Categories
ಹೊಂಗಿರಣ

ಸಾಕ್ಷೀಭಾವ

ಬದುಕಿನ ಭ್ರಮೆಗಳನ್ನು ಕಳಚಿಕೊಳ್ಳಲು ಅತಿ ಮುಖ್ಯವಾಗಿ ಬೇಕಾಗಿರುವುದು ವಾಸ್ತವ ಪ್ರಜ್ಞೆ ಬದುಕಿನ ಸಮಸ್ತ ವಿದ್ಯಮಾನಗಳನ್ನು, ಏರಿಳಿತಗಳನ್ನು ಸಾಕ್ಷೀ ಭಾವದಿಂದ ನೋಡಲು ಸಾಧ್ಯವಾಗುವುದರಲ್ಲೇ ವಾಸ್ತವ ಪ್ರಜ್ಞೆ ಕೆಲಸಮಾಡುತ್ತದೆ. ಸುಖ, ದುಃಖ, ಸಿಟ್ಟು, ಕೋಪ, ತಾಪ, ಅಸಹನೆ ಎಲ್ಲವೂ ನಮ್ಮಲ್ಲಿನ ಮೂಲ ಶಾಂತ ಸ್ವಭಾವಕ್ಕೆ ವಿರುದ್ಧವಾದವುಗಳು. ಅತಿಯಾದ ಸಂತೋಷ, ಅತಿಯಾದ ದುಃಖ, ಅತಿಯಾದ ಕ್ರೋಧವನ್ನು ತಳೆದಾಗ ನಾವು ನಿಜಕ್ಕೂ ನಾವಾಗಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸಮತ್ವದ ಮೂಲ ಸ್ವಭಾವದಿಂದ ನಾವು ಎಷ್ಟೋ ದೂರ ಸಾಗಿರುತ್ತೇವೆ. ಆದುದರಿಂದಲೇ ಆ ಸನ್ನಿವೇಶ, ವಿದ್ಯಮಾನಗಳು ಹಾಗೂ ಅದರಲ್ಲಿ ಒಳಗೊಂಡ ಇತರ ವ್ಯಕ್ತಿಗಳಿಂದಾಗಿ ನಮ್ಮ ಒಟ್ಟು ಸ್ವಭಾವ, ವರ್ತನೆ ಪ್ರಭಾವಿತವಾಗಿ ನಮ್ಮ ಮೂಲ ಗುಣ-ಸ್ವಭಾವಕ್ಕೆ ವ್ಯತಿರಿಕ್ತವಾಗಿ ನಾವು ನಡೆದುಕೊಳ್ಳುತ್ತೇವೆ. ನಮ್ಮಲ್ಲಿ ಆಗೀಗ ಭುಗಿಲೇಳುವ ಅತಿರೇಕದ ಭಾವಗಳನ್ನು ನಾವು ನಿಯಂತ್ರಿಸುವುದಕ್ಕಿಂತಲೂ ಮಿಗಿಲಾಗಿ ಅವುಗಳನ್ನು ಸೂಕ್ಷ್ಮವಾಗಿ ಸಾಕ್ಷೀಭಾವದಿಂದ ತಿಳಿದುಕೊಳ್ಳುವುದರಲ್ಲೇ ನಮ್ಮ ವಿಜಯವಿದೆ. ಆ ವಿಜಯ ದೈಹಿಕವೂ, ಮಾನಸಿಕವೂ, ಬೌದ್ಧಿಕವೂ ಆಗಿರುವುದಲ್ಲದೆ ಆತ್ಮೋನ್ನತಿಯ ವಿಜಯವೂ ಆಗಿರುತ್ತದೆ. ಸಮತ್ವ ಹಾಗೂ ಶಾಂತತೆಯ ನಮ್ಮ ಮೂಲ ಸ್ವಭಾವಕ್ಕೆ ವ್ಯತಿರಿಕ್ತವಾಗಿ ಬದುಕಿನಲ್ಲಿ ನಾವು ನಡೆದುಕೊಳ್ಳುವುದರಿಂದ ಅನೇಕ ಬಗೆಯ ಕಾಯಿಲೆಗಳಿಗೆ ನಾವು ಗುರಿಯಾಗುವುದು ಸಹಜವೇ ಆಗಿದೆ. ಈಗ ಪಾಶ್ಚಾತ್ಯ ವೈದ್ಯಕೀಯ ವಿಜ್ಞಾನ ಅದನ್ನೇ ಪದೇ ಪದೇ ಹೇಳುತ್ತಿದೆ. ನಿಮ್ಮ ಸಿಟ್ಟು, ಕೋಪ, ತಾಪ, ಉದ್ವೇಗಗಳು ನಿಮಗೆ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ನರ ದೌರ್ಬಲ್ಯ ಇತ್ಯಾದಿ ಕಾಯಿಲೆಗಳನ್ನು ತರಬಲ್ಲುವು ಎಂದು ವೈದ್ಯರು ಹೇಳುತ್ತಿರುತ್ತಾರೆ. ಒಂದು ಅತಿಯಿಂದ ಇನ್ನೊಂದು ಅತಿಗೆ ಜಿಗಿಯುವ, ನಮ್ಮದಲ್ಲದ ‘ಸ್ವಭಾವ‘ವನ್ನು ನಾವು ಬಿಟ್ಟುಬಿಡುವುದೇ ಲೇಸು. ಏಕೆಂದರೆ ಅತಿರೇಕದ ಭಾವದಲ್ಲಿ ಮನಸ್ಸಿನ ಸಿಮಿತ ನಷ್ಟವಾಗುವಾಗ ದೇವರ ಸ್ಮರಣೆಯಿಂದ ಸಾವಿರ ಯೋಜನಗಳಷ್ಟು ದೂರಕ್ಕೆ ನಾವು ಎಸೆಯಲ್ಪಟ್ಟಿರುತ್ತೇವೆ

