ಮೂಡುಬಿದಿರೆ : ಬಂಟ್ವಾಳ ಕಲ್ಲಡ್ಕ ಬಾಳ್ತಿಲದ ಶರತ್ ಕುಮಾರ್ ಕಡಿಮೆ ಬಡ್ಡಿಯಲ್ಲಿ ಲೋನ್ ಮಾಡಿ ಕೊಡುತ್ತೇನೆಂದು ನಂಬಿಸಿ ವ್ಯಕ್ತಿಯೋರ್ವರಿಂದ ಹಣ ಪಡೆದು ಪರಾರಿಯಾಗಿದ್ದ ಪ್ರಕರಣದಲ್ಲಿ ಮೂಡುಬಿದಿರೆ ನ್ಯಾಯಾಲಯವು ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.ಬಂಧಿತ ಆರೋಪಿಯನ್ನು ಬಂಟ್ವಾಳ ಕಲ್ಲಡ್ಕ ಬಾಳ್ತಿಲದ ಶರತ್ ಕುಮಾರ್ ಎಂದು ಗುರುತಿಸಲಾಗಿದೆ.
2021 ರಲ್ಲಿ ಶರತ್ ಕುಮಾರ್ ತಾನು ಎಚ್.ಡಿ.ಎಫ್.ಸಿ. ಬ್ಯಾಂಕಲ್ಲಿ ಉದ್ಯೋಗಿಯಾಗಿದ್ದು ಕಡಿಮೆ ಬಡ್ಡಿಯಲ್ಲಿ ಲೋನ್ ಮಾಡಿ ಕೊಡುತ್ತೇನೆಂದು ನಂಬಿಸಿ ಕಲ್ಲಮುಂಡ್ಕೂರಿನ ಸತೀಶ್ ಅಮೀನ್ ಅವರಿಂದ ಹಂತಹಂತವಾಗಿ ಹಣ ಪಡೆದುಕೊಂಡಿದ್ದ. ಆತ ಪಡೆದ ಹಣವನ್ನೂ ವಾಪಾಸ್ಸು ನೀಡದೆ ಲೋನನ್ನೂ ಮಾಡಿಕೊಡದೆ ಸತಾಯಿಸಿದ್ದ ಎಂದು ತಿಳಿದು ಬಂದಿದೆ.
ಈತನ ವಂಚನೆಯನ್ನರಿತ ಸತೀಶ್ ಅಮೀನ್ ಅವರು 2023 ರಲ್ಲಿ ಆತನ ಚೆಕ್ಕನ್ನು ಬ್ಯಾಂಕ್ ಗೆ ಹಾಕಿದ್ದರು. ಅದು ಬೌನ್ಸ್ ಆಗಿತ್ತು. ಈ ಕುರಿತು ಬಂಟ್ವಾಳ ಠಾಣೆಯಲ್ಲಿ ಆತನಿಗೆ ವಾರಂಟ್ ಆಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಬಳಿಕ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು ಎಂದು ತಿಳಿದು ಬಂದಿದೆ.
ಈ ವಾರಂಟ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಆತ ಅ.28ರಂದು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರಾಗಿದ್ದ. ಆದರೆ ಆತನ ಮೇಲಿನ ವಂಚನಾ ಆರೋಪಕ್ಕೆ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದರು.ಆರೋಪಿ ಶರತ್ ಗೆ ಅ.31 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ
