Categories
ಬ್ರೇಕಿಂಗ್ ನ್ಯೂಸ್

ಕೋಡಿಬೇಂಗ್ರೆಯಲ್ಲಿ ದೋಣಿ ದುರಂತ ಪ್ರಕರಣ: ಮೂವರು ಆರೋಪಿಗಳ ಬಂಧನ

ಉಡುಪಿ :ಜನವರಿ 31 :ಬ್ರಹ್ಮಾವರ ತಾಲೂಕಿನ ಕೋಡಿಬೇಂಗ್ರೆ ಅಳಿವೆಬಾಗಿಲು ಬಳಿ ಸ್ವರ್ಣ ನದಿಯಲ್ಲಿ ನಡೆದ ದೋಣಿ ದುರಂತದಲ್ಲಿ ಮೂವರು ಮೃತಪಟ್ಟಿರುವ ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 26/01/2026 ರಂದು ಬೆಳಿಗ್ಗೆ ಸುಮಾರು 10:45 ಗಂಟೆಗೆ ಮೈಸೂರು ನಿವಾಸಿ ಗುರುಪ್ರಸಾದ್ (34) ಸೇರಿದಂತೆ ಒಟ್ಟು 29 ಪ್ರವಾಸಿಗರನ್ನು ಆರೋಪಿ ಸುಹಾಸ್ ಎಂಬವರು ಎರಡು ಪ್ರತ್ಯೇಕ ಬೋಟ್‌ಗಳಲ್ಲಿ (ಒಂದು ಬೋಟ್‌ನಲ್ಲಿ 14 ಮತ್ತು ಇನ್ನೊಂದರಲ್ಲಿ 15 ಜನರಂತೆ) ದೋಣಿ ವಿಹಾರಕ್ಕೆ ಕಳುಹಿಸಿದ್ದರು. ಬೆಳಿಗ್ಗೆ 11:15 ಗಂಟೆ ಸುಮಾರಿಗೆ ‘THE WAVE RIDER’ ಎಂಬ ಬೋಟ್ ಸ್ವರ್ಣ ನದಿಯಲ್ಲಿ ವಿಹಾರ ಮಾಡುತ್ತಿದ್ದಾಗ, ಅದರ ಚಾಲಕರಾದ ಸೂಫಿಯಾನ್ ಮತ್ತು ವಾಸು ಅವರುಗಳು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಏಕಾಏಕಿ ಎಡಬದಿಗೆ ತಿರುಗಿಸಿ ಚಲಾಯಿಸಿದ ಪರಿಣಾಮ ಬೋಟ್ ಮಗುಚಿ ಬಿದ್ದಿದೆ.

ಈ ಘಟನೆಯಲ್ಲಿ ಬೋಟ್‌ನಲ್ಲಿದ್ದ 14 ಜನರು ನೀರಿಗೆ ಬಿದ್ದಿದ್ದು, ಶಂಕರಪ್ಪ (27), ಕುಮಾರಿ ಸಿಂಧು.ಪಿ (23) ಹಾಗೂ ಕುಮಾರಿ ದಿಶಾ (26) ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2026 ಕಲಂ 284, 125(a), 106 BNS 2023ರಡಿ ಪ್ರಕರಣ ದಾಖಲಿಸಲಾಗಿತ್ತು. ನಂತರದ ತನಿಖೆಯಲ್ಲಿ, ಆರೋಪಿಗಳು ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೇ ದೋಣಿ ವಿಹಾರ ನಡೆಸಿದ್ದು, ಬೋಟ್ ಪ್ರವಾಸಿಗರ ವಿಹಾರಕ್ಕೆ ಸೂಕ್ತವೆಂಬ ಧೃಢೀಕರಣ ಪತ್ರವೂ ಇರಲಿಲ್ಲ ಎಂಬುದು ತಿಳಿದುಬಂದಿದೆ. ಅಲ್ಲದೇ ಲೈಫ್ ಜಾಕೆಟ್‌ಗಳಂತಹ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಕೋಟ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದರಿಂದ ಪ್ರಕರಣವನ್ನು ಕೋಟ ಠಾಣೆಗೆ ವರ್ಗಾಯಿಸಲಾಗಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2026 ಕಲಂ 284, 125(a), 106, 105, 110 ಜೊತೆಗೆ 3(5) BNS ರಡಿ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದ ಆರೋಪಿಗಳಾದ ಸುಹಾಸ್ ಶ್ರೀಯಾನ್ (23), ಸುಫಿಯಾನ್ (20) ಮತ್ತು ವಾಸು ಮೆಂಡನ್ (52) ಅವರನ್ನು ಪೊಲೀಸರು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