Categories
ಕರಾವಳಿ ಸುದ್ದಿ

ಬೇಕೆಂದೇ ಏಕವಚನದಲ್ಲಿ ಮಾತಾಡಿದೆ

ಕುಮಟಾ : ಸಿದ್ದರಾಮಯ್ಯನವರು ಪೂರ್ವಾಗ್ರಹ ಪೀಡಿತರಾಗಿ ಹಿಂದೂ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿಕೊಂಡಿದ್ದಾರೆ. ದುರಂಹಕಾರದಿಂದ ವರ್ತಿಸುವ ಅವರ ಬಗ್ಗೆ ಬೇಕೆಂದೇ ಏಕವಚ ನದಲ್ಲಿ ಮಾತನಾಡಿದ್ದೆ. ಅವರು ರಾಷ್ಟ್ರಪತಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಏನು ಹೇಳಬೇಕು? ಎಂದು ಸಂಸದ ಅನಂತಕುಮಾರ ಹೆಗಡೆ ಪ್ರಶ್ನಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರದು ಏಕಮುಖ ನೀತಿ, ಸ್ಪಷ್ಟವಾಗಿ ಹಿಂದೂ ವಿರೋಧಿ ನೀತಿ, ಸ್ಪಷ್ಟವಾಗಿ ಅಲ್ಪಸಂಖ್ಯಾತರ ತುಷ್ಟಿಕರಣ ಕರ್ನಾಟಕ ಸರ್ಕಾರದಲ್ಲಿ ಮಿತಿಮೀರಿದೆ. ಇದು ನಿಲ್ಲಬೇಕು. ಇಲ್ಲದಿದ್ದರೆ ಇದೊಂದು ಹೊಸ ಜನಾಂದೋಲನವಾಗಿ ಬೆಳೆಯುತ್ತದೆ. ರಾಜ್ಯದ ಜನ ಅತ್ಯಂತ ಪ್ರಜ್ಞಾವಂತರು. ಕರ್ನಾಟಕದ ಕಾಂಗ್ರೆಸ್ಸಿಗೆ ಸಿದ್ದರಾಮಯ್ಯನವರ ಕಾರಣದಿಂದಾಗಿ ಜನ ದೊಡ್ಡ ಪಾಠ ಕಲಿಸಲು ಹೊರಟಿದ್ದಾರೆ ಎಂದರು. ರಾಷ್ಟ್ರಪತಿಗಳ ಬಗ್ಗೆ ಅದರಲ್ಲಿಯೂ ಪರಿಶಿಷ್ಟ ಜನಾಂಗದ ಸಭ್ಯ ಸುಸಂಸ್ಕೃತ ಮಹಿಳೆಯೋರ್ವರನ್ನು ಏಕವಚನದಲ್ಲಿ ನಿಂದಿಸಿದ್ದು ಸಿದ್ದರಾಮಯ್ಯ ಅವರ ಸಂಸ್ಕೃತಿ ತೋರುತ್ತದೆ. ಇದೇ ಕಾರಣಕ್ಕೆ ನಾನು ಬೇಕೆಂದೇ ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದೆ ಎಂದು ಅನಂತಕುಮಾರ ಹೆಗಡೆ ಸ್ಪಷ್ಟಪಡಿಸಿದರು

