ; ಇದಕ್ಕಿಂತಲೂ ಸುಖಕೊಡುವ ಬೇರೆ ವಿಚಾರಗಳೂ ಇವೆ ಎಂಬ ಸತ್ಯದ ಕಡೆಗೆ ಮುಖ ಮಾಡಿದಾಗ ಮಾತ್ರವೇ ಬದುಕಿನಲ್ಲಿ ಆನಂದದ ಆಶಾಕಿರಣಗಳು ಮೂಡಲಾರಂಭಿಸುತ್ತವೆ. ಬದುಕಿನ ಸತ್ಯಗಳನ್ನು ವಿಚಾರ ಮಾಡುವ ಶಕ್ತಿಯನ್ನು ಬೆಳೆಸಿಕೊಂಡಾಗಲೇ ನಿಜವಾದ ಪ್ರೇಮವೆಂದರೆ ಏನು ಎಂಬ ಅಂಶ ಗೋಚರವಾಗುತ್ತದೆ.

Categories
Uncategorized

ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ

ಶಶಿಧರ ಪುರೋಹಿತ ಕಟಪಾಡಿ ಇವರ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡದ ವತಿಯಿಂದ ವಿದ್ಯಾರ್ಥಿಗಳಿಗೆ ಕೊಡ ಮಾಡಿದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಇಂದು ದಿನಾಂಕ 29-06-2023 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.ಉಚಿತ ಪುಸ್ತಕ ವಿತರಣೆ ಮಾಡಿದ ಶಾಸಕರು ಸಮಾನ ಮನಸ್ಕ ತಂಡಕ್ಕೆ ಮತ್ತು ಇದಕ್ಕೆ ಸಹಕರಿಸಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಶಿಧರ ಪುರೋಹಿತ, ಸದಾಶಿವ ಆಚಾರ್ಯ, ಸಹನಾ ದೇವರಾಜ ಆಚಾರ್ಯ, ಅಚ್ಚುತ ಆಚಾರ್ಯ ಕಾಪು, ನಿವೃತ್ತ ತಹಶೀಲ್ದಾರರಾದ ಕೆ. ಮುರಳಿಧರ ಆಚಾರ್ಯ, ನಿವೃತ್ತ ಯೋಧ ವಾದಿರಾಜ ಆಚಾರ್ಯ, ಕಾಪು ಕಾಳಿಕಾಂಬ ದೇವಸ್ಥಾನ ಮೊಕ್ತೇಸರರಾದ ಶೇಖರ ಆಚಾರ್ಯ, ಗಣೇಶ್ ಆಚಾರ್ಯ ಉಚ್ಚಿಲ, ಭಾಸ್ಕರ ಆಚಾರ್ಯ, ಚಂದ್ರಶೇಖರ ಆಚಾರ್ಯ, ದಿವಾಕರ ಆಚಾರ್ಯ, ಕಾರ್ತಿಕ್ ಆಚಾರ್ಯ, ಬಿ.ಎ ಆಚಾರ್ಯ ಮಣಿಪಾಲ, ರವಿ ಪುರೋಹಿತ ಉಪಸ್ಥಿತರಿದ್ದರು.

Categories
ಶಿಕ್ಷಣ

ಕ್ಯಾಂಪಸ್ ನೇಮಕಾತಿ ಡ್ರೈವ್

ಕುಂದಾಪುರ: ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಅಂತಿಮ ವರ್ಷದ ಬಿಸಿಎ, ಬಿಎಸ್ಸಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Cognitive Solutions ವತಿಯಿಂದ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಡ್ರೈವ್ ನೆರವೇರಿತು.Cognitive Solutions ಸಂಸ್ಥೆಯ ಸಿಬ್ಬಂದಿಯಾದ ಶ್ರೀ ಸಾಗರ್ ಆಳ್ವ, ಕಾಲೇಜಿನ ಪ್ರಾಂಶುಪಾಲರಾದ ಪ್ರೋ| ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಶ್ರೀ ಮಹೇಶ್ ಕುಮಾರ್, ಶ್ರೀ ರಜತ್ ಬಂಗೇರ ಉಪಸ್ಥಿತರಿದ್ದರು.