Categories
ಕರಾವಳಿ ಸುದ್ದಿ

ಸಾರ್ವಜನಿಕ ಆಡಳಿತ ಸ್ನಾತಕೋತ್ತರ ಪದವಿಯಲ್ಲಿ 11 ನೇ ರಾಂಕ್ ನೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

2024-25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಯ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಶ್ರೀ ಪ್ರವೀಣ್ ಡಿ ಕೋಟ್ಯಾನ್ ಪಡುಕೆರೆ ಇವರು ರಾಜ್ಯದಲ್ಲಿ 11 ನೇ ರಾಂಕ್ ನೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇವರು ಉದ್ಯಾವರ ಕನಕೊಡ ಮೊಗವೀರ ಸಭೆಯ ಗುರಿಕಾರರಾಗಿದ್ದ ದಿ. ದಯಾಕರ ಕುಂದರ್ ಹಾಗೂ ಸುಂದರಿ ಕೋಟ್ಯಾನ್ ದಂಪತಿಗಳ ಮಗನಾಗಿದ್ದು, ಕಳೆದ 15 ವರ್ಷಗಳಿಂದ ಕರ್ನಾಟಕ ಸರಕಾರದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತ ಪ್ರಸ್ತುತ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಯವರ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ

ಕುಂದಾಪುರ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ನೋಡು ನೋಡುತ್ತಿದ್ದಂತೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಶನಿವಾರ ಬೆಳಿಗ್ಗೆ ಹೆಮ್ಮಾಡಿ–ಕೊಲ್ಲೂರು ರಾಜ್ಯ ಹೆದ್ದಾರಿಯ ವಂಡ್ಸೆ ಗ್ರಾಮದ ಶಾರ್ಕೆ ಕ್ರಾಸ್ ಸಮೀಪ ಸಂಭವಿಸಿದೆ.

ಬೀಜಾಡಿ ನಿವಾಸಿ ಭಾಸ್ಕರ್ ಆಚಾರ್ ಅವರಿಗೆ ಸೇರಿದ ಕಾರು ಇದಾಗಿದ್ದು, ಕಾರ್ಯನಿಮಿತ್ತ ಬೆಳಿಗ್ಗೆ ಆಲೂರಿಗೆ ತೆರಳಿದ್ದ ಅವರು ಸುಮಾರು ಬೆಳಿಗ್ಗೆ 10 ಗಂಟೆಯ ವೇಳೆಗೆ ಅಲ್ಲಿಂದ ಕುಂದಾಪುರದತ್ತ ಮರಳುತ್ತಿದ್ದರು.ಈ ವೇಳೆ ಕಾರಿನ ಮುಂಭಾಗದಿಂದ ಶಬ್ದ ಸಹಿತವಾಗಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಭಾಸ್ಕರ್ ಆಚಾರ್ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸುರಕ್ಷಿತವಾಗಿ ಹೊರಬಂದಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗದೆ ಇಡೀ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.ಭಾಸ್ಕರ್ ಆಚಾರ್ ಸಮಯಕ್ಕೆ ಸರಿಯಾಗಿ ಕಾರಿನಿಂದ ಇಳಿದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ವಾಹನ ಸಂಪೂರ್ಣವಾಗಿ ನಾಶವಾಗಿದ್ದು, ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನೆಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.