Categories
ಕರಾವಳಿ ಸುದ್ದಿ

ಸಿಬ್ಬಂದಿ ಕ್ಷೇಮಪಾಲನಾ ಸಮಿತಿಯ ವಾರ್ಷಿಕ ಸಭೆ

ಕುಂದಾಪುರ : ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳು ಸಮಾನ ಮನಸ್ಕರಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ತಮ್ಮ ನೋವು-ನಲಿವುಗಳಲ್ಲಿ ಸ್ಪಂದಿಸುವಂತಾದಾಗ ಮಾನಸಿಕವಾಗಿ ಒಂದುಗೂಡಿ ಕೆಲಸ ಮಾಡಲು ಸಾಧ್ಯ. ಹೀಗಾಗಿ ಇಂತಹ ಸಂಘಗಳು ನಮ್ಮೊಳಗಿನ ಯೋಚನೆಯನ್ನು ಪ್ರಚುರಪಡಿಸುತ್ತದೆ ಎಂದು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಫ್ರೋ ಕೆ. ಉಮೇಶ್ ಶೆಟ್ಟಿ ಹೇಳಿದರು.
ಅವರು ಕಾಲೇಜಿನ ಸಿಬ್ಬಂದಿ ಕ್ಷೇಮಪಾಲನಾ ಸಮಿತಿಯ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಣಿತಶಾಸ್ತ್ರ ಉಪನ್ಯಾಸಕಿ ನಿರ್ಮಲ ಪ್ರಾರ್ಥಿಸಿದರು. ಉಪ ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಸಿಬ್ಬಂದಿ ಕ್ಷೇಮಪಾಲನಾ ಸಮಿತಿಯ ಕಾರ್ಯದರ್ಶಿಯಾದ ಶ್ರೀ ಮಹೇಶ್ ನಾಯ್ಕ್ ಆಯ-ವ್ಯಯ ಪಟ್ಟಿ ಮಂಡಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ರೇಷ್ಮಾ ಶೆಟ್ಟಿ ನಿರೂಪಿಸಿದರು.
ಈ ಸಂದರ್ಭ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿ ಪಡೆದ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿಯವರನ್ನು ಹಾಗೂ ಸರಕಾರಿ ಉದ್ಯೋಗ ನಿಮಿತ್ತ ಸಂಸ್ಥೆಯಿಂದ ನಿರ್ಗಮಿಸಿದ ಮೋನಿಕಾ ಡಿಸೋಜಾ ಅವರನ್ನು ಗೌರವಿಸಲಾಯಿತು. ಸಿಬ್ಬಂದಿಗಳಿಗೆ ಆಯೋಜಿಸಿದ ಕ್ರೀಡಾಕೂಟ ‘ಸಂಗಮ’ದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ನೀಡಲಾಯಿತು.

Categories
ಕ್ರೀಡೆ

ಮಯಾಂಕ್ ಅಗರ್‌ವಾಲ್ ಅಸ್ವಸ್ಥ

ಬೆಂಗಳೂರು : ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್‌ವಾಲ್ ವಿಮಾನದಲ್ಲಿ ತಮ್ಮ ಆಸನದ ಮುಂದೆ ಪೌಚ್‌ನಲ್ಲಿದ್ದ ಜ್ಯೂಸ್ ಕುಡಿದು ಅಸ್ವಸ್ಥರಾದ ಘಟನೆ ಮಂಗಳವಾರ ನಡೆದಿದೆ.

ಸೋಮವಾರ ತ್ರಿಪುರಾ ವಿರುದ್ಧದ ರಣಜಿ ಪಂದ್ಯವನ್ನು ಗೆದ್ದ ಬಳಿಕ, ಮಂಗಳವಾರ ಮಧ್ಯಾಹ್ನ ರಾಜ್ಯ ತಂಡವು ತನ್ನ ಮುಂದಿನ ಪಂದ್ಯವನ್ನಾಡಲು ನವದೆಹಲಿ ಮಾರ್ಗವಾಗಿ ಸೂರತ್‌ ತೆರಳುತಿತ್ತು. ಈ ವೇಳೆ ಇಂಡಿಗೋ ವಿಮಾನದಲ್ಲಿ ದ್ರವ ಪದಾರ್ಥವನ್ನು ಸೇವಿಸುತ್ತಿದ್ದಂತೆ ಮಯಾಂಕ್‌ಗೆ ಹೊಟ್ಟೆ ನೋವು ಶುರುವಾಗಿದ್ದು, ತುಟಿಗಳು ಊದಿಕೊಂಡಿವೆ. ಅವರು ಎರಡು ಬಾರಿ ವಾಂತಿ ಸಹ ಮಾಡಿಕೊಂಡಿದ್ದಾರೆ.

