Categories
ಕರಾವಳಿ ಸುದ್ದಿ

ಪದ್ಮಶ್ರೀ ಬಿ.ಮಂಜಮ್ಮ ಜೋಗತಿಗೆ ಶ್ರೀರಾಮ ಪರ್ವ ಪುರಸ್ಕಾರ

ಕೋಟ : ಇಲ್ಲಿನ ಕೋಡಿ ಕನ್ಯಾಣದ ಶ್ರೀ ರಾಮ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಮೂರನೇ ವರ್ಷದ ರಾಮ ಪರ್ವ ಕಾರ್ಯಕ್ರಮ ಇದೇ ಬರುವ ಎಪ್ರಿಲ್ 12 ರಂದು ಕೋಡಿ ಕನ್ಯಾಣದ ಶ್ರೀರಾಮಮಂದಿರದ ವಠಾರದಲ್ಲಿ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ರಾಮ ಪರ್ವ ಪುರಸ್ಕಾರಕ್ಕೆ ಖ್ಯಾತ ಜಾನಪದ ಕಲಾವಿದೆ ಪದ್ಮಶ್ರೀ ಬಿ.ಮಂಜಮ್ಮ ಜೋಗತಿ ಆಯ್ಕೆಗೊಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳು ಈ ವೇದಿಯಲ್ಲಿ ನಡೆಯಲಿದ್ದು ಸಾಂಸ್ಕ್ರತಿಕ ಕಾರ್ಯಕ್ರಮದ ಭಾಗವಾಗಿ ರಾಜ್ಯಮಟ್ಟದ ಆಯ್ದ ನೃತ್ಯ ತಂಡಗಳಿಂದ ಡಾನ್ಸ್ ಕರಾವಳಿ ಡಾನ್ಸ್ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪುನಿತ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories
ಕರಾವಳಿ ಸುದ್ದಿ

10 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಕಾರ್ಯಕ್ರಮ

ಕೋಟ : ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ , ಕೋಟ ಗ್ರಾಮ ಪಂಚಾಯತ್ ಇವರ ನೇತೃತ್ವದಲ್ಲಿ ಕಂಪಾನಿಯೋ ಇವರ ಸಹಯೋಗದೊಂದಿಗೆ .ಮಾ.31ನೇ ಸೋಮವಾರದಿಂದ ಸುಮಾರು 10ದಿನಗಳ ಕಾಲ ಸಮಯ ಬೆಳಿಗ್ಗೆ 9.30 ರಿಂದ ಸಂಜೆ 5.30ರ ತನಕ ಪ್ರತಿದಿನ ಅರ್ಧ ಗಂಟೆ ಉಚಿತ ಫೂಟ್ ಪಲ್ಸ್ ಥೆರಪಿ ಕಾರ್ಯಕ್ರಮ ಕೋಟದ ಪಂಚವರ್ಣ ಯುವಕ ಮಂಡಲದ ಕಛೇರಿಯಲ್ಲಿ ನಡೆಯಲಿದೆ 

ಪ್ರಯೋಜನ ಹೇಗೆ

ಬೆನ್ನು ನೋವು ಕಾಲುಸೆಳೆತ ಪಾದ ನೋವು, ಕುತ್ತಿಗೆ ನೋವು ,ಭುಜ ನೋವು ,ನಿದ್ರಾಹೀನತೆ , ಹಿಂಬಿಡಿ ನೋವು ಥೈರಾಯ್ಡ್ ವೆರಿಕೋಸ್ ವೇಯ್ಸ್ ,ಬೊಜ್ಜು ನಿವಾರಣೆ , ಊತ , ಸಂಧಿವಾತ , ಪಾರ್ಶ್ವವಾಯು ,ಪಾರ್ಕಿನ್‌ಸನ್ ,ಸೊರಿಯಾಸಿಸ್ ,ಅಧಿಕ ರಕ್ತದೊತ್ತಡ, ಸರ್ವಿಕಲ್ , ಸಕ್ಕರೆ ಕಾಯಿಲೆ & ಸಕ್ಕರೆ ಕಾಯಿಲೆಯಿಂದ ಬರುವ ಪಾದದ ಉರಿ ಹಾಗೂ ಮಾಂಸಖಂಡಗಳ ಸೆಳೆತದಿಂದ ಮುಕ್ತಿ ಹಾಗೂ ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಇದರ ಪ್ರಯೋಜನ ಪಡೆಯಲು ಸಂಘಟಕರು ತಿಳಿಸಿದ್ದಾರೆ.

Categories
ಅಪರಾಧ

ಕಾಂತರಾಜ್‌ ಬಳಿಕ ಎಸಿ ಮಹೇಶ್ಚಂದ್ರ ಸಸ್ಪೆಂಡ್

ಕುಂದಾಪುರ : ಈಗಾಗಲೇ ಕುಂದಾಪುರ ನಗರದ ವಿ ಎ ಆಗಿದ್ದ ಕಾಂತರಾಜ್‌ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿದ ಬೆನ್ನಲ್ಲೇ ಕುಂದಾಪುರದ ಉಪವಿಭಾಗಾಧಿಕಾರಿ ಕೆ ಎ ಎಸ್ ಶ್ರೇಣಿಯ ಮಹೇಶ್ ಚಂದ್ರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ

ಉಪವಿಭಾಗಾಧಿಕಾರಿಯವರ ಕರ್ತವ್ಯ ಲೋಪದ ಬಗ್ಗೆ ಉಡುಪಿ ಜಿಲ್ಲೆ ಜಿಲ್ಲಾಧಿಕಾರಿಗಳು  ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದು  ಡಿಸಿಯವರ ವರದಿ ಆಧಾರದ ಮೇಲೆ ಸರ್ಕಾರದ ಅಧೀನ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ

ಕಾಂತರಾಜ್

ಮಹೇಶ್ ಚಂದ್ರ ಅವರನ್ನು ಅಮಾನತುಗೊಳಿಸಿ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಕುಂದಾಪುರ ಉಪವಿಭಾಗಾಧಿಕಾರಿ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.

Categories
ಕರಾವಳಿ ಸುದ್ದಿ

“ಯುಗಾದಿ ಶುಭಾಶಯಗಳು” ಮರಳು ಶಿಲ್ಪಾಕೃತಿ

ಕುಂದಾಪುರ : ಶ್ರೀ ವಿಶ್ವಾವಸು ನಾಮ ಸಂವತ್ಸರದ ಹಚ್ಚಹಸುರಿನ ಇಳೆಯಲ್ಲಿ ಬೇವು ಬೆಲ್ಲದಂತಹ ಜೀವನದ ಸಂಭ್ರಮದಲ್ಲಿ ಆರಂಭದ ಹಬ್ಬ ಚಂದ್ರಮಾನ ಯುಗಾದಿ. ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂಬ ಧೈಯದೊಂದಿಗೆ ಶುಭಾಶಯವನ್ನು ಸಾರುವ ಮರಳು ಶಿಲ್ಪದ ರಚನೆ “ಸ್ಯಾಂಡ್ ಥೀಂ” ಉಡುಪಿ, ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆಯವರಿಂದ ಕೋಟೇಶ್ವರದ ಹಳೆಅಳಿವೆ ಕಡಲ ತೀರದಲ್ಲಿ ನೆರೆದ ಜನತೆಗೆ ಮನಸೂರೆಗೊಳಿಸಿತು.

ಹಸಿರು ತಳಿರು ತೋರಣದೊಂದಿಗೆ ಮನೆಗೋಡೆ, ಮರದ ಕಳಸೆಯಲ್ಲಿ ತುಂಬಿರುವ ಅಕ್ಕಿ, ಹರಿವಾಣದಲ್ಲಿ ಬೇವು-ಬೆಲ್ಲ, ಮಾವು, ತೆಂಗಿನಕಾಯಿ, ಸಿಯಾಳದ ಗೊಂಚಲಿನೊಂದಿಗೆ ಈ ಕೃತಿಯು ಯುಗಾದಿ ಹಬ್ಬದ ಶುಭಾಶಯಗಳು ನಾಮಾಂಕಿತದೊಂದಿಗೆ ಆಕರ್ಷಣೀಯವಾಗಿ ಮೂಡಿ ಬಂದಿದೆ.

Categories
ಅಪರಾಧ

ಚಿನ್ನದ ಸರ ಎಗರಿಸಿ ಪರಾರಿ

ಮಣಿಪಾಲ : ನಗರದ ಸಮೀಪದಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಕೆಎಂಸಿ ಆಸ್ಪತ್ರೆಯ ಸಿಬ್ಬಂದಿಯನ್ನು ಹಿಂಬಾಲಿಸಿ 45 ಗ್ರಾಂ ಚಿನ್ನವನ್ನು ಸುಲಿಗೆ ಮಾಡಿದ ಘಟನೆ ಸಂಭವಿಸಿದೆ.

ಕೆಎಂಸಿ ಆಸ್ಪತ್ರೆಯ ಬಿಲ್ಲಿಂಗ್ ವಿಭಾಗದ ಅಟೆಂಡರ್ ಹೆರ್ಗಾ ನಿವಾಸಿ ವಸಂತಿ (51ವರ್ಷ) ಅವರು ದೈನಂದಿನ ಕೆಲಸ ಮುಗಿಸಿ ಸಂಜೆ 5:30 ಮನೆಗೆ ಹೋಗುತ್ತಿದ್ದಾಗ WGSHA ಕಾಲೇಜಿನ ಹಿಂಬದಿ ಓರ್ವ ವ್ಯಕ್ತಿ ಬಂದು ವಸಂತಿ ಅವರ ಕುತ್ತಿಗೆಗೆ ಕೈ ಹಾಕಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 3,50,000ರೂ ಮೌಲ್ಯದ ಸುಮಾರು 45 ಗ್ರಾಂ ತೂಕದ ಚಿನ್ನದ ಚೈನ್ ನ್ನು ಎಳೆದು ಸುಲಿಗೆ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Categories
ಅಪರಾಧ

ಫೈನಾನ್ಸ್ ದರೋಡೆಗೆ ಯತ್ನ : ಇಬ್ಬರ ಬಂಧನ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಜಂಕ್ಷನ್ ನ ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನಿಸಿದ ಘಟನೆ ಸಂಭವಿಸಿದೆ.

ಕಳ್ಳರು ಬೀಗ ಒಡೆಯುತ್ತಿರುವಾಗಲೇ ಫೈನಾನ್ಸ್ ಮಳಿಗೆಯ ಸೈರನ್ ಮೊಳಗಿದ್ದು, ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದೇರಳಕಟ್ಟೆ ಜಂಕ್ಷನ್ ನಲ್ಲಿರುವ ಹೆಚ್.ಎಮ್ ಟಿಂಬರ್ಸ್ ಸಂಸ್ಥೆಗೆ ಸೇರಿದ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿ ಕಾರ್ಯಾಚರಿಸುತ್ತಿರುವ ಮುತ್ತೂಟ್ ಫೈನಾನ್ಸ್ ಗೆ ಕೇರಳ ಮೂಲದ ಮೂವರು ದರೋಡೆಕೋರರು ಬಂದಿರುವುದು ತಿಳಿದಿದೆ. ಇನ್ನೇನು ಕಳ್ಳತನ ನಡೆಸಲು ಮಳಿಗೆಯ ಬೀಗ ಒಡೆಯುತ್ತಿರುವಾಗಲೇ ಸೈರನ್ ಮೊಳಗಿದ್ದು ಮುತ್ತೂಟ್ ಫೈನಾನ್ಸ್ ನ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗಿದೆ. ಫೈನಾನ್ಸ್ ನ ಮೇಲಾಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಸ್ಥಳದಲ್ಕಿ ಸೈರನ್ ಮೊಳಗುತ್ತಿದ್ದಾಗಲೇ ಫೈನಾನ್ಸ್ ಸುತ್ತ ಮುತ್ತಲೂ ಸ್ಥಳೀಯರು ಜಮಾಯಿಸಿದ್ದು ಇಬ್ಬರು ಆರೋಪಿಗಳಾದ ಕಾಂಞಂಗಾಡ್ ನ ಮುರಳಿ ಮತ್ತು ಕಾಸರಗೋಡಿನ ಹರ್ಷದ್ ಕಟ್ಟಡದಲ್ಲಿ ಬಂಧಿಯಾಗಿದ್ದರು. ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳು ಮತ್ತು ಕೃತ್ಯ ಎಸಗಲು ತಂದಿದ್ದ ಡ್ರಿಲ್ ಮೆಷಿನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿ ಕಾಸರಗೋಡು ಮೂಲದ ಅಬ್ದುಲ್ ಲತೀಫ್ ಪರಾರಿಯಾಗಿದ್ದಾನೆ.

ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್ ನಲ್ಲಿ ಉತ್ಕೃಷ್ಟ ಮಟ್ಟದ ರಕ್ಷಣಾ ಸಲಕರಣೆ ಅಳವಡಿಸಿದ ಹಿನ್ನಲೆಯಲ್ಲಿ ಸಂಭವನೀಯ ದರೋಡೆ ತಪ್ಪಿದೆ.

Categories
ಅಪರಾಧ

ಮುಂಬೈ : ಮಸೀದಿಯಲ್ಲಿ ಸ್ಫೋಟ

ಮುಂಬೈ : ಈದ್-ಉಲ್-ಫಿತರ್ ಹಬ್ಬದ ಒಂದು ದಿನ ಮೊದಲು ಭಾನುವಾರ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಸೀದಿಯಲ್ಲಿ ಸ್ಫೋಟ ನಡೆದಿದೆ. ಜಿಲೆಟಿನ್ ಕಡ್ಡಿಗಳಿಂದ ಈ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಒಬ್ಬ ವ್ಯಕ್ತಿ ಮಸೀದಿಯ ಹಿಂಭಾಗದಿಂದ ಪ್ರವೇಶಿಸಿ ಜೆಲೆಟಿನ್ ಕಡ್ಡಿಗಳನ್ನು ಇಟ್ಟಿದ್ದ. ಇದರಿಂದಾಗಿ ಸ್ಫೋಟ ಸಂಭವಿಸಿದ್ದು ಮಸೀದಿಯ ಒಳಭಾಗಕ್ಕೆ ಹಾನಿಯಾಗಿದೆ.

ಸ್ಫೋಟದ ಬಳಿಕ ಗ್ರಾಮದ ಮುಖ್ಯಸ್ಥರು ಬೆಳಿಗ್ಗೆ 4.00 ಗಂಟೆ ಸುಮಾರಿಗೆ ತಲವಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಬೀಡ್ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕನ್ವತ್ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಗ್ರಾಮದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Categories
ಪಂಚಾಂಗ