Categories
ಬ್ರೇಕಿಂಗ್ ನ್ಯೂಸ್

ಬಸ್ ನಿಲ್ದಾಣಗಳಲ್ಲಿ ಕಳ್ಳತ : ಅಂತರ್‌ಜಿಲ್ಲೆ ಕಳ್ಳನ ಬಂಧನ

ಮಂಗಳೂರು: ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಸರಣಿ ಬ್ಯಾಗ್ ಕಳ್ಳತನ ಮಾಡುತ್ತಿದ್ದ ಅಂತರ್‌ಜಿಲ್ಲೆ ಕಳ್ಳನನ್ನು ಮಂಗಳೂರು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತನಿಂದ ಒಟ್ಟು ರೂ.6,47,920 ಮೌಲ್ಯದ 46.28 ಗ್ರಾಂ ಚಿನ್ನಾಭರಣ ಹಾಗೂ ರೂ.5,000 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜನವರಿ 23ರಂದು ಸಂಜೆ ಸುಮಾರು 7 ಗಂಟೆ ವೇಳೆಗೆ, ಬೆಂಗಳೂರಿಗೆ ತೆರಳಲು ಬಸ್ಸಿನಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರು ಹಾಗೂ ಹಿರಿಯ ನಾಗರಿಕರು ಚಿನ್ನಾಭರಣ ಮತ್ತು ನಗದು ಹೊಂದಿದ್ದ ಟ್ರಾಲಿ ಬ್ಯಾಗ್ ಕಳವು ಆಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿನಾಯಕ ತೊರಗಲ್ ನೇತೃತ್ವದ ತಂಡವು ಜನವರಿ 28ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಬಂಧಿತ ಆರೋಪಿಯನ್ನು ಮಹಮ್ಮದ್ ಇಮ್ರಾನ್ ಎನ್.ಎಂ. (44) ಎಂದು ಗುರುತಿಸಲಾಗಿದ್ದು, ಆತ ಕೊಡಗು ಜಿಲ್ಲೆಯ ಮಡಿಕೇರಿಯ ನಿವಾಸಿಯಾಗಿದ್ದಾನೆ. ಆರೋಪಿತನಿಂದ ಕಳವುಗೈದ ಚಿನ್ನಾಭರಣ ಹಾಗೂ ನಗದು ಹಣವನ್ನು ಮಹಜರು ಮೂಲಕ ವಶಪಡಿಸಿಕೊಳ್ಳಲಾಗಿದೆ.

ಆರೋಪಿತನು ಬಸ್ ನಿಲ್ದಾಣಗಳಲ್ಲಿ ಬೆಲೆಬಾಳುವ ವಸ್ತುಗಳಿರುವ ಬ್ಯಾಗ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ರೂಢಿಗತ ಆರೋಪಿಯಾಗಿದ್ದು, ಒಟ್ಟು 11 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ಬ್ಯಾಗ್ ಕಳ್ಳತನ ಹಾಗೂ ಮನೆ ಕಳ್ಳತನ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.

ಬಂಧಿತನನ್ನು ಜನವರಿ 29ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Categories
ಬ್ರೇಕಿಂಗ್ ನ್ಯೂಸ್

ಹುಡುಗಿಯ ಜೊತೆ ಮಾತನಾಡುತ್ತ ಆತ್ಮಹತ್ಯೆ ಮಾಡಿಕೊಂಡ ಯುವಕ

ಉಡುಪಿ: ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಮಾತನಾಡಿ ರೂಮ್ ಒಳಗೆ ಹೋದ ಯುವಕನೋರ್ವ ಕೆಲವೇ ಹೊತ್ತಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿದೆ.

ಕುಂಜಿಬೆಟ್ಟು ನಿವಾಸಿ ರಾಜು ಅವರ ಪುತ್ರ ರಂಜಿತ್ (28) ಆತ್ಮಹತ್ಯೆಗೆ ಶರಣಾದ ಯುವಕ. ಜ.29ರಂದು ರಂಜಿತ್‌ ಅವರು ಪೈಂಟಿಂಗ್ ಕೆಲಸ ಮುಗಿಸಿ ಮನೆಗೆ ಬಂದು ಮನೆಯವರೊಟ್ಟಿಗೆ ಮಾತನಾಡಿದ್ದರು.

ಅನಂತರ ತಾನು ಪ್ರೀತಿಸುತ್ತಿದ್ದ ಹುಡುಗಿ ಪ್ರೀತಿ ಎಂಬವರ ಜೊತೆ ಫೋನಿನಲ್ಲಿ ಮಾತನಾಡುತ್ತಾ ಅವರ ರೂಮಿನೊಳಗೆ ಹೋಗಿದ್ದಾರೆ. ರಾತ್ರಿ ವೇಳೆ ಮನೆಯ ವಾಟರ್ ಟ್ಯಾಂಕಿನ ನೀರು ತುಂಬಿ ಕೆಳಗೆ ಬೀಳುತ್ತಿದ್ದುದರಿಂದ ಅವರ ತಂದೆ ವಾಟರ್ ಟ್ಯಾಂಕಿನ ವಾಲ್ ನ್ನು ಆಫ್ ಮಾಡಲು ಹೋಗುವಾಗ ರಂಜಿತ್ ಅವರ ರೂಮಿನ ಕಿಟಕಿ ತೆರೆದು ನೋಡಿದ್ದಾರೆ.

