Categories
ಬ್ರೇಕಿಂಗ್ ನ್ಯೂಸ್

ಕೊಲ್ಲೂರು : ಲಾಡ್ಜ್‌ನಲ್ಲಿ ಮಹಿಳೆ ಆತ್ಮಹತ್ಯೆ

ಕೊಲ್ಲೂರು : ಉಡುಪಿ ಜಿಲ್ಲೆಯ ಕೊಲ್ಲೂರಿನ ಖಾಸಗಿ ಲಾಡ್ಜ್‌ನಲ್ಲಿ ತಂಗಿದ್ದ ಕೇರಳ ಮೂಲದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (ಯುಡಿಆರ್) ಪ್ರಕರಣ ದಾಖಲಾಗಿದೆ.

ಮೃತರನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಧನ್ಯಶ್ರೀ ಎನ್. (35) ಎಂದು ಗುರುತಿಸಲಾಗಿದೆ.

ಅವರು ಜುಲೈ 19ರಂದು ಸಂಜೆ ಕೊಲ್ಲೂರಿನ ಅಮ್ಮ ಲಾಡ್ಜ್‌ನಲ್ಲಿ ವಾಸ್ತವ್ಯಕ್ಕೆ ಕೊಠಡಿ ಪಡೆದಿದ್ದರು. ಜುಲೈ 21ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಅವರು ಕೊಠಡಿಯಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ, ಮಧ್ಯಾಹ್ನ ಸುಮಾರು 2.30ಕ್ಕೆ ಲಾಡ್ಜ್ ಸಿಬ್ಬಂದಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ.

ಬಳಿಕ ರೂಮ್ ಬಾಯ್ ಜೊತೆಗೆ ಕಿಟಕಿಯಿಂದ ಒಳಗೆ ನೋಡಿದಾಗ, ಕೊಠಡಿಯೊಳಗೆ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಜುಲೈ 20ರ ರಾತ್ರಿ 8.30ರಿಂದ ಜುಲೈ 21ರ ಮಧ್ಯಾಹ್ನ 2.30ರ ನಡುವಿನ ಅವಧಿಯಲ್ಲಿ ವೈಯಕ್ತಿಕ ಕಾರಣಗಳಿಂದ ಅವರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Categories
ಬ್ರೇಕಿಂಗ್ ನ್ಯೂಸ್

ರತ್ನಾಕರ ಅಮೀನ್ ಮೂಡುಬೆಟ್ಟು ನಿಧನ

ಉಡುಪಿ : ಜಿಲ್ಲಾ ಟೈಲರ್ಸ್ ಅಸೋಸಿಯೇಷನ್ ಇದರ ಬನ್ನಂಜೆ-ಶಿರಿಬೀಡು ವಲಯದ ಸಂಘಟನಾ ಕಾರ್ಯದರ್ಶಿ, ಮೂಡುಬೆಟ್ಟು-ಆದಿವುಡುಪಿ ಮುಖ್ಯಪ್ರಾಣ ರಸ್ತೆ ಪರಿಸರದ ನಿವಾಸಿ ರತ್ನಾಕರ ಅಮೀನ್ (54 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳ ಜೊತೆಗೆ ಆಟೋ ಚಾಲಕ ಹಾಗೂ ಟೈಲರ್ ವೃತ್ತಿಯನ್ನು ನಿರ್ವಹಿಸುತ್ತಿದ್ದ ಇವರು ಪತ್ನಿ ಮತ್ತು ಬಂಧು ವರ್ಗವನ್ನು ಅಗಲಿದ್ದಾರೆ.