Categories
ಇತರೆ

ಕೇವಲ 5 ಕೆ.ಜಿ. ಅಕ್ಕಿಯ ಹಣ

ಕುಂದಾಪುರ: ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ’10 ಕೆ.ಜಿ. ಅಕ್ಕಿ ಫ್ರೀ… ಬೇಕಾ ಬೇಡ್ವಾ…’ ಎಂದು ಘಂಟಾಘೋಷವಾಗಿ ಸಾರಿದ್ದ ಸಿ.ಎಂ. ಸಿದ್ದರಾಮಯ್ಯನವರು ಇದೀಗ ರಾಗ ಬದಲಿಸಿ, ಸಚಿವ ಸಂಪುಟ ಸಭೆಯ ತೀರ್ಮಾನದಂತೆ 10 ಕೆ.ಜಿ. ಅಕ್ಕಿಯ ಬದಲಿಗೆ ಕೇವಲ 5 ಕೆ.ಜಿ. ಅಕ್ಕಿಯ ಮೌಲ್ಯವನ್ನು ಪ್ರತೀ ಕೆ.ಜಿ.ಗೆ ರೂ.34ರಂತೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ನೀಡುತ್ತೇವೆ ಎಂದಿರುವುದು ರಾಜ್ಯದ ಜನತೆಗೆ ಬಗೆದ ದ್ರೋಹವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯದ ಜನತೆಗೆ ನೀಡುತ್ತಿರುವ ಉಚಿತ 5 ಕೆ.ಜಿ. ಅಕ್ಕಿಯನ್ನು ಹೊರತುಪಡಿಸಿ, ರಾಜ್ಯ ಕಾಂಗ್ರೆಸ್ ಸರಕಾರ ಈ ಮೊದಲು ಘೋಷಿಸಿದಂತೆ ನಿಗದಿತ ಕುಟುಂಬಗಳಿಗೆ 10 ಕೆ.ಜಿ. ಅಕ್ಕಿ ಅಥವಾ ಪ್ರಸಕ್ತ ನಿರ್ಣಯದಂತೆ ಅದರ ಮೌಲ್ಯವನ್ನು ನೀಡಬೇಕಾಗಿದೆ. ಇದೀಗ ಉಚಿತ ಅಕ್ಕಿ ನೀಡುತ್ತಿರುವುದು ಕೇಂದ್ರ ಸರಕಾರ ಮಾತ್ರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಒತ್ತಾಸೆಯಿಂದ 5 ಉಚಿತಗಳ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ ಜನತೆಗೆ ನೀಡಿದ ವಾಗ್ದಾನದಂತೆ ಯಾವುದೇ ಗ್ಯಾರಂಟಿಗಳನ್ನು ಯಥಾವತ್ತಾಗಿ 24 ಗಂಟೆಗಳೊಳಗೆ ಜಾರಿಗೊಳಿಸದೆ ಇದೀಗ ವಿವಿಧ ಷರತ್ತುಗಳ ಸಹಿತ ಬಣ್ಣ ಬದಲಿಸಿ ರಾಜ್ಯದ ಜನತೆಗೆ ಮಂಕುಬೂದಿ ಎರಚಿದೆ. ಈ ಸರಕಾರ ಮಾತು ತಪ್ಪಿದ ‘ವಚನ ಭ್ರಷ್ಟ ಸರಕಾರ’ ಎಂದು ಅವರು ತಿಳಿಸಿದ್ದಾರೆ.