ಈ ವೇಳೆ ಆತ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಕೂಡಲೇ ಆತನನ್ನು ಕೆಳಗೆ ಇಳಿಸಿ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಆತನಿಗೆ 20 ನಿಮಿಷ ಶೂಶ್ರುಷೆ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಈ ಸಾವಿನಲ್ಲಿ ಸಂಶಯವಿರುವುದಾಗಿ ಆತನ ಅಣ್ಣ ರಕ್ಷಿತ್ ಅವರು ನೀಡಿರುವ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ಶಿಶಿರ : ಋತು

ಮಾಘ : ಮಾಸ

ಶುಕ್ಲ ಪಕ್ಷ

ತ್ರಯೋದಶಿ : ತಿಥಿ

ಪುನರ್ವಸು : ನಕ್ಷತ್ರ

ಶನಿವಾರ

31.01.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ಬಸ್ ಗಳಿಗೆ ಬಾಗಿಲು ಅಳವಡಿಕೆಗೆ ಜೂ.1ರವರೆಗೆ ಕಾಲಾವಕಾಶ

ಉಡುಪಿ: ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಸೇರಿದಂತೆ ಎಲ್ಲಾ ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಕೆಗೆ ನೀಡಿರುವ ಕಾಲಾವಕಾಶವನ್ನು ಜೂನ್ 1ರವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಬಸ್ ಮಾಲಕರ ಸಂಘದ ಪದಾಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು‌‌ ತಿಳಿಸಿದರು.

ಮಾರ್ಚ್ ತಿಂಗಳವರೆಗೆ ಶಾಲೆಗಳು ಹಾಗೂ ಮಕ್ಕಳಿಗೆ ಪರೀಕ್ಷೆಗಳು ನಡೆಯಲಿರುವುದರಿಂದ ಹಾಗೂ ಜಿಲ್ಲೆಯ ಖಾಸಗಿ ಸೇರಿದಂತೆ ಎಲ್ಲಾ ಬಸ್‌ಗಳಿಗೆ ಹೊಸದಾಗಿ ಬಾಗಿಲುಗಳನ್ನು ಅಳವಡಿಸಲು ಸಾಕಷ್ಟು ಸಂಖ್ಯೆಯಲ್ಲಿ ಗ್ಯಾರೇಜ್‌ಗಳು ಇಲ್ಲದೇ ಇರುವುದರಿಂದ ಬಸ್ ಚಾಲಕರು ಹಾಗೂ ಮಾಲಕರ ಕೋರಿಕೆಯ ಮೇರೆಗೆ ಫೋಲ್ಡಿಂಗ್ ಮಾದರಿಯ ಬಾಗಿಲುಗಳನ್ನು ಅಳವಡಿಸಲು ಜೂನ್ 1ರವರೆಗೆ ಸಮಯವನ್ನು ನೀಡಲಾಯಿತು ಎಂದು ಹೇಳಿದರು.

ಆದರೆ ಇಂದಿನಿಂದಲೇ ಎಲ್ಲಾ ಬಸ್‌ಗಳ ದೃಢತೆ ಸರ್ಟಿಫಿಕೇಟ್ (ಫಿಟ್‌ನೆಸ್ ಸರ್ಟಿಫಿಕೇಟ್-ಎಫ್‌ಸಿ)ಗಳನ್ನು ನವೀಕರಿಸಲಾಗುವುದು.ಇದಕ್ಕೆ ಮುನ್ನ ಬಸ್‌ಗೆ ಜೂನ್ 1ರೊಳಗೆ ಪೋಲ್ಡಿಂಗ್ ಮಾದರಿಯ ಬಾಗಿಲನ್ನು ಅಳವಡಿಸದಿದ್ದರೆ ಎಫ್‌ಸಿಯನ್ನು ರದ್ದುಪಡಿಸುವ ಷರತ್ತನ್ನು ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು. ಅಲ್ಲದೇ ಜೂನ್‌1ರ ಬಳಿಕ ಯಾವುದೇ ಬಸ್ ಸುಸಜ್ಜಿತ ಬಾಗಿಲನ್ನು ಅಳವಡಿಸಿಕೊಳ್ಳದೇ ಇದ್ದರೆ ಅದನ್ನು ಮುಟ್ಟು ಗೋಲು ಹಾಕಿಕೊಳ್ಳುವ ಷರತ್ತಿಗೂ ಎಲ್ಲಾ ಖಾಸಗಿ ಬಸ್‌ಗಳ ಮಾಲಕರು ಸಂಪೂರ್ಣ ಒಪ್ಪಿಗೆಯನ್ನು ಸೂಚಿಸಿದ್ದು, ಜಿಲ್ಲಾಡಳಿತದ ಷರತ್ತನ್ನು ಶೇ.100ರಷ್ಟು ಅನುಷ್ಠಾನಗೊಳಿಸುವ ಭರವಸೆಯನ್ನೂ ಅವರು ನೀಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ಮನೆಯಲ್ಲಿದ್ದ ದೈವಗಳ ಮೂರ್ತಿಗಳ ಕಳ್ಳತನ : ಆರೋಪಿಗಳ ಬಂಧನ