Categories
ಕರಾವಳಿ ಸುದ್ದಿ

ಜುಲೈ 25-26 : ‘ಎಸ್ಐಆರ್ ಮಹಾ ಸಂಪರ್ಕ ಅಭಿಯಾನ’ ಯಶಸ್ವಿಗೊಳಿಸಲು ಕುತ್ಯಾರು ನವೀನ್ ಶೆಟ್ಟಿ ಕರೆ

ಉಡುಪಿ : ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆಯಂತೆ ಜುಲೈ 25 ಮತ್ತು 26ರಂದು ರಾಜ್ಯಾದ್ಯoತ ನಡೆಯಲಿರುವ ‘ಎಸ್ಐಆರ್ ಮಹಾ ಸಂಪರ್ಕ ಅಭಿಯಾನ’ವನ್ನು ಜಿಲ್ಲೆಯಾದ್ಯoತ ಸಂಘಟಿತ ಪ್ರಯತ್ನದ ಮೂಲಕ ಯಶಸ್ವಿಗೊಳಿಸುವಂತೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಎಸ್ಐಆರ್ ಮಹಾ ಸಂಪರ್ಕ ಅಭಿಯಾನ’ದ ಎರಡೂ ದಿನಗಳಲ್ಲಿ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಮನೆ ಮನೆ ಭೇಟಿಯ ಮೂಲಕ ‘ಎಸ್ಐಆರ್’ ಪ್ರಕ್ರಿಯೆಗೆ ವೇಗ ನೀಡುವ ಜೊತೆಗೆ ಜುಲೈ 26ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮದ ನೇರ ಪ್ರಸಾರವನ್ನು ಜಿಲ್ಲೆಯ ಎಲ್ಲಾ 1,112 ಬೂತ್ ಗಳಲ್ಲಿ ವೀಕ್ಷಿಸಿ, ವಿವರವನ್ನು ‘ಸರಲ್ ಆಪ್’ನಲ್ಲಿ ಅಪ್ಲೋಡ್ ಮಾಡುವ ಮೂಲಕ ಉಡುಪಿ ಜಿಲ್ಲೆ 100% ಸಾಧನೆ ದಾಖಲಿಸುವಂತೆ ಬದ್ಧತೆಯಿಂದ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.ಬಿಜೆಪಿ ಜಿಲ್ಲಾ ಕಛೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು ಮುಂದಿನ ವರ್ಷಾ0ತ್ಯದಲ್ಲಿ ಪೂರ್ಣಗೊಳ್ಳಲಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಯ ವಿರುದ್ದ ಕರಾವಳಿಯಾದ್ಯಂತ ಬೃಹತ್ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತು ಮಾಹಿತಿ ನೀಡಿದರು. ಮಂಡಲಗಳ ಹಾಗೂ ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಚಟುವಟಿಕೆಗಳ ವಿಸ್ತ್ರತ ವರದಿಯನ್ನು ಮಂಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರು, ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಮತ್ತು ಸಂಚಾಲಕರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅನಿತಾ ಶ್ರೀಧರ್ ಗೀತೆ ಹಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ ಸ್ವಾಗತಿಸಿ, ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5128

ಪರಾಭವ ಸಂವತ್ಸರ

ಉತ್ತರಾಯಣ

ಗ್ರೀಷ್ಮ : ಋತು

ಆಷಾಢ : ಮಾಸ

ಶುಕ್ಲ  ಪಕ್ಷ

ನವಮಿ : ತಿಥಿ

ವಿಶಾಖೆ : ನಕ್ಷತ್ರ

ಗುರುವಾರ

23.07.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಬ್ರೇಕಿಂಗ್ ನ್ಯೂಸ್

ಕೋಟ : ಅತಿವೇಗ ಮತ್ತು ಅಜಾಗರೂಕತೆಯ ಚಾಲನೆ ಪಾದಚಾರಿಗೆ ಢಿಕ್ಕಿ

ಕೋಟ: ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದಾಗಿ 407 ವಾಹನವೊಂದು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹಳ್ಳಾಡಿ-ಹರ್ಕಾಡಿ ಗ್ರಾಮದ ಕೋಳ್ಕೇರೆ ರಸ್ತೆಯ ಬಳಿ ನಡೆದಿದೆ.

ಸ್ಥಳೀಯ ನಿವಾಸಿ ನಾರಾಯಣ ಶೆಟ್ಟಿ ಮೃತಪಟ್ಟ ದುರ್ದೈವಿ. ಮಂಗಳವಾರ ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಸೈಬ್ರಕಟ್ಟೆ ಮಾರ್ಗವಾಗಿ ಹಾಲಾಡಿ ಕಡೆಗೆ ಸಾಗುತ್ತಿದ್ದ 407 ವಾಹನದ ಚಾಲಕ ತೀರಾ ಎಡಬದಿಗೆ ಚಲಾಯಿಸಿ ಅವರಿಗೆ ಢಿಕ್ಕಿ ಹೊಡೆದಿದ್ದಾನೆ.

ಅಪಘಾತದ ರಭಸಕ್ಕೆ ನಾರಾಯಣ ಶೆಟ್ಟಿಯವರ ತಲೆ ಹಾಗೂ ಎದೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ತಕ್ಷಣವೇ ಅವರನ್ನು ಬ್ರಹ್ಮಾವರದ ಪ್ರಣವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮೃತರ ಅಳಿಯ ಗಣೇಶ್ ಶೆಟ್ಟಿ ಅವರು ನೀಡಿದ ದೂರಿನನ್ವಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Categories
ಬ್ರೇಕಿಂಗ್ ನ್ಯೂಸ್

ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್‌ ಬಂಧಿಸಲು ಕಾರ್ಮಿಕ ಗಿರೀಶ್ ತೋರಿದ ಮಹತ್ವದ ಪಾತ್ರ

ಬಂಟ್ವಾಳ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜುಲೈ 16ರಂದು ನಡೆದ ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್‌ನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸ್ಥಳೀಯ ದಿನಗೂಲಿ ಕಾರ್ಮಿಕ ಗಿರೀಶ್ ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆ ಮಹತ್ವದ ಪಾತ್ರ ವಹಿಸಿದೆ.

ಪೊಲೀಸರು ಅಧಿಕೃತವಾಗಿ ವಾಮಂಜೂರಿನ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಆರೋಪಿಯನ್ನು ಬಂಧಿಸುವ ಮುನ್ನವೇ ಗಿರೀಶ್ ತೋರಿದ ಸಾಹಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಮಿಕರ ಮಾಹಿತಿ ಪ್ರಕಾರ, ಹತ್ಯೆ ನಡೆಸಿದ ಬಳಿಕ ಚೇತನ್ ಮಂಗಳೂರಿನತ್ತ ಕಾರಿನಲ್ಲಿ ತೆರಳಿ ವಾಮಂಜೂರಿಗೆ ಬಂದಿದ್ದಾನೆ ಎನ್ನಲಾಗಿದೆ. ಪಚ್ಚನಾಡಿ ಪ್ರದೇಶದಲ್ಲಿ ರಾತ್ರಿ ವೇಳೆ ಆತನ ಆಲ್ಟೋ ಕಾರು ಸಂಚರಿಸುತ್ತಿರುವುದು ಕಂಡುಬಂದಿದ್ದು, ಆತ ಕಾರಿನಲ್ಲೇ ರಾತ್ರಿ ಕಳೆದಿರಬಹುದು ಎಂದು ಶಂಕಿಸಲಾಗಿದೆ.

ಘಟನೆಯ ಕುರಿತು ಮಾತನಾಡಿದ ಗಿರೀಶ್, ತಾನು ಗುರುಪುರ, ಕೈಕಂಬ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕೋಳಿ ಅಂಗಡಿಗಳ ತ್ಯಾಜ್ಯವನ್ನು ಪಿಕಪ್ ವಾಹನದಲ್ಲಿ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