ಕೂಡಲೇ ಮಯಾಂಕ್‌ರನ್ನು ವಿಮಾನ ದಿಂದ ಕೆಳಗಿಳಿಸಿ ಖಾಸಗಿ ಆಸತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ಅವರಿಗೆ ಯಾವುದೇ ಅಪಾಯವಿಲ್ಲ ಎಂದು ತಿಳಿದು ಬಂದಿದ್ದು, ಬುಧವಾರ ಬೆಂಗಳೂರಿಗೆ ಬರಲಿದ್ದಾರೆ. ಮಯಾಂಕ್ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ

Categories
ಸಂಘ ಸಂಸ್ಥೆ

ಅಭಿನಂದನಾ ಸಮಾರಂಭ

ಕುಂದಾಪುರ : ನಗರದ ಚಿಕ್ಕಮ್ಮನಸಾಲು ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಇತ್ತೀಚಿಗೆ ನಿವೃತ್ತಿ ಹೊಂದಿದ ಲಕ್ಷ್ಮೀನಾರಾಯಣ ಕಸ್ತೂರಿ ಅವರನ್ನು ಅಭಿನಂದಿಸಲಾಯಿತು ಲಕ್ಷ್ಮೀನಾರಾಯಣ ಕಸ್ತೂರಿ ಅವರು ಕಳೆದ 30 ವರ್ಷಗಳಿಂದ ಪಶು ಸಂಗೋಪನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಾಮಾಣಿಕ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿದ್ದರು ಅಭಿನಂದನ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಜಿ ಆರ್ ಪ್ರಕಾಶ್ ಅವರು ವಹಿಸಿದ್ದು ವೇದಿಕೆಯಲ್ಲಿ ಕಾರ್ಯದರ್ಶಿ ಮುದುಕರ ಗೌರವಾಧ್ಯಕ್ಷರಾದ ಸುಧೀರ್ ಕೃಷ್ಣ ಹಾಗೂ ಲಕ್ಷ್ಮೀನಾರಾಯಣ ಕಸ್ತೂರಿ ದಂಪತಿಗಳು ಉಪಸ್ಥಿತರಿದ್ದರು ಅರುಣ್ ಬಾಣ ನಿರೂಪಿಸಿದ ಕಾರ್ಯಕ್ರಮದಲ್ಲಿ ಗಣೇಶ್ ಹೆಗ್ಡೆ ಅಭಿನಂದನ ಪತ್ರ ಓದಿದರು ಕೆ ಪಿ ಸುಧೀರ್ ಧನ್ಯವಾದ ಅರ್ಪಿಸಿದರು

Categories
ಕರಾವಳಿ ಸುದ್ದಿ

ಕೋಳಿ ಅಂಕಕ್ಕೆ ಅವಕಾಶ ಇಲ್ಲ

ಮಂಗಳೂರು : ಕೋಳಿ ಅಂಕವು ಕಾನೂನುಬಾಹಿರ ಅಪರಾಧವಾಗಿದ್ದು ಕೋಳಿ ಅಂಕವನ್ನು ನಡೆಸುವುದಕ್ಕಾಗಿ ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಕೋಳಿ ಅಂಕ ನಡೆಸಲು ಅನುಮತಿಗಾಗಿ ಪೊಲೀಸ್ ಠಾಣೆಗಳಿಗೆ ಮನವಿ ಸಲ್ಲಿಸಬಾರದು

ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವುದು ಕಂಡು ಬಂದಲ್ಲಿ ಅವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್‌ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Categories
ಕರಾವಳಿ ಸುದ್ದಿ

‌ವೀರ ಸಾವರ್ಕರ್‌ ನಾಮಫಲಕ ತೆರವಿಗೆ ಆಕ್ರೋಶ

ಭಟ್ಕಳ : ತಾಲೂಕಿನ ಹೆಬಳೆಯ ತೆಂಗಿನಗುಂಡಿ ಬೀಚ್ ರಸ್ತೆಗೆ ಹಾಕಲಾಗಿದ್ದ ವೀರ ಸಾವರ್ಕರ್ ಹೆಸರಿನ ನಾಮಫಲಕವನ್ನು ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪಂಚಾಯಿತಿ ಎದುರು ಧರಣಿ ನಡೆಸಿದರು. ಅನಧಿಕೃತವಾಗಿ ಹಾಕಲಾದ ಎಲ್ಲ ನಾಮಫಲಕ ಮತ್ತು ಕಟ್ಟಡಗಳನ್ನು ತೆರವುಗೊಳಿಸಲು ಒತ್ತಾಯಿಸಿದರು.

ಆರಂಭದಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಧರಣಿ ನಡೆಸಿದರು. ವಿಷಯ ತಿಳಿದು ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಸಾವರ್ಕ‌ರ್ ರವರ ನಾಮಫಲಕ ಮರುಸ್ಥಾಪನೆಗೆ ಅವಕಾಶ ಕೊಡಬೇಕು. ಇಲ್ಲದಿದ್ದಲ್ಲಿ ಅನಧಿಕೃತವಾದ ಎಲ್ಲವನ್ನೂ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದರು.

ಯಾವುದೇ ಲಿಖಿತ ದೂರುಗಳು ಪಂಚಾಯಿತಿಗೆ ಬರದೇ ಇದ್ದರೂ ಅಧಿಕಾರಿಗಳು ಸ್ಥಳೀಯ ಸದಸ್ಯರ ಗಮನಕ್ಕೆ ತರದೇ ಶನಿವಾರ ಏಕಾಏಕಿ ಜೆಸಿಬಿ ಯಂತ್ರ ತಂದು ನಾಮಫಲಕ ಮತ್ತು ಧ್ವಜಸ್ತಂಭ ತೆರವು ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಮಧ್ಯೆ ಪಿಡಿಒ ಹೆಬಳೆಯ ಜಾಮಿಯಾಬಾದ್ ರಸ್ತೆ ನಾಮಫಲಕ ತೆರವು ಮಾಡಲು ಮುಂದಾಗದೇ ಇದ್ದಾಗ ಆಕ್ರೋಶಗೊಂಡ ಬಿಜೆಪಿ ಸದಸ್ಯರು ತಮ್ಮ ಕಾರ್ಯಕರ್ತರ ಜತೆಗೂಡಿ  ತೆಂಗಿನಗುಂಡಿ ಬಂದರನಲ್ಲಿ ಪುನ:ವೀರಸಾರ್ವಕರ್ ನಾಮಫಲಕ ಅಳವಡಿಸಲು ಕಟ್ಟೆಕಟ್ಟಲು ಮುಂದಾದರು. ಇದಕ್ಕೆ ಪೊಲೀಸರು ತಡೆಯಲು ಯತ್ನಿಸಿದಾಗ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆಯಿತು.

Categories
ಶಿಕ್ಷಣ

ವಿದ್ಯಾ ಅಕಾಡೆಮಿ ವಾರ್ಷಿಕೋತ್ಸವ

ಕುಂದಾಪುರ : ಕುಂದಾಪುರದ ಮೂಡ್ಲಕಟ್ಟೆಯ ವಿದ್ಯಾ ಅಕಾಡೆಮಿ ವಿದ್ಯಾ ಸಂಸ್ಥೆಯಲ್ಲಿ ಫೆಬ್ರವರಿ 2 ರಂದು ಶಾಲಾ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಹಗಾರ್ತಿ ಮತ್ತು ವಾಗ್ಮಿ ಶ್ರೀಮತಿ ಪೂರ್ಣಿಮಾ ಭಟ್ ಕಮಲಶಿಲೆ ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಲಿದ್ದು ಐಎಂಜೆ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಸಿದ್ದಾರ್ಥ್ ಜೆ ಶೆಟ್ಟಿಯವರು ಉಪಸ್ಥಿತರಿರುತ್ತಾರೆ. ಮಕ್ಕಳ ಮುಂದಿನ ಶೈಕ್ಷಣಿಕ ವರ್ಷದ ಪದೋನ್ನತಿ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಕಾರ್ಯಕ್ರಮದಲ್ಲಿ ವಿದ್ಯಾ ಅಕಾಡೆಮಿ ಸಂಸ್ಥೆಯ ಆಡಳಿತ ಮಂಡಳಿ, ನಿರ್ದೇಶಕರು ಅಧ್ಯಾಪಕಿಯರು, ಬೋಧಕೇತರ ವೃಂದ, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಲಿದ್ದಾರೆ

Categories
ಕರಾವಳಿ ಸುದ್ದಿ

ಹನುಮ ಭಕ್ತರ ಹಾಗೂ ಟಿಪ್ಪು ಭಕ್ತರ ಚುನಾವಣೆ

ಮಂಗಳೂರು: ರಾಜ್ಯದಲ್ಲಿ ಈಗ ನಡೆಯೋ ಚುನಾವಣೆ ಹನುಮ ಭಕ್ತರಿಗೂ ಹಾಗೂ ಟಿಪ್ಪು ಭಕ್ತರಿಗೂ ನಡೆಯುವ ಚುನಾವಣೆ. ಇದರಲ್ಲಿ ನಿಶ್ಚಯವಾಗಿ ರಾಮ ಭಕ್ತರು ಗೆದ್ದೇ ಗೆಲ್ಲುತ್ತಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಅಹಿಂದ ನಾಯಕ ಅಂತ ಕರೆಸಿಕೊಳ್ಳುತ್ತಿದ್ದರು. ಈಗ ಅಲ್ಪಸಂಖ್ಯಾತರ ನಾಯಕ ಎನ್ನುವ ಮಟ್ಟಕ್ಕೆ ತಲುಪಿದ್ದಾರೆ. ರಾಷ್ಟ್ರಪತಿಗೆ ಏಕವಚನದಲ್ಲಿ ಕರೆಯಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಸೋನಿಯಾ `ಗಾಂಧಿ, ರಾಹುಲ್ ಗಾಂಧಿ ಅವರನ್ನು ಎಂದಾದರೂ ಏಕವಚನದಲ್ಲಿ ಕರೆದಿದ್ದೀರಾ? ಇದರ ಫಲಿತಾಂಶ ಉಣ್ಣುವ ದಿನ ಕಾಂಗ್ರೆಸ್‌ಗೆ ಬರಲಿದೆ ಎಂದರು.

Categories
ಕರಾವಳಿ ಸುದ್ದಿ

ಬಡವರು ರೈತರು ದಲಿತ ವಿರೋಧಿ ಸರ್ಕಾರ

ಮಂಗಳೂರು : ರಾಜ್ಯದಲ್ಲಿರೋದು ಬಡವರು ರೈತರು ದಲಿತ ವಿರೋಧಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸೀಟುಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ನಗರದ ಹೊರವಲಯದ ಅಡ್ಯಾರ್‌ ಗಾರ್ಡನ್‌ನಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷ ಸತೀಶ್ ಕುಂಪಲ ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಸಂಕಷ್ಟದಲ್ಲಿರುವ ರೈತರಿಗೆ ಯಾವ ಸಹಾಯವನ್ನೂ ರಾಜ್ಯ ಸರ್ಕಾರ ಮಾಡಿಲ್ಲ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಬರದಿಂದ ಸಂಕಷ್ಟದಲ್ಲಿದ್ದ ರೈತರ ಖಾತೆಗಳಿಗೆ 13 ಸಾವಿರ ರೂಪಾಯಿಗಳನ್ನು ಹಾಕಿದ್ದರು. ಪ್ರವಾಹ ಪರಿಸ್ಥಿತಿ ಇದ್ದಾಗ 5 ಲಕ್ಷ ರೂಪಾಯಿ  ಪರಿಹಾರ ಒದಗಿಸಿದ್ದರು.

ಇನ್ನು ಕಾಂಗ್ರೆಸ್ ಮುಖಂಡರು ದಲಿತರ ಬಗ್ಗೆ ಮಾತನಾಡುತ್ತಾರೆ. ದಲಿತರಿಗೆ ಸಂಬಂಧಿಸಿದ ಸಾವಿರಾರು ಕೋಟಿ ಹಣವನ್ನು ಡೈವರ್ಟ್ ಮಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಷ್ಟೆ ಅಲ್ಲ, ಅವರ ವಿರುದ್ಧ ಸ್ಪರ್ಧಿಸಿ ಗೆದ್ದ ಕಾಂಗ್ರೆಸ್ ಸಂಸದನಿಗೆ ಭಾರತ ರತ್ನ ಪ್ರಶಸ್ತಿ ನೀಡಿದವರಿಗೆ ದಲಿತರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಆದರೆ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದ ಪ್ರದೇಶಗಳನ್ನು ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಡವರು, ರೈತರು, ದಲಿತರ ವಿರೋಧಿ ಧೋರಣೆ ಪ್ರದರ್ಶಿಸಿದೆ ಎಂದರು