ಮಂಗಳೂರು : ಮನೆಯಲ್ಲಿದ್ದ ದೈವಗಳ ಮೂರ್ತಿಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಮಂಗಳೂರಿನ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ ಅಮಿತಾ ಎಂಬುವವರ ತಾಯಿ ಮನೆಯಲ್ಲಿ ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಪೂಜಾ ಪರಿಕರಗಳು ಇದ್ದವು. ಈ ಮನೆಯಲ್ಲಿ ಯಾರೂ ವಾಸವಿರದ ಕಾರಣ ಕೇವಲ ಪೂಜೆ ಮಾಡಿ ದೀಪ ಹಚ್ಚಿ ನಂತರ ಬೀಗ ಹಾಕಲಾಗುತ್ತಿತ್ತು.

ರಾತ್ರಿ ಸಮಯ ಯಾರೋ ಅಪರಿಚಿತರು ಮನೆಯ ಮೇಲ್ಚಾವಣಿಯ ಹಂಚು ತೆಗೆದು ಮನೆಯೊಳಗೆ ಪ್ರವೇಶಿಸಿ ಸುಮಾರು 1,00,000 ಮೌಲ್ಯದ 1 ಪಸಪ್ಪ ದೈವದ ತಾಮ್ರದ ಮೂರ್ತಿ, 1 ಮಂತ್ರದೇವತೆಯ ಬೆಳ್ಳಿಯ ಮೂರ್ತಿ, 1 ಕಲ್ಲುರ್ಟಿ ಪಂಜುರ್ಲಿ ದೈವದ ತಾಮ್ರದ ಮೂರ್ತಿ, 1 ಬೆಳ್ಳಿಯ ಕಡ್ಸಲೆ, 2ತಾಮ್ರದ ಘಂಟೆ, 4 ತಾಮ್ರದ ಚೆಂಬು ಹಾಗೂ 1 ಎಲ್.ಇ.ಡಿ ಟಿ.ವಿ ಕಳವು ಮಾಡಿದ ಬಗ್ಗೆ ದೂರು ದಾಖಲಾಗಿತ್ತು.

ಸುರತ್ಕಲ್ ಪೊಲೀಸರು ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು, ತಾಂತ್ರಿಕ ವಿಧಾನಗಳನ್ನು ಪರಿಶೀಲನೆ ನಡೆಸಿದಾಗ ವಾಜೀದ್ ಜೆ ಅಲಿಯಾಸ್ ವಾಜಿ ಎಂಬಾತನ್ನು ದಸ್ತಗಿರಿ ಮಾಡಿ ವಿಚಾರಿಸಲಾಯ್ತು. ಈತನ ಹೇಳಿಕೆಯಂತೆ ಕೃತ್ಯ ಎಸಗಿದ್ದಾಗಿ ಹಾಗೂ ಮನೆಕಳ್ಳತನ ಮಾಡಿದ ಮಾಲಿನಲ್ಲಿ ಹಿತ್ತಾಳೆ ಹಾಗೂ ತಾಮ್ರದ ಸಾಮಾಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಆಲಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದಂತೆ ಸಯ್ಯದ್ ಆಲಿ ಎಂಬಾತನನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ಮನೆಯಿಂದ ಕಳ್ಳತನವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ

Categories
ಕರಾವಳಿ ಸುದ್ದಿ

ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಟಿಕ್ ಸ್ಪರ್ಧೆ : 4 ನೇ ತರಗತಿ ವಿದ್ಯಾರ್ಥಿ ಸದ್ವಿನ್ ಎಸ್ ಆಚಾರ್ಯ ಪ್ರಥಮ ಸ್ಥಾನ

ಕುಂದಾಪುರ : ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಆಯೋಜಿಸಿದ್ದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಟಿಕ್ ಸ್ಪರ್ಧೆಯು ತಮಿಳುನಾಡಿನ ಪುದುಚೇರಿಯಲ್ಲಿ ಜನವರಿ 25 ರಂದು ನಡೆಯಿತು.ರಾಷ್ಟ್ರದ ವಿವಿಧ ರಾಜ್ಯಗಳಿಂದ 2200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಜಯಶ್ರೀ ಮತ್ತು ಸದಾನಂದ ಆಚಾರ್ಯ ತಲ್ಲೂರು ಇವರ ಪುತ್ರ, ಜಯರಾಣಿ ಆಂಗ್ಲ ಮಾಧ್ಯಮ ಶಾಲೆ ತಲ್ಲೂರು ಇಲ್ಲಿನ 4 ನೇ ತರಗತಿ ವಿದ್ಯಾರ್ಥಿ ಸದ್ವಿನ್ ಎಸ್ ಆಚಾರ್ಯ ತಲ್ಲೂರು ಇವರು ZX ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರಿಗೆ ಕುಂದಾಪುರ ಸೆಂಟರ್ ನ ಮಖ್ಯಸ್ಥ ಪ್ರಸನ್ನ ಕೆ. ಬಿ., ಬೋಧಕಿ ಶ್ರೀಮತಿ ಮಹಾಲಕ್ಷ್ಮಿ ಮತ್ತು ದೀಪಾ ರವರು ತರಬೇತಿ ನೀಡಿರುತ್ತಾರೆ.

Categories
ಇತರೆ

ಸಮಾಜ ಇದರ ವ್ಯಾಖ್ಯಾನವನ್ನು ಯಾರು ಕೊಡಲು ಸಾಧ್ಯವಿಲ್ಲ

ಬಹಳಷ್ಟು ಜನ ನಾವು ಸಮಾಜಕ್ಕೋಸ್ಕರ ಬದುಕುವವರು. ಸಮಾಜದಲ್ಲಿ ಒಳ್ಳೆಯವನಾದರೆ ಏನೋ ಒಂದು ಪ್ರತಿಷ್ಠೆ. ನಮ್ಮನ್ನು ಸಮಾಜ ಒಳ್ಳೆಯವ ಎಂದು ಹೇಳಿದರೆ ನಮ್ಮ ಬದುಕು ಸಾರ್ಥಕ ಎಂಬ ಅಹಂ ಭಾವ. ಮನೆಯ ನಾಲ್ಕು ಕೊಡೆಗಳ ಮಧ್ಯೆ ಏನೇ ನಡೆಯಲಿ ಆದರೆ ಆತ ಸಮಾಜದ ಮಧ್ಯ ಬಂದಾಗ ಪ್ರತಿಷ್ಠಿತ ವ್ಯಕ್ತಿ.

ಒಂದು ಸಲ ಯೋಚನೆ ಮಾಡಿ ನಾವು ನಮಗೋಸ್ಕರ ಬದುಕುವರು ಅಥವಾ ಸಮಾಜಕ್ಕೋಸ್ಕರ ? ಸಮಾಜದಲ್ಲಿ ಹೇಳುವವರು ದೇವರನ್ನೇ ಬಿಟ್ಟಿಲ್ಲ ಇನ್ನು ನಮ್ಮನ್ನು ಹೇಳುವುದನ್ನು ಬಿಡುತ್ತಾರಾ ? ನಾವು ಎಷ್ಟೇ ಅನ್ಯಾಯ ಮಾಡಲಿ ಎಷ್ಟೇ ದುಡ್ಡು ಸಂಪಾದನೆ ಮಾಡಲಿ ನಮ್ಮ ಅಂತರಾತ್ಮ ಮಾತ್ರ ನಮ್ಮನ್ನು ಚುಚ್ಚುತ್ತಾ ಇರುತ್ತದೆ .