“ಶುಕ್ರವಾರ ಬೆಳಗ್ಗೆ ಸುಮಾರು 8:30ಕ್ಕೆ ತ್ಯಾಜ್ಯ ಘಟಕದ ಸಮೀಪದ ಅಂಗಡಿಯ ಮುಂದೆ ಒಂದು ಕಾರು ಬಂದು ನಿಂತಿತು. ನಾನು ಅಂಗಡಿಯ ಹೊರಗಿದ್ದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಮೊಬೈಲ್ ನೋಡುತ್ತಿದ್ದೆ. ಕಾರಿನ ಚಾಲಕನತ್ತ ಗಮನ ಹರಿಸಿದಾಗ, ಲಾವಣ್ಯ ಹತ್ಯೆ ಪ್ರಕರಣದ ಸಂಬಂಧ ಮೊಬೈಲ್‌ನಲ್ಲಿ ಈಗಾಗಲೇ ನೋಡಿದ್ದ ಚೇತನ್‌ನ ಫೋಟೋಗೆ ಹೋಲಿಕೆಯಿರುವುದು ಕಂಡುಬಂತು. ತಕ್ಷಣ ಕಾರಿನ ಬಳಿ ಹೋಗಿ ಮಾತನಾಡಲು ಪ್ರಯತ್ನಿಸಿದೆ. ಆತ ಕಾರಿನ ಗಾಜನ್ನು ಸ್ವಲ್ಪ ಕೆಳಗಿಳಿಸಿದ. ‘ಏನು ಬೇಕು?’ ಎಂದು ಕೇಳಿದಾಗ, ‘ಬಿ.ಸಿ.ರೋಡ್‌ನಲ್ಲಿ ಯುವತಿಯನ್ನು ಕೊಲೆ ಮಾಡಿದವನು ನೀನೇನಾ?’ ಎಂದು ನೇರವಾಗಿ ಪ್ರಶ್ನಿಸಿದೆ. ಕೂಡಲೇ ಆತ ತೀವ್ರ ಆತಂಕಕ್ಕೆ ಒಳಗಾದಂತೆ ಕಂಡುಬಂತು” ಎಂದು ಗಿರೀಶ್ ವಿವರಿಸಿದ್ದಾರೆ.

“ಆ ವ್ಯಕ್ತಿ ಚೇತನ್ ಎಂಬುದು ಖಚಿತವಾದ ಬಳಿಕ ಗಿರೀಶ್ ಆತನನ್ನು ಕಾರಿನಿಂದ ಹೊರಗೆಳೆಯಲು ಪ್ರಯತ್ನಿಸಿದರು. ಆರಂಭದಲ್ಲಿ ಚೇತನ್ ನಿರಾಕರಿಸಿದರೂ, ಬಳಿಕ ‘ಮುಖ ತೊಳೆಯಬೇಕು’ ಎಂದು ಹೇಳಿ ಕಾರಿನಿಂದ ಇಳಿದನು. ಆದರೆ ನನ್ನ ಮೇಲೆಯೇ ನಿಗಾ ಇಟ್ಟುಕೊಂಡಿದ್ದ ಆತ, ಮತ್ತೆ ಕಾರಿನೊಳಗೆ ಹೋಗಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ” ಎಂದರು.

“ನಾನು ಕಾರಿನ ಕೀ ಕಸಿದುಕೊಳ್ಳಲು ಪ್ರಯತ್ನಿಸಿದಾಗ ಆತ ವಿರೋಧಿಸಿದ. ಕೆಲ ಹೊತ್ತು ನಡೆದ ಹೋರಾಟದ ಬಳಿಕ ಕೀಯನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದೆ. ಸ್ವಲ್ಪ ಸಮಯದ ಬಳಿಕ ಆತ ತನ್ನ ಬಳಿ ಇದ್ದ ಸಣ್ಣ ಬಾಟಲಿಯಲ್ಲಿದ್ದ ದ್ರವವನ್ನು ಕುಡಿದ” ಎಂದು ಹೇಳಿದರು.

ಈ ವೇಳೆ ಗಿರೀಶ್ ಸ್ಥಳೀಯರ ಸಹಾಯ ಪಡೆದು ಆರೋಪಿಯನ್ನು ಅಲ್ಲೇ ತಡೆದು ನಿಲ್ಲಿಸಿದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳದಲ್ಲಿದ್ದ ಇತರರೂ ಪೊಲೀಸರಿಗೆ ಕರೆ ಮಾಡಿದರು. ಸುಮಾರು ಅರ್ಧ ಗಂಟೆಯೊಳಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಚೇತನ್‌ನನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಕರೆದೊಯ್ದರು.

“ಆರೋಪಿಯ ಕಾರಿನಲ್ಲಿ ಎರಡು ಚಾಕುಗಳು ಪತ್ತೆಯಾಗಿದ್ದವು. ಕಾರಿನ ಕೀ ಕಸಿದುಕೊಳ್ಳುವ ವೇಳೆ ಆತ ನನ್ನನ್ನು ತಳ್ಳಿ ಚಾಕು ತೆಗೆಯಲು ಯತ್ನಿಸಿದ. ಕೂಡಲೇ ನಾನು ಕಾಲಿನಿಂದ ಚಾಕುವನ್ನು ದೂರ ತಳ್ಳಿದೆ” ಎಂದು ಗಿರೀಶ್ ಹೇಳಿದ್ದಾರೆ.

“ತಮ್ಮ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಪೊಲೀಸರು ಶ್ಲಾಘಿಸಿದ್ದಾರೆ. ನಿನ್ನ ಎಚ್ಚರಿಕೆಯಿಂದ ಆರೋಪಿಯನ್ನು ಸುಲಭವಾಗಿ ಬಂಧಿಸಲು ಸಾಧ್ಯವಾಯಿತು. ಕಳೆದ ರಾತ್ರಿಯಿಂದಲೇ ನಾವು ಆತನಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೆವು. ನಿನ್ನ ಧೈರ್ಯ ನಿಜಕ್ಕೂ ಶ್ಲಾಘನೀಯ” ಎಂದು ಪೊಲೀಸರು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

“ನನಗೆ ಸಾವಿನ ಭಯ ಇರಲಿಲ್ಲ. ಕೊಲೆ ಮಾಡಿದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂಬುದೇ ನನ್ನ ಒಂದೇ ಉದ್ದೇಶವಾಗಿತ್ತು. ಬಿ.ಸಿ.ರೋಡ್‌ನಲ್ಲಿ ನಡೆದ ಘಟನೆ ಅತ್ಯಂತ ಅಮಾನವೀಯವಾಗಿತ್ತು. ಅದರ ವಿಡಿಯೋವನ್ನು ಮೊಬೈಲ್‌ನಲ್ಲಿ ನೋಡಿದಾಗ ಮನಸ್ಸಿಗೆ ತುಂಬಾ ನೋವಾಗಿತ್ತು” ಎಂದು ಗಿರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

Categories
ಕರಾವಳಿ ಸುದ್ದಿ

19ನೇ ವರ್ಷದ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟ ಸಂಪನ್ನ.

“ಇದು ಮಾತನಾಡುವ ವೇದಿಕೆಯಲ್ಲ, ಆಟವಾಡುವ ಮೈದಾನ. ಗೆಲುವು ಮತ್ತು ಕಲಿಕೆ ಎರಡೂ ಕ್ರೀಡಾಂಗಣದಲ್ಲೇ ಸಿಗುತ್ತವೆ. ಪರಿಶ್ರಮವು ಫಲಿತಾಂಶ ದೊರೆಯುವವರೆಗೆ ನಿರಂತರವಾಗಿರಬೇಕು” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶವನ್ನು ಶ್ರೀ. ಪ್ರಸನ್ನ ಶೆಣೈ  ರೆಂಜಾಳ ನುಡಿದರು.
ಕ್ರೀಡಾ ಭಾರತಿ ಕರ್ನಾಟಕ ದಕ್ಷಿಣದ ಪ್ರಾಂತ ಸಹ ಕಾರ್ಯದರ್ಶಿಗಳಾದ ಶ್ರೀ. ಪ್ರಸನ್ನ ಶೆಣೈ ಇವರು ಜಿಲ್ಲಾ ಮಟ್ಟದ
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಾಗೂ ರಾಷ್ಟ್ರೋತ್ಥಾನ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 19ನೇ ವರ್ಷದ ಜಿಲ್ಲಾಮಟ್ಟದ ಕ್ರೀಡಾಕೂಟವು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಜರುಗಿದೆ.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಶ್ರೀ ಮಹೇಶ್ ಹೈಕಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ  ” ಕ್ರೀಡೆಯಲ್ಲಿ ಗೆಲುವು-ಸೋಲುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು  ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಅಧ್ಯಕ್ಷರಾದ ಶ್ರೀ ಪಾಂಡುರಂಗ ಪೈ ಸಿದ್ದಾಪುರ , ವಿದ್ಯಾಭಾರತಿ ಕರ್ನಾಟಕದ ಶಾರೀರಿಕ ಪ್ರಮುಖರಾದ ಶ್ರೀ ವಿಜಯಕುಮಾರ್ ಶೆಟ್ಟಿ  ಸಿದ್ದಾಪುರ ,ಚೇರ್ಕಾಡಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಧಾನಾಚಾರ್ಯೆ ಶ್ರೀಮತಿ ಪೂರ್ಣಿಮಾ ಎಸ್.ಡಿ. , ರಾಷ್ಟ್ರೋತ್ಥಾನ ಪಿ.ಯು ಕಾಲೇಜಿನ ಪ್ರಧಾನಾಚಾರ್ಯೆ ಶ್ರೀಮತಿ ಭಾಗ್ಯಶ್ರೀ ಹಾಗೂ ಆಡಳಿತಾಧಿಕಾರಿ ಶ್ರೀ ಸುರೇಶ್ ಹೆಜಮಾಡಿ  , ಸಮಾರೋಪ ಸಮಾರಂಭದಲ್ಲಿ  ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶ್ರೀ. ಪ್ರಕಾಶ್ ಆಚಾರ್ಯ ವಡ್ಡರ್ಸೆ   ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಸುಮ ಅವರು ನಿರೂಪಿಸಿದರು. ಕಾವ್ಯ ಸ್ವಾಗತಿಸಿ, ಮೇಘನಾ ಜಿ ವಂದನಾರ್ಪಣೆ ಸಲ್ಲಿಸಿದರು.
ಜಿಲ್ಲೆಯ ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ 14  ಶಾಲೆಗಳಿಂದ 243 ಬಾಲಕರು ,149 ಬಾಲಕಿಯರು   ಅಪಾರ ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು. ಕ್ರೀಡಾ ಸ್ಪೂರ್ತಿ, ಶಿಸ್ತು ಹಾಗೂ ಆರೋಗ್ಯಕರ ಸ್ಪರ್ಧಾ  ಮನೋಭಾವಕ್ಕೆ ಈ ಕ್ರೀಡಾಕೂಟ ಸಾಕ್ಷಿಯಾಯಿತು.ಜಿಲ್ಲಾ ಮಟ್ಟದಲ್ಲಿ ಪ್ರಥಮ  ಸ್ಥಾನ ಪಡೆದ ವಿದ್ಯಾರ್ಥಿಗಳು ವಿದ್ಯಾಭಾರತಿ ಕರ್ನಾಟಕ ನಡೆಸುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ವಿದ್ಯಾಭಾರತಿ ಪ್ರಾಂತ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು  ಇದೇ ತಿಂಗಳು ಜುಲೈ 29, 30,ಮತ್ತು 31,ರಂದು ಕಲಬುರ್ಗಿಯ ಶ್ರೀ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ   ನಡೆಯವುದು.
Categories
ಕರಾವಳಿ ಸುದ್ದಿ ಬ್ರೇಕಿಂಗ್ ನ್ಯೂಸ್

ಅಂಡರ್-17 ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿರುವ ಆರಾಧ್ಯ ಎಸ್. ಶೆಟ್ಟಿ ಅವರಿಗೆ ಅಭಿನಂದನೆಗಳು