ಉಚಿತ ಅಕ್ಕಿ ಗ್ಯಾರಂಟಿಯನ್ನು ಉದ್ದೇಶಪೂರ್ವಕವಾಗಿಯೇ ರಾಜಕೀಯಗೊಳಿಸಿರುವ ಕಾಂಗ್ರೆಸ್, ಕೇಂದ್ರ ಸರಕಾರವನ್ನು ಅನಾವಶ್ಯಕವಾಗಿ ಈ ವಿಚಾರದಲ್ಲಿ ಎಳೆದುತಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಕಾಂಗ್ರೆಸ್ಸಿನ ಷಡ್ಯoತ್ರದ ಭಾಗವಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅನ್ನ ಯೋಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊರೋನ ಸಂಕಷ್ಟದ ಕಾಲದಿಂದ ದೇಶದ 80 ಕೋಟಿ ಜನತೆಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಿಕೊಂಡು ಬಂದಿದೆ. ಪ್ರಸಕ್ತ ಕೇಂದ್ರ ಸರಕಾರ ರಾಜ್ಯದ ಪ್ರತೀ ಬಿಪಿಎಲ್ ಕುಟುಂಬಗಳಿಗೆ ತಲಾ 5 ಕೆ.ಜಿ. ಉಚಿತ ಅಕ್ಕಿ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ತಲಾ 35 ಕೆ.ಜಿ. ಉಚಿತ ಅಕ್ಕಿಯನ್ನು ಪ್ರತೀ ತಿಂಗಳು ವಿತರಿಸುತ್ತಿದ್ದು, ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತೀ ತಿಂಗಳು ತಲಾ 5 ಕೆ.ಜಿ. ಅಕ್ಕಿಯನ್ನು ರಾಜ್ಯದಲ್ಲಿ ಉಚಿತವಾಗಿ ವಿತರಿಸುತ್ತಿರುವುದನ್ನು ಒಪ್ಪಿಕೊಂಡಿರುವುದು ಜಗಜ್ಜಾಹೀರಾಗಿದೆ.

ಎಲ್ಲಿಂದಾದರೂ ಅಕ್ಕಿಯನ್ನು ಖರೀದಿಸಿ, ಉಚಿತ ಅಕ್ಕಿ ವಿತರಣೆ ಗ್ಯಾರಂಟಿಯನ್ನು ಜಾರಿಗೊಳಿಸುತ್ತೇವೆ ಎಂದು ಬೀಗುತ್ತಿದ್ದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಹಿನ್ನಡೆಯಾಗಿದೆ. ಆದರೂ ರಾಜ್ಯ ಬಿಜೆಪಿಯ ಸಲಹೆ ಮತ್ತು ಹೋರಾಟದ ಎಚ್ಚರಿಕೆಯನ್ನು ಪರಿಗಣಿಸಿ, ರಾಜ್ಯ ಕಾಂಗ್ರೆಸ್ ಸರಕಾರ ಅಕ್ಕಿಯ ಬದಲಿಗೆ ನಗದು ನೀಡಲು ನಿರ್ಧರಿಸಿದರೂ, ಪ್ರಸಕ್ತ ಕೇವಲ ತಲಾ 5 ಕೆ.ಜಿ. ಅಕ್ಕಿಯ ಮೌಲ್ಯ ರೂ.170ರಂತೆ ನೀಡಲು ಮುಂದಾಗಿರುವುದು ವಿಪರ್ಯಾಸ. ಕಾಂಗ್ರೆಸ್ ಗ್ಯಾರಂಟಿ ಕಾರ್ಡಿನಲ್ಲಿ ಘೋಷಿಸಿದಂತೆ, ರಾಜ್ಯ ಸರಕಾರ ತಲಾ 10 ಕೆ.ಜಿ. ಅಕ್ಕಿಯ ಮೌಲ್ಯ ರೂ.340ನ್ನು ವಿತರಿಸುವುದು ನ್ಯಾಯಸಮ್ಮತವಾಗಿದೆ. ವಾಸ್ತವಿಕವಾಗಿ ಜನತೆ ತಮಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿಯನ್ನು ಪ್ರತೀ 1 ಕೆ.ಜಿ.ಗೆ ಪ್ರಚಲಿತ ದರ ರೂ.50ರಂತೆ ಪಾವತಿಸಿ ಮಾರುಕಟ್ಟೆಯಿಂದ ಖರೀದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತೀ 1 ಕೆ.ಜಿ. ಅಕ್ಕಿಗೆ ರೂ.34ರಂತೆ ನೀಡುವ ರಾಜ್ಯ ಸರಕಾರದ ನಿರ್ಣಯದಿಂದ ಜನತೆಗೆ ಪ್ರತೀ 1 ಕೆ.ಜಿ. ಅಕ್ಕಿಗೆ ರೂ.16ರಂತೆ ನಷ್ಟವೆನಿಸುವುದು ವಾಸ್ತವ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರತೀ ಕೆ.ಜಿ. ಅಕ್ಕಿಗೆ ರೂ.29ರಂತೆ ವೆಚ್ಚವನ್ನು ಭರಿಸಿ ರಾಜ್ಯಕ್ಕೆ ವಿತರಿಸಿದಾಗ, ಕೇವಲ ರೂ.3ನ್ನು ಭರಿಸಿ, ಕೇಂದ್ರದ ಪಾಲಿನ ವಿಚಾರವನ್ನು ತಿಳಿಸದೆ, ಅನ್ನಭಾಗ್ಯದ ಬಗ್ಗೆ ಭರ್ಜರಿ ಪುಕ್ಕಟೆ ಪ್ರಚಾರ ಪಡೆದಿದ್ದ ಸಿ.ಎಂ. ಸಿದ್ದರಾಮಯ್ಯನವರು, ಅದೇ ಮಾದರಿಯನ್ನು ಮುಂದುವರಿಸುವ ಇರಾದೆಯಿಂದ ಪೂರ್ವಾಪರ ಆಲೋಚಿಸದೆ, ಕೇಂದ್ರದ ಸಲಹೆಯನ್ನೂ ಪಡೆಯದೆ 10 ಕೆ.ಜಿ. ಉಚಿತ ಅಕ್ಕಿ ವಿತರಣೆಯ ಗ್ಯಾರಂಟಿಯನ್ನು ಘೋಷಿಸಿರುವುದೇ ಈ ಎಲ್ಲಾ ಆವಾಂತರಗಳಿಗೆ ಮೂಲ ಕಾರಣವಾಗಿದೆ.

ಬಡವರ ಮೇಲಿನ ಕಾಳಜಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರಕಾರದಿಂದ ರಾಜ್ಯದ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ತಲಾ 5 ಕೆ.ಜಿ.ಯಂತೆ ಉಚಿತ ಅಕ್ಕಿಯನ್ನು ಪ್ರತೀ ತಿಂಗಳು ರಾಜ್ಯಕ್ಕೆ ನೀಡುತ್ತಿದ್ದು, ಕೇವಲ ಅಧಿಕಾರದ ಲಾಲಸೆಯಿಂದ ದೂರದರ್ಶಿತ್ವದ ನಿರ್ದಿಷ್ಟ ಯೋಜನೆಗಳಿಲ್ಲದೆ ಬೇಕಾಬಿಟ್ಟಿಯಾಗಿ 5 ಉಚಿತ ಗ್ಯಾರಂಟಿಗಳನ್ನು ಘೋಷಿಸಿ, ಯಾವುದನ್ನೂ ಯಥಾವತ್ತಾಗಿ ಜಾರಿಗೊಳಿಸದೆ ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ರಾಜ್ಯದ ಜನತೆಯ ಬವಣೆಗೆ ಕಾರಣವಾಗಿದೆ. ಕೇವಲ ಉಚಿತ ಗ್ಯಾರಂಟಿಗಳ ಗೊಂದಲದಲ್ಲೇ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರಕಾರದ ಬಣ್ಣ ಬದಲಿಸುವ ಗೋಸುಂಬೆತನದ ವರ್ತನೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