ಒಂದು ಸಲ ನಮ್ಮ ಜೀವನದಲ್ಲಿ ಮಾಡಿದ್ದನ್ನ ಅಂತರಾತ್ಮದ ಮೂಲಕ ಮೆಲುಕನ್ನು ಹಾಕಿದರೆ ನಾವು ಜೀವನದಲ್ಲಿ ಮಾಡಿದ ಸರಿ ತಪ್ಪುಗಳು ನಮ್ಮ ಕಣ್ಣ ಮುಂದೆ ಬಂದುಬಿಡುತ್ತವೆ. ಸಮಾಜದಲ್ಲಿ ಪ್ರತಿಷ್ಠೆ ಗಳಿಸುತ್ತಾ ಗಳಿಸುತ್ತಾ ನಾವು ಕಳೆದುಕೊಳ್ಳುವುದು ನಮ್ಮ ನೆಮ್ಮದಿ. ಮನಸ್ಸಿನ ನೆಮ್ಮದಿ ಒಂದು ಸಲ ಕದಡಿ ಹೋದರೆ ಅದಕ್ಕೆ ಯಾವುದೇ ಮದ್ದಿಲ್ಲ. ಮುಗ್ಧತೆಯೊಂದಿಗೆ ಜನನ. ಮುಗ್ಧತೆಯೊಂದಿಗೆ ಮರಣ. ದ್ವಂದ್ವದೊಂದಿಗೆ ಜೀವನ.

ಇದೇ ಅಲ್ವೇ ಜೀವನದಲ್ಲಿ ನಾವು ಕಂಡುಕೊಳ್ಳುವುದು. ಜೀವನ ಯಶಸ್ಸು ,ಹಣ , ಪ್ರತಿಷ್ಠೆ ಇವುಗಳ ಹಿಂದೆ ನಮ್ಮ ನಾಗಾಲೋಟ. ಇದರ ಮಧ್ಯೆ ನಾವು ಕಳೆದುಕೊಳ್ಳುವುದು ಮಾನಸಿಕ ನೆಮ್ಮದಿ ಮತ್ತು ಸಂಸ್ಕಾರ. ಸಮಾಜ ಮುಖ್ಯನೋ ನಮ್ಮತನ ಮುಖ್ಯವೋ ಒಂದು ಮೆಲುಕನ್ನ ನಾವು ನಮ್ಮಲ್ಲಿ ಹಾಕಿದರೆ ಉತ್ತರ ಸಿಗಬಹುದೇನೋ.

ನಮ್ಮ ಪ್ರತಿಯೊಂದು ಮನೆಯಲ್ಲಿ ಅರ್ಜುನನು ಹತಾಶನಾಗಿ ಕುರುಕ್ಷೇತ್ರದಲ್ಲಿತನ್ನ ಅಸ್ತ್ರಗಳನ್ನು ಕೆಳಗೆ ಇಟ್ಟಾಗ ಶ್ರೀ ಕೃಷ್ಣನು ಆತನಿಗೆ ಭಗವದ್ಗೀತೆಯನ್ನು ಬೋಧಿಸುವ ಚಿತ್ರವನ್ನು ಹಾಕಬೇಕಿದೆ. ಇದರಿಂದ ನಮ್ಮ ಯುವ ಜನಾಂಗಕ್ಕೆ ಭಗವದ್ಗೀತೆಯ ಉದ್ದೇಶ ಮತ್ತು ಭಗವದ್ಗೀತೆ ಯಾಕಾಗಿ ಬಂತು ಎಂಬ ವಾಸ್ತವಿಕ ಘಟನೆ ಎಲ್ಲರಿಗೂ ಅರಿವಾಗುತ್ತದೆ. ಪ್ರತಿಯೊಂದು ಸಂಸ್ಕಾರವು ಶುರುವಾಗುವುದು ತನ್ನ ಮನೆಯಿಂದಲೇ. ಸಂಸ್ಕಾರ ಎಲ್ಲರ ಜೀವನದಲ್ಲಿ ಬೆರೆತಾಗಮಾತ್ರ ಜೀವನಕ್ಕೆ ಒಂದು ಬೆಲೆ , ಜೀವನಕ್ಕೆ ಒಂದು ಸಾರ್ಥಕತೆಯ ಭಾವ.

ಪ್ರದೀಪ್‌ ಕುಮಾರ್‌,ಕೋಮುಂಜೆ