ಶಿವಮೊಗ್ಗದಲ್ಲಿ 2026ರ ಜುಲೈ 17 ರಿಂದ 19ರವರೆಗೆ ನಡೆದ ಕರ್ನಾಟಕ ರಾಜ್ಯ ಅಂಡರ್-17 ಬಾಲಕಿಯರ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಶಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಂಡರ್-17 ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿರುವ ಆರಾಧ್ಯ ಎಸ್. ಶೆಟ್ಟಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಅಂಡರ್-17 ರಾಷ್ಟ್ರೀಯ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಆರಾಧ್ಯ, ಇದೀಗ ಮತ್ತೊಮ್ಮೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುವ ಮೂಲಕ ತಮ್ಮ ಪ್ರತಿಭೆ, ಶಿಸ್ತು, ಪರಿಶ್ರಮ ಮತ್ತು ಸಮರ್ಪಣೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಟೂರ್ನಮ್ನೆಟ್ ಆರಂಭದಿಂದಲೇ ಆರಾಧ್ಯ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದರು. ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದ ಹಾಗೂ ಬೆಂಗಳೂರು ಅರ್ಬನ್‌ AFM ದೀಪ್ತಾ ಶ್ರೀನಿವಾಸ್ ಅವರನ್ನು ಸೋಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಎಲ್ಲರಿಗೂ ತೋರಿಸಿದರು.

7ನೇ ಸುತ್ತಿನಲ್ಲಿ, ಮಂಗಳೂರಿನ 1884 ರೇಟಿಂಗ್ ಹೊಂದಿರುವ ಆರುಶ್ರಿ ಸೆವೆರಿನ್ ಹೆಲೆನ್ ಡಿ ವಿರುದ್ಧ ಅತ್ಯುತ್ತಮ ಮಧ್ಯದಾಟ (Middlegame) ಪ್ರದರ್ಶಿಸಿದರೂ, ಕೊನೆಯ ಹಂತದಲ್ಲಿ ನಡೆದ ಸಣ್ಣ ತಾಂತ್ರಿಕ ತಪ್ಪಿನಿಂದ ಪಂದ್ಯವನ್ನು ಕಳೆದುಕೊಂಡರು.

ಆದರೆ, ನಿಜವಾದ ಚಾಂಪಿಯನ್‌ನ ಗುಣವನ್ನು ತೋರಿದ ಆರಾಧ್ಯ ಯಾವುದೇ ನಿರಾಶೆಗೆ ಒಳಗಾಗದೆ 8ನೇ ಸುತ್ತಿನಲ್ಲಿ 1547 ರೇಟಿಂಗ್ ಹೊಂದಿದ್ದ ದ್ರಿಥಿ ವಿ ಚಿತ್ರದುರ್ಗ ಅವರನ್ನು ಸೋಲಿಸಿ ಅದ್ಭುತವಾಗಿ ಪುನರಾಗಮನ ಮಾಡಿದರು.

ಅತ್ಯಂತ ನಿರ್ಣಾಯಕವಾಗಿದ್ದ ಕೊನೆಯ ಸುತ್ತಿನಲ್ಲಿ, 1751 ರೇಟಿಂಗ್ ಹೊಂದಿರುವ ಸಿಮ್ರಾ ನದಾಫ್ ಧಾರವಾಡ ಅವರನ್ನು ಮಣಿಸಿ ಅದ್ಭುತ ಗೆಲುವು ದಾಖಲಿಸುವ ಮೂಲಕ ಕರ್ನಾಟಕವನ್ನು ಪ್ರತಿನಿಧಿಸಿ ಅಂಡರ್-17 ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ಗೆ ಅಧಿಕೃತವಾಗಿ ಅರ್ಹತೆ ಪಡೆದರು.

ಆರಾಧ್ಯ ಅವರ ಈ ಸಾಧನೆಯ ಪಯಣ ಅನೇಕ ಯುವ ಚೆಸ್ ಆಟಗಾರರಿಗೆ ಪ್ರೇರಣೆಯಾಗಿದೆ. ಇದೇ ಆತ್ಮವಿಶ್ವಾಸ, ನಿರಂತರ ಪರಿಶ್ರಮ ಮತ್ತು ಹೋರಾಟದ ಮನೋಭಾವದಿಂದ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ ಕರ್ನಾಟಕ ರಾಜ್ಯಕ್ಕೂ ಹಾಗೂ ಕಶ್ವಿ ಚೆಸ್ ಸ್ಕೂಲ್ಗೂ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಕೀರ್ತಿ ತಂದುಕೊಡಲಿ ಎಂಬುದು ನಮ್ಮ ಹಾರೈಕೆ.

ಮುಂಬರುವ ಅಂಡರ್-17 ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ಗೆ ಹಾರ್ದಿಕ ಶುಭಾಶಯಗಳು. ನಿಮ್ಮ ಯಶಸ್ಸಿನ ಪಯಣ ಹೀಗೆ ನಿರಂತರವಾಗಿ ಮುಂದುವರಿಯಲಿ.

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5128

ಪರಾಭವ ಸಂವತ್ಸರ

ಉತ್ತರಾಯಣ

ಗ್ರೀಷ್ಮ : ಋತು

ಆಷಾಢ : ಮಾಸ

ಶುಕ್ಲ  ಪಕ್ಷ

ನವಮಿ : ತಿಥಿ

ಸ್ವಾತಿ : ನಕ್ಷತ್ರ

ಬುಧವಾರ

22.07.2026

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿಗಳ ಹಾಗೂ ಯುವ ಜನತೆ ವಿರೋಧಿ ಬಿಜೆಪಿ ಪಕ್ಷ.

ದೇಶದ ರಾಜಧಾನಿಯಲ್ಲಿ ನ್ಯಾಯಕ್ಕಾಗಿ ನ್ಯಾಯಯುತ ಹೋರಾಟ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಯುವ ಜನತೆಯನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಎನ್ ಡಿ ಎ ಸರ್ಕಾರದ ನಡೆ ಯುವಜನ ವಿರೋಧಿ ಹಾಗೂ ಸರ್ವಾಧಿಕಾರಿ ನಡೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರು ಬಾಯಿ ತೆಗೆದರೆ ತಾವು ಯುವ ಜನತೆಯ, ವಿದ್ಯಾರ್ಥಿಗಳ ಪರ ಎನ್ನುವುದು, ಇನ್ನೊಂದು ಕಡೆ ದೇಶದ ಪ್ರಧಾನಿ ಭೇಟಿ ಪಡಾವೋ, ಭೇಟಿ ಭಚಾವೋ ಎನ್ನುವುದು ಆದರೆ ಇಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ವಿರುದ್ಧ ಯುವ ಜನತೆ ಹಾಗೂ ವಿದ್ಯಾರ್ಥಿಗಳು ನ್ಯಾಯಕೋರಿ ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದರೆ, ಕನಿಷ್ಠ ಅವರ ಬೇಡಿಕೆಯಾದ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ರಾಜೀನಾಮೆ ಕೇಳಿ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸಬೇಕಾದ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಪ್ರವಾಸದಲ್ಲಿ ತಲ್ಲಿನರಾಗಿರುವುದು ದೇಶದ ಸಾರ್ವಕಾಲಿಕ ದುರಂತ. ದೇಶದ ಯುವ ಜನತೆ ಬಿಜೆಪಿಯವರು ವಿದ್ಯಾರ್ಥಿ ಸಮುದಾಯ ಹಾಗೂ ನಿರುದ್ಯೋಗಿ ಯುವಕರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದನೆ ನೀಡದೆ ಇರುವ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ದೇಶದಲ್ಲಿ ಯುವ ಜನತೆಯ ಪರವಾಗಿದ್ದ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಯುವಕರಿಗೆ ಮತದಾನ, ಶಿಕ್ಷಣ, ಉದ್ಯೋಗ, ಸಮಾನತೆ ಎಲ್ಲವನ್ನೂ ನೀಡಿದ ಪಕ್ಷ ಕಾಂಗ್ರೆಸ್ ಪಕ್ಷ. ಆದರೆ ಕೇವಲ ಭಾಷಣ ಮತ್ತು ಹೇಳಿಕೆಗಳ ಮೂಲಕ ಅಧಿಕಾರಕ್ಕೆ ಬಂದು ವಿದ್ಯಾರ್ಥಿಗಳಿಗೆ ಹಾಗೂ ಯುವ ಜನತೆಗೆ ದ್ರೋಹ ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿ ಹಾಗೂ ಯುವ ಸಮುದಾಯ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.