ಶುಭ ದಿನದ ಪಂಚಾಂಗ

ಶುಭ ದಿನದ ಪಂಚಾಂಗ

ಕಲಿಯುಗಾಬ್ದ 5127

ವಿಶ್ವಾವಸು ಸಂವತ್ಸರ

ಉತ್ತರಾಯಣ

ವಸಂತ : ಋತು

ಚೈತ್ರ : ಮಾಸ

ಶುಕ್ಲ ಪಕ್ಷ

ಅಶ್ವಿನಿ : ನಕ್ಷತ್ರ

ಬಿದಿಗೆ : ತಿಥಿ

ಸೋಮವಾರ

31.03.2025

ಈ ದಿನ ಎಲ್ಲರಿಗೂ ಶುಭವಾಗಲಿ

Categories
ಕರಾವಳಿ ಸುದ್ದಿ

ನಾರಾಯಣ ಮಯ್ಯರ ಸಾಮಾಜಿಕ ಬದ್ಧತೆ ಯುವ ಸಮೂಹಕ್ಕೆ ಮಾದರಿ

ಕೋಟ : ನಾರಾಯಣ ಮಯ್ಯರ ಚಿಂತನೆ ಹಾಗೂ ಅವರ ಕಾರ್ಯವೈಕರಿ ಯುವ ಸಮೂಹಕ್ಕೆ ಮಾದರಿಯಾಗಿದೆ ಎಂದು ಸೇವಾ ಸಂಗಮ ಶಿಶು ಮಂದಿರ ಕೋಟ ಇದರ ನೂತನ ಅಧ್ಯಕ್ಷ ಕೆ.ಶ್ರೀಕಾಂತ್ ಶೆಣೈ ಅಭಿಪ್ರಾಯಪಟ್ಟರು.
ಇತ್ತೀಚಿಗೆ ನಿಧನ ಹೊಂದಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಮಣೂರು ನಾರಾಯಣ ಮಯ್ಯ ಇವರಿಗೆ ಕೋಟದ ಸೇವಾಸಂಗಮ ಶಿಶುಮಂದಿರದಲ್ಲಿ ಏರ್ಪಡಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಭನಮನಗೈದು ಮಾತನಾಡಿ ಸಂಘದ ನಿಷ್ಠೆ ಹಾಗೂ ಅವರ ಕ್ರೀಯಾಶೀಲತ್ವ ಕಾರ್ಯವೈಕರಿ ಸಾಮಾಜಿಕ ಬದ್ದತೆ ಅವರ ಬಹುಕಾಲ ನೆನಪು ಉಳಿಯುವಂತೆ ಮಾಡಿದೆ.ಅವರು ಕೋಟದ ಸೇವಾ ಸಂಗಮ ಶಿಶು ಮಂದಿರದ ಏಳಿಗೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿದ ದಿನಗಳನ್ನು ಸಭೆಯಲ್ಲಿ ತೆರೆದಿಟ್ಟರು.
ಇದೇ ವೇಳೆ ಅವರ ಬಹುಕಾಲದ ಒಡನಾಡಿಗಳಾದ ಗೀತಾ ಹೆಗ್ಡೆ,,ಲಕ್ಷ್ಮೀ  ಸುಧಾ ಪ್ರಭು,ಬಾಗ್ಯವಾದಿರಾಜ್,ಸೇವಾಸಂಗಮ ಶಿಶುಮಂದಿರ ಆಡಳಿತ ಸಮಿತಿಯ ನಿರ್ಗಮಿತ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ, ಸದಸ್ಯರಾದ ರವೀಂದ್ರ ಕೋಟ,ಚಂದ್ರಿಕಾ ಭಟ್,ರೇಣುಕಾ ಮಯ್ಯ,ಸವಿತಾ ಅಡಿಗ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಸುಷ್ಮಾ ದಯಾನಂದ ಹೊಳ್ಳ ಸ್ವಾಗತಿಸಿದರು.ನೂತನ ಕಾರ್ಯದರ್ಶಿ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Categories
ಧಾರ್ಮಿಕ

ಕೋಟ ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲಕ್ಕೆ ರಕ್ಷಿತ್ ಶೆಟ್ಟಿ ಭೇಟಿ

ಕೋಟ : ಇಲ್ಲಿನ ಕೋಟದ ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲಕ್ಕೆ ಕನ್ನಡ ಚಿತ್ರರಂಗದ ಚಿತ್ರನಟ ರಕ್ಷಿತ್ ಶೆಟ್ಟಿ ಭೇಟಿ ನೀಡಿದರು.
ಈ ವೇಳೆ ದೇಗುಲದ ಧರ್ಮದರ್ಶಿ ಭಾಸ್ಕರ್ ಸ್ವಾಮಿ ಶಾಲು ಹೋದಿಸಿ ಪ್ರಸಾದ ನೀಡಿ ಗೌರವಿಸಿದರು.
ದೇಗುಲದ ಅರ್ಚಕ ಜಯರಾಜ್ ,ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು